
ಇಂದು ಬಹುತೇಕ ಹೆಚ್ಚಿನ ಜನರ ಬಳಿ ಒಂದೊಳ್ಳೆ ಉದ್ಯೋಗವಿದೆ, ಮನೆ, ಕಾರು, ಇತ್ಯಾದಿ ಎಲ್ಲಾ ಸೌಕರ್ಯಗಳೂ ಇವೆ. ಆದರೆ ಒತ್ತಡದ ಬದುಕಿನಿಂದಾಗಿ ಅವರ ಬಳಿ ಸಂತೋಷ (Happiness) ಅನ್ನೋದೇ ಇಲ್ಲ. ಇಂದಿನ ಈ ಒತ್ತಡದ ಬದುಕಿನಲ್ಲಿ ಹೆಚ್ಚಿನ ಜನರು ಈ ಸಂತೋಷಕ್ಕಾಗಿ ಹಾತೊರೆಯುತ್ತಿದ್ದಾರೆ. ಸಂತೋಷವು ಮಾನವನ ಜೀವನದ ಮೂಲಭೂತ ಗುರಿಯಾಗಿದ್ದು, ಟೆನ್ಶನ್ ಎಲ್ಲಾ ಪಕ್ಕಕ್ಕಿಟ್ಟು ಖುಷಿಯಾಗಿರಲು ಜನರನ್ನು ಪ್ರೇರೇಪಿಸಲು ಹಾಗೂ ಸಂತೋಷವಾಗಿರುವುದರಿಂದ ಲಭಿಸುವ ಲಾಭಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಮಾರ್ಚ್ 20 ರಂದು ಅಂತಾರಾಷ್ಟ್ರೀಯ ಸಂತೋಷದ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.
ಸಂತೋಷದ ದಿನವನ್ನು ಭೂತಾನ್ ಆರಂಭಿಸಿತು. ಭೂತಾನ್ ತನ್ನ ಆರ್ಥಿಕ ಬೆಳವಣಿಗೆಯ ಮೇಲೆ ಮಾತ್ರ ಗಮನಹರಿಸದೆ, 1970 ರಿಂದ ಒಟ್ಟು ರಾಷ್ಟ್ರೀಯ ಸಂತೋಷಕ್ಕೂ ಆದ್ಯತೆ ನೀಡಿತು. ಸಂತೋಷದ ಸಮಾಜದಲ್ಲಿ ಮಾನಸಿಕ, ದೈಹಿಕ ಮತ್ತು ಸಾಮಾಜಿಕ ಯೋಗಕ್ಷೇಮವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಂಬಿದ್ದ ಭೂತಾನ್ ಸಂತೋಷದ ದಿನವನ್ನು ಆಚರಿಸಲು ಪ್ರಾರಂಭಿಸಿತು. ನಂತರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜುಲೈ 12, 2012 ರಂದು ತನ್ನ ನಿರ್ಣಯ 66/281 ರಲ್ಲಿ ಮಾರ್ಚ್ 20 ಅನ್ನು ಅಂತರರಾಷ್ಟ್ರೀಯ ಸಂತೋಷ ದಿನವೆಂದು ಘೋಷಿಸಿತು. ಅಂದಿನಿಂದ ಇದು ಪ್ರಪಂಚದಾದ್ಯಂತದ ಜನರ ಜೀವನದಲ್ಲಿ ಸಂತೋಷದ ಮಹತ್ವವನ್ನು ತಿಳಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂತೋಷದ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಇದನ್ನೂ ಓದಿ: ರಾಷ್ಟ್ರೀಯ ಲಸಿಕೆ ದಿನವನ್ನು ಆಚರಿಸುವು ಹಿಂದಿನ ಉದ್ದೇಶವೇನು ತಿಳಿಯಿರಿ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ