
ಸೊಳ್ಳೆ ಎಂದರೆ ನಮಗೆ ಮೊದಲು ನೆನಪಾಗುವುದು ಅದರ ಕಚ್ಚುವಿಕೆ, ತುರಿಕೆ ಮತ್ತು ಕಿರಿಕಿರಿ. ಆದರೆ ಕೆಲವೇ ಮಿಲಿಮೀಟರ್‌ಗಳಷ್ಟು ಗಾತ್ರದ ಈ ಪುಟ್ಟ ಜೀವಿಯ ಹಿಂದೆ ಒಂದು ಅದ್ಭುತ ವೈಜ್ಞಾನಿಕ ಜಗತ್ತಿದೆ. ಅದೇ ಸಮಯದಲ್ಲಿ, ಇದು ಮನುಷ್ಯನ ಆರೋಗ್ಯಕ್ಕೆ ದೊಡ್ಡ ಅಪಾಯವನ್ನುಂಟುಮಾಡುವ ರೋಗವಾಹಕ ಜೀವಿಯೂ ಹೌದು. ಪ್ರಪಂಚದಲ್ಲಿ ಸುಮಾರು 3,500ಕ್ಕೂ ಹೆಚ್ಚು ಸೊಳ್ಳೆ ಪ್ರಭೇದಗಳು ಕಂಡುಬಂದಿವೆ. 1897ರ ಆಗಸ್ಟ್ 20ರಂದು ಬ್ರಿಟಿಷ್ ವೈದ್ಯ ಸರ್ ರೊನಾಲ್ಡ್ ರಾಸ್ ಅವರು ಹೆಣ್ಣು ಅನಾಫಿಲಿಸ್ (Anopheles) ಸೊಳ್ಳೆಯಲ್ಲಿ ಮಲೇರಿಯಾ ಪರೋಪಜೀವಿಯ ಬೆಳವಣಿಗೆಯನ್ನು ಪತ್ತೆಹಚ್ಚಿದರು. ಈ ಐತಿಹಾಸಿಕ ಸಾಧನೆಯ ನೆನಪಿಗಾಗಿ ಪ್ರತಿವರ್ಷ ಆಗಸ್ಟ್ 20ರಂದು ‘ವಿಶ್ವ ಸೊಳ್ಳೆ ದಿನ’ವನ್ನು ಆಚರಿಸಲಾಗುತ್ತದೆ. ರೊನಾಲ್ಡ್ ರಾಸ್ ಅವರ ಈ ಸಂಶೋಧನೆಗೆ 1902ರಲ್ಲಿ ವೈದ್ಯಕೀಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ದೊರೆಯಿತು.
ಸಾಮಾನ್ಯವಾಗಿ ನಾವು ಸೊಳ್ಳೆ ಕಚ್ಚಿತು ಎನ್ನುತ್ತೇವೆ, ಆದರೆ ಸೊಳ್ಳೆಗೆ ಮನುಷ್ಯನಂತಿರುವ ಹಲ್ಲುಗಳಿರುವುದಿಲ್ಲ. ಹೆಣ್ಣು ಸೊಳ್ಳೆಯು ತನ್ನ ಬಾಯಿಯಲ್ಲಿರುವ ಪ್ರೋಬೊಸಿಸ್ (Proboscis) ಎಂಬ ಸೂಜಿಯಂತಹ ಅಂಗಾಂಶದಿಂದ ಚರ್ಮವನ್ನು ಚುಚ್ಚಿ ರಕ್ತವನ್ನು ಹೀರುತ್ತದೆ. ಹೆಣ್ಣು ಸೊಳ್ಳೆಗೆ ತನ್ನ ಮೊಟ್ಟೆಗಳ ಬೆಳವಣಿಗೆಗೆ ರಕ್ತದಲ್ಲಿರುವ ಪ್ರೋಟೀನ್ ಅಗತ್ಯವಿರುವುದರಿಂದ ಅದು ರಕ್ತ ಹೀರುತ್ತದೆ, ಆದರೆ ಗಂಡು ಸೊಳ್ಳೆಗಳು ಸಸ್ಯಗಳ ಮಕರಂದವನ್ನು ಮಾತ್ರ ಸೇವಿಸುತ್ತವೆ. ಸೊಳ್ಳೆಗಳು ಮನುಷ್ಯನನ್ನು ಪತ್ತೆಹಚ್ಚಲು ನಾವು ಉಸಿರಾಡುವಾಗ ಹೊರಬರುವ ಕಾರ್ಬನ್ ಡೈಆಕ್ಸೈಡ್ (CO₂), ದೇಹದ ಉಷ್ಣತೆ ಮತ್ತು ಬೆವರಿನ ವಾಸನೆಯನ್ನು ಬಳಸಿಕೊಳ್ಳುತ್ತವೆ. ಕತ್ತಲೆಯಲ್ಲೂ ಈ ಸಂಕೇತಗಳ ಸಹಾಯದಿಂದ ಅವು ತಮ್ಮ ಗುರಿಯನ್ನು ತಲುಪುತ್ತವೆ.
ಸೊಳ್ಳೆಯು ರಕ್ತ ಹೀರುವಾಗ ತನ್ನ ಲಾಲಾರಸವನ್ನು ಚರ್ಮಕ್ಕೆ ಸೇರಿಸುತ್ತದೆ. ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆಯು ಈ ಲಾಲಾರಸಕ್ಕೆ ಪ್ರತಿಕ್ರಿಯಿಸುವುದರಿಂದ ಕಚ್ಚಿದ ಜಾಗದಲ್ಲಿ ಕೆಂಪು ಊತ ಮತ್ತು ತುರಿಕೆ ಉಂಟಾಗುತ್ತದೆ. ಇನ್ನು ಸೊಳ್ಳೆ ಹಾರುವಾಗ ಉಂಟಾಗುವ “ಝೇಂ… ಝೇಂ…” ಶಬ್ದವು ಅದರ ರೆಕ್ಕೆಗಳು ಅತ್ಯಂತ ವೇಗವಾಗಿ ಬಡಿಯುವುದರಿಂದ ಉಂಟಾಗುತ್ತದೆ. ಗಂಡು ಮತ್ತು ಹೆಣ್ಣು ಸೊಳ್ಳೆಗಳ ರೆಕ್ಕೆ ಬಡಿಯುವ ಆವರ್ತನದಲ್ಲಿ ವ್ಯತ್ಯಾಸವಿದ್ದು, ಇವು ಪರಸ್ಪರ ಗುರುತಿಸಿಕೊಳ್ಳಲು ಈ ಶಬ್ದ ನೆರವಾಗುತ್ತದೆ.
ಇದನ್ನೂ ಓದಿ: ಪ್ರತಿದಿನ ಬೆಳಗ್ಗೆ15 ನಿಮಿಷಗಳ ಬಾಲಾಸನ ಮಾಡಿ, ಈ ಎಲ್ಲಾ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ
ಸೊಳ್ಳೆಯ ಜೀವನಚಕ್ರವು ಮೊಟ್ಟೆ, ಲಾರ್ವಾ, ಪ್ಯೂಪಾ ಮತ್ತು ಪ್ರೌಢ ಸೊಳ್ಳೆ ಎಂಬ ನಾಲ್ಕು ಹಂತಗಳನ್ನು ಒಳಗೊಂಡಿದೆ. ಸೊಳ್ಳೆಗಳು ಸಂತಾನೋತ್ಪತ್ತಿ ಮಾಡಲು ನಿಂತ ನೀರು ಅತ್ಯಗತ್ಯ. ಮನೆಯ ಸುತ್ತಮುತ್ತಲಿನ ಹಳೆಯ ಟೈರ್, ಹೂವಿನ ಕುಂಡ, ತೆಂಗಿನ ಚಿಪ್ಪು ಅಥವಾ ಸಣ್ಣ ಪಾತ್ರೆಯಲ್ಲಿ ನಿಲ್ಲುವ ಸಣ್ಣ ನೀರಿನ ಹನಿಯೂ ಇವುಗಳಿಗೆ ಮೊಟ್ಟೆಯಿಡಲು ಸಾಕಾಗುತ್ತದೆ. ನೀರಿನಲ್ಲಿರುವ ಲಾರ್ವಾಗಳು ವಾತಾವರಣದ ಗಾಳಿಯಿಂದ ಆಮ್ಲಜನಕ ಪಡೆಯಲು ಮೇಲ್ಮೈಗೆ ಬರುತ್ತವೆ. ಆದ್ದರಿಂದ ನೀರು ನಿಲ್ಲದಂತೆ ನೋಡಿಕೊಳ್ಳುವುದೇ ಸೊಳ್ಳೆಗಳ ಉತ್ಪತ್ತಿಯನ್ನು ತಡೆಯಲು ಇರುವ ಮುಖ್ಯ ಮಾರ್ಗವಾಗಿದೆ.
ಪ್ರಕೃತಿಯಲ್ಲಿ ಸೊಳ್ಳೆಗಳಿಗೂ ಒಂದು ನಿರ್ದಿಷ್ಟ ಪಾತ್ರವಿದೆ; ಇವುಗಳ ಲಾರ್ವಾಗಳು ಜಲಚರಗಳಿಗೆ ಆಹಾರವಾದರೆ, ಪ್ರೌಢ ಸೊಳ್ಳೆಗಳು ಪಕ್ಷಿಗಳು ಮತ್ತು ಬಾವಲಿಗಳಿಗೆ ಆಹಾರವಾಗುತ್ತವೆ ಹಾಗೂ ಕೆಲವು ಸತ್ವಗಳ ಪರಾಗಸ್ಪರ್ಶಕ್ಕೂ ನೆರವಾಗುತ್ತವೆ. ಆದರೆ ಮನುಷ್ಯನ ಆರೋಗ್ಯದ ದೃಷ್ಟಿಯಿಂದ ಇವು ಅತ್ಯಂತ ಅಪಾಯಕಾರಿ. ಸೊಳ್ಳೆಗಳು ಸ್ವತಃ ವಿಷಕಾರಿಯಲ್ಲದಿದ್ದರೂ, ಮಲೇರಿಯಾ, ಡೆಂಗ್ಯೂ, ಚಿಕುನ್‌ಗುನ್ಯಾ, ಝಿಕಾ ವೈರಸ್, ಜಪಾನೀಸ್ ಎನ್ಸೆಫಲೈಟಿಸ್ ಮತ್ತು ಫಿಲೇರಿಯಾಸಿಸ್‌ನಂತಹ ತೀವ್ರ ರೋಗಗಳನ್ನು ಹರಡುವ ವಾಹಕಗಳಾಗಿ ಕೆಲಸ ಮಾಡುತ್ತವೆ.
ಸೊಳ್ಳೆಗಳನ್ನು ನಿಯಂತ್ರಿಸಲು ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ನೀರಿನ ಟ್ಯಾಂಕ್‌ಗಳನ್ನು ಮುಚ್ಚುವುದು, ಸೊಳ್ಳೆ ಪರದೆ ಹಾಗೂ ನಿವಾರಕಗಳನ್ನು ಬಳಸುವುದು ಅಗತ್ಯವಾಗಿದೆ. ಸೊಳ್ಳೆ ನಿಯಂತ್ರಣವು ಕೇವಲ ಒಬ್ಬ ವ್ಯಕ್ತಿ ಅಥವಾ ಆರೋಗ್ಯ ಇಲಾಖೆಯ ಜವಾಬ್ದಾರಿಯಲ್ಲ, ಅದು ಸಮುದಾಯದ ಹೊಣೆಗಾರಿಕೆಯಾಗಿದೆ. ಸೊಳ್ಳೆಗಳನ್ನು ಕೊಲ್ಲುವುದಕ್ಕಿಂತ ಅವು ಹುಟ್ಟುವ ಪರಿಸ್ಥಿತಿಯನ್ನೇ ನಿರ್ಮೂಲನೆ ಮಾಡುವುದು ನಿಜವಾದ ಪರಿಹಾರ. ವಿಶ್ವ ಸೊಳ್ಳೆ ದಿನವು ಸ್ವಚ್ಛತೆ, ವೈಜ್ಞಾನಿಕ ಅರಿವು ಮತ್ತು ಸಾರ್ವಜನಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಪ್ರಮುಖ ಸಂಕೇತವಾಗಿದೆ.
ಲೇಖನ: ಡಾ. ರವಿಕಿರಣ ಪಟವರ್ಧನ, ಪಟವರ್ಧನ ಆಯುರ್ವೇದ, ಶಿರಸಿ
ದೂರವಾಣಿ: 08384-225836, 9242122874
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:19 am, Thu, 20 August 26