Global Forgiveness Day 2023: ಜಾಗತಿಕ ಕ್ಷಮೆ ದಿನದ ಇತಿಹಾಸ, ಮಹತ್ವ ಇಲ್ಲಿದೆ
ಜನರಲ್ಲಿ ಸಹಾನೂಭೂತಿಯನ್ನು ಬೆಳೆಸಲು ಮತ್ತು ದ್ವೇಷವನ್ನು ತೊರೆದು ಸಕಾರಾತ್ಮಕ ಜೀವನವನ್ನು ನಡೆಸಬೇಕು ಎಂಬುದನ್ನು ನೆನಪಿಸಲು ಪ್ರತಿ ವರ್ಷ ಜುಲೈ 7 ರಂದು ವಿಶ್ವದಾದ್ಯಂತ ಜಾಗತಿಕ ಕ್ಷಮೆ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಅದರ ಮಹತ್ವ ಎಂಬುದನ್ನು ತಿಳಿಯೋಣ.

ಯಾರಾದರೂ ನಿಮ್ಮನ್ನು ಮಾನಸಿಕವಾಗಿ ನೋಯಿಸಿದರೆ, ಈ ಆಘಾತದಿಂದ ಚೇತರಿಸಿಕೊಳ್ಳಲು ಸುಲಭವಾದ ಮಾರ್ಗವೆಂದರೆ ಅವರನ್ನು ಕ್ಷಮಿಸುವುದು. ಕ್ಷಮೆಯು ನಿಮ್ಮ ಜೀವನದಲ್ಲಿ ಧನಾತ್ಮಕತೆಯನ್ನು ತರುತ್ತದೆ ಮತ್ತು ಮನಸ್ಸನ್ನು ಹಗುರವನ್ನಾಗಿಸುತ್ತದೆ. ಆದರೆ ಪ್ರಾಯೋಗಿಕವಾಗಿ ಯೋಚಿಸುವುದಾದರೆ ಯಾರಾದರು ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರೆ ಅಥವಾ ನಮ್ಮ ಮನಸ್ಸಿಗೆ ಘಾಸಿ ಮಾಡಿದರೆ ಅವರನ್ನು ಅಷ್ಟು ಸುಲಭವಾಗಿ ಕ್ಷಮಿಸಲು ಮನಸ್ಸು ಒಪ್ಪುವುದಿಲ್ಲ. ಆದರೆ ನೀವು ನಿಜವಾಗಿಯೂ ನಿಮ್ಮ ಜೀವನದಲ್ಲಿ ಧನಾತ್ಮಕವಾಗಿ ಮುಂದುವರೆಯಲು, ಸಂತೋಷದಿಂದ ಜೀವನ ನಡೆಸಲು ಬಯಸಿದರೆ, ನಿಮಗೆ ನೋಯಿಸಿದವರ ಮೇಲೆ ದ್ವೇಷ ಸಾಧಿಸದೆ ಅವರನ್ನು ಕ್ಷಮಿಸುವ ಮನೋಭಾವವನ್ನು ಬೆಳೆಸಿಕೊಳ್ಳಿ. ಇದು ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ಒಂದೊಳ್ಳೆ ಬದಲಾವಣೆಯನ್ನು ತರುತ್ತದೆ. ಹೀಗೆ ಜನರಲ್ಲಿ ಸದ್ಭಾವನೆ ಹಾಗೂ ಕ್ಷಮೆಯ ಮನಸ್ಥಿತಿಯನ್ನು ಬೆಳೆಸಲೆಂದೇ ಪ್ರತಿವರ್ಷ ಜುಲೈ 7 ರಂದು ಜಾಗತಿಕ ಕ್ಷಮೆಯ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಒಬ್ಬರಿಗೆ ಬದಲಾಗಲು ಒಂದು ಅವಕಾಶ ನೀಡುವುದು, ಜನರನ್ನು ಕ್ಷಮಿಸುವುದು ಮತ್ತು ದ್ವೇಷವನ್ನು ಮರೆತು ಆರೋಗ್ಯಕರ ಸಂಬಂಧವನ್ನು ಬಲಪಡಿಸುವುದು ಅತ್ಯಗತ್ಯ ಎಂಬುದನ್ನು ನೆನಪಿಸುತ್ತದೆ.
ಜಾಗತಿಕ ಕ್ಷಮೆ ದಿನದ ಇತಿಹಾಸ
20ನೇ ಶತಮಾನದಲ್ಲಿ ‘ಕ್ಷಮೆ’ ವಿಜ್ಞಾನದ ಗಮನ ಸೆಳೆಯಿತು. ವಿಜ್ಞಾನಿಗಳು ಮತ್ತು ಮನಶಾಸ್ತ್ರಜ್ಞರು ಮಾನವನ ಯೋಗಕ್ಷೇಮದ ಮೇಲೆ ಕ್ಷಮೆಯ ಪ್ರಭಾವವನ್ನು ಅಧ್ಯಯನ ಮಾಡಲು ಪ್ರಾರಂಭಿಸಿದರು. ನಂತರ ಕ್ಷಮೆ ಒಂದು ಪ್ರಕ್ರಿಯೆ. ಇದು ಮನಸ್ಥಿತಿಯನ್ನು ಸರಿಪಡಿಸುವ ಗುಣವನ್ನು ಹೊಂದಿದೆ ಎಂಬುದನ್ನು ಅವರು ಕಂಡುಕೊಂಡರು. ಇದಾದ ಬಳಿಕ ಕ್ಷಮೆಯ ದಿನವನ್ನು 1994 ರಲ್ಲಿ ಕೆನಡಾದ ‘ಕ್ರಿಶ್ಚಿಯನ್ ಎಂಬಸಿ ಆಫ್ ಕ್ರೈಸ್ಟ್ ಅಂಬಾಸಿಡರ್ಸ್’ (CECA) ಎಂಬ ಸಂಸ್ಥೆಯು ಪ್ರಾರಂಭಿಸಿತು. ಕ್ಷಮೆಯ ಬಗ್ಗೆ ಕ್ರಿಶ್ಚಿಯನ್ ಧರ್ಮದ ಭೋದನೆಗಳಿಗೆ ಅನುಗುಣವಾಗಿ ‘ನಮ್ಮ ವಿರುದ್ಧ ಕುತಂತ್ರ ಮಾಡುವ ಎಲ್ಲರನ್ನೂ ನಾವು ಯಾವಾಗಲೂ ಕ್ಷಮಿಸಬೇಕು’ ಎಂದು ಈ ಸಂಸ್ಥೆಯು ಕ್ಷಮೆಯ ದಿನಕ್ಕೆ ಅಡಿಪಾಯವನ್ನು ಹಾಕಿತು. ಇದು ಎಲ್ಲರ ಗಮನ ಸೆಳೆದು, ಕ್ರಮೇಣ ಪ್ರಪಂಚದಾತ್ಯಂತ ಜನರು ಜುಲೈ 7ರಂದು ಜಾಗತಿಕ ಕ್ಷಮೆಯ ದಿನವನ್ನು ಆಚರಿಸಲು ಪ್ರಾರಂಭಿಸಿದರು.
ಇದನ್ನೂ ಓದಿ: World Day To Combat Desertification and Drought 2023: ಅವಳ ಭೂಮಿ ಅವಳ ಹಕ್ಕು! ಈ ಬಗ್ಗೆ ನಿಮಗೆಷ್ಟು ಗೊತ್ತು?
ಜಾಗತಿಕ ಕ್ಷಮೆ ದಿನದ ಮಹತ್ವ:
ಕ್ಷಮಿಸುವುದು ಮಾನವನ ಉದಾತ್ತ ಗುಣಗಳಲ್ಲಿ ಒಂದಾಗಿದೆ. ತಮ್ಮ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಲು ಜನರನ್ನು ಪ್ರೋತ್ಸಾಹಿಸುವುದು ಮತ್ತು ಕ್ಷಮೆಯ ಮನಸ್ಸಿನ ನೋವನ್ನು ಗುಣಪಡಿಸುವ ಶಕ್ತಿಯ ಬಗ್ಗೆ ಜಾಗೃತಿ ಮೂಡಿಸುವುದು ವಿಶ್ವ ಕ್ಷಮೆಯ ದಿನದ ಉದ್ದೇಶವಾಗಿದೆ. ಇದರಿಂದ ಉತ್ತಮ ಜಗತ್ತು ನಿರ್ಮಾಣವಾಗುತ್ತದೆ ಮತ್ತು ಒಬ್ಬ ವ್ಯಕ್ತಿಯು ದ್ವೇಷವನ್ನು ಮರೆತು ಶಾಂತಿಯುತ ಜೀವನವನ್ನು ನಡೆಸಬಹುದು. ಕ್ಷಮಿಸುವುದು ಎಂದರೆ ಇತರರ ತಪ್ಪುಗಳನ್ನು ಮರೆತುಬಿಡುವುದು ಅಥವಾ ನಿರ್ಲಕ್ಷಿಸುವುದಕ್ಕಿಂತ ಹೆಚ್ಚಾಗಿ ಅದು ನಕಾರಾತ್ಮಕ ಭಾವನೆಗಳಿಂದ ಮುಕ್ತರಾಗುವುದು ಆಗಿದೆ. ಕ್ಷಮೆಯು ಮಾನವನ ಮೆದುಳಿನ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಏಕೆಂದರೆ ಒಬ್ಬ ವ್ಯಕ್ತಿಯು ನಕರಾತ್ಮಕ ಭಾವನೆಗಳನ್ನು ತೊರದಾಗ ಮನಸ್ಸಿನ ವಿಷತ್ವವು ತೊರೆದುಹೋಗುತ್ತದೆ. ಹಾಗೂ ಜನರು ನಕಾರಾತ್ಮಕತೆಯನ್ನು ತೊರೆದಾಗ ಸಕಾರಾತ್ಮಕ ಅಲೋಚನಗಳೊಂದಿಗೆ ಸಂತೋಷ ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ.
ಜೀವನ ಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




