ಹಿಂದೊಂದು ಕಾಲವಿತ್ತು. ಮಹಿಳೆಯರು ಮಕ್ಕಳನ್ನು ಹೆತ್ತು, ಅವರ ಪೋಷಣೆ ಮಾಡಿ, ಕುಟುಂಬಸ್ಥರಿಗಾಗಿ ಹಗಲಿರುಳು ಮನೆಯಲ್ಲಿ ದುಡಿಯುತ್ತ, ಎದುರು ಮಾತನಾಡದೆ ನಾಲ್ಕು ಗೋಡೆಗಳ ಮಧ್ಯೆ ಜೀವನ ಕಳಿಯಬೇಕಿತ್ತು. ಆದ್ರೆ ಈಗ ಕಾಲ ಬದಲಾಗಿದೆ. ಮಹಿಳೆಯರಿಗೂ ಪುರುಷರಷ್ಟೇ ಸಮಾನ ಸ್ಥಾನ ನೀಡಲಾಗಿದೆ. ಮಹಿಳೆ ಎಲ್ಲಾ ಕ್ಷೇತ್ರಗಳಲ್ಲೂ ಮುನ್ನುಗ್ಗುತ್ತಿದ್ದಾಳೆ. ತನಗೆ ಆಗುತ್ತಿರುವ ಶೋಷಣೆ ವಿರುದ್ಧ ತಿರುಗಿ ಬೀಳುತ್ತಿದ್ದಾಳೆ. ಇಂದು ಈ ಮಹಿಳೆಯರಿಗಾಗಿ ಇಡೀ ಜಗತ್ತಿನಾದ್ಯಂತ ಮಹಿಳಾ ದಿನಾಚರಣೆಯನ್ನು(International Women’s Day 2023) ಆಚರಿಸಲಾಗುತ್ತಿದೆ. ಮಹಿಳೆ ಅಬಲೆಯಿಂದ ಸಬಲೆಯಾದ ಹಾದಿಯ ಯಶಸ್ಸಿನ ಸಂಭ್ರಮವನ್ನು ಆಚರಿಸಲಾಗುತ್ತಿದೆ. ಬನ್ನಿ ಈ ದಿನದ ವಿಶೇಷತೆ, ಇತಿಹಾಸ, ಈ ದಿನವನ್ನು ಹೇಗೆ ಆಚರಿಸಲಾಗುತ್ತದೆ ತಿಳಿಯೋಣ.
ಪ್ರಪಂಚದಾದ್ಯಂತ ವಿವಿಧ ಕ್ಷೇತ್ರಗಳಿಗೆ ಮಹಿಳೆಯರ ಕೊಡುಗೆಯನ್ನು ಗುರುತಿಸಲು ಮತ್ತು ಗೌರವಿಸಲು ವರ್ಷಕ್ಕೊಮ್ಮೆ ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಮಹಿಳೆಯರ ಸಾಧನೆಗಳನ್ನು ಎತ್ತಿ ತೋರಿಸಲು ಮತ್ತು ಮಹಿಳಾ ಸಮಾನತೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ.
ಈ ವರ್ಷದ ಮಹಿಳಾ ದಿನಾಚರಣೆಯ ಯುಎನ್ ಥೀಮ್ “ಲಿಂಗ ಸಮಾನತೆಗಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನ”. ಮಹಿಳೆಯರ ಸ್ಥಿತಿಗತಿ (CSW-67) ಆಯೋಗದ ಮುಂಬರುವ 67 ನೇ ಅಧಿವೇಶನದ ಆದ್ಯತೆಯ ಥೀಮ್‌ನೊಂದಿಗೆ ಈ ಥೀಮ್ ಅನ್ನು ಹೊಂದಿಸಲಾಗಿದೆ. “ಲಿಂಗ ಸಮಾನತೆ ಮತ್ತು ಎಲ್ಲಾ ಮಹಿಳೆಯರು ಮತ್ತು ಹುಡುಗಿಯರ ಸಬಲೀಕರಣಕ್ಕಾಗಿ ಡಿಜಿಟಲ್ ಯುಗದಲ್ಲಿ ನಾವೀನ್ಯತೆ ಮತ್ತು ತಾಂತ್ರಿಕ ಬದಲಾವಣೆ ಮತ್ತು ಶಿಕ್ಷಣ” ಎನ್ನುವುದಾಗಿದೆ.
ವಿಶ್ವಸಂಸ್ಥೆಯು 1975 ರಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲು ಪ್ರಾರಂಭಿಸಿತು. 1977 ರಲ್ಲಿ ಯು ಎನ್ ಜನರಲ್ ಅಸೆಂಬ್ಲಿಯು ಮಹಿಳೆಯರ ಹಕ್ಕುಗಳು ಮತ್ತು ಜಾಗತಿಕ ಶಾಂತಿಯನ್ನು ಬೆಂಬಲಿಸಲು ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನ ಎಂದು ಘೋಷಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಪ್ರತಿ ವರ್ಷ ವಿಶ್ವಸಂಸ್ಥೆಯು ಹೊಸ ಹೊಸ ಥೀಮ್‌ನೊಂದಿಗೆ ಈ ದಿನವನ್ನು ಆಚರಣೆ ಮಾಡುತ್ತಿದೆ.
ಇದನ್ನೂ ಓದಿ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹೀಗೂ ಆಚರಿಸಬಹುದು, ಮೈಸೂರಿನ ಡಾ ಶ್ವೇತಾರ ಹಾಗೆ!
1908ರಲ್ಲಿ ಅಮೆರಿಕದಲ್ಲಿ ಕಾರ್ಮಿಕ ಚಳವಳಿ ನಡೆಯಿತು. ದುಡಿಯುವ ಮಹಿಳೆಯರು ಅವರ ಹಕ್ಕಿನ ಪರವಾಗಿ ಧ್ವನಿಯೆತ್ತಿದ್ದರು ಸುಮಾರು 15,000 ಮಹಿಳೆಯರು ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ತಮ್ಮ ಕೆಲಸದ ಅವಧಿಯನ್ನು ಕಡಿಮೆ ಮಾಡಿ ವೇತನದ ಶ್ರೇಣಿಯನ್ನು ಹೆಚ್ಚಿಸಬೇಕು. ಮಹಿಳೆಯರಿಗೂ ಮತದಾನದ ಹಕ್ಕು ನೀಡಬೇಕೆಂದು ಬೇಡಿಕೆಯಿಟ್ಟಿದ್ದರು. ಮಹಿಳೆಯರ ಧ್ವನಿ ಅಂದಿನ ಸರ್ಕಾರದ ಕಿವಿಗೆ ಬಿದ್ದಿತ್ತು. ನಂತರ, ಚಳುವಳಿಯ ಒಂದು ವರ್ಷದ ನಂತರ, ಅಮೆರಿಕಾದ ಸಮಾಜವಾದಿ ಪಕ್ಷ 1909 ರಲ್ಲಿ ಫೆ.28 ರಂದು ಮಹಿಳಾ ದಿನವನ್ನು ಘೋಷಿಸಿತು. 1917 ರಲ್ಲಿ ಮೊದಲ ಮಹಾಯುದ್ಧದ ಸಮಯದಲ್ಲಿ ರಷ್ಯಾದ ಮಹಿಳೆಯರು ಆಹಾರಕ್ಕಾಗಿ ಮುಷ್ಕರ ನಡೆಸಿದ್ದರು. ಅದಾಗಿ ಕೆಲವು ದಿನಗಳ ನಂತರ ಚಕ್ರವರ್ತಿ ನಿಕೋಲಸ್ ರಾಜೀನಾಮೆ ನೀಡಿದರು. ಈ ವೇಳೆ ಮಹಿಳೆಯರು ಮತದಾನದ ಹಕ್ಕನ್ನು ಪಡೆದರು. ಇದರ ಹಿನ್ನಲೆಯಲ್ಲಿ ಯುರೋಪ್‌ನಲ್ಲಿ ಮಹಿಳೆಯರು ಕೆಲವು ದಿನಗಳ ನಂತರ ಮಾರ್ಚ್ 8 ರಂದು ಶಾಂತಿ ಕಾರ್ಯಕರ್ತರನ್ನು ಬೆಂಬಲಿಸಿದರು. ಇದೇ ಕಾರಣಕ್ಕಾಗಿ, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾರ್ಚ್ 8 ರಂದು ಪ್ರಾರಂಭಿಸಲಾಯಿತು. ನಂತರ 1975 ರಲ್ಲಿ ವಿಶ್ವಸಂಸ್ಥೆಯು ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲು ಅಧಿಕೃತವಾಗಿ ಘೋಷಿಸಿತು. ಇದರಿಂದ ಯುರೋಪ್‌ನಲ್ಲಿ ಮಹಿಳಾ ದಿನಾಚರಣೆ ಒಂದು ಮಹತ್ವದ ದಿನವಾಗಿದೆ.
ಅಂತರರಾಷ್ಟ್ರೀಯ ಮಹಿಳಾ ದಿನವನ್ನು ವಿಶ್ವದಾದ್ಯಂತ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತೆ. ಇದು ಹಲವಾರು ದೇಶಗಳಲ್ಲಿ ಸಾರ್ವಜನಿಕ ರಜಾದಿನವಾಗಿದೆ ಮತ್ತು ಮಹಿಳೆಯರ ಸಾಧನೆಗಳನ್ನು ಆಚರಿಸಲು ಮತ್ತು ಉತ್ತೇಜಿಸಲು ಸಾಮಾಜಿಕವಾಗಿ ಅಥವಾ ಸ್ಥಳೀಯವಾಗಿ ಆಚರಿಸಲಾಗುತ್ತದೆ. ಅಭಿಯಾನ, ಮಹಿಳಾ ಹಕ್ಕುಗಳ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆ, ಸ್ಪರ್ಧೆಗಳನ್ನು ಇಟ್ಟು ಮಹಿಳೆಯರ ಬಗ್ಗೆ ಅರಿವು ಮೂಡಿಸಲಾಗುತ್ತದೆ.
ಈ ದಿನ ಮಹಿಳೆಯರಿಗೆ ವಿಶೇಷ ಭೋಜನ ಕೂಟಗಳನ್ನು ಏರ್ಪಡಿಸಲಾಗುತ್ತೆ. ಅವರಿಗೆ ಉಡುಗೊರೆ, ಅವರ ಕೆಲಸದಿಂದ ವಿರಾಮ ನೀಡಲಾಗುತ್ತೆ. ಮಹಿಳಾ ಲೇಖಕರು ಬರೆದ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿ ಕುಗ್ಗಿದ ಮಹಿಳೆಯರಿಗೆ ಧೈರ್ಯ ತುಂಬಲಾಗುತ್ತೆ. ಮಹಿಳಾ ಹಕ್ಕುಗಳು ಮತ್ತು ಲಿಂಗ ಸಮಾನತೆಯ ಬಗ್ಗೆ ಶಿಕ್ಷಣ ನೀಡಲಾಗುತ್ತೆ. ಅವರ ಮೆಚ್ಚಿನ ಚಲನಚಿತ್ರಗಳನ್ನು ವೀಕ್ಷಿಸುವ ಮೂಲಕ ತಮ್ಮ ಇಷ್ಟ ಬಂದ ಹಾಗೆ ಇರುವ, ಸಂತೋಷ ಪಡುವ ಮೂಲಕ ಕೆಲವು ಮಹಿಳೆಯರು ತಮ್ಮ ದಿನವನ್ನು ಆಚರಿಸುತ್ತಾರೆ. ಈ ದಿನ ಮಹಿಳೆಯರನ್ನು ವಿಶೇಷವಾಗಿ ಕಾಣಲಾಗುತ್ತೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:07 am, Wed, 8 March 23