
ಪ್ರಪಂಚದ ಎಲ್ಲಾ ಸಂಬಂಧಗಳಲ್ಲಿ ಸಹೋದರರ (Brothers) ಸಂಬಂಧ ಬಹಳ ವಿಶೇಷ. ಏಕೆಂದರೆ ಅಣ್ಣ, ತಮ್ಮ ಎನ್ನುವ ಭಾವನೆಯೇ ಬಹಳ ಸುರಕ್ಷಿತವಾದ ಭಾವನೆಯನ್ನು ನೀಡುತ್ತದೆ. ತಂದೆ, ತಾಯಿ ಸ್ನೇಹಿತರ ಮಮತೆ, ಕಾಳಜಿ ಒಂದು ಕಡೆಯಾದರೆ ಸಹೋದರರಲ್ಲಿ ದ್ವೇಷ, ಜಗಳ, ಕೋಪದ ಜೊತೆಗೆ ವಿವರಿಸಲಾಗದ ಪ್ರೀತಿಯೂ ಇರುತ್ತದೆ. ಕಷ್ಟ ಸುಖಗಳಿಗೆ ಜೊತೆಯಾಗುವ ಸಹೋದರ ಸಂಬಂಧಕ್ಕೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿರುವುದಿಲ್ಲ. ಆದರೆ ನಮ್ಮ ಒಡಹುಟ್ಟಿದವರೇ ಅಣ್ಣ ತಮ್ಮಂದಿರಾಗಿ ಪ್ರೀತಿ ನೀಡಬೇಕಾಗಿಲ್ಲ. ನಿಷ್ಕಲ್ಮಶ ಭಾವನೆಯಿಂದ ಕಾಳಜಿ ವಹಿಸುವವರು ಸಹೋದರರಾಗುತ್ತಾರೆ. ಅದಕ್ಕೆ ರಕ್ತ ಸಂಬಂಧವೇ ಆಗಬೇಕಾಗಿಲ್ಲ. ಹಾಗಾಗಿಯೇ ಇಂತಹ ಮೌಲ್ಯ ಹಾಗೂ ಮಹತ್ವ ತಿಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸಹೋದರ ದಿನವನ್ನು (National Brothers Day) ಆಚರಿಸಲಾಗುತ್ತದೆ.
2005ರ ಮೇ 24ರಂದು ಮೊದಲ ಬಾರಿ ರಾಷ್ಟ್ರೀಯ ಸಹೋದರರ ದಿನವನ್ನು ಆಚರಿಸಲಾಗಿತ್ತು. ಅಲಬಾಮಾ ಮೂಲದ ಸಿ. ಡೇನಿಯಲ್ ರೋಡ್ಸ್ ಅವರು ರಾಷ್ಟ್ರೀಯ ಸಹೋದರರ ದಿನ ಮತ್ತು ಅದರ ಕಾರ್ಯವಿಧಾನಗಳನ್ನು ಮೊದಲು ಆಯೋಜಿಸಿ ಈ ದಿನದ ಆಚರಣೆಗೆ ಕಾರಣರಾದರು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಅದಕ್ಕಾಗಿಯೇ ಈ ದಿನದಂದು ಸಹೋದರ ಸಹೋದರಿಯರ ನಡುವಿನ ಬಾಂಧವ್ಯವನ್ನು ಗೌರವಿಸಲಾಗುತ್ತದೆ. ಈ ದಿನದಂದು ಸಹೋದರ ಸಹೋದರಿಯರು ಪ್ರೀತಿಯ ಉಡುಗೊರೆಯನ್ನು ನೀಡಿ ವಿಶೇಷ ದಿನವನ್ನು ಆಚರಿಸಿಕೊಳ್ಳುತ್ತಾರೆ.
ಇದನ್ನೂ ಓದಿ: ಅಣ್ಣನ ಪ್ರತಿ ಕ್ಷಣವನ್ನು ಹೀಗೆ ಸಂಭ್ರಮಿಸಿ, ಅವನಿಗೆ ಈ ದಿನ ವಿಶೇಷ
ಈಗಿನ ದಿನದಲ್ಲಿ ಒಟ್ಟು ಕುಟುಂಬಗಳಿರುವುದು ತುಂಬಾ ವಿರಳ. ಇದ್ದರೂ ಮನೆ ಮಕ್ಕಳು ಕೆಲಸಕ್ಕಾಗಿ ಬೇರೆ ಬೇರೆ ಊರುಗಳಲ್ಲಿರುತ್ತಾರೆ. ಹಾಗಾಗಿ ಒಟ್ಟು ಸೇರುವುದು ತುಂಬಾ ತಿಂಗಳಿಗೊಮ್ಮೆ ಅಥವಾ ವರ್ಷಕೊಮ್ಮೆಯಾಗಿರುತ್ತದೆ ಹಾಗಾಗಿ ಈ ದಿನದ ಪ್ರಯುಕ್ತ ಸಹೋದರರು ಎಲ್ಲಾದರೂ ಒಂದು ಕಡೆ ಒಟ್ಟು ಸೇರಿ ಒಟ್ಟಿಗೆ ಕುಳಿತು ಊಟ ಮಾಡಬಹುದು. ದೂರದ ಊರಿನಲ್ಲಿದ್ದರೆ ಒಂದು ಕರೆ ಮಾಡಿ ಮಾತನಾಡಿ ಅಥವಾ ಅವರಿಗಿಷ್ಟವಾಗುವಂತಹ ಉಡುಗೊರೆಯನ್ನು ಕಳಿಸಿ ಕೊಡಬಹುದು. ಸಹೋದರನ ಪ್ರೀತಿ ಪಡೆಯಲು ಇದೊಂದೇ ದಿನವಲ್ಲ ಆದರೆ ಈ ದಿನವನ್ನು ನಿಮ್ಮ ಸಹೋದರನನ್ನು ಖುಷಿ ಪಡಿಸಲು ನೀವು ಉಪಯೋಗ ಮಾಡಿಕೊಳ್ಳಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ