Muharram 2024: ಹಿಂದೂ ಹಾಗೂ ಮುಸ್ಲಿಮರ ಭಾವೈಕ್ಯತೆಯ ಹಬ್ಬವೇ ‘ಮೊಹರಂ’, ಏನಿದರ ಮಹತ್ವ?
ಪ್ರವಾದಿ ಮುಹಮ್ಮದ್ ಮೊಮ್ಮಗ ಹುಸೇನ್ ಇಬ್ನ್ ಅಲಿಯವರ ತ್ಯಾಗ ಬಲಿದಾನವನ್ನು ಸ್ಮರಿಸುವ ದಿನವೇ ಈ ಮೊಹರಂ. ಪ್ರತಿ ವರ್ಷ ಮುಸ್ಲಿಂ ಬಾಂಧವರು ಮೊಹರಂ ಹಬ್ಬವನ್ನು ಆಚರಿಸುತ್ತಾರೆ. ಮುಸ್ಲಿಂಮರು ಒಂಬತ್ತು ದಿನಗಳ ಕಾಲ ಉಪವಾಸ ಆಚರಿಸಿ 10ನೇ ದಿನ ಅಶುರಾ ಎಂದು ಆಚರಿಸುತ್ತಾರೆ. ಈ ಬಾರಿ ಜುಲೈ 17 ರಂದು ಅಶುರಾ ಆಚರಿಸಲಾಗುತ್ತಿದ್ದು, ಈ ದಿನದ ಇತಿಹಾಸ, ಮಹತ್ವ ಹಾಗೂ ಆಚರಣೆಯ ಬಗೆಗಿನ ಸಂಪೂರ್ಣ ಮಾಹಿತಿಯು ಇಲ್ಲಿದೆ.
ಹಬ್ಬ ಎಂದರೆ ಅಲ್ಲಿ ಸಂತೋಷ ಸಡಗರವು ಮನೆ ಮಾಡಿರುವುದು ಸಹಜ. ಆದರೆ ಮುಸ್ಲಿಮರಿಗೆ ಈ ಮೊಹರಂ ಹಬ್ಬವು ದುಃಖವನ್ನು ಸೂಚಿಸುವ ಹಾಗೂ ಶೋಕಾಚರಣೆಯ ಹಬ್ಬ ಇದಾಗಿದೆ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಮೊದಲ ತಿಂಗಳೇ ಈ ಮೊಹರಂ. ರೋಜ್-ಏ-ಅಶುರಾ ದಿನವನ್ನೇ ಕ್ಯಾಲೆಂಡರ್ ನಲ್ಲಿ ಮೋಹರಂ ಎಂದು ಕರೆಯಲಾಗುತ್ತದೆ. ಇದು ಹಿಂದೂ-ಮುಸ್ಲಿಂರ ಭಾವೈಕ್ಯತೆ ಸಾರುವ ಹಬ್ಬವಾಗಿದ್ದು, ಸರಿಸುಮಾರು ಹತ್ತು ದಿನಗಳವರೆಗೆ ಮೊಹರಂ ಹಬ್ಬದ ಆಚರಣೆಯಿರುತ್ತದೆ. ಈ ಬಾರಿ ಜುಲೈ 8 ರಿಂದ ಮೊಹರಂ ಆರಂಭವಾಗಿದ್ದು ಜುಲೈ 17 ರಂದು ಅಶುರಾ ಆಚರಣೆಯು ನಡೆಯಲಿದೆ.
ಮೊಹರಂ ಹಬ್ಬದ ಇತಿಹಾಸ
ಇಸ್ಲಾಂ ಧರ್ಮ ಸ್ಥಾಪಕ ಪ್ರವಾದಿ ಮೊಹಮ್ಮದರ ಮೊಮ್ಮಗ ಇಮಾಮ್ ಹುಸೇನ್ ಹಾಗೂ 72 ಹಿಂಬಾಲಕರು ಧರ್ಮದ ಉಳಿವಿಗಾಗಿ ಯುದ್ಧ ಮಾಡಿ ಹುತಾತ್ಮರಾದ ದಿನವೇ ಈ ಮೊಹರಂ. ಈ ದಿನದಂದು ಶಿಯಾ ಮುಸ್ಲಿಮರು ಇಮಾಮ್ ಹುಸೇನ್ ಅವರ ಮರಣವನ್ನು ಶೋಕಿಸುವ ದಿನವಾಗಿದೆ. ಹೌದು, ಕರ್ಬಲಾ ಯುದ್ಧವು ಇಮಾಮ್ ಹುಸೇನ್ ಮತ್ತು ಉಮಯ್ಯದ್ ಖಲೀಫ್ ಯಾಜಿದ್ ನಡುವೆ ನಡೆಯಿತು. ಈ ಯುದ್ಧದ ಸಮಯದಲ್ಲಿ, ಇಮಾಮ್ ಹುಸೇನ್ ರನ್ನು ಮೋಸದಿಂದ ಕೊಲ್ಲಲಾಯಿತು. ಈ ತಿಂಗಳ ಹತ್ತನೇ ದಿನದಂದು ಹುಸೇನರ ತ್ಯಾಗ, ಬಲಿದಾನವನ್ನು ಸ್ಮರಿಸಲಾಗುತ್ತದೆ.
ಇದನ್ನೂ ಓದಿ: World Youth Skills Day 2024 : ವಿಶ್ವ ಯುವ ಕೌಶಲ್ಯ ದಿನವನ್ನು ಆಚರಿಸುವುದು ಏಕೆ? ಏನಿದರ ಮಹತ್ವ?
ಮೊಹರಂ ಹಬ್ಬದ ಮಹತ್ವ
ಮೊಹರಂ ಹಬ್ಬ ಹಿಂದೂ ಹಾಗೂ ಮುಸ್ಲಿಮರ ಭಾವೈಕ್ಯತೆಯನ್ನು ಸೂಚಿಸುವ ಹಬ್ಬವೆನ್ನಬಹುದು. ಈ ದಿನದಂದು ಇಮಾಮ್ ಹುಸೇನ್ ರ ತ್ಯಾಗವನ್ನು ನೆನಪಿಸಿಕೊಳ್ಳುವ ದಿನವಾಗಿದೆ. ತಮ್ಮ ಹಿರಿಯರ ತ್ಯಾಗ-ಹೋರಾಟಗಳನ್ನು ನೆನೆಯುವ ಉದ್ದೇಶದಿಂದ ಈ ಹಬ್ಬವು ಮಹತ್ವದ್ದಾಗಿದೆ. ಸುನ್ನಿ ಮುಸ್ಲಿಮರಿಗೆ, ಈ ತಿಂಗಳು ಇಸ್ಲಾಮಿಕ್ ಹೊಸ ವರ್ಷದ ಆರಂಭವಾಗಿದೆ. ಆದರೆ ಈ ಇಸ್ಲಾಂನ ಶಿಯಾವನ್ನು ಅನುಸರಿಸುವ ಮುಸ್ಲಿಮರಿಗೆ, ಈ ತಿಂಗಳು ಇಸ್ಲಾಮಿಕ್ ಇತಿಹಾಸದಲ್ಲಿ ದುಃಖದ ದಿನವಾಗಿದೆ.
ಮೊಹರಂ ಹಬ್ಬದ ಆಚರಣೆ ಹೇಗೆ?
ಮುಸ್ಲಿಮರು ಆಶುರಾ ದಿನದಂದು ಉಪವಾಸವನ್ನು ಮಾಡುತ್ತಾರೆ. ಶಿಯಾ ಮುಸ್ಲಿಮರು ಸಹ ಶೋಕಾಚರಣೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಶಿಯಾವನ್ನು ಅನುಸರಿಸುವ ಮುಸ್ಲಿಮರು ತಮ್ಮ ದೇಹವನ್ನು ಹರಿತವಾದ ಆಯುಧಗಳಿಂದ ದಂಡಿಸಿಕೊಳ್ಳುವುದಿದೆ. ಅದಲ್ಲದೇ, ಆಲಾಯಿ ಕುಣಿತ, ಮೊಹರಂ ಪದಗಳು ಹಾಡುವುದು, ದೇವರ ಕುಣಿತ, ಬೆಂಕಿಯಲ್ಲಿ ನಡೆದಾಡುವುದು ಹೀಗೆ ವಿಶಿಷ್ಟವಾದ ಆಚರಣೆಗಳಿರುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ