Christmas 2023: ಸಕ್ಕರೆ ಸೇವನೆ ಮಾಡದವರು ಈ ಆರೋಗ್ಯಕರ ಕ್ರಿಸ್ಮಸ್ ಕುಕೀಯ ರೆಸಿಪಿಗಳನ್ನು ಟ್ರೈ ಮಾಡಿ!
ಸಿಹಿತಿಂಡಿಗಳಿಲ್ಲದೆ ಕ್ರಿಸ್ಮಸ್ ಅಪೂರ್ಣವಾಗುತ್ತದೆ. ಅದಕ್ಕಾಗಿಯೇ ಕುಕೀಗಳು ಹಬ್ಬದ ಭಾಗವಾಗಿರಬೇಕು. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಜನರು ಸಕ್ಕರೆ ಸೇವನೆ ಮಾಡುವುದನ್ನು ಕಡಿಮೆ ಮಾಡಿರುವುದರಿಂದ ನಿಮಗಾಗಿ ಕೆಲವು ಆರೋಗ್ಯಕರ ಕ್ರಿಸ್ಮಸ್ ಕುಕೀ ಪಾಕವಿಧಾನಗಳನ್ನು ಇಲ್ಲಿ ತಿಳಿಸಲಾಗಿದೆ. ಆರೋಗ್ಯಕರ ಕ್ರಿಸ್ಮಸ್ ಕುಕೀಗಳು ಯಾವುದು? ಹೇಗೆ ಮಾಡುವುದು ತಿಳಿದುಕೊಳ್ಳಿ.
ಕ್ರಿಸ್ಮಸ್ ಎಂದಾಗ ಕೇವಲ ಸಾಂತಾಕ್ಲಾಸ್ ಮತ್ತು ಟ್ರೀಗಳು ಮಾತ್ರವಲ್ಲ, ವಿಶೇಷವಾಗಿ ತಯಾರಿಸಲಾಗುವ ಕೆಲವು ರುಚಿಕರವಾದ ಪಾಕವಿಧಾನಗಳು ಕೂಡ ನೆನಪಾಗುತ್ತವೆ. ಸಿಹಿತಿಂಡಿಗಳಿಲ್ಲದೆ ಕ್ರಿಸ್ಮಸ್ ಅಪೂರ್ಣವಾಗುತ್ತದೆ. ಅದಕ್ಕಾಗಿಯೇ ಕುಕೀಗಳು ಹಬ್ಬದ ಭಾಗವಾಗಿರಬೇಕು. ಇನ್ನು ಕ್ರಿಸ್ಮಸ್ ಔತಣ ಕೂಟಗಳಲ್ಲಿ ಜಿಂಜರ್ ಬ್ರೆಡ್ ಕುಕೀಗಳು ಸಾಮಾನ್ಯವಾಗಿ ಕಂಡು ಬರುತ್ತದೆ ಆದರೆ ಈ ಕುಕೀಗಳಲ್ಲಿನ ಸಕ್ಕರೆ ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು. ಅದೂ ಅಲ್ಲದೆ ಇತ್ತೀಚಿನ ದಿನಗಳಲ್ಲಿ ಜನರು ಸಕ್ಕರೆ ಸೇವನೆ ಮಾಡುವುದನ್ನು ಕಡಿಮೆ ಮಾಡಿರುವುದರಿಂದ ನಿಮಗಾಗಿ ಕೆಲವು ಆರೋಗ್ಯಕರ ಕ್ರಿಸ್ಮಸ್ ಕುಕೀ ಪಾಕವಿಧಾನಗಳನ್ನು ಇಲ್ಲಿ ತಿಳಿಸಲಾಗಿದೆ. ಆರೋಗ್ಯಕರ ಕ್ರಿಸ್ಮಸ್ ಕುಕೀಗಳು ಯಾವುದು? ಹೇಗೆ ಮಾಡುವುದು ತಿಳಿದುಕೊಳ್ಳಿ.
ಕುಕೀ ಎಂದರೇನು?
ಕುಕೀ ಎಂಬುದು ಸಾಮಾನ್ಯವಾಗಿ ಹಿಟ್ಟು, ಸಕ್ಕರೆ ಮತ್ತು ಬೆಣ್ಣೆಯ ಮಿಶ್ರಣದಿಂದ ತಯಾರಿಸಲಾಗುವ ತಿಂಡಿಯಾಗಿದೆ. ಅವು ವಿವಿಧ ಆಕಾರ, ಗಾತ್ರ ಮತ್ತು ರುಚಿಗಳಲ್ಲಿ ನಿಮಗೆ ಬೇಕರಿಗಳಲ್ಲಿ ಕಾಣ ಸಿಗುತ್ತವೆ. ಹೆಚ್ಚಾಗಿ ಚಾಕೊಲೇಟ್, ಡ್ರೈ ಫ್ರೂಟ್ ಗಳಂತಹ ಹೆಚ್ಚುವರಿ ಪದಾರ್ಥಗಳನ್ನು ಒಳಗೊಂಡಿರುತ್ತವೆ. ಕೆಲವೊಮ್ಮೆ ಅವು ಮೃದುವಾಗಿ ಅಥವಾ ಗರಿಗರಿ ಮತ್ತು ಕುರುಕಲು ತಿಂಡಿಯಾಗಿರುತ್ತದೆ.
ಆರೋಗ್ಯಕರ ಕ್ರಿಸ್ಮಸ್ ಕುಕೀಗಳನ್ನು ಹೇಗೆ ತಯಾರಿಸುವುದು?
ಪ್ರತಿ ವರ್ಷ ಡಿಸೆಂಬರ್ 25 ರಂದು ಆಚರಿಸಲಾಗುವ ಹಬ್ಬವನ್ನು ರುಚಿಕರವಾದ ಮತ್ತು ಆರೋಗ್ಯಕರ ಕುಕೀಗಳೊಂದಿಗೆ ಆನಂದಿಸಲು, ಈ ಪಾಕವಿಧಾನಗಳನ್ನು ಪರಿಶೀಲಿಸಿ.
1. ಓಟ್ ಮೀಲ್ ಕ್ರ್ಯಾನ್ಬೆರ್ರಿ ಕುಕೀಗಳು
ಇದನ್ನು ಮಾಡಲು ಬೇಕಾಗುವ ಸಾಮಗ್ರಿಗಳು
• 2 ಕಪ್ ರೋಲ್ ಓಟ್ಸ್
• 1/2 ಕಪ್ ಗೋಧಿ ಹಿಟ್ಟು
• ಅರ್ಧ ಕಪ್ ಕ್ರ್ಯಾನ್ ಬೆರ್ರಿ
• ಒಂದು ಕಪ್ ಬೆಣ್ಣೆ
• 3 ಟೀ ಚಮಚ ಜೇನುತುಪ್ಪ
• 2 ಮೊಟ್ಟೆಗಳು
• 2 ಟೀ ಸ್ಪೂನ್ ವೆನಿಲ್ಲಾ ಸೀರಪ್ ಅಥವಾ ಅದರ ಸಾರ.
ಮಾಡುವ ವಿಧಾನ
• ರೋಲ್ ಮಾಡಿದ ಓಟ್ಸ್, ಗೋಧಿ ಹಿಟ್ಟು, ಕ್ರ್ಯಾನ್ ಬೆರ್ರಿ, ಬೆಣ್ಣೆ, ಜೇನುತುಪ್ಪ, ಮೊಟ್ಟೆ ಮತ್ತು ವೆನಿಲ್ಲಾ ಸಾರವನ್ನು ಸೇರಿಸಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
• ಬೇಕಿಂಗ್ ಶೀಟ್ ಮೇಲೆ ನಿಮಗೆ ಬೇಕಾದ ಶೇಪ್ ಮಾಡಿಕೊಳ್ಳಿ.
• ಬಳಿಕ 350 ಡಿಗ್ರಿ ಫ್ಯಾರನ್ ಹೀಟ್ ನಲ್ಲಿ 10 ರಿಂದ 12 ನಿಮಿಷಗಳ ಕಾಲ ಬೇಕ್ ಮಾಡಿ.
ಇದು ಆರೋಗ್ಯಕರ ಕ್ರಿಸ್ಮಸ್ ಕುಕೀ, ಏಕೆಂದರೆ ಫೈಬರ್ ಸಮೃದ್ಧವಾಗಿರುವ ರೋಲ್ಡ್ ಓಟ್ಸ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಕ್ಲಿನಿಕಲ್ ಪೌಷ್ಟಿಕತಜ್ಞ ಅಭಿಲಾಷಾ ವಿ ಹೇಳುತ್ತಾರೆ. ಇನ್ನು ಬೆಣ್ಣೆ ಆರೋಗ್ಯಕರ ಕೊಬ್ಬು, ಪ್ರೋಟೀನ್ ಮತ್ತು ವಿಟಮಿನ್ ಇ ಅನ್ನು ಹೇರಳವಾಗಿ ನೀಡುತ್ತದೆ, ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಸುಸ್ಥಿರ ಶಕ್ತಿಯನ್ನು ಒದಗಿಸುತ್ತದೆ.
ಇದನ್ನೂ ಓದಿ: ಕ್ರಿಸ್ಮಸ್ ಬಗೆಗಿನ ಕೆಲವು ಸ್ವಾರಸ್ಯಕರ ಸಂಗತಿಗಳನ್ನು ತಿಳಿದುಕೊಳ್ಳಿ!
2. ಜಿಂಜರ್ ಬ್ರೆಡ್ ಕುಕೀಗಳು
ಬೇಕಾಗುವ ಸಾಮಗ್ರಿಗಳು
• ಎರಡು ಕಪ್ ಬಾದಾಮಿ ಹಿಟ್ಟು
• ಕಾಲು ಕಪ್ ಕಾಕಂಬಿ (ಬೆಲ್ಲವಾಗುವ ಮುನ್ನ ತೆಗೆದ ಕಬ್ಬಿನ ಹಾಲಿನ ಪಾಕ)
• 3 ಟೇಬಲ್ ಚಮಚ ತೆಂಗಿನೆಣ್ಣೆ
• ಒಂದು ಟೀ ಚಮಚ ರುಬ್ಬಿದ ಶುಂಠಿ
• ಒಂದು ಟೀ ಚಮಚ ದಾಲ್ಚಿನ್ನಿ
• ಅರ್ಧ ಟೀ ಚಮಚ ಅಡುಗೆ ಸೋಡಾ
ಮಾಡುವ ವಿಧಾನ
• ಬಾದಾಮಿ ಹಿಟ್ಟು, ಕಾಕಂಬಿ, ತೆಂಗಿನ ಎಣ್ಣೆ, ಶುಂಠಿ, ದಾಲ್ಚಿನ್ನಿ ಮತ್ತು ಅಡಿಗೆ ಸೋಡಾವನ್ನು ಸೇರಿಸಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
• ಹಿಟ್ಟನ್ನು ಉಂಡೆಗಳಾಗಿ ರೋಲ್ ಮಾಡಿ ಅಥವಾ ಚಪ್ಪಟೆಯಾಕಾರದ ಶೇಪ್ ನೀಡಿ ಬೇಕಿಂಗ್ ಶೀಟ್ ಮೇಲೆ ಇರಿಸಿ.
• 350 ಡಿಗ್ರಿ ಫ್ಯಾರನ್ ಹೀಟ್ ನಲ್ಲಿ 8 ರಿಂದ 10 ನಿಮಿಷಗಳ ಕಾಲ ಬೇಕ್ ಮಾಡಿ.
ಬಾದಾಮಿ ಹಿಟ್ಟು ಸಾಂಪ್ರದಾಯಿಕ ಹಿಟ್ಟಿಗೆ ಪೋಷಕಾಂಶ ದಟ್ಟವಾಗಿರುವ ಪರ್ಯಾಯವಾಗಿದೆ. ಇದು ಆರೋಗ್ಯಕರ ಕೊಬ್ಬು ಮತ್ತು ಪ್ರೋಟೀನ್ ಗಳಿಂದ ಸಮೃದ್ಧವಾಗಿದೆ. ತೆಂಗಿನ ಎಣ್ಣೆ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಮೆದುಳಿನ ಆರೋಗ್ಯವನ್ನು ಬೆಂಬಲಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ಇದನ್ನೂ ಓದಿ: ಕ್ರಿಸ್ಮಸ್ ಬಗೆಗಿನ ಕೆಲವು ಸ್ವಾರಸ್ಯಕರ ಸಂಗತಿಗಳನ್ನು ತಿಳಿದುಕೊಳ್ಳಿ!
3. ಡಾರ್ಕ್ ಚಾಕೊಲೇಟ್ ಪೆಪ್ಪರ್ ಮಿಂಟ್ ಕುಕೀಗಳು
ಬೇಕಾಗುವ ಸಾಮಗ್ರಿಗಳು
• ಒಂದು ಕಪ್ ಕರಗಿಸಿದ ಡಾರ್ಕ್ ಚಾಕೊಲೇಟ್
• 2 ಕಪ್ ಬಾದಾಮಿ ಹಿಟ್ಟು
• 2 ಟೇಬಲ್ ಚಮಚ ತೆಂಗಿನೆಣ್ಣೆ
• ಒಂದು ಟೀ ಚಮಚ ಪುದೀನಾ ರಸ.
ಮಾಡುವ ವಿಧಾನ
• ಡಾರ್ಕ್ ಚಾಕೊಲೇಟ್ ಅನ್ನು ಬಾದಾಮಿ ಹಿಟ್ಟು, ತೆಂಗಿನ ಎಣ್ಣೆ ಮತ್ತು ಪುದೀನಾ ಸಾರ ಅಥವಾ ರಸದೊಂದಿಗೆ ಸರಿಯಾಗಿ ಮಿಶ್ರಣ ಮಾಡಿ.
• ಮಿಶ್ರಣವನ್ನು ಬೇಕಾದ ಶೇಪ್ ನಲ್ಲಿ ಬೇಕಿಂಗ್ ಶೀಟ್ ಮೇಲೆ ಹಾಕಿ ಬೇಕ್ ಮಾಡಿ.
ಡಾರ್ಕ್ ಚಾಕೊಲೇಟ್ ಉತ್ಕರ್ಷಣ ನಿರೋಧಕಗಳಿಂದ ತುಂಬಿದೆ, ಇದು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹೆಚ್ಚಿನ ಆರೋಗ್ಯ ಪ್ರಯೋಜನಗಳಿಗಾಗಿ ಹೆಚ್ಚಿನ ಕೋಕೋ ಅಂಶವಿರುವ ಚಾಕೊಲೇಟ್ ಅನ್ನು ಆರಿಸಿಕೊಳ್ಳಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: