AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

New Year 2025: ಜನವರಿ 1ರಂದೇ ಹೊಸವರ್ಷ ಆಚರಣೆ ಯಾಕೆ? ಏನಿದರ ವಿಶೇಷತೆ? ಇಲ್ಲಿದೆ ಮಾಹಿತಿ

ಹಳೆಯ ವರ್ಷಕ್ಕೆ ವಿದಾಯ ಹೇಳಿ, ಹೊಸ ಕ್ಯಾಲೆಂಡರ್‌ ವರ್ಷವನ್ನು ಸ್ವಾಗತಿಸುವುದಕ್ಕೆ ಈಗಾಗಲೇ ಕ್ಷಣಗಣನೆ ಶುರುವಾಗಿದೆ. ಪ್ರಪಂಚದಾದಂತ್ಯ ಡಿಸೆಂಬರ್‌ 31ರ ಸಂಜೆಯಿಂದಲೇ ಈ ಸಂಭ್ರಮಾಚರಣೆ ಆರಂಭವಾಗುತ್ತದೆ. ಜನರು ಮನೆ ಮಂದಿಯೊಂದಿಗೆ ಪಾರ್ಟಿ ಅಥವಾ ಟ್ರಿಪ್ ಆಯೋಜಿಸುವ ಮೂಲಕ ಹೊಸ ವರ್ಷವನ್ನು ಅದ್ದೂರಿಯಾಗಿ ಭರ ಮಾಡಿಕೊಳ್ಳುತ್ತಾರೆ. ಹಾಗಾದ್ರೆ ಜನವರಿ 1 ರಂದೇ ಈ ಆಚರಣೆ ಯಾಕೆ? ಏನಿದರ ಇತಿಹಾಸ, ಮಹತ್ವ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

New Year 2025: ಜನವರಿ 1ರಂದೇ ಹೊಸವರ್ಷ ಆಚರಣೆ ಯಾಕೆ? ಏನಿದರ ವಿಶೇಷತೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Dec 31, 2024 | 6:24 PM

Share

2024 ಕ್ಕೆ ವಿದಾಯ ಹೇಳುವ ಸಮಯ ಬಂದೇ ಬಿಟ್ಟಿದೆ. ಇಂದು 2024ನೇ ಸಾಲಿನ ಕೊನೆಯ ದಿನವಾಗಿದ್ದು, ನಾಳೆ 2025ರ ಮೊದಲ ದಿನಕ್ಕೆ ನಾವೆಲ್ಲರೂ ಕಾಲಿಡುತ್ತಿದ್ದೇವೆ. ಹಳೆಯ ವರ್ಷಕ್ಕೆ ವಿದಾಯ ಹೇಳಿ ಹೊಸ ಕ್ಯಾಲೆಂಡರ್‌ ವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದೇವೆ. ಜನವರಿಯ ಮೊದಲ ದಿನವು ಹೊಸ ಭರವಸೆ, ಹೊಸ ಹುರುಪಿನೊಂದಿಗೆ ಆರಂಭವಾಗುತ್ತದೆ. ಕೆಲವರು ಒಂದಷ್ಟು ಹೊಸ ನಿರ್ಣಯಗಳನ್ನು ತೆಗೆದುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳುವ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ.

ಹೊಸ ವರ್ಷ ಆಚರಣೆಯ ಹಿಂದಿನ ಇತಿಹಾಸ

ಕ್ರಿಸ್ತ ಪೂರ್ವ 45 ರ ಕಾಲಘಟ್ಟದಲ್ಲಿ ಜನವರಿ 1ರಂದು ಹೊಸ ವರ್ಷ ಆಚರಣೆ ಎಂದು ಪರಿಗಣಿಸಲ್ಪಟ್ಟಿತು. ಈ ಆಚರಣೆಗೂ ಮುನ್ನ ರೋಮನ್‌ ಕ್ಯಾಲೆಂಡರ್‌ನ ಹೊಸವರ್ಷ ಮಾರ್ಚ್‌ ತಿಂಗಳಲ್ಲಿ ಶುರುವಾಗುತ್ತಿತ್ತು. ಈ ಕ್ಯಾಲೆಂಡರ್ ಪ್ರಕಾರ ವರ್ಷಕ್ಕೆ 355 ದಿನಗಳಿದ್ದವು. ರೋಮನ್‌ ಸರ್ವಾಧಿಕಾರಿ ಜ್ಯೂಲಿಯಸ್‌ ಸೀಸರ್‌ ಅಧಿಕಾರಕ್ಕೆ ಬಂದ ಬಳಿಕ ಕ್ಯಾಲೆಂಡರ್‌ನಲ್ಲಿ ಸುಧಾರಣೆ ತಂದನು. ಜನವರಿ 1 ರ ಪರಿಕಲ್ಪನೆಯನ್ನು ಜ್ಯೂಲಿಯಸ್‌ ಸೀಸರ್‌ ಹುಟ್ಟಿ ಹಾಕಿದನು. ಹೀಗಾಗಿ ರೋಮನ್‌ ದೇವತೆ ಜಾನುಸ್‌ನ ಗೌರವಾರ್ಥ ಮೊದಲ ತಿಂಗಳಿಗೆ ಜನವರಿ ಎಂದು ಹೆಸರಿಡಲಾಗಿದೆ. ಆದರೆ, ಯುರೋಪ್‌ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ಕ್ರಿ.ಶ. 16ನೇ ಶತಮಾನದ ಮಧ್ಯಭಾಗದ ತನಕವೂ ಜ್ಯೂಲಿಯಸ್‌ ಸೀಸರ್‌ನ ಈ ಪರಿಕಲ್ಪನೆಯ ಕ್ಯಾಲೆಂಡರನ್ನು ಒಪ್ಪಿಕೊಂಡಿರಲಿಲ್ಲ.

ಕ್ರಿಶ್ಚಿಯನ್‌ ಧರ್ಮ ವ್ಯಾಪಕವಾಗಿ ಹರಡಿಕೊಳ್ಳುತ್ತಿದ್ದಂತೆ ಹೊಸ ವರ್ಷದ ಆರಂಭವಾಗಿ ಜನವರಿ 1 ಕ್ಕೆ ಪೇಗನ್ ಎಂದೂ ಡಿಸೆಂಬರ್ 25 ಅನ್ನು ಯೇಸುವಿನ ಜನನ ದಿನ ಎಂದೂ ಪರಿಗಣಿಸಲ್ಪಟ್ಟಿತು. ಪೋಪ್ ಗ್ರೆಗೊರಿ ಜ್ಯೂಲಿಯನ್ ಕ್ಯಾಲೆಂಡರನ್ನು ಸುಧಾರಿಸಿದ ನಂತರ ಜನವರಿ 1 ಅನ್ನು ಹೊಸ ವರ್ಷದ ಮೊದಲ ದಿನ ಎಂದು ಸ್ವೀಕರಿಸಲಾಯಿತು. ಆದರೆ ಈ ಹೊಸ ವರ್ಷ ಆಚರಣೆಯು ಪ್ರಾಚೀನ ಬ್ಯಾಬಿಲೋನ್‌ನಲ್ಲಿ ಕ್ರಿ.ಪೂ. 2,000 ರಲ್ಲಿಯೇ ಹುಟ್ಟಿಕೊಂಡಿತ್ತು. ಈ ಬ್ಯಾಬಿಲೋನಿಯನ್ನರು ಹೊಸ ವರ್ಷವನ್ನು ಅಕಿಟು ಎಂಬ ಹನ್ನೊಂದು ದಿನಗಳ ಆಚರಣೆಯನ್ನಾಗಿ ನಡೆಸುತ್ತಿದ್ದರು. ಹೀಗಾಗಿ ಪ್ರಪಂಚದ ಬಹುತೇಕ ದೇಶಗಳು ಜನವರಿ 1ರಂದು ಹೊಸ ವರ್ಷ ಆಚರಿಸುತ್ತಾರೆ.

ಇದನ್ನೂ ಓದಿ: ನೀವು ಕುಡಿಯುವ ಹಾಲು ಶುದ್ಧವಾಗಿದೆಯೇ? ಮನೆಯಲ್ಲೇ ಹೀಗೆ ಪತ್ತೆ ಹಚ್ಚಿ

ಹೊಸ ವರ್ಷದ ಮಹತ್ವ ಹಾಗೂ ಆಚರಣೆ

ಜನವರಿ 1 ರಂದು ಹೊಸ ಕ್ಯಾಲೆಂಡರ್‌ ವರ್ಷವನ್ನು ಸ್ವಾಗತಿಸುವ ದಿನವಾಗಿದ್ದು , ಈ ಹಿನ್ನಲೆಯಲ್ಲಿ ಪ್ರಪಂಚದ ಕೆಲವು ದೇಶಗಳಲ್ಲಿ ಹೊಸ ವರ್ಷದ ಆಚರಣೆಯು ಮಹತ್ವದ್ದಾಗಿದೆ. ಅನೇಕ ದೇಶಗಳಲ್ಲಿ ಹೊಸ ವರ್ಷದ ಆಚರಣೆಗಳು ಡಿಸೆಂಬರ್ 31ರಂದೇ ಪ್ರಾರಂಭವಾಗುತ್ತವೆ. ಈ ಡಿಸೆಂಬರ್ 31 ರ ರಾತ್ರಿಯಿಂದಲೇ ಆರಂಭವಾಗುವ ಈ ಆಚರಣೆ ಜನವರಿ 1ರ ನಸುಕಿನ ತನಕ ಇರುತ್ತದೆ. ಈ ವೇಳೆಯಲ್ಲಿ ಪಟಾಕಿ ಸಿಡಿಸುವುದು, ಪಾರ್ಟಿ ಮಾಡುತ್ತಾರೆ. ಕೆಲವರಂತೂ ಹೊಸ ವರ್ಷದ ಆರಂಭದೊಂದಿಗೆ ಜೀವನ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರೆ. ಉತ್ತಮ ನಿರ್ಣಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ