ನಮ್ಮ ಜೀವನಶೈಲಿ, ಆಹಾರ ಪದ್ಧತಿ, ಮಾನಸಿನ ಒತ್ತಡ ಹೀಗೆ ಹಲವು ವಿಚಾರಗಳು ನಮ್ಮ ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಕೂದಲು ಉದುರುವಿಕೆಯಿಂದ ಮಾನಸಿಕವಾಗಿಯೂ ಕುಗ್ಗುವವರಿದ್ದಾರೆ. ಒಬ್ಬ ಸಾಮಾನ್ಯ ವ್ಯಕ್ತಿಗೆ ದಿನಕ್ಕೆ ಗರಿಷ್ಠ 100 ಕೂದಲಿನ ಎಳೆಗಳು ಉದುರುತ್ತವೆ. ಆದರೆ ಪ್ರೌಢಾವಸ್ಥೆಗೆ ಬಂದ ಕೂಡಲೇ ಹೆಚ್ಚು ಕೂದಲು ಉದುರುವ ಸಾಧ್ಯತೆ ಇರುತ್ತದೆ. ದೇಹದಲ್ಲಿನ ಹಾರ್ಮೋನುಗಳ ಬದಲಾವಣೆಯಿಂದಾಗಿ ಈ ಬದಲಾವಣೆ ಆಗುತ್ತದೆ. ಹದಿಹರೆಯದವರಲ್ಲಿ ಕೂದಲು ಅತಿಯಾಗಿ ಉದುರುವುದಕ್ಕೆ ಏನು ಕಾರಣಗಳು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
1. ಪುರುಷರ ತಲೆ ಅಲ್ಲಲ್ಲಿ ಬೋಳಾಗುವುದಕ್ಕೆ ಆಂಡ್ರೊಜೆನಿಕ್ ಅಲೋಪೆಸಿಯಾ ಎಂಬ ಸಮಸ್ಯೆ ಕಾರಣವಾಗಿದೆ. 25% ಪುರುಷರ ತಲೆ ಬೋಳಾಗುವ ಪ್ರಕರಣಗಳಲ್ಲಿ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರೇ ಹೆಚ್ಚಾಗಿದ್ದಾರೆ. ಇದಕ್ಕೆ ಅನುವಂಶಿಕ ಅಥವಾ ಕೆಲವು ಔಷಧಿಗಳೂ ಕಾರಣವಿರಬಹುದು. ಆದರೆ ಆರಂಭಿಕ ಹಂತದಲ್ಲೇ ಚಿಕಿತ್ಸೆ ನೀಡಿದರೆ ಪುರುಷರ ತಲೆ ಬೋಳಾಗುವುದನ್ನು ನಿಯಂತ್ರಿಸಬಹುದು.
2. ಅಲೋಪೆಸಿಯಾ ಅರೆಟಾ ಹದಿಹರೆಯದ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಇದು ಸ್ವಯಂ ನಿರೋಧಕ ಕಾಯಿಲೆಯಾಗಿದ್ದು, ಪ್ರತಿರಕ್ಷಣಾ ವ್ಯವಸ್ಥೆಯು ಆರೋಗ್ಯಕರ ಕೂದಲು ಕಿರುಚೀಲಗಳನ್ನು ನಾಶಪಡಿಸುತ್ತದೆ. ಇದರ ಪರಿಣಾಮವಾಗಿ, ಅತಿಯಾದ ಕೂದಲು ಉದುರಲಾರಂಭಿಸುತ್ತದೆ.
3. ಮಹಿಳೆಯರಲ್ಲಿ ಅತಿಯಾಗಿ ಕೂದಲು ಉದುರಲು ಅವರ ಹಾರ್ಮೋನುಗಳಲ್ಲಿ ಆಗುವ ಬದಲಾವಣೆಗಳೂ ಕಾರಣ. ಇದು ನೆತ್ತಿಯ ಮೇಲೆ ಸಣ್ಣ ಬೋಳು ತೇಪೆಗಳೊಂದಿಗೆ ಪ್ರಾರಂಭವಾಗುತ್ತದೆ. ಇದು ಕ್ರಮೇಣ ಹೆಚ್ಚಾಗುತ್ತದೆ. ಹೆಚ್ಚಾಗಿ ಅಲೋಪೆಸಿಯಾ ಅರೆಟಾವು 30 ವರ್ಷಕ್ಕಿಂತ ಮೊದಲು ಅಥವಾ ಬಾಲ್ಯದಲ್ಲಿಯೇ ಸಂಭವಿಸುತ್ತದೆ.
ಇದನ್ನೂ ಓದಿ: Hair Care Tips: ಮರದ ಬಾಚಣಿಗೆ ಬಳಸಿದರೆ ಕೂದಲು ಉದ್ದವಾಗಿ ಬೆಳೆಯುತ್ತಾ?
4. ಟ್ರೈಕೊಟಿಲೊಮೇನಿಯಾ ಅಪರೂಪದ ಮಾನಸಿಕ ಅಸ್ವಸ್ಥತೆಯಾಗಿದ್ದು, ಅದು ನಿಮ್ಮ ಕೂದಲನ್ನು ಉದುರುವಂತೆ ಮಾಡುತ್ತದೆ. ಸಾಮಾನ್ಯವಾಗಿ 9ರಿಂದ 13 ವರ್ಷ ವಯಸ್ಸಿನವರಲ್ಲಿ ಈ ಸಮಸ್ಯೆ ಕಂಡುಬರುತ್ತದೆ. ಇದು ನಿಮ್ಮ ನೆತ್ತಿಯ ಕೂದಲಿನ ಮೇಲೆ ಮಾತ್ರವಲ್ಲದೆ ಹುಬ್ಬುಗಳು, ರೆಪ್ಪೆಗೂದಲುಗಳು ಮುಂತಾದ ಇತರ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ಯುವಕರಿಗಿಂತ ಯುವತಿಯರಲ್ಲಿ ಟ್ರೈಕೊಟಿಲೊಮೇನಿಯಾ ಬರುವ ಸಾಧ್ಯತೆ ಹೆಚ್ಚು. ಇದು ಅಪರೂಪದ ವರ್ತನೆಯ ಅಸ್ವಸ್ಥತೆಯಾಗಿದ್ದು ಅದು ನೆತ್ತಿಯ ಮೇಲೆ ಬೋಳು ತೇಪೆಗಳನ್ನು ಉಂಟುಮಾಡುತ್ತದೆ.
5. ಕೆಲವು ಔಷಧಿಗಳು ಯುವಕರು ಮತ್ತು ಯುವತಿಯರಲ್ಲಿ ಕೂದಲು ಉದುರುವಿಕೆಗೆ ಕಾರಣವಾಗುತ್ತವೆ. ಮೊಡವೆ, ಖಿನ್ನತೆ, ಆಂಟಿಫಂಗಲ್ ಚಿಕಿತ್ಸೆ, ರಕ್ತದೊತ್ತಡ ಅಥವಾ ತೀವ್ರವಾದ ಸೋಂಕುಗಳಿಗೆ ಸಂಬಂಧಿಸಿದ ಯಾವುದೇ ರೀತಿಯ ಔಷಧಿಯು ಕೂದಲು ಉದುರುವಿಕೆಯನ್ನು ಪ್ರಚೋದಿಸುತ್ತದೆ. ಮೊಡವೆ ಅಥವಾ ಖಿನ್ನತೆಗೆ ಔಷಧಿಯನ್ನು ತೆಗೆದುಕೊಳ್ಳುತ್ತಿರುವ ಸುಮಾರು 20% ಹದಿಹರೆಯದವರು ಕೂದಲು ಉದುರುವಿಕೆಯನ್ನು ಅನುಭವಿಸುತ್ತಾರೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಸ್ತ್ರೀಯರಲ್ಲಿಯೂ, ಗರ್ಭನಿರೋಧಕ ಮಾತ್ರೆಗಳು ಅಥವಾ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್‌ಗೆ ಚಿಕಿತ್ಸೆ ನೀಡುವಂತಹ ಕೆಲವು ಔಷಧಿಗಳು ಕೂದಲು ಉದುರುವಿಕೆಗೆ ಕಾರಣವಾಗುತ್ತವೆ.
6. ಇತ್ತೀಚಿನ ದಿನಗಳಲ್ಲಿ ಹದಿಹರೆಯದವರು ತಮ್ಮ ಕೂದಲ ಮೇಲೆ ಹೆಚ್ಚು ಪ್ರಯೋಗ ಮಾಡುತ್ತಾರೆ. ಅವರು ತಮ್ಮ ಕೂದಲನ್ನು ಸುಂದರವಾಗಿ ಕಾಣುವಂತೆ ಮಾಡಲು ರಾಸಾಯನಿಕ ಆಧಾರಿತ ಸ್ಟೈಲಿಂಗ್ ಚಿಕಿತ್ಸೆಗಳನ್ನು ಆರಿಸಿಕೊಳ್ಳುತ್ತಾರೆ. ಬ್ಲೀಚಿಂಗ್, ಪರ್ಮಿಂಗ್, ಕಲರಿಂಗ್, ಸ್ಮೂಥನಿಂಗ್, ಸ್ಟ್ರೈಟನಿಂಗ್ ಇತ್ಯಾದಿಗಳನ್ನು ಸಾಮಾನ್ಯವಾಗಿ ಹದಿಹರೆಯದ ಹುಡುಗಿಯರು ಆರಿಸಿಕೊಳ್ಳುತ್ತಾರೆ. ಈ ರಾಸಾಯನಿಕ ಆಧಾರಿತ ಚಿಕಿತ್ಸೆಗಳ ಅಡ್ಡಪರಿಣಾಮಗಳು ಕಠಿಣವಾಗಿವೆ. ಇದು ಕೂದಲನ್ನು ಒಣಗಿಸುತ್ತದೆ, ಕೂದಲ ಬೇರನ್ನು ದುರ್ಬಲಗೊಳಿಸುತ್ತದೆ ಮತ್ತು ಉದುರಲು ಪ್ರಾರಂಭಿಸುತ್ತದೆ.
ಇದನ್ನೂ ಓದಿ: Hair Care: ಕೂದಲು ಉದುರುತ್ತಿದ್ದರೆ ಯಾವಾಗ ನೀವು ತಲೆಕೆಡಿಸಿಕೊಳ್ಳಬೇಕು?
7. ಯುವತಿಯರಲ್ಲಿ ಈಗೀಗ ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್ (ಪಿಸಿಓಡಿ/ ಪಿಸಿಓಎಸ್), ಥೈರಾಯ್ಡ್ ಕಾಯಿಲೆ, ಲೂಪಸ್ ಮುಂತಾದ ಹಾರ್ಮೋನುಗಳ ಸಮಸ್ಯೆ ಹೆಚ್ಚಾಗುತ್ತಿವೆ. ಈ ಸಮಸ್ಯೆಗಳು ಸಾಮಾನ್ಯವಾಗಿ ಕೂದಲು ಉದುರುವಿಕೆಯನ್ನು ಹೆಚ್ಚಿಸುತ್ತದೆ. ಇದು ತೀವ್ರ ಕೂದಲು ಉದುರುವಿಕೆಗೆ ಕಾರಣವಾಗಬಹುದು.
8. ಹದಿಹರೆಯದವರ ಕೂದಲು ಉದುರುವಿಕೆಗೆ ಮತ್ತೊಂದು ಪ್ರಮುಖ ಕಾರಣವೆಂದರೆ ಆರೋಗ್ಯಕರ ಆಹಾರದ ಕೊರತೆ. ಹೆಚ್ಚಿನ ಹದಿಹರೆಯದವರು ತಮ್ಮ ದೈನಂದಿನ ಆಹಾರವನ್ನು ನಿರ್ಲಕ್ಷಿಸುತ್ತಾರೆ ಮತ್ತು ಬಹಳಷ್ಟು ಜಂಕ್ ಫುಡ್ ಸೇವಿಸುತ್ತಾರೆ. ಸರಿಯಾದ ಸಮಯದಲ್ಲಿ ಸರಿಯಾದ ಪೋಷಕಾಂಶ ತುಂಬಿದ ಊಟ ಬಹಳ ಮುಖ್ಯ. ನಿಮ್ಮ ಆಹಾರದಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ಸತು, ಕಬ್ಬಿಣ, ವಿಟಮಿನ್ ಡಿ, ಬಯೋಟಿನ್, ಫೋಲಿಕ್ ಆಮ್ಲ ಮುಂತಾದ ಪೋಷಕಾಂಶಗಳ ಕೊರತೆಯಿದ್ದರೆ, ನೀವು ಕೂದಲು ಉದುರುವಿಕೆಯಂತಹ ಸಮಸ್ಯೆಗಳನ್ನು ಎದುರಿಸಬಹುದು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ