Love Breakup : ಲವ್ ಬ್ರೇಕಪ್ ಆಯ್ತಾ, ಕಾಡುವ ಕಹಿ ನೆನಪಿನಿಂದ ಹೊರ ಬರುವುದು ಹೇಗೆ?
ಯಾವುದೇ ಸಂಬಂಧವಿರಲಿ, ಪ್ರೀತಿ ಕಾಳಜಿಯ ಜೊತೆಗೆ ಭಿನ್ನಾಭಿಪ್ರಾಯಗಳು ಸಹಜ. ಅದನ್ನು ತಕ್ಷಣವೇ ಸರಿಪಡಿಸಿಕೊಂಡರೆ ಸಂಬಂಧವು ಉಳಿಯುತ್ತದೆ. ಎಷ್ಟೋ ಸಲ ಸಣ್ಣ ಪುಟ್ಟ ಮನಸ್ತಾಪಗಳು ಬ್ರೇಕಪ್ ಗೂ ಕಾರಣವಾಗುವುದಿದೆ. ಹೆಚ್ಚಿನವರು ಕೈ ಕೊಟ್ಟ ಪ್ರೇಮಿಯ ನೆನಪಿನಲ್ಲಿಯೇ ಮುಳುಗಿ ನೋವಿನಿಂದ ಹೊರ ಬರಲು ಸಾಧ್ಯವಾಗದೇ ಒದ್ದಾಡುತ್ತಾರೆ. ಹಾಗಾದ್ರೆ ಹಳೆಯ ಪ್ರೀತಿಯನ್ನು ಮರೆತು ಹೊಸದಾಗಿ ಬದುಕು ಕಟ್ಟಿಕೊಳ್ಳುವುದು ಹೇಗೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರೀತಿ(Love)ಯೆಂದರೆ ಮಧುರ ಭಾವ. ಈ ಪ್ರೀತಿಯಲ್ಲಿ ಬೀಳುವುದು ತಪ್ಪಲ್ಲ, ಪ್ರೀತಿ ಮಾಡುವುದು ತಪ್ಪಲ್ಲ ಆದರೆ ಎಷ್ಟೋ ಜನರು ಲವ್ ಎನ್ನುವ ಎರಡಕ್ಷರಕ್ಕೆ ಬಿದ್ದು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ. ಪ್ರೀತಿ ಮಾಯೆ ಹುಷಾರು ಕಣ್ಣೀರು ಮಾರೋ ಬಜಾರು ಎನ್ನುವ ಮಾತಿದೆ. ಬ್ರೇಕಪ್ ಆದಾಗ ಈ ಮಾತು ನಿಜವೆನಿಸುತ್ತದೆ. ಕೈ ಕೊಟ್ಟ ಪ್ರೇಮಿಯನ್ನು ಮರೆಯಲು ಆಗದೇ ದುರಾಭ್ಯಾಸಕ್ಕೆ ಬಲಿಯಾಗುವವರೇ ಹೆಚ್ಚು. ಇನ್ನು ಕೆಲವರು ಈ ಕಹಿ ನೋವಿನಿಂದ ಹೊರಬಂದು ಬದುಕನ್ನು ಚಾಲೆಂಜ್ ಆಗಿ ತೆಗೆದುಕೊಳ್ಳುತ್ತಾರೆ. ಆದರೆ ಈ ಮಾಜಿ ಪ್ರೇಮಿಯ ನೆನಪಿನಲ್ಲಿ ಜೀವನ ಹಾಳು ಮಾಡಿಕೊಳ್ಳುವ ಬದಲು ಈ ಸಲಹೆಯನ್ನು ಅನುಸರಿಸಿ ಬದುಕು ಕಟ್ಟಿಕೊಳ್ಳುವುದು ಉತ್ತಮ.
* ಮಾಜಿ ಪ್ರೇಮಿಯು ಕೈಕೊಟ್ಟರೆಂದು ಅದನ್ನೇ ಯೋಚಿಸುತ್ತ ಕುಳಿತುಕೊಳ್ಳುವುದು ಒಳ್ಳೆಯದಲ್ಲ. ಬ್ರೇಕಪ್ ನಂತರದಲ್ಲಿ ಮೊದಲು ನೀವು ನಿಮ್ಮ ದಿನಚರಿಯನ್ನು ಬದಲಿಸಿಕೊಳ್ಳುವುದು ಅತೀ ಮುಖ್ಯ. ಈ ವೇಳೆಯಲ್ಲಿ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೆಲಸದಲ್ಲಿ ತೊಡಗಿಕೊಳ್ಳಿ. ಅದಲ್ಲದೇ ಯೋಚನೆಗೆ ಸಮಯವಿಲ್ಲದಂತೆ ನೀವು ಕೆಲಸದಲ್ಲಿ ಬ್ಯುಸಿಯಾಗಿರುವುದರಿಂದ ಆ ಕಹಿ ನೋವಿನಿಂದ ಹೊರಬರಬಹುದು.
* ಮಾಜಿ ಪ್ರೇಮಿಯು ನೀಡಿರುವ ಉಡುಗೊರೆಯಿದ್ದರೆ ಅದನ್ನು ಅವರಿಗೆ ಹಿಂದಿರುಗಿಸಿ ಬಿಡುವುದು ಉತ್ತಮ. ಅವುಗಳನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳುವುದರಿಂದ ಅವರ ನೆನಪುಗಳು ನಿಮ್ಮನ್ನು ಮತ್ತಷ್ಟು ಕಾಡಬಹುದು. ಫೋಟೋ ಹಾಗೂ ಫೋನ್ ನಂಬರ್ ಡಿಲೀಟ್ ಮಾಡುವ ಮೂಲಕ ಅವರ ನೆನಪುಗಳಿಗೆ ಗುಡ್ ಬೈ ಹೇಳಿ ಹೊಸದಾಗಿ ಜೀವನ ಆರಂಭಿಸಿ.
ಮತ್ತಷ್ಟು ಓದಿ: Relationship Tips : ನಿಮ್ಮ ಸಂಗಾತಿ ಮುಂದೆ ಹೀಗೆ ಮಾಡಿದ್ರೆ ಬ್ರೇಕಪ್ ಗ್ಯಾರಂಟಿ
* ಪ್ರೇಯಸಿ ಅಥವಾ ಪ್ರೇಮಿಯು ಕೈಕೊಟ್ಟರೆನ್ನುವ ನೋವು ನಿಮ್ಮ ಮನದ ತುಂಬಾ ಆವರಿಸಿರಬಹುದು. ನೀವು ಈ ಎಲ್ಲವನ್ನು ಮರೆಯಬೇಕೆಂದರೆ ಹೊಸ ಹೊಸ ಸ್ಥಳಗಳಿಗೆ ಪ್ರವಾಸ ಕೈಕೊಳ್ಳುವುದು ಉತ್ತಮ. ಸ್ನೇಹಿತರೊಂದಿಗೆ ಹೊಸ ವಾತಾವರಣದಲ್ಲಿ ಕಾಲ ಕಳೆಯುವುದರಿಂದ ಮನಸ್ಸಿನ ನೋವನ್ನು ಮರೆಸುತ್ತದೆ. ಇನ್ನಿತ್ತರ ಕೆಲಸದಲ್ಲಿ ಬ್ಯುಸಿಯಾಗುವುದರೊಂದಿಗೆ ಒಂಟಿತನವು ಕಾಡಲು ಅವಕಾಶವಿರುವುದಿಲ್ಲ.
* ಹಳೆಯ ನೆನಪುಗಳನ್ನು ಮರೆಯಲು ಸಾಧ್ಯವಾಗುತ್ತಿಲ್ಲ ಎನ್ನುವ ಕಾರಣಕ್ಕೆ ದುಡುಕಿನ ನಿರ್ಧಾರವನ್ನು ಕೈಕೊಳ್ಳುವುದು ಸರಿಯಲ್ಲ. ಬ್ರೇಕಪ್ ನಂತರದಲ್ಲಿ ಜೀವನವನ್ನು ಬದಲಾಯಿಸಿಕೊಳ್ಳುವ ಅವಕಾಶವು ನಿಮ್ಮ ಕೈಯಲ್ಲೇ ಇರುತ್ತದೆ. ನಿಮಗೆ ನೀವು ಸಮಯ ಕೊಡುವುದು ಒಳ್ಳೆಯದು. ಒಂಟಿಯಾಗಿ ಕೂರುವ ಬದಲು ಜಿಮ್, ಪುಸ್ತಕ ಓದುವ ಹವ್ಯಾಸ ಹೀಗೆ ಹೊಸ ಅಭ್ಯಾಸಗಳಲ್ಲಿ ತೊಡಗಿಕೊಳ್ಳಿ. ಇದರಿಂದ ನೀವು ಈ ನೋವಿನಿಂದ ಚೇತರಿಸಿಕೊಳ್ಳಲು ಸಾಧ್ಯ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




