National Human Trafficking Awareness Day 2024: ಲೈಂಗಿಕ ಶೋಷಣೆ, ಅಂಗಾಂಗಗಳ ಮಾರಾಟ ದಂಧೆ, ಮಾನವ ಕಳ್ಳ ಸಾಗಣಿಕೆ ಜಾಗೃತಿ ಅಗತ್ಯ
ಮಾನವ ಕಳ್ಳಸಾಗಾಣಿಕೆಯು ಬಹುದೊಡ್ಡ ಸಾಮಾಜಿಕ ಪಿಡುಗಾಗಿದೆ. ಮಕ್ಕಳು, ಮಹಿಳೆಯರು, ಅಪ್ರಾಪ್ತ ಹೆಣ್ಣು ಮಕ್ಕಳು ಸೇರಿದಂತೆ ಶಿಕ್ಷಣದ ಕೊರತೆ, ಆರ್ಥಿಕವಾಗಿ ದುರ್ಬಲರಾಗಿರುವವರು ಸುಲಭವಾಗಿ ಮಾನವ ಕಳ್ಳಸಾಗಣಿಕೆಯ ಕೂಪಕ್ಕೆ ಬಲಿಯಾಗುತ್ತಿದ್ದಾರೆ. ಅಂತಹವರ ರಕ್ಷಣೆಗಾಗಿ ಮತ್ತು ಸಮಾಜದಲ್ಲಿ ಮಾನವ ಕಳ್ಳಸಾಗಣಿಕೆಯನ್ನು ತಡೆಗಟ್ಟುವ ಸಲುವಾಗಿ ಅದರ ಬಗ್ಗೆ ಜಾಗೃತಿಯನ್ನು ಮೂಡಿಸಲು ಪ್ರತಿವರ್ಷ ಜನವರಿ 11 ರಂದು ರಾಷ್ಟ್ರೀಯ ಮಾನವ ಕಳ್ಳಸಾಗಣಿಕೆಯ ವಿರುದ್ಧದ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ.

ಪ್ರಪಂಚವು ಆಧುನಿಕವಾಗಿ ಸಾಕಷ್ಟು ಮುಂದುವರೆದಿದ್ದರೂ ಕೂಡಾ ಇಂದಿಗೂ ಹೆಣ್ಣಿನ ಮೇಲಿನ ಶೋಷಣೆ, ಮಾನವ ಕಳ್ಳಸಾಗಾಣಿಕೆ ಪ್ರಕರಣಗಳು ನಡೆಯುತ್ತಿವೆ. ಈ ಮಾನವ ಕಳ್ಳಸಾಗಾಣಿಕೆಯು ಬಹು ದೊಡ್ಡ ಸಾಮಾಜಿಕ ಪಿಡುಗಾಗಿ ಪರಿಣಮಿಸಿದ್ದು, ಭಿಕ್ಷಾಟನೆ, ವೇಶ್ಯಾವಾಟಿಕೆ, ಲೈಂಗಿಕ ಚಟುವಟಿಕೆ, ಬಲವಂತದ ದುಡಿಮೆ, ಜೀತಕ್ಕಾಗಿ ಮತ್ತು ಇತರ ಅನೇಕ ಕಾನೂನು ಬಾಹಿಕ ಚಟುವಟಿಕೆಗಳಿಗಾಗಿ ಪ್ರಪಂಚದಾದ್ಯಂತ ಮಾನವ ಕಳ್ಳಸಾಗಾಣಿಕೆ ಚಟುವಟಿಕೆ ನಡೆಯುತ್ತಿದೆ. ಮಕ್ಕಳು, ಮಹಿಳೆಯರು, ಅಪ್ರಾಪ್ತ ಹೆಣ್ಣು ಮಕ್ಕಳು ಸೇರಿದಂತೆ ಶಿಕ್ಷಣದ ಕೊರತೆ, ಆರ್ಥಿಕವಾಗಿ ತೀರಾ ದುರ್ಬಲವಾಗಿರುವವರು ಸುಲಭವಾಗಿ ಈ ಮಾನವ ಕಳ್ಳಸಾಗಾಣಿಕೆಯ ಕೂಪಕ್ಕೆ ಸಿಲುಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಂತಹವರ ರಕ್ಷಣೆಗಾಗಿ ಮತ್ತು ಸಮಾಜದಲ್ಲಿ ಮಾನವ ಕಳ್ಳಸಾಗಣಿಕೆಯನ್ನು ತಡೆಗಟ್ಟಲು ಜನರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಪ್ರತಿ ವರ್ಷ ಜನವರಿ 11 ರಂದು ರಾಷ್ಟ್ರೀಯ ಮಾನವ ಕಳ್ಳಸಾಗಾಣಿಕೆ ವಿರುದ್ಧ ಜಾಗೃತಿ ದಿನವನ್ನು (National Human Trafficking Awareness Day) ಆಚರಿಸಲಾಗುತ್ತದೆ. ಹಾಗಾದರೆ ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿದುಕೊಳ್ಳೋಣ.
ಮಾನವ ಕಳ್ಳಸಾಗಣಿಕೆ ವಿರುದ್ಧ ಜಾಗೃತಿ ದಿನದ ಇತಿಹಾಸ:
ಬಲವಂತದ ದುಡಿಮೆ, ಬಲವಂತದ ಕ್ರಿಮಿನಲ್ ಚಟುವಟಿಕೆಗಳು, ಲೈಂಗಿಕ ಶೋಷಣೆ, ಅಂಗಾಂಗಗಳ ಮಾರಾಟ ಇತ್ಯಾದಿ ಕಾನೂನು ಬಾಹಿರ ಚಟುವಟಿಕೆಗಳಿಗಾಗಿ ಇಂದಿಗೂ ಮಕ್ಕಳು ಸೇರಿದಂತೆ ಅಮಾಯಕ ಜನರ ಕಳ್ಳಸಾಗಾಣಿಕೆಯನ್ನು ಮಾಡಲಾಗುತ್ತಿದೆ. ಇದೊಂದು ದೊಡ್ಡ ಸಾಮಾಜಿಕ ಪಿಡುಗಾಗಿದ್ದು, ಈ ಸಮಸ್ಯೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು 2007 ರಲ್ಲಿ ಯುನೈಟೆಡ್ ಸ್ಟೇಟ್ಸ್ ಸೆನೆಟ್ ಜನವರಿ 11 ರಂದು ʼರಾಷ್ಟ್ರೀಯ ಮಾನವ ಕಳ್ಳಸಾಗಾಣಿಕೆ ವಿರುದ್ಧ ಜಾಗೃತಿ ದಿನʼವನ್ನು ಆಚರಿಸಲು ಘೋಷಿಸಿತು. ನಂತರ ಈ ಸಾಮಾಜಿಕ ಪಿಡುಗಿನ ಗಂಭೀರ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು 2010 ರಲ್ಲಿ ಆಗಿನ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮ ಸಂಪೂರ್ಣ ಜನವರಿ ತಿಂಗಳನ್ನು ಮಾನವ ಕಳ್ಳಸಾಗಾಣಿಕೆ ಕುರಿತು ಜಾಗೃತಿ ಮೂಡಿಸಲು ಮೀಸಲಿಟ್ಟರು. ಅಂದಿನಿಂದ ಅಮೇರಿಕಾ ಸೇರಿದಂತೆ ಪ್ರಪಂಚದ ಇತರೆ ರಾಷ್ಟ್ರಗಳಲ್ಲಿಯೂ ಪ್ರತಿವರ್ಷ ಜನವರಿ 11 ರಂದು ಈ ವಿಶೇಷ ದಿನವನ್ನು ಆಚರಿಸಲಾಗುತ್ತದೆ. ಭಾರತದಲ್ಲಿಯೂ ಕೂಡ ಮಾನವ ಕಳ್ಳ ಸಾಗಾಣೆ ವಿರುದ್ಧ ಜಾಗೃತಿ ಮೂಡಿಸಲು ಕಾನೂನು ಅರಿವು ಕಾರ್ಯಕ್ರಮಗಳು, ಜಾಥಗಳು, ವಿಚಾರ ಸಂಕಿರಣಗಳನ್ನು ನಡೆಸಲಾಗುತ್ತದೆ.
ಇದನ್ನೂ ಓದಿ: ಮಾನವ ಕಳ್ಳಸಾಗಾಣಿಕೆಗೆ ಒಳಗಾದವರಿಗೆ ಗಡಿ ಪ್ರದೇಶಗಳಲ್ಲಿ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರ ನೆರವು
ರಾಷ್ಟ್ರೀಯ ಮಾನವ ಕಳ್ಳಸಾಗಾಣಿಕೆ ವಿರುದ್ಧ ಜಾಗೃತಿ ದಿನದ ಮಹತ್ವ:
ಮಾನವ ಕಳ್ಳಸಾಗಾಣಿಕೆಯು ಆಧುನಿಕ ಯುಗದಲ್ಲಿನ ಗುಲಾಮಗಿರಿಯ ಒಂದು ರೂಪವಾಗಿದ್ದು, ಪ್ರತಿ ವರ್ಷ ಪ್ರಪಂಚದಲ್ಲಿನ ಲಕ್ಷಾಂತರ ಅಮಾಯಕ ಜನರು ಈ ಮಾನವ ಕಳ್ಳಸಾಗಾಣಿಕೆಯ ಕೂಪಕ್ಕೆ ಬಲಿಯಾಗಿತ್ತಿದ್ದಾರೆ ಮತ್ತು ಗುಲಾಮಗಿರಿಯ ಸರಪಳಿಯಲ್ಲಿ ಬಂಧಿಯಾಗುತ್ತಿದ್ದಾರೆ. ಈ ಗುಲಾಮಗಿರಿಯಿಂದ ಜಗತ್ತನ್ನು ಮುಕ್ತಗೊಳಿಸಲು ಮಾನವ ಕಳ್ಳಸಾಗಾಣಿಕೆ ವಿರುದ್ಧದ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ. ಮತ್ತು ಈ ವಿಶೇಷ ದಿನವು ಕಳ್ಳಸಾಗಾಣಿಕೆ ನಡೆಯದಂತೆ ರಾಷ್ಟ್ರಗಳ ಭದ್ರತಾ ಕ್ರಮಗಳನ್ನು ಹೆಚ್ಚಿಸುವಲ್ಲಿ ಮತ್ತು ಮಾನವ ಕಳ್ಳಸಾಗಾಣಿಕೆಯನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಲ್ಲದೆ ಈ ವಿಶೇಷ ದಿನದಂದು ಮಾನವ ಕಳ್ಳ ಸಾಗಾಣಿಕೆಯ ವಿರುದ್ಧ ಜಾಗೃತಿ ಮೂಡಿಸಲು ಕಾನೂನು ಅರಿವು ಕಾರ್ಯಕ್ರಮಗಳು, ಜಾಥಗಳು, ವಿಚಾರ ಸಂಕಿರಣಗಳನ್ನು ಸಹ ನಡೆಸಲಾಗುತ್ತದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ