
ಫಿಟ್ ಆಗಿರಲು, ಸದೃಢ ದೇಹವನ್ನು ಹೊಂದಲು ಇಂದಿನ ಅನೇಕ ಯುವಕರು ಜಿಮ್‌ಗೆ ಹೋಗಿ ಕಸರತ್ತು ಮಾಡುತ್ತಾರೆ. ಜಿಮ್‌ಗೆ ಹೋಗುವ ಪ್ರತಿಯೊಬ್ಬರೂ ಸಹ ಮಸಲ್ ಬಿಲ್ಡ್ ಮಾಡುವ ಸಲುವಾಗಿ ವರ್ಕೌಟ್ ಮಾಡುವುದರ ಜೊತೆಗೆ ಪ್ರೋಟೀನ್ ಪೌಡರ್ (protein powder) ಸೇವಿಸುತ್ತಾರೆ. . ಬಲವಾದ ಸ್ನಾಯುಗಳನ್ನು ಪಡೆಯಲು ಮತ್ತು ದೇಹಕ್ಕೆ ಶಕ್ತಿಯನ್ನು ಒದಗಿಸಲು ಪ್ರೋಟೀನ್ ಅತೀ ಮುಖ್ಯವಾಗಿ ಬೇಕಾಗಿದ್ದು, ಇದಕ್ಕಾಗಿ ಜಿಮ್‌ಗೆ ಹೋಗುವವರು ಪ್ರೋಟೀನ್ ಪೌಡರ್ ಸೇವಿಸುತ್ತಾರೆ. ಹೌದು ಪ್ರತಿನಿತ್ಯ ಹಾಲು ಅಥವಾ ನೀರಿನೊಂದಿಗೆ ಪ್ರೋಟೀನ್ ಪೌಡರ್ ಬೆರೆಸಿ ಸೇವನೆ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ವಿವಿಧ ಬ್ರ್ಯಾಂಡ್‌ಗಳ ಪ್ರೋಟೀನ್ ಪೌಡರ್‌ಗಳು ಲಭ್ಯವಿದ್ದು, ಇವುಗಳಲ್ಲಿ ಹೆಚ್ಚಿನ ಪ್ರಮಾಣದ ಕೃತಕ ಸಿಹಿಕಾರಕ, ಸಂರಕ್ಷಕಗಳು ಮತ್ತು ರಾಸಾಯನಿಕಗಳು ಇರುವ ಸಾಧ್ಯತೆ ಇದ್ದು, ಇದು ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಹಾಗಾಗಿ ನೀವು ಮನೆಯಲ್ಲಿಯೇ ಆರೋಗ್ಯಕರ ಪ್ರೋಟೀನ್ ಪೌಡರ್ ತಯಾರಿಸಬಹುದು.
ಮಾರುಕಟ್ಟೆಯಲ್ಲಿ ಲಭ್ಯವಿರುವಂತಹ ಪ್ರೋಟೀನ್ ಪೌಡರ್ ಸಖತ್ ದುಬಾರಿಯಾಗಿರುತ್ತವೆ. ಅಷ್ಟೇ ಅಲ್ಲದೆ ಅವುಗಳು ರಾಸಾಯನಿಕಯುಕ್ತವಾಗಿರುವ ಸಾಧ್ಯತೆ ಇರುತ್ತವೆ. ಇದರ ಬದಲು ನಟ್ಸ್ ಮತ್ತು ದ್ವಿದಳ ಧಾನ್ಯಗಳನ್ನು ಬಳಸಿಕೊಂಡು ಶುದ್ಧ ಪ್ರೋಟೀನ್ ಪೌಡರ್ ಅನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು.
ಈ ಆರೋಗ್ಯಕರ ಪುಡಿಯನ್ನು ತಯಾರಿಸಲು, ನಿಮಗೆ ಸಿಪ್ಪೆ ಇಲ್ಲದ 250 ಗ್ರಾಂ ಹುರಿದ ಕಡಲೆ, 100 ಗ್ರಾಂ ಬಾದಾಮಿ, ಅರ್ಧ ಕಪ್ ಓಟ್ಸ್, ತಲಾ 50 ಗ್ರಾಂ ಗೋಡಂಬಿ ಮತ್ತು ವಾಲ್ನಟ್ಸ್, 50 ಗ್ರಾಂ ಮಖಾನಾ ಮತ್ತು ತಲಾ 25 ಗ್ರಾಂ ಅಗಸೆ ಬೀಜಗಳು ಮತ್ತು ಕುಂಬಳಕಾಯಿ ಬೀಜಗಳು ಬೇಕಾಗುತ್ತವೆ. 2 ಟೀ ಚಮಚ ಏಲಕ್ಕಿ ಪುಡಿ. ಈ ಎಲ್ಲಾ ಪದಾರ್ಥಗಳು ಪ್ರೋಟೀನ್, ಫೈಬರ್, ಆರೋಗ್ಯಕರ ಕೊಬ್ಬುಗಳು ಮತ್ತು ಅಗತ್ಯ ಖನಿಜಗಳನ್ನು ಒಳಗೊಂಡಿರುತ್ತವೆ. ಅಲ್ಲದೆ ಇದು ಯಾವುದೇ ಕೃತಕ ಸುವಾಸನೆ, ಹೆಚ್ಚುವರಿ ಸಕ್ಕರೆ ಅಥವಾ ಹಾನಿಕಾರಕ ರಾಸಾಯನಿಕಗಳನ್ನು ಹೊಂದಿರುವುದಿಲ್ಲ ಹಾಗಾಗಿ ಇದು ಸಂಪೂರ್ಣ ಸುರಕ್ಷಿತವಾಗಿದೆ.
ಇದನ್ನೂ ಓದಿ: ಮನೆಯಲ್ಲಿಯೇ ತಯಾರಿಸಬಹುದು ಶುದ್ಧ ಕೊಬ್ಬರಿ ಎಣ್ಣೆ; ಅದು ಹೇಗೆ ಅಂತೀರಾ?
ಮೊದಲು ಕಡಲೆಕಾಯಿಯನ್ನು ಚೆನ್ನಾಗಿ ಹುರಿದು ಸಿಪ್ಪೆ ತೆಗೆದಿಟ್ಟುಕೊಳ್ಳಿ, ನಂತರ ಬಾದಾಮಿ, ಗೋಡಂಬಿ, ವಾಲ್ನಟ್ಸ್, ಓಟ್ಸ್ ಮತ್ತು ಬೀಜಗಳನ್ನು ಒಂದು ಪ್ಯಾನ್‌ನಲ್ಲಿ 2-3 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಹುರಿಯಿರಿ, ಇದರಿಂದ ತೇವಾಂಶ ಬಿಡುಗಡೆಯಾಗುತ್ತದೆ. ನಂತರ ಮಖಾನಾವನ್ನು ಗರಿಗರಿಯಾಗುವವರೆಗೆ ಪ್ರತ್ಯೇಕವಾಗಿ ಹುರಿಯಿರಿ. ಎಲ್ಲಾ ಪದಾರ್ಥಗಳು ತಣ್ಣಗಾದ ನಂತರ ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಕೊನೆಗೆ ಏಲಕ್ಕಿ ಪುಡಿಯನ್ನು ಸೇರಿಸಿ
ಈ ಪುಡಿಯನ್ನು ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿಟ್ಟು ಫ್ರಿಜ್ ನಲ್ಲಿಡಿ, 1 ರಿಂದ 2 ಟೀ ಚಮಚ ಪುಡಿಯನ್ನು ಉಗುರು ಬೆಚ್ಚಗಿನ ಹಾಲು ಅಥವಾ ನೀರಿನೊಂದಿಗೆ ಬೆರೆಸಿ ಪ್ರತಿದಿನ ವ್ಯಾಯಾಮದ ನಂತರ ಅಥವಾ ರಾತ್ರಿ ಮಲಗುವ ಮುನ್ನ ಕುಡಿಯುವುದರಿಂದ ಅದ್ಭುತ ಪ್ರಯೋಜನಗಳು ದೊರೆಯುತ್ತವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ