Leftover Aloo Ki Sabzi Recipes: ಉಳಿದಿರುವ ಆಲೂ ಭಾಜಿಯಿಂದ ಸುಲಭವಾಗಿ ತಯಾರಿಸಬಹುದಾದ ಪಾಕವಿಧಾನ ಇಲ್ಲಿದೆ
ಪ್ರತಿ ಭಾರತೀಯ ಅಡುಗೆಮನೆಯಲ್ಲೂ ಆಲೂಗಡ್ಡೆ ಇದ್ದೇ ಇರುತ್ತದೆ. ಇದರಿಂದ ರುಚಿಕರವಾದ ಬಗೆ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಬಹುದು.
ಆಲೂಗಡ್ಡೆಯನ್ನು ಅಡುಗೆಮನೆಗಳಲ್ಲಿ ಸಾಮಾನ್ಯವಾಗಿ ಬಳಸುವ ತರಕಾರಿಯಾಗಿದೆ. ಇದರಿಂದ ವಿವಿಧ ರೀತಿಯ ತಿಂಡಿ ತಿನಿಸಿಗಳನ್ನು ತಯಾರಿಸಲಾಗುತ್ತದೆ. ಆಲೂಗಡ್ಡೆ ಬಹುಮುಖ ತರಕಾರಿಯಾಗಿದ್ದು, ಇದನ್ನು ಅನೇಕ ಜನರು ಇಷ್ಟಪಡುತ್ತಾರೆ. ಹೆಚ್ಚಿನ ಜನರು ಪೂರಿ ಅಥವಾ ಚಪಾತಿಗೆ ಕಾಂಬಿನೇಷನ್ ಆಗಿ ಆಲುಗಡ್ಡೆಯಿಂದ ಸಾಗು ಅಥವಾ ಆಲೂ ಭಾಜಿಯನ್ನು ತಯಾರಿಸುತ್ತಾರೆ. ಕೆಲವು ಬಾರಿ ಮನೆಯಲ್ಲಿ ಮಾಡಿ ಆಲೂ ಭಾಜಿ ಖಾಲಿಯಾಗದೆ ಹಾಗೇನೆ ಉಳಿದುಬಿಡುತ್ತದೆ. ಈ ಉಳಿದಿರುವಂತಹ ಆಲೂ ಕಿ ಸಬ್ಜಿಯಿಂದ ರುಚಿಕರವಾದ ಪಾಕವಿಧಾನವನ್ನು ಮಾಡಬಹುದು.
ಉಳಿದಿರುವ ಆಲೂ ಕಿ ಸಬ್ಜಿಯಿಂದ ಮಾಡಬಹುದಾದ ಪಾಕವಿಧಾನಗಳು:
ಆಲೂ ಫ್ರಾಂಕಿ: ಉಳಿದಿರುವ ಆಲೂ ಭಾಜಿ, ಮಸಾಲೆಗಳು, ಕತ್ತರಿಸಿದ ಈರುಳ್ಳಿ ಮತ್ತು ಚಟ್ನಿಗಳನ್ನು ಬಳಸಿ ರುಚಿಕರವಾದ ಆಲೂ ಫ್ರಾಂಕಿಯನ್ನು ತಯಾರಿಸಬಹುದು. ಪರಾಠ ಮಾಡಿ ಅದರ ಮೇಲೆ ಚಟ್ನಿಯನ್ನು ಹರಡಿ, ಸ್ವಲ್ಪ ಸಬ್ಜಿ ಹಾಗೂ ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ ರೋಲ್ ಮಾಡಿ, ಅದಕ್ಕೆ ಚೀಸ್ ಕೂಡಾ ಸೇರಿಸಬಹುದು.
ಆಲೂ ಸ್ಯಾಂಡ್ವಿಚ್: ಸ್ಯಾಂಡ್‌ವಿಚ್‌ಗಳನ್ನು ಮಕ್ಕಳು ಹೆಚ್ಚಾಗಿ ಇಷ್ಟಪಡುತ್ತಾರೆ. ಮತ್ತು ಇವುಗಳನ್ನು ತಯಾರಿಸುವುದು ಕೂಡಾ ಸುಲಭವಾಗಿದೆ. ಉಳಿದಿರುವ ಆಲೂ ಕಿ ಸಬ್ಜಿಯಿಂದ ಸ್ಯಾಂಡ್ವಿಚ್ ತಯಾರಿಸುವುದು ಇನ್ನೂ ಸುಲಭವಾಗಿದೆ. ಬ್ರೆಡ್ ಸ್ಲೆಸ್‌ಗೆ ಗ್ರೀನ್ ಚಟ್ನಿಯನ್ನು ಹರಡಿ ಆಲೂ ಸಬ್ಜಿಯನ್ನು ಅದರ ಮೇಲೆ ಇರಿಸಿ ಅದಕ್ಕೆ ಚೀಸ್ ಸೇರಿಸಿ. ಇನ್ನೊಂದು ಬ್ರೆಡ್ ಸ್ಲೆಸ್‌ನಿಂದ ಅದನ್ನು ಮುಚ್ಚಿ, ಅದನ್ನು ಗ್ರಿಲ್ ಮಾಡಬಹುದು ಅಥವಾ ಪ್ಯಾನ್‌ನಲ್ಲಿ ಟೋಸ್ಟ್ ಕೂಡಾ ಮಾಡಬಹುದು.
ಬ್ರೆಡ್ ರೋಲ್: ಬ್ರೆಡ್ ರೋಲ್ ಒಂದು ಜನಪ್ರಿಯ ಭಾರತೀಯ ತಿಂಡಿಯಾಗಿದ್ದು, ಇದು ಸಂಜೆಯ ಚಹಾ ಸಮಯದಲ್ಲಿ ತಿನ್ನಲು ಸೂಕ್ತವಾಗಿದೆ. ಉಳಿದಿರುವ ಆಲೂ ಕಿ ಸಬ್ಜಿಯನ್ನು ತೆಗೆದುಕೊಂಡು ಅದಕ್ಕೆ ಕೆಲವು ಹನಿ ನಿಂಬೆ ರಸ, ಕತ್ತರಿಸಿದ ಈರುಳ್ಳಿ, ಹಸಿ ಮೆಣಸಿನಕಾಯಿ ಮತ್ತು ಇತರ ಮಸಾಲೆಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಬ್ರೆಡ್‌ನ ಬದಿಗಳನ್ನು ಕತ್ತರಿಸಿ ರೋಲಿಂಗ್ ಪಿನ್‌ನಿಂದ ರೋಲ್ ಮಾಡಿ ಮತ್ತು ಆಲೂ ಕಿ ಸಬ್ಜಿ ಸ್ಟಫಿಂಗ್‌ನ್ನು ಅದರೊಳಗೆ ತುಂಬಿ ಸುತ್ತಿಕೊಳ್ಳಿ. ಮತ್ತು ಎಣ್ಣೆಯಲ್ಲಿ ಡೀಪ್ ಫ್ರೆ ಮಾಡಿ.
ಇದನ್ನೂ ಓದಿ: Immunity Food: ಬದಲಾಗುತ್ತಿರುವ ಋತುವಿನಲ್ಲಿ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಲು 7 ಆಹಾರಗಳು
ಆಲೂ ಕಟ್ಲೆಟ್: ಕಟ್ಲೆಟ್ ರುಚಿಕರವಾದ ತಿಂಡಿಯಾಗಿದೆ. ಉಳಿದಿರುವ ಆಲೂ ಕಿ ಸಬ್ಜಿಯಿಂದಲೂ ಕಟ್ಲೇಟ್‌ನ್ನು ಮಾಡಬಹುದು. ಉಳಿದಿರುವ ಆಲೂ ಭಾಜಿಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಮ್ಯಾಶ್ ಮಾಡಿ. ಬ್ರೆಡ್ ತುಂಡುಗಳು, ಸಣ್ಣದಾಗಿ ಕೊಚ್ಚಿದ ಈರುಳ್ಳಿ, ಉಪ್ಪು, ಕರಿಮೆಣಸು ಹಾಗೂ ಇನ್ನಿತರ ಮಸಾಲೆಗಳನ್ನು ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ. ಕಟ್ಲೆಟ್‌ನ್ನು ರೌಂಡ್ ಶೇಪ್‌ನಲ್ಲಿ ತಯಾರಿಸಿ ಎಣ್ಣೆಯಲ್ಲಿ ಫ್ರೆ ಮಾಡಿ.
ಆಲೂ ಮಸಾಲಾ ಪೂರಿ: ಪೂರಿ ಜನಪ್ರಿಯ ಭಾರತೀಯ ತಿನಿಸುಗಳಲ್ಲಿ ಒಂದಾಗಿದ್ದು, ವಿಶೇಷ ಸಂದರ್ಭಗಳಲ್ಲಿ ಹೆಚ್ಚಾಗಿ ಇದನ್ನು ತಯಾರಿಸುತ್ತಾರೆ. ಉಳಿದಿರುವ ಆಲೂ ಭಾಜಿಯನ್ನು ಚೆನ್ನಾಗಿ ಮ್ಯಾಶ್ ಮಾಡಿ ಗೋಧಿ ಹಿಟ್ಟಿನೊಂದಿಗೆ ಬೆರೆಸಿ. ನಿಮ್ಮ ರುಚಿಗೆ ತಕ್ಕಂತೆ ಉಪ್ಪು ಮತ್ತು ಮಸಾಲೆಗಳನ್ನು ಸೇರಿಸಿ ಹಿಟ್ಟನ್ನು ತಯಾರಿಸಿ. ಪೂರಿಯನ್ನು ಮಾಡಿಕೊಳ್ಳಿ.