Kannada Rajyothsava 2023: ಕನ್ನಡ ರಾಜ್ಯೋತ್ಸವದಂದು ಮನೆಯಲ್ಲಿಯೇ ತಯಾರಿಸಿ ರುಚಿಕರವಾದ ಸಿಹಿ ತಿನಿಸು
ನವೆಂಬರ್ 1 ಅಂದರೆ ಇಂದು ಕನ್ನಡ ರಾಜ್ಯೋತ್ಸವ. ಈ ಶುಭ ದಿನದಂದು ಮನೆಯಲ್ಲಿ ಏನಾದರೂ ಸಿಹಿ ತಯಾರಿಸಬೇಕೆಂದು ಬಯಸಿದರೆ, ತಿನ್ನಲು ರುಚಿಕರವಾದ ಹಾಗೇನೇ ಆರೋಗ್ಯಕರವಾದ ಸಿಹಿ ಪದಾರ್ಥಗಳಾದ ಅನಾನಸ್ ಕೇಸರಿಬಾತ್ ಮತ್ತು ಬೀಟ್ರೂಟ್ ಮೈಸೂರ್ ಪಾಕ್ ತಯಾರಿಸಬಹುದು. ಈ ಸುಲಭ ಪಾಕ ವಿಧಾನದ ಮಾಹಿತಿ ಇಲ್ಲಿದೆ.
ಇಂದು ಕನ್ನಡ ರಾಜ್ಯೋತ್ಸವ. ಈ ವಿಶೇಷ ದಿನ ಕರ್ನಾಟಕದ ಶ್ರೀಮಂತ ಇತಿಹಾಸ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ದಿನವಾಗಿದೆ. ರಾಜ್ಯೋತ್ಸವ ದಿನವನ್ನು ನಾಡಿನಾದ್ಯಂತ ಬಹಳ ಸಂತೋಷ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ನೀವು ಕೂಡಾ ಈ ದಿನ ಮನೆಯಲ್ಲಿ ಏನಾದರೂ ವಿಶೇಷವಾದ ಸಿಹಿ ಪದಾರ್ಥವನ್ನು ತಯಾರಿಸಲು ಬಯಸಿದರೆ ರುಚಿಕರವಾದ ಅನಾನಸ್ ಕೇಸರಿಬಾತ್ ಮತ್ತು ಬೀಟ್ರೂಟ್ ಮೈಸೂರ್ ಪಾಕ್ ತಯಾರಿಸಬಹುದು. ತಿನ್ನಲು ರುಚಿಕರವಾದ ಹಾಗೇನೇ ಆರೋಗ್ಯಕರವಾದ ಸಿಹಿ ಪದಾರ್ಥಗಳಾದ ಅನಾನಸ್ ಕೇಸರಿಬಾತ್ ಮತ್ತು ಬೀಟ್ರೂಟ್ ಮೈಸೂರ್ ಪಾಕ್ ಸಿಹಿಯ ಸುಲಭ ಪಾಕ ವಿಧಾನದ ಮಾಹಿತಿ ಇಲ್ಲಿದೆ.
ಅನಾನಸ್ ಕೇಸರಿ ಬಾತ್:
ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಕಡಿಮೆ ಸಮಯದಲ್ಲಿ ಹಾಗೇನೇ ಸುಲಭವಾಗಿ ಅನಾನಸ್ ಕೇಸರಿಬಾತ್ ತಯಾರಿಸಬಹುದು.
ಅನಾನಸ್ ಕೇಸರಿ ಬಾತ್ ಮಾಡಲು ಬೇಕಾಗುವ ಸಾಮಾಗ್ರಿಗಳು:
• ರವೆ – 1 ಕಪ್
• ಸಣ್ಣದಾಗಿ ಕೊಚ್ಚಿದ ಅನನಾಸ್ – 1 ಕಪ್
• ನೀರು – 2 1/2 ಕಪ್
• ಸಕ್ಕರೆ – 1 ½ ಕಪ್
• ಏಲಕ್ಕಿ ಪುಡಿ
• ತುಪ್ಪ
• ಫುಡ್ ಕಲರ್ ಅಥವಾ ಕೇಸರಿ ದಳ
• ಸ್ವಲ್ಪ ಗೋಡಂಬಿ
• ಸ್ವಲ್ಪ ಒಣದ್ರಾಕ್ಷಿ
ಅನಾನಸ್ ಕೇಸರಿ ಬಾತ್ ಮಾಡುವ ಸುಲಭ ವಿಧಾನ:
• ಮೊದಲಿಗೆ ಗ್ಯಾಸ್ ಒಲೆ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಒಂದು ಚಮಚ ತುಪ್ಪವನ್ನು ಸೇರಿಸಿ, ತುಪ್ಪ ಕಾದ ಬಳಿಕ ಸಣ್ಣಗೆ ಹೆಚ್ಚಿದ ಅನಾನಸ್ ತುಂಡುಗಳನ್ನು ಅದರಲ್ಲಿ ಹಾಕಿ ಚೆನ್ನಾಘಿ ಹುರಿದುಕೊಳ್ಳಿ.
• ನಂತರ ಅದಕ್ಕೆ ನಿಮ್ಮ ಸಿಹಿಗೆ ಅನುಗುಣವಾಗಿ ಸಕ್ಕರೆಯನ್ನು ಹಾಗೂ ಸ್ವಲ್ಪ ಕೇಸರಿ ದಳವನ್ನು ಸೇರಿಸಿಕೊಳ್ಳಿ. ಕೇಸರಿ ಇಲ್ಲದಿದ್ದರೆ ಹಳದಿ ಬಣ್ಣದ ಫುಡ್ ಕಲರ್ ಕೂಡಾ ಸೇರಿಸಿಕೊಳ್ಳಬಹುದು. ಈಗ ಅದಕ್ಕೆ 2 ಕಪ್ ನೀರನ್ನು ಸೇರಿಸಿಕೊಂಡು ಚೆನ್ನಾಗಿ ಕುದಿಯಲು ಬಿಡಿ.
• ಈಗ ಇನ್ನೊಂದು ಪ್ಯಾನ್ ಬಿಸಿ ಮಾಡಿ, ಅದಕ್ಕೆ ತುಪ್ಪ ಸೇರಿಸಿಕೊಂಡು ಗೋಡಂಬಿ ಮತ್ತು ದ್ರಾಕ್ಷಿಯನ್ನು ಹುರಿದುಕೊಳ್ಳಿ. ನಂತರ ದ್ರಾಕ್ಷಿ ಮತ್ತು ಗೋಡಂಬಿಯನ್ನು ಒಂದು ಸಣ್ಣ ಪಾತ್ರೆಗೆ ವರ್ಗಾಯಿಸಿಕೊಂಡು, ಈಗ ಈ ಪ್ಯಾನ್ಗೆ ಇನ್ನೂ ಸ್ವಲ್ಪ ತುಪ್ಪವನ್ನು ಹಾಕಿ, ಅದಕ್ಕೆ ರವೆಯನ್ನು ಸೇರಿಸಿಕೊಳ್ಳಿ.
• ಹಸಿ ವಾಸನೆ ಹೋಗುವವರೆಗೆ ಮಧ್ಯಮ ಉರಿಯಲ್ಲಿ ರವೆಯನ್ನು ಹುರಿದುಕೊಳ್ಳಿ. ಈಗ ಇನ್ನೊಂದು ಬಾಣಲೆಯಲ್ಲಿರುವ ಅನಾನಸ್ ಮಿಶ್ರವನ್ನು ಇದಕ್ಕೆ ಸೇರಿಸಿಕೊಂಡು ನೀರಿನಂಶ ಹಾವಿಯಾಗುವವರೆಗೆ ಈ ಮಿಶ್ರಣವನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಕೇಸರಿಬಾತ್ ಮಿಶ್ರಣಕ್ಕೆ ಸ್ವಲ್ಪ ತುಪ್ಪವನ್ನು ಸೇರಿಸಿಕೊಂಡು, ಕೇಸರಿಬಾತ್ ತಳ ಬಿಡಲು ಆರಂಭಿಇದಾಗ ಕೊನೆಯದಾಗಿ ಅದಕ್ಕೆ ಏಲಕ್ಕಿ ಪುಡಿ, ಹುರಿದಿಟ್ಟ ಒಣದ್ರಾಕ್ಷಿ ಮತ್ತು ಗೋಡಂಬಿ ಸೇರಿಸಿದರೆ ಅನಾನಸ್ ಕೇಸರಿ ಬಾತ್ ಸವಿಯಲು ಸಿದ್ಧ.
ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ ದಿನದಂದು ಸಿದ್ದರಾಮಯ್ಯ ಬಂಪರ್ ಗಿಫ್ಟ್, ಸರ್ಕಾರಿ ಶಾಲೆಗಳಿಗೂ ಉಚಿತ ವಿದ್ಯುತ್ ಭಾಗ್ಯ
ಬೀಟ್ರೂಟ್ ಮೈಸೂರ್ ಪಾಕ್:
ಕನ್ನಡ ರಾಜ್ಯೋತ್ಸವದ ದಿನ ಆರೋಗ್ಯಕರವಾದ ಸಿಹಿಯನ್ನು ಮನೆಯವರಿಗೆ ಬಡಿಸಬೇಕೆಂದು ಬಯಸಿದರೆ, ನೀವು ಬೀಟ್ರೂಟ್ ಮೈಸೂರ್ ಪಾಕ್ ತಯಾರಿಸಬಹುದು. ಇದು ರುಚಿಯ ಜೊತೆಗೆ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.
ಬೀಟ್ರೂಟ್ ಮೈಸೂರ್ ಪಾಕ್ ಮಾಡಲು ಬೇಕಾಗಿರುವ ಸಾಮಾಗ್ರಿಗಳು:
• ಬೀಟ್ರೂಟ್ – 2
• ಕಡ್ಲೆ ಹಿಟ್ಟು – 1 ಕಪ್
• ಸಕ್ಕರೆ – 1 ಕಪ್
• ತುಪ್ಪ – 1 ½ ಕಪ್
ಬೀಟ್ರೂಟ್ ಮೈಸೂರ್ ಪಾಕ್ ತಯಾರಿಸುವ ಸುಲಭ ವಿಧಾನ:
• ಮೊದಲಿಗೆ ಬೀಟ್ರೂಟ್ ಸಿಪ್ಪೆ ಸುಳಿದು ಅದನ್ನು ನುಣ್ಣಗೆ ಕತ್ತರಿಸಿಕೊಂಡು, ಅದನ್ನು ಮಿಕ್ಸಿ ಜಾರ್ನಲ್ಲಿ ರುಬ್ಬಿಕೊಂಡು ರಸ ತಯಾರಿಸಿಕೊಳ್ಳಿ. ನಂತರ ಆ ರಸವನ್ನು ಸೋಸಿಕೊಂಡು ಪಕ್ಕಕ್ಕೆ ಇಟ್ಟುಬಿಡಿ.
• ಈಗ ಒಲೆಯ ಮೇಲೆ ಪ್ಯಾನ್ ಇಟ್ಟು, ಅದು ಕಾದ ಬಳಿಕ ಅದಕ್ಕೆ ಕಡ್ಲೆ ಹಿಟ್ಟನ್ನು ಹಾಕಿಕೊಳ್ಳಿ. (ಕಡ್ಲೆ ಹಿಟ್ಟು ಗಂಟು ಕಟ್ಟಿಕೊಳ್ಳದ ಹಾಗೆ ನೋಡಿಕೊಳ್ಳಿ) ಕಡ್ಲೆ ಹಿಟ್ಟಿನ ಹಸಿ ವಾಸನೆ ಹೋಗುವವರಗೆ ಸ್ವಲ್ಪ ಹುರಿದುಕೊಂಡು ನಂತರ ಅದಕ್ಕೆ ತುಪ್ಪವನ್ನು ಸೇರಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಪಕ್ಕಕ್ಕೆ ಇಡಿ.
• ಈಗ ಒಲೆಯ ಮೇಲೆ ದಪ್ಪ ತಳದ ಬಾಣಲೆಯನ್ನು ಇಟ್ಟು ಅದಕ್ಕೆ ಸಕ್ಕರೆ ಮತ್ತು ಬೀಟ್ರೂಟ್ ರಸವನ್ನು ಸೇರಿಸಿಕೊಂಡು, ಸಕ್ಕರೆ ಕರಗಿ ಈ ಮಿಶ್ರಣ ದಪ್ಪವಾಗುವವರೆಗೆ ಕುದಿಸಿಕೊಳ್ಳಿ. ಈ ಮಿಶ್ರಣ ದಪ್ಪಗಾಗಲು ಮೊದಲೇ ತಯಾರಿಸಿಟ್ಟ ಕಡ್ಲೆಹಿಟ್ಟಿನ ಮಿಶ್ರಣವನ್ನು ಸೇರಿಸಿಕೊಂಡು ಎಲ್ಲವನ್ನು ಚೆನ್ನಾಗಿ ಬೆರೆಸಿಕೊಳ್ಳಿ.
• ಈ ಮಿಶ್ರಣ ಗಂಟುಕಟ್ಟಿಕೊಳ್ಳದ ಹಾಗೆ ಎಲ್ಲವನ್ನು ಹದವಾಗಿ ಬೆರೆಸಿದ ನಂತರ, ಅರ್ಧ ಕಪ್ ತುಪ್ಪವನ್ನು ತೆಗೆದುಕೊಂಡು ಮೈಸೂರ್ ಪಾಕ್ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವೇ ಸೇರಿಸಿಕೊಳ್ಳಿ. ಮೈಸೂರ್ ಪಾಕ್ ತುಪ್ಪ ಹೀರಿಕೊಂಡ ನಂತರ ಒಲೆಯನ್ನು ಆಫ್ ಮಾಡಿ, ಒಂದು ಟ್ರೇ ಗೆ ತುಪ್ಪ ಸವರಿ, ಈ ಮೈಸೂರ್ ಪಾಕ್ ಮಿಶ್ರಣವನ್ನು ಟ್ರೇನಲ್ಲಿ ಹಾಕಿಡಿ, 1 ಗಂಟೆಯ ಬಳಿಕ ಈ ಮೈಸೂರ್ ಪಾಕ್ನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ಮನೆಯವರಿಗೆ ಬಡಿಸಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: