ಹಣ್ಣು-ತರಕಾರಿಗಳನ್ನು ಸ್ವಚ್ಛಗೊಳಿಸುವ ಸರಿಯಾದ ವಿಧಾನ ಯಾವುದು?

ಮಾರುಕಟ್ಟೆಯಿಂದ ಖರೀದಿಸುವಂತಹ ಹಣ್ಣು ತರಕಾರಿಗಳು ಹೆಚ್ಚಿನ ಪ್ರಮಾಣದ ರಾಸಾಯನಿಕಗಳನ್ನು ಹೊಂದಿರುತ್ತವೆ. ಮನೆಗೆ ತಂದು ನೀರಿನಿಂದ ಚೆನ್ನಾಗಿ ತೊಳೆದರೂ ರಾಸಾಯನಿಕ ಅವಶೇಷಗಳು ಹಣ್ಣು-ತರಕಾರಿಗಳಲ್ಲಿ ಹಾಗೆಯೇ ಉಳಿದುಬಿಡುತ್ತವೆ. ಇವುಗಳ ಸೇವನೆ ಆರೋಗ್ಯಕ್ಕೂ ತುಂಬಾನೇ ಡೇಂಜರ್.‌ ಹೀಗಿರುವಾಗ ಹಣ್ಣುಗಳನ್ನು ಸರಿಯಾದ ರೀತಿಯಲ್ಲಿ ತೊಳೆಯುವ ಮೂಲಕ ಅವುಗಳ ಮೇಲೆ ಅಂಟಿರುವ ರಾಸಾಯನಿಕಗಳನ್ನು ಸಂಪೂರ್ಣವಾಗಿ ತೆಗೆದುಹಾಕಬಹುದು. ಹಣ್ಣುತರಕಾರಿಗಳನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಣ್ಣು-ತರಕಾರಿಗಳನ್ನು ಸ್ವಚ್ಛಗೊಳಿಸುವ ಸರಿಯಾದ ವಿಧಾನ ಯಾವುದು?
ಸಾಂದರ್ಭಿಕ ಚಿತ್ರ
Image Credit source: Getty Images

Updated on: Jun 27, 2026 | 8:16 PM

ಈ ಆಧುನಿಕ ಯುಗದಲ್ಲಿ ಎಲ್ಲವೂ ರಾಸಾಯನಿಕಯಮವಾಗಿದೆ. ಅದರಲ್ಲೂ ಹಣ್ಣು ತರಕಾರಿಗಳಲ್ಲಿ ಹೆಚ್ಚಿನ ಪ್ರಮಾಣದ ರಾಸಾಯನಿಕ ಅಂಶಗಳಿರುತ್ತವೆ. ಹೌದು ತರಕಾರಿಗಳನ್ನು (vegetables) ಬೆಳೆಯುವಾಗ ಅವುಗಳಲ್ಲಿ ಹುಳ, ಕೀಟಗಳು ಆವರಿಸಬಾರದು ಎಂಬ ಕಾರಣಕ್ಕೆ ಕೀಟನಾಶಗಳನ್ನು ಸಿಂಪಡಿಸಲಾಗುತ್ತದೆ. ಅದೇ ರೀತಿ ಈ ಹಣ್ಣುಗಳು ಮತ್ತು ತರಕಾರಿಗಳು ಹೊಲಗಳಿಂದ ಮಾರುಕಟ್ಟೆಗೆ ತಲುಪುವವರೆಗೆ ಫ್ರೆಶ್‌ ಆಗಿ ಕಾಣಿಸಬೇಕೆಂದು ರಾಸಾಯನಿಕಗಳನ್ನು ಸಿಂಪಡಿಸಲಾಗುತ್ತದೆ. ಹೀಗಿರುವಾಗ ಹಣ್ಣು-ತರಕಾರಿಗಳನ್ನು ಸರಿಯಾದ ರೀತಿಯಲ್ಲಿ ಸ್ವಚ್ಛಗೊಳಿಸುವುದು ತುಂಬಾನೇ ಮುಖ್ಯ. ಬರೀ ನೀರಿನಿಂದ ತೊಳೆದರೆ ಅವುಗಳಲ್ಲಿ ಉಳಿದಿರುವ ರಾಸಾಯನಿಕ ಅವಶೇಷಗಳು ದೇಹವನ್ನು ಪ್ರವೇಶಿಸಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಹಾಗಾಗಿ ಹಣ್ಣು ತರಕಾರಿಗಳ ಮೇಲಿನ ಹಾನಿಕಾರಕ ಸೂಕ್ಷ್ಮಜೀವಿಗಳು, ರಾಸಾಯನಿಕಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ಈ ಕ್ಲೀನಿಂಗ್‌ ಟಿಪ್ಸ್‌ ಪಾಲಿಸಿ.

ಹಣ್ಣುಗಳು ಮತ್ತು ತರಕಾರಿಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ವಿನೆಗರ್‌ನಿಂದ ಸ್ವಚ್ಛಗೊಳಿಸಿ: ಮಾರುಕಟ್ಟೆಯಿಂದ ತಂದ ಹಣ್ಣುಗಳು ಮತ್ತು ತರಕಾರಿಗಳನ್ನು ಸ್ವಚ್ಛಗೊಳಿಸಲು ಸುಲಭವಾದ ಮಾರ್ಗವೆಂದರೆ ಮೊದಲು ಅವುಗಳನ್ನು ಶುದ್ಧ ನೀರಿನಿಂದ ಚೆನ್ನಾಗಿ ತೊಳೆಯುವುದು. ಈಗ  1 ಭಾಗ ವಿನೆಗರ್ ಮತ್ತು 3-4 ಭಾಗ ನೀರು ತೆಗೆದುಕೊಂಡು ದ್ರಾವಣವನ್ನು ತಯಾರಿಸಿ. ಆ ನೀರಿಗೆ ಹಣ್ಣುಗಳು ಮತ್ತು ತರಕಾರಿಗಳನ್ನು ಹಾಕಿ ಸುಮಾರು 15 ನಿಮಿಷಗಳ ಕಾಲ ನೆನೆಸಿಡಿ, ಬಳಿಕ ಮತ್ತೊಮ್ಮೆ ಶುದ್ಧ ನೀರಿನಿಂದ ಹಣ್ಣುಗಳನ್ನು ತೊಳೆಯಿರಿ.

ಅಡಿಗೆ ಸೋಡಾ ಬಳಸಿ: ಹಣ್ಣು ತರಕಾರಿಗಳನ್ನು ಒಂದು ಬಾರಿ ನೀರಿನಿಂದ ತೊಳೆದ ಬಳಿಕ, ನೀವು ಅವುಗಳನ್ನು ಅಡಿಗೆ ಸೋಡಾದಿಂದಲೂ ಕ್ಲೀನ್‌ ಮಾಡಬಹುದು. ಇದಕ್ಕಾಗಿ, 2-3 ಕಪ್ ನೀರಿನಲ್ಲಿ 1 ಟೀಚಮಚ ಅಡಿಗೆ ಸೋಡಾವನ್ನು ಮಿಶ್ರಣ ಮಾಡಿ. ಹಣ್ಣುಗಳು ಮತ್ತು ತರಕಾರಿಗಳನ್ನು ಆ ನೀರಿಗೆ ಸೇರಿಸಿ ಮತ್ತು 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಅದನ್ನು ಶುದ್ಧ ನೀರಿನಿಂದ ತೊಳೆಯಿರಿ ಮತ್ತು  ಒಣಗಿಸಿ ಹಣ್ಣು ಮತ್ತು ತರಕಾರಿಗಳನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡಿ.

ಇದನ್ನೂ ಓದಿ: ಮನೆಯಲ್ಲಿಯೇ ತಯಾರಿಸಬಹುದು ಶುದ್ಧ ಕೊಬ್ಬರಿ ಎಣ್ಣೆ; ಅದು ಹೇಗೆ ಅಂತೀರಾ?

ಉಪ್ಪು ಮತ್ತು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ: ತರಕಾರಿಗಳು ಮತ್ತು ಹಣ್ಣುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ನೀವು ಬಯಸಿದರೆ, ಉಗುರು ಬೆಚ್ಚಗಿನ ನೀರಿಗೆ ಒಂದು ಚಿಟಿಕೆ ಉಪ್ಪು ಸೇರಿಸಿ ಮತ್ತು ತರಕಾರಿಗಳು, ಹಣ್ಣುಗಳನ್ನು ಅದರಲ್ಲಿ 10 ರಿಂದ 15 ನಿಮಿಷಗಳ ಕಾಲ ನೆನೆಸಿಡಿ. ನಂತರ ಶುದ್ಧ ನೀರಿನಿಂದ ಸ್ವಚ್ಛಗೊಳಿಸಿ. ಈ ದ್ರಾವಣವು ತರಕಾರಿಗಳಿಂದ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳನ್ನು ತೆಗೆದುಹಾಕಲು  ಸಹಾಯ ಮಾಡುತ್ತದೆ ಮತ್ತು ಅವುಗಳನ್ನು ದೀರ್ಘಕಾಲದವರೆಗೆ ತಾಜಾವಾಗಿರಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us