New Year 2026: ಪಾರ್ಟಿ ಹ್ಯಾಂಗೋವರ್‌ನಿಂದ ಹೊರ ಬರೋಕೆ ಈ ಸರಳ ಮನೆಮದ್ದುಗಳನ್ನು ಟ್ರೈ ಮಾಡಿ
ಹೊಸ ವರ್ಷಕ್ಕೆ ಇನ್ನೆರಡು ದಿನಗಳು ಬಾಕಿ ಉಳಿದಿವೆ. ಯುವ ಜನರಂತೂ ಪಾರ್ಟಿ, ಮೋಜು ಮಸ್ತಿ ಮಾಡುತ್ತಾ ಹೊಸ ವರ್ಷವನ್ನು ಆಚರಿಸುತ್ತಾರೆ. ಹೆಚ್ಚಿನವರು ನ್ಯೂ ಇಯರ್ ಪಾರ್ಟಿಗಳಲ್ಲಿ ಸ್ವಲ್ಪ ಜಾಸ್ತಿಯೇ ಆಲ್ಕೋಹಾಲ್ ಸೇವಿಸುತ್ತಾರೆ. ಮತ್ತು ಈ ಹ್ಯಾಂಗೋವರ್ ಕಾರಣ ಮರುದಿನ ತಲೆನೋವು, ಬಾಯಾರಿಕೆಯಿಂದ ಗಂಟಲು ಒಣಗುವುದು, ವಾಂತಿ, ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ನೀವು ಸಹ ಇದೇ ರೀತಿ ಹ್ಯಾಂಗೋವರ್‌ನಿಂದ ಹೊರ ಬರಲು ಒದ್ದಾಡುತ್ತೀರಾ? ಹಾಗಿದ್ರೆ ಈ ಸರಳ ಮನೆಮದ್ದುಗಳನ್ನು ಟ್ರೈ ಮಾಡಿ.

ಹೊಸ ವರ್ಷಕ್ಕೆ (New Year) ಇನ್ನೆರಡು ದಿನಗಳು ಬಾಕಿ ಉಳಿದಿದ್ದು, ಹಳೆಯ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲು ಹೆಚ್ಚಿನವರು ಪ್ರವಾಸ, ಪಾರ್ಟಿಗಳನ್ನು ಯೋಜಿಸುತ್ತಾರೆ. ನ್ಯೂ ಇಯರ್ ಅಂದ್ಮೇಲೆ ಎಣ್ಣೆ ಪಾರ್ಟಿ ಇರ್ಲೇ ಬೇಕು. ಕೆಲವರಂತೂ ಪಾರ್ಟಿಯಲ್ಲೂ ತುಸು ಜಾಸ್ತಿಯೇ ಆಲ್ಕೋಹಾಲ್ ಸೇವನೆ ಮಾಡುತ್ತಾರೆ. ಹೊಸ ವರ್ಷದ ಪಾರ್ಟಿಗಳು ಮೋಜಿನದ್ದಾಗಿದ್ದರೂ, ಮರುದಿನ ಬೆಳಿಗ್ಗೆ ಕಾಣಿಸಿಕೊಳ್ಳುವ ಹ್ಯಾಂಗೊವರ್ ಇಡೀ ದಿನವನ್ನು ಹಾಳುಮಾಡಬಹುದು. ಹೌದು ತಲೆನೋವು, ಆಯಾಸ ಕಿರಿಕಿರಿ ಮತ್ತು ಗೊಂದಲವನ್ನು ನಿಭಾಯಿಸುವುದು ಸುಲಭವಲ್ಲ. ಹೀಗಿರುವಾಗ ಈ ಕೆಲವು ಮನೆಮದ್ದುಗಳ ಸಹಾಯದಿಂದ ಪಾರ್ಟಿ ಹ್ಯಾಂಗೋವರ್‌ನಿಂದ ಬರೀ 10 ನಿಮಿಷದಲ್ಲಿ ಹೊರ ಬರುವಂತೆ ಮಾಡಬಹುದು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಪಾರ್ಟಿ ಹ್ಯಾಂಗೋವರ್‌ನಿಂದ ಹೊರ ಬರಲು ಇಲ್ಲಿದೆ ಸುಲಭ ಸಲಹೆ:
ನೀವು ಅತಿಯಾದ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವಿಸಿದಾಗ ಹ್ಯಾಂಗೊವರ್ ಉಂಟಾಗುತ್ತದೆ. ಇದರಿಂದ ನೀವು ಮರುದಿನ ಎಚ್ಚರವಾದಾಗ ತಲೆ ಭಾರವಾದಂತೆ ಅನಿಸುತ್ತದೆ, ತಲೆನೋವು, ಅಥವಾ ತಲೆತಿರುಗುವಿಕೆ, ವಾಕರಿಕೆ ಕಾಣಿಸಿಕೊಳ್ಳುತ್ತದೆ. ಈ ಕೆಲವು ಪಾನೀಯಗಳನ್ನು ಕುಡಿಯುವ ಮೂಲಕ ಹ್ಯಾಂಗೋವರ್‌ನಿಂದ ಹೊರಬರಬಹುದು.
ಅರಿಶಿನ ನೀರು: ಅರಿಶಿನ ನೀರು ಹ್ಯಾಂಗೋವರ್‌ನಿಂದ ಹೊರ ಬರಲು ನಿಮಗೆ ಸಹಾಯ ಮಾಡುತ್ತದೆ. ಇದರಲ್ಲಿರುವ ಉರಿಯೂತ ನಿವಾರಕ ಗುಣಗಳು ಹ್ಯಾಂಗೊವರ್ ಲಕ್ಷಣಗಳನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. 1 ರಿಂದ 2 ಟೀ ಚಮಚ ತುರಿದ ಅರಿಶಿನ ಮತ್ತು ಕೆಲವು ನಿಂಬೆ ಹೋಳುಗಳನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯಿರಿ. ಜೊತೆಗೆ ಇದಕ್ಕೆ ಸ್ವಲ್ಪ ಜೇನುತುಪ್ಪ, ಕರಿಮೆಣಸನ್ನೂ ಸೇರಿಸಬಹುದು.
ಎಳನೀರು ಕುಡಿಯಿರಿ: ಎಳ ನೀರು ಹ್ಯಾಂಗೊವರ್ ನಿವಾರಿಸಲು ಪ್ರಯೋಜನಕಾರಿ. ಹೆಚ್ಚು ಆಲ್ಕೋಹಾಲ್ ಸೇವಿಸುವುದರಿಂದ ನಿರ್ಜಲೀಕರಣ ಉಂಟಾಗುತ್ತದೆ. ಎಳನೀರು ಎಲೆಕ್ಟ್ರೋಲೈಟ್‌ಗಳನ್ನು ಹೊಂದಿರುತ್ತದೆ, ಇದು ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ, ನಿರ್ಜಲೀಕರಣವನ್ನು ಹೋಗಲಾಡಿಸುತ್ತವೆ. ಮತ್ತು ಇದು ದೇಹವನ್ನು ಚೈತನ್ಯಗೊಳಿಸುತ್ತದೆ.
ನಿಂಬೆ ನೀರು: ನಿಂಬೆ ನೀರು ಹ್ಯಾಂಗೊವರ್‌ಗೆ ಅತ್ಯಂತ ಪರಿಣಾಮಕಾರಿ ಪರಿಹಾರಗಳಲ್ಲಿ ಒಂದಾಗಿದೆ. ಒಂದು ಲೋಟಕ್ಕೆ ಅರ್ಧ ನಿಂಬೆ ರಸ ಮತ್ತು ಸ್ವಲ್ಪ ಉಪ್ಪು ಸೇರಿಸಿ, ಮಿಶ್ರಣ ಮಾಡಿ ಕುಡಿಯಿರಿ. ಇದು ಎಲೆಕ್ಟ್ರೋಲೈಟ್‌ಗಳನ್ನು ಪುನಃ ತುಂಬಿಸುತ್ತದೆ, ಜಲಸಂಚಯನವನ್ನು ಸುಧಾರಿಸುತ್ತದೆ ಮತ್ತು ವಾಕರಿಕೆ, ವಾಂತಿ ಮತ್ತು ತಲೆನೋವಿನಿಂದ ಪರಿಹಾರ ನೀಡುತ್ತದೆ.
ಮೊಸರು: ಹ್ಯಾಂಗೋವರ್‌ನಿಂದ ಹೊರ ಬರಲು ಮೊಸರನ್ನು ಸೇವನೆ ಮಾಡುವುದು ಸಹ ಪರಿಣಾಮಕಾರಿಯಾಗಿದೆ. ಸಕ್ಕರೆ ಅಥವಾ ಉಪ್ಪು ಸೇರಿಸದೆ ಮೊಸರನ್ನು ಹಾಗೆಯೇ ಸೇವನೆ ಮಾಡುವುದು ಉತ್ತಮ.
ಬಾಳೆಹಣ್ಣು: ಬಾಳೆಹಣ್ಣು ಹ್ಯಾಂಗೊವರ್ ಹೋಗಲಾಡಿಸುವಲ್ಲಿ ಅತ್ಯಂತ ಪರಿಣಾಮಕಾರಿ. ಅವುಗಳಲ್ಲಿ ಪೊಟ್ಯಾಸಿಯಮ್ ಮತ್ತು ಕಾರ್ಬೋಹೈಡ್ರೇಟ್‌ಗಳು ಸಮೃದ್ಧವಾಗಿವೆ, ಇದು ನಿರ್ಜಲೀಕರಣವನ್ನು ತಡೆಯುತ್ತದೆ. ಅಲ್ಲದೆ ಸಾಕಷ್ಟು ಪೋಷಕಾಂಶಗಳನ್ನೂ ನೀಡುತ್ತದೆ.
ಇದನ್ನೂ ಓದಿ: ಮೋಜು-ಮಸ್ತಿ ಮಾತ್ರವಲ್ಲ, ಈ ರೀತಿಯೂ ಅರ್ಥಪೂರ್ಣವಾಗಿ ಹೊಸ ವರ್ಷವನ್ನು ಆಚರಿಸಬಹುದು
ಪುದೀನ ನೀರು: ಪುದೀನದ ತಂಪಾಗಿಸುವ ಸುವಾಸನೆ ಹ್ಯಾಂಗೊವರ್ ಹೋಗಲಾಡಿಸಲು ಸಹಾಯ ಮಾಡುತ್ತದೆ. ಅದಕ್ಕೆ ತಾಜಾ ಪುದೀನಾ ಎಲೆಗಳನ್ನು ಸ್ವಲ್ಪ ಸಮಯದವರೆಗೆ ಬಿಸಿ ನೀರಿನಲ್ಲಿ ನೆನೆಸಿ, ನಂತರ ಸೋಸಿ ಕುಡಿಯಿರಿ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ವಾಕರಿಕೆ ಶಮನಗೊಳಿಸಲು ಸಹಾಯ ಮಾಡುತ್ತದೆ.
ಗ್ರೀನ್ ಟೀ: ಗ್ರೀನ್ ಟೀ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ಇದು ದೇಹಕ್ಕೆ ತ್ವರಿತ ಶಕ್ತಿಯನ್ನು ಒದಗಿಸುತ್ತದೆ. ಅಲ್ಲದೆ ಇದು ಹ್ಯಾಂಗೋವರ್ ಅನ್ನು ಹೋಗಲಾಡಿಸಲು ತುಂಬಾನೇ ಸಹಕಾರಿ.
ತರಕಾರಿ ಅಥವಾ ಚಿಕನ್ ಸೂಪ್: ಹ್ಯಾಂಗೊವರ್ ಸಮಯದಲ್ಲಿ, ದೇಹವು ಎಲೆಕ್ಟ್ರೋಲೈಟ್‌ಗಳು ಖಾಲಿಯಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಹಗುರವಾದ ತರಕಾರಿ ಅಥವಾ ಚಿಕನ್ ಸೂಪ್ ಸೇವಿಸಿ, ಇದು ದೇಹಕ್ಕೆ ಅಗತ್ಯವಾದ ಖನಿಜಗಳನ್ನು ಒದಗಿಸುತ್ತದೆ. ಇದು ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ಬೆಚ್ಚಗಿನ ಸೂಪ್ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಹ್ಯಾಂಗೊವರ್‌ನಿಂದ ಹೊರ ಬರಲು ನೀವು ಸೂಪ್ ಸಹ ಕುಡಿಯಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




