ಸಿಹಿ ತಿಂಡಿಯಿಂದ ರೇಷ್ಮೆ ಸೀರೆಗಳವರೆಗೆ : ಕರ್ನಾಟಕದ ಈ ಜಿಲ್ಲೆಗಳು ಈ ಕಾರಣಕ್ಕೆ ಫೇಮಸ್ ನೋಡಿ
ಕರ್ನಾಟಕವು ತನ್ನ ಶ್ರೀಮಂತ ಪರಂಪರೆ ಹಾಗೂ ವೈವಿಧ್ಯಮಯ ಸಂಸ್ಕೃತಿ, ಆಚಾರ ವಿಚಾರ, ಆಹಾರ ಪದ್ಧತಿಗೆ ಹೆಸರುವಾಸಿಯಾಗಿದೆ. ಹೌದು, ಒಂದೊಂದು ಜಿಲ್ಲೆಯೂ ಒಂದೊಂದು ವಿಶೇಷತೆಯನ್ನು ಒಳಗೊಂಡಿದ್ದು, ಉತ್ಪನ್ನಗಳು, ವಿಭಿನ್ನ ರುಚಿಯ ಆಹಾರ ಹಾಗೂ ಕರಕುಶಲ ವಸ್ತುಗಳಿಂದ ಎಲ್ಲರ ಗಮನ ಸೆಳೆಯುತ್ತದೆ. ಹಾಗಾದ್ರೆ ಕರ್ನಾಟಕದ ಯಾವ ಜಿಲ್ಲೆ ಯಾವುದಕ್ಕೆ ಫೇಮಸ್ ಎನ್ನುವ ಕುರಿತಾದ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ
ಕರ್ನಾಟಕ (karnataka) ಈ ಹೆಸರು ಕೇಳಿದ ತಕ್ಷಣ ನೆನಪಿಗೆ ಬರುವುದೇ ಕನ್ನಡ ಭಾಷೆ. ಇಲ್ಲಿನ ಜನರು ಬದುಕುವ ರೀತಿ. ಮೂವತ್ತೊಂದು ಜಿಲ್ಲೆ (district) ಗಳನ್ನು ಒಳಗೊಂಡಈ ಕರುನಾಡಿನಲ್ಲಿ ಶಿಲ್ಪ ಕಲೆಯಿಂದ ಹಿಡಿದು ಕಡಲ ತೀರ (beach) ದವರೆಗೂ, ಐತಿಹಾಸಿಕ ಸ್ಮಾರಕ (historical monument) ಗಳಿಂದ ಹಿಡಿದು ದೇವಾಲಯ (temple) ಗಳು, ವನ್ಯಜೀವಿ ಅಭಯಾರಣ್ಯ (wildlife sanctuary) ಗಳು ಹೀಗೆ ನಾನಾ ರೀತಿ ವಿಶೇಷತೆಯನ್ನು ಒಳಗೊಂಡಿದೆ. ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹಾಗೂ ವೈವಿಧ್ಯಮಯ ಸಂಪ್ರದಾಯಗಳ ತವರೂರಾಗಿದೆ. ಇಷ್ಟೆಲ್ಲಾ ವಿಶೇಷತೆಗಳನ್ನು ಒಳಗೊಂಡ ಕರ್ನಾಟಕದ ಒಂದೊಂದು ಜಿಲ್ಲೆಯಲ್ಲಿಯೂ ಒಂದೊಂದು ವಿಶೇಷತೆಗಳಿವೆ.
- ಚಿಕ್ಕಬಳ್ಳಾಪುರ : ಈ ಜಿಲ್ಲೆಯೂ ವೈನ್ ದ್ರಾಕ್ಷಿ ಪ್ರಸಿದ್ಧವಾಗಿದೆ. ಒಣ ಹಾಗೂ ಉತ್ತಮ ಹವಾಮಾನವು ದ್ರಾಕ್ಷಿ ಬೆಳೆಗೆ ಅನುಕೂಲಕರವಾಗಿದೆ. ಬೆಳೆದ ದ್ರಾಕ್ಷಿಗಳನ್ನು ಸಿಹಿ ಮತ್ತು ಸುವಾಸನೆಗೆ ಭರಿತ ವೈನ್ ತಯಾರಿಸಲು ಬಳಸಲಾಗುತ್ತದೆ. ಉತ್ತಮ ಗುಣಮಟ್ಟದ, ರುಚಿಕರ ಹಾಗೂ ಸುವಾಸನೆ ಭರಿತದ್ರಾಕ್ಷಿ ವೈನ್ ಇಲ್ಲಿ ಹೇರಳವಾಗಿ ದೊರಕುತ್ತದೆ.
- ವಿಜಯಪುರ : ವಿಜಯಪುರ ಎಂದ ಕೂಡಲೇ ಖಡಕ್ ಜೋಳದ ರೊಟ್ಟಿ ಹಾಗೂ ಖಾರ ಚಟ್ನಿ ತಿನ್ನುವ ಜನರು. ಆದರೆ ಈ ಜಿಲ್ಲೆಯೂ ದಾಳಿಂಬೆಗೆ ಹೆಸರೂವಾಸಿಯಾಗಿದ್ದು, ಇದನ್ನು ಬೆಳೆಯಲು ಬೇಕಾದ ಯೋಗ್ಯ ವಾತಾವರಣ ಹಾಗೂ ಮಣ್ಣು ಇಲ್ಲಿದೆ.
- ಬೆಳಗಾವಿ : ಕರ್ನಾಟಕದ ಬೆಳಗಾವಿಯಲ್ಲಿ ತಯಾರಿಸಲಾಗುವ ಪ್ರಸಿದ್ಧ ಸಿಹಿ ತಿನಿಸೇ ಈ ಕುಂದ. ಬಾಯಲ್ಲಿಟ್ಟರೆ ಕರಗುವ ಹಾಲು, ಸಕ್ಕರೆ ಮಿಶ್ರಿತವಾದ ಈ ಸಿಹಿ ತಿನಿಸು ಎಲ್ಲರಿಗೂ ಕೂಡ ಇಷ್ಟ. ಇಲ್ಲಿನ ಬೇಕರಿಯಲ್ಲಿ 19ನೇ ಶತಮಾನದಲ್ಲಿ ಈ ಬೆಳಗಾವಿ ಕುಂದ ಈ ಸಿಹಿತಿಂಡಿಯನ್ನು ಪರಿಚಯಿಸಲಾಯಿತಂತೆ. ಆದರೆ ಇವತ್ತಿಗೂ ಇಲ್ಲಿ ಯಾವುದೇ ಶುಭ ಸಮಾರಂಭಗಳಿಗೆ ತೆರಳಿದರೂ ಈ ಸಿಹಿ ತಿನಿಸು ಇದ್ದೆ ಇರುತ್ತದೆ.
- ಕೊಡಗು : ಕಾಫಿನಾಡು ಎಂದೆ ಖ್ಯಾತಿ ಪಡೆದಿರುವ ಜಿಲ್ಲೆ ಕೊಡಗು, ಅತೀ ಹೆಚ್ಚು ಕಾಫಿ ಬೆಳೆಯುವ ಜಿಲ್ಲೆ ಇದಾಗಿದೆ.. ಹಚ್ಚ ಹಸಿರಿನ, ಗುಡ್ಡಗಾಡು ಪ್ರದೇಶ ಮತ್ತು ಅನುಕೂಲಕರ ಹವಾಮಾನ ಕಾಫಿ ಬೆಳೆಗೆ ಸೂಕ್ತವಾಗಿದೆ. ಇಲ್ಲಿಗೆ ಬಂದವರು ತಾಜಾ ಕಾಫಿ ಹೀರುತ್ತಿದ್ದರೆ ಅದರ ಮಜಾನೇ ಬೇರೆ.
- ದಾವಣಗೆರೆ : ದಾವಣಗೆರೆ ಎಂದ ಕೂಡಲೇ ನೆನಪಿಗೆ ಬರುವುದೇ ಬೆಣ್ಣೆ ದೋಸೆ. ಬಿಸಿ ಬಿಸಿ ಬೆಣ್ಣೆ ದೋಸೆ ಬಾಯಲ್ಲಿಟ್ಟರೆ ಅದರ ಸ್ವಾದವೇ ಬೇರೆ. ಗರಿಗರಿಯಾದ ದೋಸೆ, ಘಮ್ ಎನ್ನುವ ಬೆಣ್ಣೆಯೂ ಸಹಜವಾಗಿ ಆಹಾರ ಪ್ರಿಯರನ್ನು ಸೆಳೆಯುತ್ತದೆ. ಇಲ್ಲಿಗೆ ಭೇಟಿ ನೀಡುವ ಜನರು ಬೆಣ್ಣೆ ದೋಸೆಯನ್ನು ಸವಿದೇ ಬರುತ್ತಾರೆ.
- ಬೀದರ್ : ಬೀದರ್ ಶತಮಾನಗಳಷ್ಟು ಹಳೆಯದಾದ ‘ಬಿದ್ರಿವೇರ್’ ಎಂಬ ವಿಶಿಷ್ಟ ಲೋಹದ ಕರಕುಶಲ ವಸ್ತುವಿಗೆ ಹೆಸರುವಾಸಿಯಾಗಿದೆ. ಈ ವಿಶಿಷ್ಟ ಲೋಹದಿಂದ ಆಭರಣಗಳು, ಟ್ರೇಗಳು, ಹೂದಾನಿಗಳು ಸೇರಿದಂತೆ ಹಲವಾರು ಆಕರ್ಷಕ ವಸ್ತುಗಳನ್ನು ತಯಾರಿಸಲಾಗುತ್ತದೆ. ಬಹುಬೇಡಿಕೆಯಿರುವ ಬಿದ್ರಿವೇರ್’ ಎಂಬ ವಿಶಿಷ್ಟ ಲೋಹದ ಕರಕುಶಲ ವಸ್ತುಗಳನ್ನು ನೀಡಿದ ಕೊಡುಗೆ ಬಹುಮನಿ ಸುಲ್ತಾನರಿಗೆ ಸಲ್ಲುತ್ತದೆ. 14 ನೇ ಶತಮಾನದಲ್ಲಿ ಬಹುಮನಿ ಸುಲ್ತಾನರಿಗೆ ಆಳ್ವಿಕೆಯ ಸಮಯದಲ್ಲಿ ಬಿದ್ರಿವೇರ್ ಎಂಬ ವಿಶಿಷ್ಟ ಲೋಹದ ಕರಕುಶಲ ವಸ್ತುಗ ಳ ತಯಾರಿಕೆ ಆರಂಭವಾಯಿತು ಎನ್ನುತ್ತದೆ ಇತಿಹಾಸ.
- ಮೈಸೂರು : ಮೈಸೂರು ಜಿಲ್ಲೆಯೂ ಶ್ರೀಗಂಧ ಉತ್ಪನ್ನಗಳಿಗೆ ಫೇಮಸ್. ಅರಮನೆಯಿಂದ ಸ್ವಲ್ಪ ದೂರದಲ್ಲೇ ಇದ್ದು, ಶ್ರೀಗಂಧದ ಸಾಬೂನುಗಳು, ಅಗರಬತ್ತಿಗಳು, ಪುಡಿ ಹಾಗೂ ಎಣ್ಣೆ ಇಲ್ಲಿ ದೊರೆಯುತ್ತದೆ. ಇಲ್ಲಿನ ಶ್ರೀಗಂಧದ ಉತ್ಪನ್ನಗಳಿಗೆ ಭಾರತ ಮಾತ್ರವಲ್ಲದೇ ವಿದೇಶದಲ್ಲಿಯೂ ಭಾರೀ ಬೇಡಿಕೆಯಿದೆ.
- ಚಿತ್ರದುರ್ಗ: ಕರ್ನಾಟಕದ ಗಡಿಯಲ್ಲಿ ಚಿತ್ರದುರ್ಗವು ಮೊಳಕಾಲ್ಮೂರು ಸೀರೆಗಗಳಿಗೆ ಪ್ರಸಿದ್ಧವಾಗಿದೆ. ಮೊಳಕಾಲ್ಮೂರು ಎಂಬ ಪಟ್ಟಣದಲ್ಲಿ ಈ ಸೀರೆ ಯನ್ನು ನೇಯಲಾಗುವ ಕಾರಣ ಈ ಸೀರೆಯೊಂದಿಗೆ ಈ ಹೆಸರು ಬೆಸೆದುಕೊಂಡಿದೆ. ಹೌದು, ಕೈಯಿಂದ ನೇಯ್ದ ಆಕರ್ಷಕ ವಿನ್ಯಾಸಗಳಿಂದ ನಾರಿಯನ್ನು ಈ ಸೀರೆ ಸೆಳೆಯದೇ ಇರದು. ಸಾಂಪ್ರದಾಯಿಕ ವಿಧಾನಗಳ ಮೂಲಕ ಸೀರೆಯನ್ನು ತಯಾರಿಸಲಾಗುತ್ತದೆ.
- ಮಂಡ್ಯ : ಸಕ್ಕರೆ ನಾಡು ಮಂಡ್ಯ ಎಂದೇ ಖ್ಯಾತಿ ಪಡೆದಿರುವ ಮಂಡ್ಯ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡಬಹುದು. ಮಂಡ್ಯದ ಸಕ್ಕರೆಯು ಶುದ್ಧತೆ ಮತ್ತು ಗುಣಮಟ್ಟಕ್ಕೆ ಹೆಸರುವಾಸಿಯಾಗಿದ್ದು, ದೊಡ್ಡ ಪ್ರಮಾಣದಲ್ಲಿ ತಯಾರಿಸಲಾಗುತ್ತದೆ. ಅದಲ್ಲದೇ ಕಬ್ಬು ಹೆಚ್ಚಾಗಿ ಬೆಳೆಯುವ ಬೆಳೆಯಾಗಿದ್ದು, ಈ ಬೆಳೆಗೆ ಬೇಕಾದ ಫಲವತ್ತಾದ ಮಣ್ಣು, ಯೋಗ್ಯ ವಾತಾವರಣ ಇಲ್ಲಿದೆ.
- ಕಲಬುರಗಿ : ತೊಗರಿ ಕಣಜವೆಂದೇ ಖ್ಯಾತಿ ಪಡೆದಿರುವ ಕಲಬುರಗಿಯಲ್ಲಿ ತೊಗರಿ ಬೇಳೆ ಫೇಮಸ್. ಹೆಚ್ಚಿನ ರೈತರು ತೊಗರಿ ಬೇಳೆ ಕೃಷಿಯನ್ನೇ ಅವಲಂಬಿಸಿದ್ದಾರೆ. ಈ ಪ್ರದೇಶವು ತೊಗರಿ ಬೆಳೆಯಲು ಯೋಗ್ಯ ವಾತಾವರಣ ಹಾಗೂ ಮಣ್ಣನು ಹೊಂದಿದ್ದು, ಇದು ಸ್ಥಳೀಯ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಜೀವನ ಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ