ರವೆ ಬರ್ಫಿ ಮಾಡುವ ಮೂಲಕ ರಾಮ ಮಂದಿರ ಉದ್ಘಾಟನೆಯನ್ನು ಸಂಭ್ರಮಿಸಿ
ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿದ್ದು, ಈಗಾಗಲೇ ಬಾಲ ರಾಮನ ಮೂರ್ತಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಇದೇ ಜನವರಿ 22 ರಂದು ಪ್ರಾಣ ಪ್ರತಿಷ್ಠೆ ಕಾರ್ಯವು ನೆರವೇರಲಿದೆ. ಇಡೀ ದೇಶವು ಆ ದಿನಕ್ಕಾಗಿ ಎದುರು ನೋಡುತ್ತಿದ್ದು, ನೀವು ಕೂಡ ಮನೆಯಲ್ಲಿ ರವೆ ಬರ್ಫಿ ಮಾಡಿ ಆ ದಿನವನ್ನು ಸಿಹಿಯಾಗಿಸಿಕೊಳ್ಳಬಹುದು. ಹಾಗಾದ್ರೆ ರವೆ ಬರ್ಫಿಯ ರೆಸಿಪಿ ಇಲ್ಲಿದೆ ನೋಡಿ.
ಯಾವುದೇ ಹಬ್ಬವಿರಲಿ ಹಬ್ಬದ ದಿನ ಸಿಹಿ ಅಡುಗೆಯಿದ್ದರೆ ಅದರ ಮಜಾನೇ ಬೇರೆ. ಹಬ್ಬದ ದಿನ ಮಾಡುವ ಬಗೆ ಬಗೆಯ ತಿಂಡಿ ತಿನಿಸುಗಳು ಹಬ್ಬದ ರಂಗನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹೀಗಾಗಿ ಪ್ರತಿಯೊಬ್ಬರ ಮನೆ-ಮನೆಗಳಲ್ಲಿ ಒಂದೊಂದು ರೀತಿಯ ಭಕ್ಷ್ಯ-ಭೋಜ್ಯಗಳನ್ನು ತಯಾರಿಸಿ ಸವಿಯುವುದು ಮಾಮೂಲಿ. ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ ದಿನ ಮನೆಯಲ್ಲಿ ಹಬ್ಬದ ಅಡುಗೆ ಮಾಡಬೇಕು ಎಂದುಕೊಂಡಿದ್ದರೆ, ರವೆ ಬರ್ಫಿ ಮಾಡಿ ಬಾಯಿ ಸಿಹಿಯಾಗಿಸಿಕೊಳ್ಳಬಹುದು.
ರವೆ ಬರ್ಫಿ ಮಾಡಲು ಬೇಕಾಗುವ ಸಾಮಗ್ರಿಗಳು
* ಕಾಲು ಕಪ್ ತುಪ್ಪ
* ಒಂದು ಕಪ್ ಬಾಂಬೆ ರವೆ
* ಕಾಲು ಕಪ್ ತೆಂಗಿನ ತುರಿ
* ಎರಡೂವರೆ ಕಪ್ ಹಾಲು
* ಒಂದು ಕಪ್ ಸಕ್ಕರೆ
* ಎರಡು ಚಮಚ ಬಾದಾಮಿ
* ಎರಡು ಚಮಚ ಗೋಡಂಬಿ
* ಕಾಲು ಚಮಚ ಏಲಕ್ಕಿ ಪುಡಿ
ರವೆ ಬರ್ಫಿ ಮಾಡುವ ವಿಧಾನ
* ಮೊದಲಿಗೆ ಬಾಣಲೆಯಲ್ಲಿ ಕಾಲು ಕಪ್ ತುಪ್ಪವನ್ನು ಬಿಸಿ ಮಾಡಿ, ಅದಕ್ಕೆ ಒಂದು ಕಪ್ ಬಾಂಬೆ ರವೆಯನ್ನು ಸೇರಿಸಿ, ಪರಿಮಳ ಬರುವವರೆಗೂ ಹುರಿದುಕೊಳ್ಳಿ.
* ಬಳಿಕ ತೆಂಗಿನ ತುರಿ ಸೇರಿಸಿ ಒಂದು ನಿಮಿಷ ಹುರಿದುಕೊಂಡು ಪಕ್ಕಕ್ಕೆ ಇರಿಸಿಕೊಳ್ಳಿ.
* ಮತ್ತೊಂದು ಪಾತ್ರೆಯನ್ನು ಒಲೆಯ ಮೇಲಿಟ್ಟು ಹಾಲನ್ನು ಹಾಕಿ ಕಾಯಿಸಿಕೊಳ್ಳಿ. ಈ ಹಾಲಿಗೆ ಹುರಿದುಕೊಂಡ ರವೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಇದನ್ನೂ ಓದಿ:ಕಡಲೆಕಾಯಿ ಬರ್ಫಿ ಮನೆಯಲ್ಲೇ ಮಾಡಬೇಕಾ? ಇಲ್ಲಿದೆ ಸಿಂಪಲ್ ರೆಸಿಪಿ
* ಈ ಮಿಶ್ರಣಕ್ಕೆ ಸಕ್ಕರೆ, ಬಾದಾಮಿ ಗೋಡಂಬಿ, ಪರಿಮಳಕ್ಕೆಂದು ಏಲಕ್ಕಿ ಪುಡಿ ಹಾಕಿಕೊಂಡು ಒಮ್ಮೆ ಕಲಸಿಕೊಳ್ಳಿ.
* ಆ ಬಳಿಕ ತುಪ್ಪ ಸವರಿದ ತಟ್ಟೆಗೆ ಈ ಮಿಶ್ರಣವನ್ನು ಹಾಕಿ, ಅದರ ಮೇಲೆ ಬಾದಾಮಿ ಚೂರುಗಳನ್ನು ಉದುರಿಸಿಕೊಂಡು, ಐದು ನಿಮಿಷಗಳ ನಂತರ ಬೇಕಾದ ಆಕಾರದಲ್ಲಿ ಕತ್ತರಿಸಿಕೊಂಡು ಗಟ್ಟಿಯಾಗಲು ಬಿಡಿ. ಹೀಗೆ ಮಾಡಿದರೆ ರುಚಿಕರವಾದ ರವೆ ಬರ್ಫಿ ಸವಿಯಲು ಸಿದ್ಧವಾಗಿರುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: