Indian Places: ನೀವು ಪರ್ಮಿಷನ್ ಪಡೆದು ಭೇಟಿ ನೀಡಬೇಕಾದ ಭಾರತದ ಪ್ರವಾಸಿ ತಾಣಗಳು ಇವೆ ನೋಡಿ
ವಿದೇಶಕ್ಕೆ ತೆರಳಬೇಕಾದರೆ ವೀಸಾವು ಅಗತ್ಯವಾಗಿ ಬೇಕಾಗುತ್ತದೆ. ಅದೇ ರೀತಿ ಭಾರತದಲ್ಲಿ ಈ ಕೆಲವು ಸ್ಥಳಗಳಿಗೆ ಪ್ರವೇಶ ಪರವಾನಗಿ ಇಲ್ಲದೆ ಭೇಟಿ ನೀಡಲು ಸಾಧ್ಯವಿಲ್ಲ ಎಂದು ತಿಳಿದರೆ ನಿಮಗೆ ಅಚ್ಚರಿಯೆನಿಸಬಹುದು. ಆದರೆ, ಭಾರತದಲ್ಲಿ ಭೇಟಿ ನೀಡಲು ಕೆಲವು ನಿರ್ಬಂಧಿತ ಪ್ರದೇಶಗಳಿವೆ, ಅಲ್ಲಿಗೆ ಭೇಟಿ ನೀಡಲು ನೀವು ಅನುಮತಿ ಪಡೆಯಲೇಬೇಕು. ಹಾಗಾದ್ರೆ ಭಾರತದ ಯಾವೆಲ್ಲಾ ಸ್ಥಳಗಳಿಗೆ ತೆರಳಲು ಪ್ರವೇಶ ಪರವಾನಗಿ ಪಡೆಯಬೇಕು? ಎನ್ನುವ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ
ಭಾರತ (India) ದವರಾದ ನಾವುಗಳು ಈ ದೇಶದ ಮೂಲೆ ಮೂಲೆಗೂ ತೆರಳಬಹುದು. ಎಲ್ಲಿ ಬೇಕೆಂದರಲ್ಲಿ ಓಡಾಡಬಹುದು, ನಮ್ಮನ್ನು ಯಾರು ಕೂಡ ಪ್ರಶ್ನೆ ಮಾಡುವುದಿಲ್ಲ ಎಂದು ಭಾವಿಸಿರಬಹುದು. ವಿದೇಶ (Foreign) ಕ್ಕೆ ಹೋಗಲು ವೀಸಾ (Visa) ಅಗತ್ಯವಿರುವಂತೆ ಭಾರತದಲ್ಲಿ ಈ ಕೆಲವು ಸ್ಥಳಗಳಿಗೆ ಪ್ರವೇಶ ಪರವಾನಗಿ ಇಲ್ಲದೇ ಭೇಟಿ ನೀಡಲು ಸಾಧ್ಯವಿಲ್ಲವಂತೆ. ಈ ಕೆಲವು ಸ್ಥಳಗಳಿಗೆ ಭೇಟಿ ನೀಡಲು ಇನ್ನರ್ ಲೈನ್ ಪರ್ಮಿಟ್ (Inner Line Permit)ಅನ್ನು ಪಡೆಯಬೇಕಾಗುತ್ತದೆ. ಇದು ಭಾರತದ ಅಂತಾರಾಷ್ಟ್ರೀಯ ಗಡಿಯ ಸಮೀಪವಿರುವ ಸೂಕ್ಷ್ಮ ಸ್ಥಳಗಳಾಗಿದ್ದು, ಹೀಗಾಗಿ ಪ್ರವೇಶ ಪರವಾನಗಿ (Entry Permit) ಅತ್ಯಗತ್ಯ. ಹಾಗಾದ್ರೆ ಭಾರತದಲ್ಲಿರುವ ಆ ಸ್ಥಳಗಳಾವುವು? ಎನ್ನುವ ಮಾಹಿತಿ ಇಲ್ಲಿದೆ.
- ಅರುಣಾಚಲ ಪ್ರದೇಶ : ಭಾರತದ ಈಶಾನ್ಯ ರಾಜ್ಯವಾದ ಅರುಣಾಚಲ ಪ್ರದೇಶವು ಮ್ಯಾನ್ಮಾರ್, ಭೂತಾನ್ ಮತ್ತು ಚೀನಾದ ಗಡಿ ಜಂಕ್ಷನ್‌ನಲ್ಲಿದ್ದು, ಇದು ನೈಸರ್ಗಿಕ ಸೌಂದರ್ಯ ವನ್ಯಜೀವಿಗಳು ಹಾಗೂ ಸಂಸ್ಕೃತಿಯಿಂದ ಹೆಸರುವಾಸಿಯಾಗಿದೆ. ಈ ಸ್ಥಳಕ್ಕೆ ಭೇಟಿ ನೀಡಲು ಇನ್ನರ್ ಪರ್ಮಿಟ್ ಅಗತ್ಯವಿದೆ. ಬಹಳ ಸೂಕ್ಷ್ಮ ಸ್ಥಳವಾಗಿರುವುದರಿಂದ ಸ್ಥಳೀಯರಲ್ಲದವರು ಇಲ್ಲಿಗೆ ಎಂಟ್ರಿ ಕೊಡಲು ಇನ್ನರ್ ಲೈನ್ ಪರ್ಮಿಟ್ ಪಡೆದಿರುವುದು ಕಡ್ಡಾಯವಾಗಿದೆ.
- ನಾಗಾಲ್ಯಾಂಡ್ : ಭಾರತದ ಈಶಾನ್ಯದಲ್ಲಿರುವ ಒಂದು ಸುಂದರ ರಾಜ್ಯವೇ ಈ ನಾಗಾಲ್ಯಾಂಡ್. ತನ್ನ ಸಂಸ್ಕೃತಿಗೆ ಹೆಸರುವಾಸಿಯಾಗಿದ್ದು, ಇಲ್ಲಿ ಹಾರ್ನ್‌ಬಿಲ್ ಉತ್ಸವವು ಬಹಳ ಪ್ರಸಿದ್ಧವಾಗಿದೆ. ಈ ಉತ್ಸವವು ಪ್ರತಿವರ್ಷ ಡಿಸೆಂಬರ್‌ನಲ್ಲಿ ನಡೆಯುತ್ತದೆ. ನಾಗಾಲ್ಯಾಂಡ್‌ನ ಕಿಫಿರೆ, ಕೊಹಿಮಾ, ಮೊಕೊಕ್‌ಚುಂಗ್, ದಿಮಾಪುರ್ ಮತ್ತು ಮಾನ್ ನಂತಹ ಈ ಸ್ಥಳಗಳಿಗೆ ಭೇಟಿ ನೀಡಲು ಲೈಸೆನ್ಸ್ ಪಡೆಯಬೇಕು.
- ಲಡಾಖ್ : ಲಡಾಖ್ ನಲ್ಲಿ ಕೆಲವು ಸ್ಥಳಗಳು ಗಡಿ ನಿಯಂತ್ರಣ ರೇಖೆಯ ಬಳಿಯಿದ್ದು, ಅಲ್ಲಿಗೆ ಹೋಗಬೇಕೆಂದರೆ ಪರವಾನಗಿಗೆ ಪಡೆಯಲೇಬೇಕು. ಪ್ರತಿವರ್ಷವು ಲಡಾಖ್ ಗೆ ದೇಶ ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಬರುತ್ತಾರೆ. ನುಬ್ರಾ ಕಣಿವೆ, ಪ್ಯಾಂಗೊಂಗ್ ತ್ಸೋ ಸರೋವರ ಮತ್ತು ತ್ಸೋ ಮೊರಿರಿಯಂತಹ ಕೆಲವು ನಿರ್ಬಂಧಿತ ಪ್ರದೇಶಗಳಿದ್ದು, ಇಲ್ಲಿಗೆ ಬರುವ ಪ್ರವಾಸಿಗರು ಪರವಾನಗಿ ಪಡೆಯುತ್ತಾರೆ.
- ಸಿಕ್ಕಿಂ : ಸಿಕ್ಕಿಂ ರಾಜ್ಯವು ತನ್ನ ಅದ್ಭುತ ಬೆಟ್ಟಗಳು, ಮಠಗಳು ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಪ್ರವಾಸಿ ತಾಣಗಳಾದ ತ್ಸೊಂಗ್ಮೋ ಸರೋವರ, ಗೋಯಿಚ್ಲಾ ಟ್ರೆಕ್, ನಾಥುಲ್ಲಾ, ಯುಮ್ಥಾಂಗ್, ಗುರುಡೊಂಗ್ಮಾರ್ ಸರೋವರಕ್ಕೆ ಅನುಮತಿಯಿಲ್ಲದೆ ಭೇಟಿ ನೀಡಲು ಸಾಧ್ಯವಿಲ್ಲ. ಈ ಸ್ಥಳಗಳಿಗೆ ಭೇಟಿ ನೀಡಲು ಇನ್ನರ್ ಲೈನ್ ಪರ್ಮಿಟ್ ಅಗತ್ಯವಿದೆ.
- ಮಣಿಪುರ : ದೇಶದ ಈಶಾನ್ಯ ಭಾಗದ ಮಣಿಪುರವು ಪ್ರಕೃತಿ ಸೌಂದರ್ಯದಿಂದಲೇ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಈ ನಗರವು ನೋಡಲು ಸುಂದರವಾಗಿದ್ದು ವೀಕ್ಷಿಸಲು ಹಲವರು ಪ್ರವಾಸಿ ತಾಣಗಳಿವೆ. ಈ ಸುಂದರವನ್ನು ನೋಡುವುದು ಅಷ್ಟು ಸುಲಭವಲ್ಲ. ಇಂಫಾಲ್ ಕಣಿವೆಯ ಆಚೆಗೆ ಪ್ರಯಾಣಿಸಲು ಇನ್ನರ್ ಲೈನ್ ಪರ್ಮಿಟ್ ಅಗತ್ಯವಿದೆ.
- ಅಂಡಮಾನ್ ಮತ್ತು ನಿಕೋಬಾರ್ : ಭಾರತದಲ್ಲಿರುವ ದ್ವೀಪಗಳ ಕೆಲವು ಭಾಗಗಳಿಗೆ ಅದರಲ್ಲಿಯೂ ವಿಶೇಷವಾಗಿ ಬುಡಕಟ್ಟು ಪ್ರದೇಶಗಳಿಗೆ ಭೇಟಿ ನೀಡಲು ಪರವಾನಗಿ ಪಡೆಯುವುದು ಅಗತ್ಯವಾಗಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪವು ಕಡಲತೀರಗಳು ಮತ್ತು ಸಮುದ್ರ ಜೀವಿಗಳಿಗೆ ಹೆಸರುವಾಸಿಯಾಗಿದ್ದು, ಈ ಸ್ಥಳಗಳಿಗೆ ಹೋಗಲು ಪ್ರವೇಶ ಪರವಾನಗಿ ಪಡೆಯುವುದು ಅತ್ಯಗತ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ