Sugarcane Juice: ಕಬ್ಬಿನ ಹಾಲು ಕುಡಿಯುವುದರಿಂದ ಆಗುವ ಪ್ರಯೋಜನಗಳು
ಕಬ್ಬಿನ ಹಾಲು ಅಥವಾ ಜ್ಯೂಸ್ ಅನ್ನು ಕುಡಿಯುವುದರಿಂದ ಮೂತ್ರದ ಸಮಸ್ಯೆ ನಿವಾರಣೆ ಸೇರಿದಂತೆ ಅನೇಕ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ಆರೋಗ್ಯದ ದೃಷ್ಟಿಯಿಂದಲೂ ಕಬ್ಬನ್ನು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇಂದಿಗೂ ಕಾಮಾಲೆಯ ಸಂದರ್ಭದಲ್ಲಿ ಕಬ್ಬಿನ ರಸವನ್ನು ಕುಡಿಯಲು ಸಲಹೆ ನೀಡಲಾಗುತ್ತದೆ. ಬೇರೆಲ್ಲಾ ಹಣ್ಣುಗಳಲ್ಲಿ ನೀರಿನಂಶ ಹೆಚ್ಚಾಗಿದ್ದು ಪೋಷಕಾಂಶಗಳ ತುಲನೆ ಕಬ್ಬಿನ ಹಾಲಿಗೆ ಹೋಲಿಸಿದರೆ ಕಡಿಮೆ ಇರುತ್ತದೆ. ಆದರೆ ಕಬ್ಬಿನ ಹಾಲಿನಲ್ಲಿ ಅತಿ ಹೆಚ್ಚಿನ ಸಾಂದ್ರತೆಯಲ್ಲಿರುವ ಗ್ಲುಕೋಸ್ ದೇಹಕ್ಕೆ ಹೆಚ್ಚಿನ ಪ್ರಮಾಣದ ಶಕ್ತಿಯನ್ನು ದೊರಕಿಸಲು ನೆರವಾಗುತ್ತದೆ. ಕಬ್ಬಿನ ರಸವನ್ನು ಅನೇಕ ರೀತಿಯ ಮೂತ್ರದ ಸಮಸ್ಯೆಗಳ ನಿವಾರಣೆಗೆ ಬಳಸಲಾಗುತ್ತದೆ. ಸಂಶೋಧನೆಗಳ ಪ್ರಕಾರ, ಕಬ್ಬಿನ ಜ್ಯೂಸ್ ಕುಡಿಯುವುದರಿಂದ ನಿಮ್ಮ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಗಳಿವೆ. ಕಬ್ಬಿನ ರಸದ ಸೇವನೆಯ ಪ್ರಯೋಜನಗಳು ಈ ಕೆಳಗಿನಂತಿವೆ.
ಯುನಾನಿ ಔಷಧ ಪದ್ಧತಿಯ ಪ್ರಕಾರ, ಕಬ್ಬಿನ ರಸವು ಕಾಮಾಲೆ ರೋಗಿಗಳಿಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಕಬ್ಬು ವಿವಿಧ ಜೈವಿಕ ಸಕ್ರಿಯ ಸಂಯುಕ್ತಗಳನ್ನು ಹೊಂದಿದೆ ಎಂದು ಸಂಶೋಧನೆ ಸೂಚಿಸಿದೆ. ಇದರ ಜೊತೆಗೆ ಕಬ್ಬು ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಕಬ್ಬು ಉರಿಯೂತದ, ನೋವು ನಿವಾರಕ, ಆಂಟಿಹೈಪರ್ಗ್ಲೈಸೆಮಿಕ್ ಮತ್ತು ಹೆಪಟೊಪ್ರೊಟೆಕ್ಟಿವ್ ಪರಿಣಾಮಗಳನ್ನು ಹೊಂದಿದೆ. ಅಲ್ಲದೆ ಕಬ್ಬಿನ ರಸದಲ್ಲಿ ಎಪಿಜೆನಿನ್, ಟ್ರೈಸಿನ್ ಮತ್ತು ಲುಟಿಯೋಲಿನ್ ಗ್ಲೈಕೋಸೈಡ್‌ಗಳಾದ ಓರಿಯೆಂಟಿನ್, ವಿಟೆಕ್ಸಿನ್, ಸ್ಕ್ಯಾಫ್ಟೋಸೈಡ್ ಮತ್ತು ಸ್ವಾರ್ಟಿಸಿನ್‌ನಂತಹ ಅನೇಕ ಅಂಶಗಳು ಕಂಡುಬರುತ್ತವೆ.
ಮೂತ್ರಪಿಂಡದ ಆರೋಗ್ಯಕ್ಕೆ ಪ್ರಯೋಜನಕಾರಿ
ಕಬ್ಬಿನ ರಸವನ್ನು ನಿಯಮಿತವಾಗಿ ಬಳಸುವುದರಿಂದ ಮೂತ್ರದ ಹರಿವು ಸ್ಪಷ್ಟ ಮತ್ತು ವೇಗವಾಗಿರುತ್ತದೆ. ಇದು ಮೂತ್ರಪಿಂಡವು ತನ್ನ ಕೆಲಸವನ್ನು ಸರಿಯಾಗಿ ಮಾಡಲು ಸಹಾಯ ಮಾಡುತ್ತದೆ. ನೀವು ಉತ್ತಮ ಫಲಿತಾಂಶವನ್ನು ಬಯಸಿದರೆ ನೀವು ನಿಂಬೆ ರಸ ಮತ್ತು ಶುಂಠಿ ರಸದೊಂದಿಗೆ ಕಬ್ಬಿನ ರಸವನ್ನು ಕೂಡ ಕುಡಿಯಬಹುದು.
ಯಕೃತ್ತಿನ ಆರೋಗ್ಯಕ್ಕೆ ಪ್ರಯೋಜನಕಾರಿ
ಕಬ್ಬಿನ ರಸವನ್ನು ನಮ್ಮ ಯಕೃತ್ತಿಗೆ ಸಹ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ವೈದ್ಯರು ಸಾಮಾನ್ಯವಾಗಿ ಜಾಂಡೀಸ್ ರೋಗಿಗಳಿಗೆ ಕಬ್ಬಿನ ರಸವನ್ನು ಕುಡಿಯಲು ಸಲಹೆ ನೀಡುತ್ತಾರೆ. ಅದು ಅವರಿಗೆ ಪರಿಹಾರವನ್ನು ನೀಡುತ್ತದೆ. ಕಬ್ಬಿನ ರಸವನ್ನು ಪ್ರತಿದಿನ ಸೇವಿಸಬಹುದು. ಒಂದು ಲೋಟ ಕಬ್ಬಿನ ರಸವನ್ನು ಯಾವುದೇ ಸಮಯದಲ್ಲಿ ತೆಗೆದುಕೊಳ್ಳಬಹುದು. ಆದಾಗ್ಯೂ ನಿಮಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸಿದ ನಂತರ ಇದರ ರಸವನ್ನು ಕುಡಿಯಬಹುದು.
ಜೀರ್ಣಕ್ರಿಯೆಗೆ ಸಹಕಾರಿ
ಕಬ್ಬಿನ ರಸದಲ್ಲಿ ಕರಗುವ ನಾರುಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ಇವು ಕರುಳಿನ ಒಳಗೆ ಆಹಾರದ ಚಲನೆ ಸುಲಭವಾಗಿಸಲು ಸಹಾಯ ಮಾಡುತ್ತವೆ. ಆ ಮೂಲಕ ಮಲಬದ್ಧತೆ, ಹೊಟ್ಟೆಯುಬ್ಬರಿಕೆ ಮತ್ತು ಹೊಟ್ಟೆಯ ಸೆಡೆತ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು ನೆರವಾಗುತ್ತದೆ.
ರೋಗ ನಿರೋಧಕ ಶಕ್ತಿ ವೃದ್ಧಿ
ದೇಹದಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟುಗಳು ಮತ್ತು ವಿಟಮಿನ್ ಸಿ ಇದ್ದರೆ ರೋಗ ನಿರೊಧಕ ಶಕ್ತಿ ಉತ್ತಮವಾಗಿರುತ್ತದೆ. ನೀವು ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ವೃದ್ಧಿಸುವ ಅಂಶ ಕಬ್ಬಿನ ಹಾಲಿನಲ್ಲಿದೆ. ಇದರ ನಿಯಮಿತ ಸೇವನೆಯಿಂದ ರೋಗ ನಿರೋಧಕ ಶಕ್ತಿ ಅತ್ಯುತ್ತಮವಾಗಿರುತ್ತದೆ.
ಕಾಂತಿಯುಕ್ತ ತ್ವಚೆಗೆ ಸಹಕಾರಿ
ಕಬ್ಬಿನ ಹಾಲಿನಲ್ಲಿ ಉತ್ತಮ ಪ್ರಮಾಣದಲ್ಲಿರುವ ಗ್ಲೈಕೊಲಿಕ್ ಆಮ್ಲದಂತಹ ಆಲ್ಫಾ ಹೈಡ್ರಾಕ್ಸಿ ಆಮ್ಲಗಳು ವಿಕಿರಣಕ್ಕೆ ಒಳಗಾದ ಚರ್ಮದ ಪುನಃಶ್ಚೇತನಕ್ಕೆ ಸಹಾಯ ಮಾಡುತ್ತದೆ. ಅಲ್ಲದೇ ಮುಖದ ಮೊಡವೆಗಳನ್ನು, ಮೊಡವೆಗಳ ಕಲೆಗಳನ್ನು ಕಡಿಮೆ ಮಾಡುತ್ತದೆ. ಚರ್ಮದ ವಯಸ್ಸಾಗುವ ಗತಿಯನ್ನು ನಿಧಾನಗೊಳಿಸುವುದರ ಜೊತೆಗೆ ತ್ವಚೆಯನ್ನು ಕಾಂತಿಯುಕ್ತ ಮತ್ತು ಮೃದುವಾಗಿರಲು ನೆರವಾಗುತ್ತದೆ.
ಮತ್ತಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ