ಹೆಂಡ್ತಿ ಗಂಡನಿಗೆ ಹೊಡೆದರೆ ಅದು ಕೌಟುಂಬಿಕ ಹಿಂಸಾಚಾರವೇ? ಈ ದೌರ್ಜನ್ಯವನ್ನು ಗಂಡ ಎದುರಿಸೋದು ಹೇಗೆ?
ಹಿಂದೆಲ್ಲಾ ಗಂಡ ತನ್ನ ಹೆಂಡತಿಗೆ ಹೊಡೆಯುವ, ಆಕೆಯ ಮೇಲೆ ಮಾಡುವಂತಹ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಗಂಡನ ಮೇಲೆಯೇ ಹೆಂಡ್ತಿ ಕೈ ಮಾಡುವಂತಹ, ದೌರ್ಜ್ಯನ್ಯ ನಡೆಸುವಂತಹ ಒಂದಷ್ಟು ಪ್ರಕರಣಗಳು ಕೇಳಿ ಬರುತ್ತಿವೆ. ಹೀಗಿರುವಾಗ ಗಂಡ ಹೆಂಡತಿಯ ದೌರ್ಜನ್ಯಕ್ಕೆ ಯಾವ ರೀತಿ ಕಾನೂನಿನ ಸಲಹೆ, ರಕ್ಷಣೆಯನ್ನು ಪಡೆಯಬಹುದು ಎಂಬುದರ ಸಂಪೂರ ಮಾಹಿತಿಯನ್ನು ತಿಳಿಯಿರಿ.

ಭಾರತೀಯ ಸಂವಿಧಾನದಲ್ಲಿ ಮಹಿಳೆಯರಿಗಾಗಿ, ಅವರ ರಕ್ಷಣೆಗಾಗಿ ಹಲವಾರು ಕಾನೂನುಗಳಿವೆ (Laws for women). ಈ ಕಾನೂನಿನ ಭಯದಿಂದಾಗಿ ಹೆಚ್ಚಿನವರು ತಮ್ಮ ಹೆಂಡತಿಯ ಮೇಲೆ ಕೈ ಮಾಡುವ ಸಾಹಸಕ್ಕೂ ಹೋಗಲ್ಲ. ಆದ್ರೆ ಇತ್ತೀಚಿನ ದಿನಗಳಲ್ಲಿ ಹೆಂಡ್ತಿಯೇ ಗಂಡನಿಗೆ ಮಾನಸಿಕ ಹಿಂಸೆಯನ್ನು ನೀಡುವ, ಹೊಡೆಯುವ, ದೌರ್ಜನ್ಯ ನಡೆಸುವ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಕೆಲವು ಮಹಿಳೆಯರು ತಾವೇ ದಬ್ಬಾಳಿಕೆ ನಡೆಸಿ, ಗಂಡ ಹಾಗೂ ಆತನ ಕುಟುಂಬದ ವಿರುದ್ಧ ಸುಳ್ಳು ಕೇಸ್‌ಗಳನ್ನು ದಾಖಲಿಸಿದ್ದುಂಟು. ಹೀಗಿರುವಾಗ ಮುಗ್ಧ ಪುರುಷರ ರಕ್ಷಣೆಗಾಗಿ ಯಾವೆಲ್ಲಾ ಕಾನೂನುಗಳಿವೆ? ಒಂದು ವೇಳೆ ಹೆಂಡತಿ ಗಂಡನ ಮೇಲೆ ದೌರ್ಜನ್ಯ ನಡೆಸಿದರೆ, ಆತ ಯಾವ ರೀತಿಯಲ್ಲಿ (domestic violence against wife)ಕಾನೂನಿನ ರಕ್ಷಣೆ ಪಡೆಯಬಹುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಗಂಡ ತನ್ನ ಹೆಂಡತಿಯ ದೌರ್ಜನ್ಯದ ವಿರುದ್ಧ ಹೇಗೆ ಕಾನೂನಿನ ಸಹಾಯ ಪಡೆಯಬಹುದು?
2005 ರ ಕೌಟುಂಬಿಕ ಹಿಂಸಾಚಾರ ಕಾಯ್ದೆಯಡಿ, ಮಹಿಳೆಯೊಬ್ಬಳು ತನ್ನ ಪತಿ, ಅತ್ತೆ ಅಥವಾ ಕುಟುಂಬದಿಂದ ದೌರ್ಜನ್ಯಕ್ಕೊಳಗಾಗದರೆ, ಕಾನೂನಿನಡಿಯಲ್ಲಿ ಕೌಟುಂಬಿಕ ಹಿಂಸಾಚಾರದಿಂದ ಆಕೆ ರಕ್ಷಣೆ ಪಡೆಯಬಹುದು. ಗಂಡಂದಿರಿಗೆ ಅಂತಹ ಯಾವುದೇ ಕಾನೂನು ಇಲ್ಲ. ಅಲ್ಲದೆ ಅಂತಹ ಪ್ರಕರಣಗಳು ಕೌಟುಂಬಿಕ ಹಿಂಸಾಚಾರದ ಅಡಿಯಲ್ಲಿ ಬರುವುದೂ ಇಲ್ಲ.
ಹಾಗಾದರೆ ಹೆಂಡತಿಯಿಂದ ದೌರ್ಜನ್ಯಕ್ಕೊಳಗಾದ ಗಂಡ ಏನು ಮಾಡಬಹುದು?
ಹೆಂಡತಿಯಿಂದ ದೌರ್ಜನ್ಯಕ್ಕೆ ಒಳಗಾದ ಗಂಡನಿಗೆ ಕೌಟುಂಬಿಕ ಹಿಂಸಾಚಾರ ಕಾಯ್ದೆಯ ಆಶ್ರಯವಿಲ್ಲದಿದ್ದರೂ, ಅವನು ಭಾರತೀಯ ದಂಡ ಸಂಹಿತೆಯ (ಐಪಿಸಿ) ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಬಹುದು. ಸೆಕ್ಷನ್ 323 – ಹೆಂಡತಿ ದೈಹಿಕ ಹಲ್ಲೆ ನಡೆಸಿದ್ದರೆ, ಸೆಕ್ಷನ್ 506 – ಕ್ರಿಮಿನಲ್ ಬೆದರಿಕೆಗಾಗಿ, ಸೆಕ್ಷನ್ 504 – ನಿಂದನೆ ಅಥವಾ ಮಾನಸಿಕ ಕಿರುಕುಳ ನೀಡಿದ್ದಕ್ಕಾಗಿ, ಈ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಬಹುದು.
- ಹೆಂಡತಿ ತನ್ನ ಗಂಡನನ್ನು ಮಾನಸಿಕವಾಗಿ ಅಥವಾ ದೈಹಿಕವಾಗಿ ಹಿಂಸಿಸಿದರೆ ಅಥವಾ ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದರೆ, ಗಂಡನು ಸೆಕ್ಷನ್ 154 ರ ಅಡಿಯಲ್ಲಿ ಆಕೆಯ ವಿರುದ್ಧ ಎಫ್‌ಐಆರ್ ದಾಖಲಿಸಬಹುದು.
- 498A ಅಡಿಯಲ್ಲಿ ವರದಕ್ಷಿಣೆ ಕಿರುಕುಳದ ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಹೆಂಡತಿ ಬೆದರಿಕೆ ಹಾಕಿದರೆ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದರೆ ಗಂಡನು ಅವಳ ವಿರುದ್ಧ ದೂರು ದಾಖಲಿಸಬಹುದು.
ದೂರು ಎಲ್ಲಿ ದಾಖಲಿಸಬೇಕು:
ಪತಿ ಪೊಲೀಸ್ ಠಾಣೆಗೆ ಹೋಗಿ ಎಫ್‌ಐಆರ್ ದಾಖಲಿಸಬಹುದು ಅಥವಾ ನೇರವಾಗಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಬಹುದು. ಮಾನಸಿಕ ಕಿರುಕುಳ ಅಥವಾ ಮಾನನಷ್ಟ ಪ್ರಕರಣಗಳಲ್ಲಿ, ಮಾನವ ಹಕ್ಕುಗಳ ಆಯೋಗಗಳು ಮತ್ತು ಪುರುಷ ಹಕ್ಕುಗಳ ಸಂಘಟನೆಗಳಿಂದಲೂ ಸಹಾಯ ಪಡೆಯಬಹುದು.
ವಿಚ್ಛೇದನದ ವಿಷಯಕ್ಕೆ ಬಂದರೆ:
ಪತ್ನಿ ಮಾನಸಿಕ ಹಿಂಸೆ ಅಥವಾ ದೈಹಿಕ ಹಿಂಸೆ ನೀಡಿದರೆ ಅಥವಾ ಪರಿಸ್ಥಿತಿ ಹದಗೆಟ್ಟರೆ, ಹಿಂದೂ ವಿವಾಹ ಕಾಯ್ದೆ ಅಡಿಯಲ್ಲಿ ಸೆಕ್ಷನ್ 13 ರ ಅಡಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದು ಮತ್ತು ಕಾನೂನುಬದ್ಧವಾಗಿ ವಿಚ್ಛೇದನವನ್ನು ಪಡೆಯಬಹುದು.
ಇದನ್ನೂ ಓದಿ: ಮೂರನೇ ಬಾರಿ ತಾಯಿಯಾಗುವವರಿಗೆ ಹೆರಿಗೆ ರಜೆ ಸಿಗೋದಿಲ್ವಾ? ಈ ಬಗ್ಗೆ ಕಾನೂನು ಏನು ಹೇಳುತ್ತೆ
ನ್ಯಾಯಾಲಯದ ಪ್ರಮುಖ ತೀರ್ಪು:
ರಾಜೇಶ್ ಶರ್ಮಾ v. ಉತ್ತರ ಪ್ರದೇಶ ರಾಜ್ಯ (2017): ಅನೇಕ ಪುರುಷರು ಕೌಟುಂಬಿಕ ಹಿಂಸೆ ಮತ್ತು ವರದಕ್ಷಿಣೆ ಕಿರುಕುಳದ ಸುಳ್ಳು ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ನಂತರ ಇಂತಹ ಪ್ರಕರಣಗಳಲ್ಲಿ ಪ್ರಾಥಮಿಕ ತನಿಖೆಯಿಲ್ಲದೆ ಯಾವುದೇ ಪುರುಷರನ್ನು ಬಂಧನವನ್ನು ಮಾಡಬಾರದು ಎಂದು ನ್ಯಾಯಾಲಯ ಆದೇಶಿಸಿದೆ.
ಪುರುಷರು ಸಹ ಬಲಿಪಶುಗಳಾಗಬಹುದು:
ಸಮಾಜದಲ್ಲಿ ಪುರುಷರನ್ನು ‘ಬಲಶಾಲಿ’ ಎಂದು ಪರಿಗಣಿಸಲಾಗುತ್ತದೆ. ಆದರೆ ಇಂದು ಅದೇ ಪುರುಷರೇ ಹೆಂಡತಿಯಿಂದ ಹೆಚ್ಚು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಹೌದು ಕೆಲ ಮಹಿಳೆಯರು ತಮಗಿರುವ ಕಾನೂನನ್ನು ದುರುಪಯೋಗಪಡಿಸಿಕೊಂಡು, ನಿನ್ನ ವಿರುದ್ಧ ವರದಕ್ಷಿಣೆ ಕಿರುಕುಳು, ದೌರ್ಜನ್ಯ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಗಂಡನಿಗೆ ಮಾನಸಿಕ ಹಿಂಸೆಯನ್ನು ನೀಡುತ್ತಾರೆ. ಹಾಗಿರುವಾಗ ಗಂಡಸರು ಯಾವುದಕ್ಕೂ ಹೆದರದೆ ಇಂತಹ ಪ್ರಕರಣಗಳಲ್ಲಿ ಸರಿಯಾದ ಕಾನೂನು ಸಲಹೆಯನ್ನು ಪಡೆಯುವ ಅಗತ್ಯವಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








