Navaratri 2024: ಹಬ್ಬಕ್ಕೆ ಮನೆಯಲ್ಲಿಯೇ ತಯಾರಿಸಿ ಸಾಂಪ್ರದಾಯಿಕ ಖಾದ್ಯ ಎರಿಯಪ್ಪ, ಇಲ್ಲಿದೆ ಪಾಕವಿಧಾನ
ಹಬ್ಬ ಹರಿದಿನಗಳಲ್ಲಿ ಸಿಹಿ ತಿನಿಸುಗಳು ಇಲ್ಲದೇ ಹೋದರೆ ಯಾವುದೇ ಹಬ್ಬವು ಪೂರ್ಣವಾಗುವುದೆ ಇಲ್ಲ. ಈ ನವರಾತ್ರಿ ಹಬ್ಬ ಬಂತೆಂದರೆ ಸಾಕು, ವಿವಿಧ ಸಿಹಿ ತಿಂಡಿಗಳನ್ನು ಮನೆಯಲ್ಲೇ ತಯಾರಿಸುತ್ತಾರೆ. ಒಂಬತ್ತು ದಿನಗಳ ಕಾಲ ಮನೆಯಲ್ಲೇ ವಿವಿಧ ಸಿಹಿ ಖಾದ್ಯಗಳನ್ನು ಮಾಡಿ ದೇವಿಗೆ ನೈವೇದ್ಯ ಅರ್ಪಿಸಲಾಗುತ್ತದೆ. ಈ ಬಾರಿಯ ನವರಾತ್ರಿಯ ಹಬ್ಬಕ್ಕೆ ಮನೆಯಲ್ಲಿಯೇ ಸಾಂಪ್ರದಾಯಿಕ ಸಿಹಿ ತಿನಿಸು ಎರಿಯಪ್ಪ ತಯಾರಿಸಿ ನೈವೇದ್ಯವಾಗಿ ಇಡಬಹುದು. ಹಾಗಾದ್ರೆ ಎರಿಯಪ್ಪ ರೆಸಿಪಿಯ ಪಾಕವಿಧಾನದ ಬಗೆಗಿನ ಮಾಹಿತಿ ಇಲ್ಲಿದೆ.
ನವರಾತ್ರಿ ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದು. ಹೀಗಾಗಿ ಭಾರತದಲ್ಲಿ ಈ ಹಬ್ಬವನ್ನು ಬಹಳ ಸಡಗರದಿಂದ ಆಚರಿಸಲಾಗುತ್ತದೆ. ಈ ಬಾರಿ ಶಾರದೀಯ ನವರಾತ್ರಿ ಅಕ್ಟೋಬರ್ 3 ರಿಂದ ಪ್ರಾರಂಭವಾಗುತ್ತಿದ್ದು, ದೇವಿಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ. ಈ ಒಂಬತ್ತು ದಿನಗಳ ಕಾಲ ದೇವಿಗೆ ಒಂಬತ್ತು ರೀತಿಯ ನೈವೇದ್ಯವನ್ನು ಅರ್ಪಿಸಲಾಗುತ್ತದೆ. ಈ ಬಾರಿಯ ನವರಾತ್ರಿಗೆ ದೇವಿಗೆ ಸಾಂಪ್ರದಾಯಿಕ ಸಿಹಿತಿನಿಸುಗಳಲ್ಲಿ ಒಂದಾದ ಎರಿಯಪ್ಪ ಮಾಡಿ ನೈವೇದ್ಯವಿಡಬಹುದು. ಈ ರೆಸಿಪಿ ಮಾಡುವ ವಿಧಾನವು ಸರಳವಾಗಿದ್ದು, ಕೆಲವೇ ಕೆಲವು ಐಟಂಗಳಿದ್ದರೆ ಸಾಕು.
ಎರಿಯಪ್ಪ ಮಾಡಲು ಬೇಕಾಗುವ ಸಾಮಗ್ರಿಗಳು
* ಒಂದು ಕಪ್ ಅಕ್ಕಿ
* ಅರ್ಧ ಕಪ್ ತೆಂಗಿನ ಕಾಯಿತುರಿ
* ಒಂದು ಕಪ್ ಬೆಲ್ಲದ ಪುಡಿ
* ರುಚಿಗೆ ತಕ್ಕಷ್ಟು ಉಪ್ಪು
* ಒಂದು ಚಮಚ ಗಸಗಸೆ
* ಅರ್ಧ ಚಮಚ ಏಲಕ್ಕಿ ಪುಡಿ
* ನೀರು
* ಎಣ್ಣೆ
ಎರಿಯಪ್ಪ ತಯಾರಿಸುವ ವಿಧಾನ
* ಅಕ್ಕಿಯನ್ನು ನಾಲ್ಕರಿಂದ ಐದು ಗಂಟೆಗಳ ಕಾಲ ನೆನೆ ಹಾಕಿಕೊಳ್ಳಬೇಕು.
* ನಂತರ ಅಕ್ಕಿ ತೊಳೆದು ಮಿಕ್ಸಿಯಲ್ಲಿ ಹಾಕಿ. ಅದಕ್ಕೆ ತೆಂಗಿನತುರಿ, ಬೆಲ್ಲದ ಪುಡಿ, ಉಪ್ಪು ಮತ್ತು ಅರ್ಧ ಕಪ್ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
* ರುಬ್ಬಿದ ಮಿಶ್ರಣ ದೋಸೆ ಹಿಟ್ಟಿನ ಹದಕ್ಕೆ ಇರಲಿ. ಈ ಹಿಟ್ಟಿಗೆ ಗಸಗಸೆ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಿ.
* ಬಾಣಲೆಯಲ್ಲಿ ಸ್ಟವ್ ಮೇಲೆ ಇಟ್ಟು ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಎಣ್ಣೆ ಕಾಯುತ್ತಿದ್ದಂತೆ ಚಿಕ್ಕ ಸೌಟಿನಲ್ಲಿ ಒಂದು ಸೌಟು ಹಿಟ್ಟನ್ನು ಹಾಕಿ.
* ಎರಡೂ ಬದಿಯನ್ನೂ ಕೆಂಬಣ್ಣ ಬರುವಂತೆ ಕರಿದರೆ ರುಚಿಕರವಾದ ಎರಿಯಪ್ಪ ಸವಿಯಲು ಸಿದ್ದ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ