ಪ್ರತಿದಿನ ಪೇರಳೆ ಎಲೆಗಳನ್ನು ಜಗಿದರೆ ಏನೆಲ್ಲ ಪ್ರಯೋಜನ ಇದೆ?: ಇಲ್ಲಿದೆ ಆರು ಉಪಯೋಗ
ಪೇರಳೆ ಎಲೆಗಳು ಉತ್ಕರ್ಷಣ ನಿರೋಧಕಗಳು, ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋದಿ ಗುಣಲಕ್ಷಣಗಳು, ಪ್ರೋಟೀನ್, ವಿಟಮಿನ್ ಸಿ, ವಿಟಮಿನ್ ಬಿ, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೇಸಿಯಂ, ರಂಜಕ, ಪೊಟ್ಯಾಸಿಯಂ, ಗ್ಯಾಲಿಕ್ ಆಮ್ಲ, ಮತ್ತು ಫಿನಾಲಿಕ್ ಸಂಯುಕ್ತಗಳು ಸೇರಿದಂತೆ ಹಲವು ಜೀವಸತ್ವ, ಖನಿಜಗಳು ಮತ್ತು ಪೋಷಕಾಂಶದ ಸಮೃದ್ಧ ಮೂಲವಾಗಿದೆ. ಪೇರಳೆ ಎಲೆಗಳನ್ನು ಜಗಿಯುವುದರಿಂದ ಯಾವ ರೀತಿಯ ಸಮಸ್ಯೆಗಳಿಂದ ದೂರವಿರಬಹುದು ಎಂಬುದನ್ನು ನೋಡೋಣ.
ಅನೇಕ ಜನರು ಪೇರಳೆ ಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಪೇರಳ ಹಣ್ಣನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಆದರೆ ಅದರ ಎಲೆಗಳಿಂದ ಲಭಿಸುವ ಆರೋಗ್ಯ ಪ್ರಯೋಜನಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಹೌದು, ಪೇರಳೆಯಂತೆ ಅದರ ಎಲೆಗಳಲ್ಲೂ ಸಹ ಹಲವಾರು ಔಷದೀಯ ಗುಣಗಳಿವೆ. ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಉರಿಯೂತದ ಗುಣಲಕ್ಷಣಗಳಿಂದ ತುಂಬಿರುವ ಇವು ಶತಮಾನಗಳಿಂದಲೂ ಸಾಂಪ್ರದಾಯಿಕ ಔಷಧದ ಭಾಗವಾಗಿದೆ. ದೀರ್ಘಕಾಲದ ಕಾಯಿಲೆಗಳನ್ನೂ ಗುಣಪಡಿಸಬಹುದು. ಪೇರಳೆ ಎಲೆಗಳನ್ನು ಜಗಿಯುವುದರಿಂದ ಯಾವ ರೀತಿಯ ಸಮಸ್ಯೆಗಳಿಂದ ದೂರವಿರಬಹುದು ಎಂಬುದನ್ನು ಇಂಡಿಯನ್ ಎಕ್ಸ್ಪ್ರೆಸ್ ಮಾಡಿರುವ ವರದಿ ಇಲ್ಲಿದೆ.
- ಪೇರಳೆ ಎಲೆಗಳನ್ನು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು. ಇದರಲ್ಲಿರುವ ಫೀನಾಲಿಕ್ ಅಂಶವು ಹೈಪರ್ಗ್ಲೈಸೆಮಿಕ್ ವಿರೋಧಿ ಗುಣಗಳನ್ನು ಹೊಂದಿದೆ. ಇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಹಾಗಾಗಿ ಮಧುಮೇಹಿಗಳು ಪೇರಳೆ ಎಲೆಗಳನ್ನು ಜಗಿಯುವುದು ತುಂಬಾ ಒಳ್ಳೆಯದು.
- ಪೇರಳೆ ಎಲೆಗಳನ್ನು ತಿನ್ನುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು. ಪೇರಳೆ ಹಣ್ಣಿನಂತೆ, ಎಲೆಗಳಲ್ಲಿ ಪೊಟ್ಯಾಸಿಯಮ್ ಮತ್ತು ಫೈಬರ್ ಇರುತ್ತದೆ. ಇವು ಬಿಪಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಹಾಗಾಗಿ ಬಿಪಿ ಇರುವವರು ಪೇರಳೆ ಹಣ್ಣನ್ನು ತಿಂದರೆ ಅಥವಾ ಎಲೆಗಳನ್ನು ಜಗಿಯಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ.
- ಪೇರಳೆ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಮತ್ತು ಹೆಚ್ಚಿನ ಫೈಬರ್ ಅಂಶವನ್ನು ಹೊಂದಿವೆ, ಇದು ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಮಲಬದ್ಧತೆಯನ್ನು ನಿವಾರಿಸುತ್ತದೆ ಮತ್ತು ಒಟ್ಟಾರೆ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.
- ಪೇರಳೆ ಎಲೆಗಳು ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು ಕಡಿಮೆ ಮಾಡುತ್ತದೆ ಮತ್ತು ಉತ್ತಮ ಕೊಲೆಸ್ಟ್ರಾಲ್ (HDL) ಅನ್ನು ಹೆಚ್ಚಿಸುತ್ತದೆ, ಹೀಗಾಗಿ ಹೃದಯರಕ್ತನಾಳದ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.
- ಪೇರಳೆ ಎಲೆಯ ಕಷಾಯ ನೈಸರ್ಗಿಕ ರಕ್ತ ಶುದ್ಧೀಕರಣ ಮತ್ತು ಡಿಟಾಕ್ಸ್ ಪಾನೀಯವಾಗಿದೆ. ಇದು ನಿಮ್ಮ ದೇಹದಲ್ಲಿರುವ ವಿಷ ಮತ್ತು ಹಾನಿಕಾರಕ ಅಂಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದರೊಂದಿಗೆ ಈ ಕಷಾಯದ ನಿಯಮಿತ ಸೇವನೆಯಿಂದ ಮುಖದಲ್ಲಿ ಕಾಣಿಸಿಕೊಳ್ಳುವ ಕಲೆ ಮತ್ತು ಮೊಡವೆಗಳ ಸಮಸ್ಯೆಯಿಂದ ಪರಿಹಾರವನ್ನು ಪಡೆಯಬಹುದು.
- ಪೇರಳೆ ಎಲೆಗಳು ತೂಕ ನಷ್ಟಕ್ಕೆ ಪರಿಣಾಮಕಾರಿಯಾಗಿದೆ. ಈ ಎಲೆಗಳನ್ನು ತಿನ್ನುವುದರಿಂದ ಅಥವಾ ಪೇರಳೆ ಎಲೆಯಿಂದ ತಯಾರಿಸಿದ ಕಷಾಯವನ್ನು ಕುಡಿಯುವುದರಿಂದ ದೇಹದಲ್ಲಿ ಸಂಗ್ರಹಗೊಂಡ ಕೊಬ್ಬನ್ನು ಕರಗಿಸಬಹುದು. ಅಲ್ಲದೆ ಪೇರಳೆ ಎಲೆಯ ಕಷಾಯ ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ. ಇದರಿಂದ ತೂಕವೂ ಕಡಿಮೆಯಾಗಿ ದೇಹವು ಫಿಟ್ ಆಗಿ ಕಾಣುತ್ತದೆ.
ಮುನ್ನಚ್ಚರಿಕೆಗಳು:
ಪೇರಳೆ ಎಲೆಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸುವ ಮೊದಲು, ಹಲವಾರು ಮುನ್ನೆಚ್ಚರಿಕೆಗಳನ್ನು ಗಮನಿಸಬೇಕಾಗಿರುವುದು ಮುಖ್ಯ. ಮೊದಲನೆಯದಾಗಿ, ಮಿತವಾಗಿರುವುದು ಅತ್ಯಗತ್ಯ. ಪೇರಳೆ ಎಲೆಗಳು ಬಹಳಷ್ಟು ಫೈಬರ್ ಅನ್ನು ಒಳಗೊಂಡಿರುವ ಕಾರಣ, ಅವುಗಳನ್ನು ಹೆಚ್ಚು ತಿನ್ನುವುದರಿಂದ ಉಬ್ಬುವುದು, ಗ್ಯಾಸ್ ಅಥವಾ ಅತಿಸಾರ ಸೇರಿದಂತೆ ಜೀರ್ಣಕಾರಿ ಸಮಸ್ಯೆಗಳನ್ನು ಉಂಟಾಗಬಹುದು. ಪೇರಳೆ ಎಲೆಗಳು ಕೆಲವು ಜನರಿಗೆ ಅಲರ್ಜಿಯನ್ನು ಉಂಟುಮಾಡಬಹುದು. ಇದರಿಂದ ಊತ ಅಥವಾ ತುರಿಕೆ ಶುರುವಾಗಬಹುದು. ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು ಪೇರಳೆ ಎಲೆಗಳ ಸಾರವನ್ನು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು. ಏಕೆಂದರೆ ಪೇರಳೆ ಎಲೆಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು ಮತ್ತು ಮಧುಮೇಹದ ಔಷಧಿಗಳೊಂದಿಗೆ ಸಂವಹನ ನಡೆಸಬಹುದು, ಆದ್ದರಿಂದ ಮಧುಮೇಹ ಹೊಂದಿರುವ ವ್ಯಕ್ತಿಗಳು ತಮ್ಮ ರಕ್ತದಲ್ಲಿನ ಗ್ಲೂಕೋಸ್ ಪರೀಕ್ಷೆಸುತ್ತಾ ಇರಬೇಕು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:39 pm, Thu, 19 December 24