Ghost Town Dhanushkoti: ಧನುಷ್ಕೋಟಿ ಎಂಬ ಸುಂದರ ನಗರ ಘೋಸ್ಟ್ ಟೌನ್ ಆಗಿದ್ಯಾಕೆ?
ಹಲವಾರು ವರ್ಷಗಳ ನಡೆದ ಮಹಾದುರಂತ ಧನುಷ್ಕೋಟಿ ನಗರವನ್ನು ಬೆಚ್ಚಿಬೀಳಿಸಿತು. ಸುಂದರವಾದ ಈ ನಗರವನ್ನು ಇಂದಿಗೂ ‘ದಿ ಗೋಸ್ಟ್ ಟೌನ್’ ಎಂದೇ ಕರೆಯುತ್ತಾರೆ. ಆ ದುರಂತವಾದರೂ ಏನು? ಇಲ್ಲಿ ದೆವ್ವಗಳ ಕಾಟ ಇರಬಹುದಾ? ಇಲ್ಲಿದೆ ಮಾಹಿತಿ.
ಹಿಂದೆ ಅನೇಕ ದಂತಕಥೆಗಳನ್ನು ಹೊಂದಿದ್ದ, ದಕ್ಷಿಣ ಭಾರತದಲ್ಲಿ ಒಂದು ಕಾಲದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಪಟ್ಟಣವಾಗಿದ್ದ ಧನುಷ್ಕೋಟಿ ಇಂದು ಅವಶೇಷಗಳ ಕಥೆ ಹೇಳುತ್ತಿದೆ. ತಮಿಳುನಾಡಿನ ರಾಮೇಶ್ವರಂನಿಂದ 20 ಕಿ.ಮೀ ದೂರದಲ್ಲಿರುವ ಪಂಬನ್ ದ್ವೀಪದಲ್ಲಿನ ತುತ್ತತುದಿಯಲ್ಲಿ ಧನುಷ್ಕೋಟಿ ಎಂಬ ಊರು. ಇದು ತಮಿಳುನಾಡಿನ ಅರಬ್ಬೀ ಸಮುದ್ರ ಹಾಗೂ ಬಂಗಾಳಕೊಲ್ಲಿ ಎರಡರ ಗಡಿಯಲ್ಲಿ ಕಂಡುಬರುವ ತಾಣ. ಇಷ್ಟು ಸುಂದರ ನಗರಿಗೆ ಗೋಸ್ಟ್ ಟೌನ್ ಎಂಬ ಹೆಸರು ಹೇಗೆ ಬಂತು ಎಂಬುದರ ಕುರಿತು ದೊಡ್ಡ ಕಥೆಯೇ ಇದೆ.
ಧನುಷ್ಕೋಟಿಗೆ ಪೌರಾಣಿಕ ಹಿನ್ನೆಲೆ ಏನು?
ಪೌರಾಣಿಕ ಹಿನ್ನಲೆಯ ಪ್ರಕಾರ ಒಂದು ಕಾಲದಲ್ಲಿ ಧನುಷ್ಕೋಟಿ ಭಾರತದಲ್ಲಿ ಎಲ್ಲಾ ರೀತಿಯಲ್ಲೂ ಅಭಿವೃದ್ಧಿಯಾಗಿದ್ದ ನಗರವಾಗಿದ್ದು ಪ್ರವಾಸಿಗರ ನೆಚ್ಚಿನ ತಾಣವಾಗಿತ್ತು. ಈ ನಗರವನ್ನು ಧನುಷ್ಕೋಟಿ ಅಥವಾ ತಮಿಳಿನಲ್ಲಿ ಧನುಷ್ಕೋಡಿ ಎಂದು ಕರೆಯತ್ತಾರೆ.
ದಂತಕಥೆಯ ಪ್ರಕಾರ ರಾಮ, ತನ್ನ ಬಿಲ್ಲಿನ ಒಂದು ತುದಿಯಿಂದ ಇಲ್ಲಿನ ಸೇತುವೆಯನ್ನು ಮುರಿದುದರಿಂದ ಈ ಸ್ಥಳಕ್ಕೆ ಧನುಷ್ಕೋಡಿ ಎಂಬ ಹೆಸರು ಬಂದಿದೆ. ಧನುಷ್ ಎಂದರೆ ಬಿಲ್ಲು, ಕೋಡಿ ಎಂದರೆ ತುದಿ. ರಾಮನು ಈ ಸ್ಥಳವನ್ನು ಸೇತುವೆಯ ನಿರ್ಮಾಣಕ್ಕೆ ಸೂಕ್ತವಾದ ಜಾಗವೆಂದು ತನ್ನ ಕೀರ್ತಿವೆತ್ತ ಬಿಲ್ಲಿನ ತುದಿಯಿಂದ ಗುರುತು ಹಾಕಿದನು ಎಂಬ ಮಂಡಣೆಯೂ ಇದೆ. ಒಂದೇ ಸರಳರೇಖೆಯಲ್ಲಿರುವ ಹಲವಾರು ಬಂಡೆಗಳು ಮತ್ತು ಪುಟ್ಟ ದ್ವೀಪಗಳ ಸಾಲನ್ನು ಹಳೆಯ ಸೇತುವೆಯ ಪಳಿಯುಳಿಕೆ ಎನ್ನುವರಲ್ಲದೆ ಇದನ್ನು ರಾಮಸೇತು ಎಂದೂ ಕರೆಯುತ್ತಾರೆ. ಸೇತುವೆಯು ದೂರದಿಂದ ಸ್ವಲ್ಪಮಟ್ಟಿಗೆ ಗೋಚರಿಸುತ್ತದೆ ಮತ್ತು ಭೂವಿಜ್ಞಾನಿಗಳಿಂದಲೂ ಇದು ದೃಢೀಕರಿಸಲ್ಪಟ್ಟಿದೆ.
ಧನುಷ್ಕೋಟಿ ಕುರಿತು ವಿಜ್ಞಾನ ಹೇಳುವುದೇನು?
ಆದರೆ ಒಂದು ದುರಂತದ ನಂತರ ಆ ಊರಿನ ಚಿತ್ರಣವೇ ಬದಲಾಗಿ ಹೋಯಿತು. ಧನುಷ್ಕೋಡಿಯು ಶ್ರೀಲಂಕಾದ ತಲೈಮನ್ನಾರ್ ನ ಪಶ್ಚಿಮದಿಂದ ಸುಮಾರು 18 ಮೈಲಿಗಳ ಅಂತರದಲ್ಲಿದ್ದು 1964ರಲ್ಲಿ ಪಾಂಬನ್ ನಿಲ್ದಾಣದಿಂದ ಸಾಗಿಬರುವ ರೈಲು ಹಳಿಗಳು ಚಂಡಮಾರುತದ ದಾಳಿಯಿಂದ ನಾಶವಾಯಿತು. 100 ಪ್ರಯಾಣಿಕರನ್ನು ಒಯ್ಯುತ್ತಿದ್ದ ಆ ರೈಲು ಸಮುದ್ರದಲ್ಲಿ ಮುಳುಗಿಹೋಯಿತು. ರೈಲಿನಲ್ಲಿದ್ದ 110 ಪ್ರಯಾಣಿಕರು ಪ್ರವಾಹದಲ್ಲಿ ಕೊಚ್ಚಿಹೋದರು. ಇದರಿಂದ ಇಡೀ ನಗರ ನಾಶವಾಯಿತು. ಆ ದುರಂತದ ಭಾಗವಾಗಿದ್ದ ರೈಲಿನ ಕೊನೆಯ ಯಾತ್ರೆ ಯ ಕುರುವಿನಂತೆ ಹಳಿಯ ಮೇಲೆ ಪಳೆಯುಳಿಕೆ ಅಲ್ಲೇ ಇದೆ.
1964ರಲ್ಲಿ ಡಿಸೆಂಬರ್ 22, ರಾತ್ರಿ 11.55ರ ಸಮಯದಲ್ಲಿ ಎಂದಿನಂತೆಯೇ ಅಂದೂ ಸಹ 110 ಜನ ಪ್ರಯಾಣಿಕರು ಮತ್ತು 5 ರೈಲ್ವೇ ಸಿಬ್ಬಂದಿಗಳನ್ನು ಹೊತ್ತು ಸಾಗುತ್ತಿತ್ತು. ಧನುಷ್ಕೋಡಿಯನ್ನು ಪ್ರವೇಶಿಸುತ್ತಿದ್ದ ರೈಲು ದೈತ್ಯ ಅಲೆಯ ಹೊಡೆತಕ್ಕೆ ದುರಂತ ಕಂಡಿತು. ಆ ಚಂಡಮಾರುತದಲ್ಲಿ ಒಟ್ಟಾರೆ 1800 ಜನರು ಮೃತರಾದರು. ಧನುಷ್ಕೋಡಿಯ ಎಲ್ಲಾ ಮನೆಗಳು, ವಸತಿ ಗೃಹಗಳು ಮತ್ತು ಇತರ ಕಟ್ಟಡಗಳು ಚಂಡಮಾರುತದಲ್ಲಿ ಎದ್ದ ಅಲೆಗಳಲ್ಲಿ ಮುಳುಗಿಹೋದವು. ದ್ವೀಪ ಹಾಗೂ ಮುಖ್ಯಭೂಮಿಯನ್ನು ಸಂಪರ್ಕಿಸಿದ್ದ ಪಾಂಬನ್ ಸೇತುವೆ ಕೂಡಾ ಪ್ರವಾಹದಲ್ಲಿ ನಾಶವಾಯಿತು. 3000 ಮಂದಿ ಆಗ ಸಂಪರ್ಕವಿಲ್ಲದೆ ಪರದಾಡಿದ್ದರು.
ಈ ವಿನಾಶದ ನಂತರ, ಮದ್ರಾಸ್ ಸರ್ಕಾರವು ಈ ಪಟ್ಟಣವನ್ನು ದೆವ್ವಗಳ ನಗರ ಎಂದು ಘೋಷಿಸಿತು. ಚಂಡಮಾರುತದ ನಂತರ ಈ ಪ್ರದೇಶವು ವಾಸಿಸಲು ಯೋಗ್ಯವಾದುದಲ್ಲವೆಂದು ನಿರ್ಣಯ ನೀಡಿತು.ಧನುಷ್ಕೋಡಿ ಬಸ್ ನಿಲ್ದಾಣದ ಬಳಿ ಚಂಡಮಾರುತದಲ್ಲಿ ಮೃತಪಟ್ಟಿರುವವರಿಗಾಗಿ ಸ್ಮಾರಕ ಕಟ್ಟಲಾಗಿದೆ. ಚಂಡಮಾರುತವು 22ನೆಯ ಡಿಸೆಂಬರ್ 1964ರ ಮಧ್ಯರಾತ್ರಿಯಿಂದ 1964ರ ಡಿಸೆಂಬರ್ 25ರ ಸಾಯಂಕಾಲದವರೆಗೂ ಧನುಷ್ಕೋಡಿ ಪಟ್ಟಣವನ್ನು ಅಪ್ಪಳಿಸಿ, ತೀವ್ರವಾದ ಹಾನಿಯನ್ನು ಉಂಟುಮಾಡಿದುದಲ್ಲದೆ ಇಡೀ ಧನುಷ್ಕೋಡಿ ಪಟ್ಟಣವನ್ನೇ ನಾಶಗೊಳಿಸಿತು ಎಂದು ಈ ಸ್ಮಾರಕದಲ್ಲಿ ಸವಿವರವಾಗಿ ಬರೆಯಲಾಗಿದೆ.
ಚಂಡಮಾರುತಕ್ಕೆ ಮುನ್ನ ಧನುಷ್ಕೋಟಿಯು ಒಂದು ಉತ್ತಮ ಪ್ರವಾಸಿ ಹಾಗೂ ತೀರ್ಥಯಾತ್ರಾ ಸ್ಥಳವಾಗಿತ್ತು. ನಗರದ ಬಗ್ಗೆ ಕುತೂಹಲವಿರುವ ಪ್ರವಾಸಿಗರು ಇವತ್ತಿಗೂ ಲಾರಿ, ಜೀಪುಗಳಲ್ಲಿ ಸಾಗಿ ಇಲ್ಲಿಗೆ ಹೋಗಿ ಬರುತ್ತಾರೆ.
ಇದನ್ನೂ ಓದಿ: Free Trip to Finland: 10 ಅದೃಷ್ಟವಂತರಿಗೆ ಸಿಗಲಿದೆ ಫಿನ್‌ಲ್ಯಾಂಡ್ ಉಚಿತ ಪ್ರವಾಸದ ಅವಕಾಶ
ಧನುಷ್ಕೋಟಿಯ ಸುತ್ತ ನೋಡಬಹುದಾದ ಜಾಗಗಳು
-ರಾಮೇಶ್ವರಂ ದೇವಸ್ಥಾನಕ್ಕೆ ಭೇಟಿ ನೀಡಬಹುದು.
-ಚರ್ಚ್, ಪೋಲೀಸ್ ಸ್ಟೇಷನ್, ಅರಿಚಲ್ ಮುನಾಲ್ ಮತ್ತು ಹಿಂದಿನ ರೈಲು ನಿಲ್ದಾಣದ ಅವಶೇಷಗಳು ಕಾಣಬಹುದು.
-ಶಾಂತವಾದ ನೀಲಿ ನೀರಿನ ಸೌಂದರ್ಯವನ್ನು ನೋಡಬಹುದು. ಈಜಲು ಹೋಗಬಹುದು, ಆದರೆ ಹೆಚ್ಚು ದೂರ ಹೋಗಬಾರದು.
-ರಾಮೇಶ್ವರಂ ಪಂಬನ್ ಸೇತುವೆಯ ಉದ್ದಕ್ಕೂ ಸಾಗಬಹುದು.
-ಗಲ್ಫ್ ಆಫ್ ಮನ್ನಾರ್ ಮೆರೈನ್ ನ್ಯಾಷನಲ್ ಪಾರ್ಕ್‌ಗೆ ಹೋಗಿ ಬರಬಹುದು.
-ಧನುಷ್ಕೋಡಿಯ ಕಡಲತೀರದ ಉದ್ದಕ್ಕೂ ಇರುವ ದೇವಾಲಯಗಳಿಗೆ ಭೇಟಿ ನೀಡಬಹುದು.
– ಪಂಬನ್ ಬೀಚ್‌ನಿಂದ ಮಾಂತ್ರಿಕ ಸೂರ್ಯಾಸ್ತದ ವೀಕ್ಷಣೆ ಮಾಡಬಹುದು.
ಧನುಷ್ಕೋಟಿ ತಲುಪುವುದು ಹೇಗೆ?
ವಿಮಾನದ ಮೂಲಕ: 163 ಕಿಮೀ ದೂರದಲ್ಲಿರುವ ಮಧುರೈ ವಿಮಾನ ನಿಲ್ದಾಣವು ರಾಮೇಶ್ವರಂ ಮತ್ತು ನಂತರ ಧನುಷ್ಕೋಡಿಗೆ ಹತ್ತಿರದ ಏರ್‌ಸ್ಟ್ರಿಪ್ ಆಗಿದೆ.
ರೈಲುಮಾರ್ಗದ ಮೂಲಕ: ರಾಮೇಶ್ವರಂ ಧನುಷ್ಕೋಡಿಯಿಂದ ಹತ್ತಿರದ ರೈಲು ನಿಲ್ದಾಣವಾಗಿದ್ದು, ಚೆನ್ನೈ ಮತ್ತು ಮಧುರೈನಿಂದ ಸಾಕಷ್ಟು ರೈಲುಗಳು ಚಲಿಸುತ್ತವೆ.
ರಸ್ತೆಯ ಮೂಲಕ: ರಾಮೇಶ್ವರಂ ಧನುಷ್ಕೋಡಿಯಿಂದ 18 ಕಿಮೀ ದೂರದಲ್ಲಿರುವ ಹತ್ತಿರದ ನಗರವಾಗಿದೆ. ರಾಮೇಶ್ವರಂ ಚೆನ್ನೈ ಮತ್ತು ಮಧುರೈನಂತಹ ಪ್ರಮುಖ ನಗರಗಳೊಂದಿಗೆ ರೈಲು ಮತ್ತು ರಸ್ತೆಯ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ಒಂದು ನಿರ್ದಿಷ್ಟ ಹಂತದ ನಂತರ, ಟೆಂಪೋ ಟ್ರಾವೆಲರ್ ಅನ್ನು ಬಲಿಸಿಕೊಳ್ಳಬೇಕಾಗುತ್ತದೆ. ಅಲ್ಲಿ ಟೆಂಪೋಗಳು ಸುಲಭವಾಗಿ ಲಭ್ಯವಿವೆ.
ಧನುಷ್ಕೋಟಿ ಘೋಸ್ಟ್ ಟೌನ್‌ಗೆ ಭೇಟಿ ನೀಡಲು ಕೆಲವು ಸಲಹೆಗಳು
-ವಿಶ್ರಾಂತಿ ಕೊಠಡಿಗಳು, ಕೆಫೆಗಳು ಮತ್ತು ತಿಂಡಿ ತಿನಿಸುಗಳು ರಾಮೇಶ್ವರದವರೆಗೆ ಮಾತ್ರ ನಿಮಗೆ ಕಂಡುಬರುತ್ತವೆ.ಹಾಗಾಗಿ ಧನುಷ್ಕೋಡಿಗೆ ಹೋಗುವಾಗಸ್ವಲ್ಪ ಪ್ಯಾಕ್ ಮಾಡಿದ ಆಹಾರವನ್ನು ತೆಗೆದುಕೊಳ್ಳಲು ಪ್ರಯತ್ನಿಸುವುದು ಒಳಿತು.
-ಧನುಷ್ಕೋಡಿಗೆ ಬೆಳಿಗ್ಗೆ 7 ಗಂಟೆಯ ಬಳಿಕ ತಲುಪಬಹುದು. ಸಂಜೆ 5 ಗಂಟೆಯ ನಂತರ ಪಟ್ಟಣ ಪ್ರವೇಶವನ್ನು ಇಲ್ಲಿ ನಿಷೇಧಿಸಲಾಗಿದೆ.
-ಇಲ್ಲಿಈಜು ಅಸುರಕ್ಷಿತವೆಂದು ಪರಿಗಣಿಸಲಾಗಿದೆ. ಹಾಗಾಗಿ ಜಾಗ್ರತೆ ವಹಿಸಿವುದು ಮುಖ್ಯ
ಲೇಖನ: ಪ್ರೀತಿ ಭಟ್, ಗುಣವಂತೆ