World Youth Skills Day 2024 : ವಿಶ್ವ ಯುವ ಕೌಶಲ್ಯ ದಿನವನ್ನು ಆಚರಿಸುವುದು ಏಕೆ? ಏನಿದರ ಮಹತ್ವ?
ಒಂದು ದೇಶವು ಅಭಿವೃದ್ಧಿಯತ್ತ ಸಾಗಬೇಕಾದರೆ ಯುವಜನತೆಯು ವಿವಿಧ ಕೌಶಲ್ಯಗಳೊಂದಿಗೆ ಉದ್ಯೋಗದಲ್ಲಿ ತೊಡಗಿಕೊಂಡಿರುವುದು ಮುಖ್ಯ. ಯುವ ಸಮುದಾಯಕ್ಕೆ ಅಗತ್ಯವಿರುವ ಕೌಶಲ್ಯಗಳನ್ನು ನೀಡಿ ಅವರನ್ನು ಉದ್ಯೋಗ ಗಿಟ್ಟಿಸಿಕೊಳ್ಳುವಲ್ಲಿ ಸಜ್ಜುಗೊಳಿಸುವ ಉದ್ದೇಶದಿಂದ ಜಾಗತಿಕ ಮಟ್ಟದಲ್ಲಿ ಪ್ರತಿವರ್ಷ ಜುಲೈ 15ರಂದು ವಿಶ್ವ ಯುವ ಕೌಶಲ್ಯ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ಆಚರಣೆಯ ಹಿಂದಿನ ಇತಿಹಾಸ ಹಾಗೂ ಮಹತ್ವದ ಬಗೆಗಿನ ಮಾಹಿತಿಯು ಇಲ್ಲಿದೆ.

ಒಂದು ದೇಶದ ಶಕ್ತಿಯೇ ಯುವಜನತೆ. ದೇಶವು ಅಭಿವೃದ್ಧಿಯಾಗಬೇಕಾದರೆ ಯುವಜನತೆಯ ಪಾತ್ರವು ಅಗಾಧವಾಗಿದೆ. ಉದ್ಯೋಗದಲ್ಲಿ ತೊಡಗಿಕೊಳ್ಳುವ ಯುವಕ ಯುವತಿರು ವಿವಿಧ ರೀತಿಯ ಕೌಶಲ್ಯವನ್ನು ಹೊಂದಿರುವುದು ಅತ್ಯಗತ್ಯ. ಆದರೆ ಇಂದು ದೇಶದಲ್ಲಿ ಕೌಶಲ್ಯದ ಕೊರತೆಯಿಂದಾಗಿ ನಿರುದ್ಯೋಗಿಗಳ ಸಂಖ್ಯೆಯು ಹೆಚ್ಚುತ್ತಿದೆ. ಹೀಗಾಗಿ ಯುವಕರನ್ನು ಕೌಶಲ್ಯಭರಿತವಾದ ತರಬೇತಿಯೊಂದಿಗೆ ಸಜ್ಜುಗೊಳಿಸಬೇಕಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಜುಲೈ 15 ರಂದು ವಿಶ್ವ ಯುವ ಕೌಶಲ್ಯ ದಿನ(World Youth Skills Day)ವನ್ನು ಆಚರಿಸಲಾಗುತ್ತಿದೆ.
ವಿಶ್ವ ಯುವ ಕೌಶಲ್ಯ ದಿನದ ಇತಿಹಾಸ ಶ್ರೀಲಂಕಾದ ಉಪಕ್ರಮದ ಮೇರೆಗೆ, ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಡಿಸೆಂಬರ್ 2014 ರಂದು ವಿಶ್ವ ಯುವ ಕೌಶಲ್ಯ ದಿನದ ಆಚರಣೆಯನ್ನು ಅಂಗೀಕರಿಸಿತು. ಈ ಮೂಲಕ ಮೊದಲ ಬಾರಿಗೆ 2015 ರ ಜುಲೈ 15 ರಂದು ವಿಶ್ವ ಕೌಶಲ್ಯ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಜುಲೈ 15 ರಂದು ವಿಶ್ವದಾದ್ಯಂತ ಈ ದಿನವನ್ನು ಆಚರಿಸಲಾಗುತ್ತಿದೆ.
ವಿಶ್ವ ಯುವ ಕೌಶಲ್ಯ ದಿನದ ಮಹತ್ವ ಹಾಗೂ ಆಚರಣೆ ವಿಶ್ವದ ಯುವಕರಿಗೆ ಉದ್ಯೋಗ, ಕೆಲಸ ಮತ್ತು ಉದ್ಯಮಶೀಲತೆಗಾಗಿ ಅಗತ್ಯವಾದ ಕೌಶಲ್ಯಗಳನ್ನು ಒದಗಿಸುವುದು ಈ ದಿನದ ಮೂಲ ಉದ್ದೇಶವಾಗಿದೆ. ನಿರುದ್ಯೋಗ ಸವಾಲುಗಳನ್ನು ಕಡಿಮೆ ಮಾಡಿ ಉದ್ಯೋಗ ಕೌಶಲ್ಯವನ್ನು ಉತ್ತೇಜಿಸಲು ವಿಶ್ವದಾದ್ಯಂತ ಯುವಜನರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಈ ದಿನವು ಮಹತ್ವದ್ದಾಗಿದೆ.
ಮತ್ತಷ್ಟು ಓದಿ: Parenting Tips: ಹೆಣ್ಮಕ್ಕಳನ್ನು ಬೆಳೆಸುವಾಗ ಪೋಷಕರು ಮಾಡುವ ತಪ್ಪುಗಳಿವು
ಸರ್ಕಾರಗಳು, ಉದ್ಯೋಗದಾತರು, ಕಾರ್ಮಿಕರ ಸಂಘಟನೆಗಳು ನೀಡುವ ವಿವಿಧ ಕೌಶಲ್ಯಭರಿತ ತರಬೇತಿಗಳನ್ನು ಪಡೆಯುವ ಮೂಲಕ ಯುವಕರು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು. ಈಗಾಗಲೇ ಭಾರತ ಸರ್ಕಾರವು ಯುವ ಕೌಶಲ್ಯ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕೌಶಲ್ಯವನ್ನು ಹೆಚ್ಚಿಸುವತ್ತ ಒತ್ತು ನೀಡುತ್ತಿದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




