Workplace Burnout: ಉದ್ಯೋಗ ಭಂಗ ಸಮಸ್ಯೆ ಎಂದರೇನು? ಇದು ಕೆಲಸದ ಸ್ಥಳದಲ್ಲಿ ಹೇಗೆ ಪರಿಣಾಮ ಉಂಟು ಮಾಡುತ್ತದೆ? ಇಲ್ಲಿದೆ ಮಾಹಿತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 08, 2023 | 6:39 PM

ಕೆಲಸದ ಸಮಯದಲ್ಲಿ ನೀವು ಆಗಾಗ್ಗೆ ಆಯಾಸವನ್ನು ಅನುಭವಿಸುತ್ತಿದ್ದೀರಾ? ನೀವು ಕೆಲಸದ ಭಯ ಮತ್ತು ಆತಂಕವನ್ನು ಅನುಭವಿಸುತ್ತಿದ್ದೀರಾ? ಇವೆಲ್ಲವೂ ಕೆಲಸದ ಸ್ಥಳದಲ್ಲಿನ ಬರ್ನ್ಔಟ್ ಅಥವಾ ಉದ್ಯೋಗ ಭಂಗ ಸಮಸ್ಯೆಯ ಕಾರಣದಿಂದಾಗಿರಬಹುದು. ಈ ಸಮಸ್ಯೆಯಿಂದ ಹೊರ ಬರಲು ಸುಲಭ ಪರಿಹಾರಗಳು ಇಲ್ಲಿವೆ.

Workplace Burnout: ಉದ್ಯೋಗ ಭಂಗ ಸಮಸ್ಯೆ ಎಂದರೇನು? ಇದು ಕೆಲಸದ ಸ್ಥಳದಲ್ಲಿ ಹೇಗೆ ಪರಿಣಾಮ ಉಂಟು ಮಾಡುತ್ತದೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ಪ್ರಸ್ತುತ ಒತ್ತಡವು ಪ್ರತಿಯೊಬ್ಬರ ಜೀವನದ ಒಂದು ಭಾಗವಾಗಿದೆ. ಅದು ಕೆಲಸದ ಸ್ಥಳದಲ್ಲಿರಲಿ ಅಥವಾ ಮನೆಯಲ್ಲಿರಲಿ. ಜನರು ಒಂದಲ್ಲಾ ಒಂದು ರೀತಿಯಲ್ಲಿ ಒತ್ತಡಕ್ಕೆ ಒಳಗಾಗುತ್ತಿರುತ್ತಾರೆ. ನಾವು ಬಯಸಿದರೂ ಸಹ ಸಂಪೂರ್ಣವಾಗಿ ಒತ್ತಡವನ್ನು ತೆಗೆದುಹಾಕಲು ಸಾಧ್ಯವಾಗುವುದಿಲ್ಲ. ಆದರೆ ಅದನ್ನು ನಿಯಂತ್ರಿಸಬಹುದು ಅಥವಾ ಕಡಿಮೆ ಮಾಡಬಹುದು. ಕೆಲಸದ ಒತ್ತಡವು ವ್ಯಕ್ತಿಯ ವೈಯಕ್ತಿಕ ಜೀವನದ ಮೇಲೂ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಇದರಿಂದ ಕೋಪ, ಕಿರಿಕಿರಿ, ನಿದ್ರಾಹೀನತೆ, ಖಿನ್ನತೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಅಲ್ಲದೆ ಇದು ಕೆಲಸದ ಸ್ಥಳದಲ್ಲಿ ಉದ್ಯೋಗ ಭಂಗಕ್ಕೂ ಕಾರಣವಾಗುತ್ತದೆ.

ಬರ್ನ್ಔಟ್ ಅಥವಾ ಉದ್ಯೋಗ ಭಂಗ ಎಂದರೇನು?

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ‘ಬರ್ನ್ಔಟ್’ ವೃತ್ತಿಪರರಿಗೆ ಸಂಬಂಧಿಸಿದ ಒಂದು ಸಮಸ್ಯೆಯಾಗಿದ್ದು, ಇದು ಅತಿಯಾದ ಕೆಲಸದ ಒತ್ತಡದಿಂದಾಗಿ ಉಂಟಾಗುವ ಒಂದು ರೀತಿಯ ಸಮಸ್ಯೆಯಾಗಿದೆ. ಕೆಲಸದ ಸ್ಥಳದಲ್ಲಿನ ಅತಿಯಾದ ಒತ್ತಡ ಮತ್ತು ಆಯಾಸವು ಉದ್ಯೋಗಭಂಗಕ್ಕೆ ಕಾರಣಾಗುತ್ತದೆ. ಇದರಿಂದ ಒಬ್ಬ ಉದ್ಯೋಗಿಯ ಕೆಲಸದ ಮೇಲಿನ ದಕ್ಷತೆಯು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದು ವೃತ್ತಿಪರವಾಗಿ ಮಾತ್ರವಲ್ಲದೆ ಆತನ ವೈಯಕ್ತಿಯ ಜೀವನದ ಮೇಲೂ ಪರಿಣಾಮ ಬೀರುತ್ತದೆ.

ಬರ್ನ್ಔಟ್ ಸಮಸ್ಯೆಯ ಪರಿಣಾಮ:

ಈ ಉದ್ಯೋಗಭಂಗ ಸಮಸ್ಯೆಯು ಸಾಮಾಜಿಕ, ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮ ಸೇರಿದಂತೆ ಜೀವನದ ಪ್ರತಿಯೊಂದು ಅಂಶದ ಮೇಲೂ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ.

• ಆತಂಕ

• ಖಿನ್ನತೆ

• ಗಮನದ ಕೊರತೆ

• ಪ್ರೇರಣೆಯ ಕೊರತೆ

• ಜೀವನದ ಬಗ್ಗೆ ನಕಾರಾತ್ಮಕ ದೃಷ್ಟಿಕೋನ

• ಆಯಾಸ

• ನಿದ್ರಾಹೀನತೆ

• ಒತ್ತಡ

• ಅಧಿಕ ರಕ್ತದೊತ್ತಡ

• ಟೈಪ್ 2 ಮಧುಮೇಹದಂದ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ.

ಬರ್ನ್ಔಟ್ ಸಮಸ್ಯೆ ಬಾರದಂತೆ ತಡೆಯಲು ಇಲ್ಲಿವೆ ಸುಲಭ ಪರಿಹಾರ:

ನಿಯಮಿತವಾಗಿ ವಿರಾಮಗಳನ್ನು ತೆಗೆದುಕೊಳ್ಳಿ:

ಕೆಲಸದ ಸ್ಥಳದಲ್ಲಿ ದಿನವಿಡೀ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳುವುದು ಮಾನಸಿಕವಾಗಿ ಮತ್ತು ದೈಹಿಕವಾಗಿ ನಿಮ್ಮನ್ನು ಉಲ್ಲಾಸದಾಯಕವಾಗಿರಲು ಸಹಾಯ ಮಾಡುತ್ತದೆ. ವಿಪರೀತ ಕೆಲಸದ ಒತ್ತಡದಿಂದ ಸ್ವಲ್ಪ ವಿರಾಮ ತೆಗೆದುಕೊಂಡು ಮನಸ್ಸನ್ನು ಶಾಂತಗೊಳಿಸಿ. ಈ ಮೂಲಕ ನೀವು ಪುನಃ ಶಕ್ತಿಯನ್ನು ತುಂಬಿಕೊಂಡು ಉತ್ಸಾಹದಿಂದ ಕೆಲಸ ಮಾಡಬಹುದು.

ವಾಸ್ತವಿಕ ಗುರಿಗಳನ್ನು ಹೊಂದಿಸಿ:

ನಿಗದಿ ಪಡಿಸಿದ ಸಮಯದಲ್ಲಿ ನಿಮ್ಮ ಕೆಲಸ ಕಾರ್ಯಗಳನ್ನು ಹಾಗೂ ಗುರಿಗಳನ್ನು ಪೂರೈಸುವುದು ಮುಖ್ಯವಾಗಿದೆ. ಇದರಿಂದ ಕೆಲಸವು ಸರಾಗವಾಗಿ ಸಾಗುತ್ತದೆ ಮತ್ತು ನಿಮ್ಮ ಮೇಲೆ ಹೆಚ್ಚಿನ ಒತ್ತಡವೂ ಇರುವುದಿಲ್ಲ. ಈ ಮೂಲಕ ನೀವು ಕೆಲಸದ ಸ್ಥಳದಲ್ಲಿನ ಬರ್ನ್ ಔಟ್ ಸಮಸ್ಯೆಯನ್ನು ತಡೆಯಬಹುದು.

ಆದ್ಯತೆ:

ಯಾವ ಕಾರ್ಯಗಳು ಹೆಚ್ಚು ಮುಖ್ಯವೆಂದು ಸ್ಪಷ್ಟವಾದ ಗುರಿಯನ್ನು ಹೊಂದಿರುವುದು ಮುಖ್ಯವಾಗಿದೆ. ಈ ಮೂಲಕ ನೀವು ಮೊದಲು ಮಾಡಿ ಮುಗಿಸಬೇಕಾದ ಕೆಲಸದ ಮೇಲೆ ಆದ್ಯತೆ ನೀಡಲು ನಿಮಗೆ ಸಹಾಯಕವಾಗುತ್ತದೆ. ಇದರಿಂದ ನೀವು ಹೆಚ್ಚಾಗಿ ಕೆಲಸದ ಒತ್ತಡಕ್ಕೆ ಒಳಗಾಗಿ ಸಮಸ್ಯೆಯನ್ನು ಎದುರಿಸುವುದುದಿಲ್ಲ.

ನಿಮ್ಮ ಒತ್ತಡದ ಮಟ್ಟವನ್ನು ನಿರ್ವಹಿಸಿ:

ಒತ್ತಡವು ಬರ್ನ್ಔಟ್ ಅಥವಾ ಉದ್ಯೋಗ ಭಂಗಕ್ಕೆ ಮೂಲ ಕಾರಣ. ಆದ್ದರಿಂದ ಅದನ್ನು ನಿರ್ವಹಿಸುವ ಮಾರ್ಗವನ್ನು ಕಂಡುಹಿಡಿಯುವುದು ಮುಖ್ಯವಾಗಿದೆ. ಒತ್ತಡವನ್ನು ನಿರ್ವಹಿಸಲು ವ್ಯಾಯಾಮ, ಧ್ಯಾನ, ಯೋಗ ಅಥವಾ ದೀರ್ಘ ದಿನದ ಕೆಲಸದ ನಂತರ ವಿಶ್ರಾಂತಿ ಮತ್ತು ಒತ್ತಡವನ್ನು ನಿವಾರಿಸಲು ಸಹಾಯ ಮಾಡುವ ಯಾವುದೇ ಇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಮುಖ್ಯವಾಗಿದೆ.

ಇದನ್ನೂ ಓದಿ: ನೀವು ಕೆಲಸ ಮಾಡುವ ಸ್ಥಳದಲ್ಲಿ ಖುಷಿಯಾಗಿರುವುದು ಹೇಗೆ, ಒತ್ತಡವನ್ನು ಕಡಿಮೆ ಮಾಡುವ ಮಾರ್ಗಗಳಿವು

ಸಹಾಯ ಕೇಳುವುದು:

ನಿಮಗೆ ಅಗತ್ಯವಿರುವಾಗ ಇತರರ ಸಹಾಯವನ್ನು ಕೇಳುವುದು ಮುಖ್ಯವಾಗಿದೆ. ನೀವು ವಿಪರೀತ ಒತ್ತಡ ಅಥವಾ ದಣಿದ ಭಾವನೆಗೆ ಒಳಗಾದರೆ, ನಿಮ್ಮ ಹೊರೆಯನ್ನು ಕಡಿಮೆ ಮಾಡಲು ಮತ್ತು ನಿಮಗೆ ಮಾನಸಿಕ ಬೆಂಬಲದ ಅವಶ್ಯಕತೆಗಾಗಿ ಸಹದ್ಯೋಗಿಗಳು ಅಥವಾ ಮೇಲ್ವಿಚಾರಕರಿಂದ ಸಹಾಯವನ್ನು ಕೇಳಲು ಹಿಂಜರಿಯದಿರಿ.

ನಿಮ್ಮ ಬಗ್ಗೆ ಕಾಳಜಿ ವಹಿಸಿ:

ಎಷ್ಟೇ ಕೆಲಸವಿದ್ದರೂ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯವಾಗಿದೆ. ನಿಯಮಿತ ವ್ಯಾಯಾಮ, ಆರೋಗ್ಯಕರ ಆಹಾರ ಸೇವನೆಯಂತಹ ಆರೋಗ್ಯಕರ ಅಭ್ಯಾಸವನ್ನು ರೂಢಿಸಿಕೊಳ್ಳಿ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಸ್ವಲ್ಪ ಸಮಯ ಕಳೆಯಿರಿ. ಇದು ನಿಮ್ಮಲ್ಲಿ ಧನಾತ್ಮಕ ಮನಸ್ಥಿತಿಯನ್ನು ಬೆಳೆಸುತ್ತದೆ ಮತ್ತು ನಿಮ್ಮನ್ನು ಒತ್ತಡದಿಂದ ಹೊರಗೆ ತರುತ್ತದೆ.

ವಿರಾಮದಾಯಕ ಚಟುವಟಿಕೆಗಳಿಗೆ ಸಮಯವನ್ನು ಮೀಸಲಿಡಿ:

ಕೆಲಸದ ಒತ್ತಡದಿಂದ ಹೊರಬರಲು ನಿಮ್ಮ ನೆಚ್ಚಿನ ಹಾಗೂ ವಿರಾಮದಾಯ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಇದು ಕ್ರೀಡೆಯನ್ನು ಆಡುವುದಾಗಿರಲಿ, ಪುಸ್ತಕ ಓದುವುದಾಗಿರಲಿ ಅಥವಾ ವಾಕಿಂಗ್ ಹೋಗುವುದಾಗಿರಲಿ ನಿಮಗೆ ಸಂತೋಷ ತರುವ ಯಾವುದೇ ಚಟುವಟಿಕೆಗಳನ್ನಾದರೂ ಮಾಡುತ್ತಿರಿ. ಇದು ನಿಮ್ಮ ಕೆಲಸದ ಬಳಲಿಕೆಯನ್ನು ಖಂಡಿತವಾಗಿಯೂ ಕಡಿಮೆ ಮಾಡುತ್ತದೆ.

ಇತರ ಹವ್ಯಾಸಗಳನ್ನು ರೂಢಿಸಿಕೊಳ್ಳಿ:

ನಿಮ್ಮ ಉದ್ಯೋಗದ ಹೊರತಾಗಿ ಇತರ ಹವ್ಯಾಸಗಳನ್ನು ಅಭ್ಯಾಸ ಮಾಡುವ ಮೂಲಕ ನಿಮ್ಮ ಜೀವನವನ್ನು ಸಮತೋಲನದಲ್ಲಿರಿಸಬಹುದು. ಮತ್ತು ಈ ಹವ್ಯಾಸಗಳು ನಿಮ್ಮ ಒತ್ತಡಕ್ಕೆ ಪರಿಹಾರವನ್ನು ಒದಗಿಸುತ್ತದೆ.

ಸಾಕಷ್ಟು ನಿದ್ರೆ ಮಾಡಿ:

ಕಛೇರಿಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸಲು ಮತ್ತು ಉದ್ಯೋಗ ಭಂಗವನ್ನು ತಪ್ಪಿಸಲು 7 ರಿಂದ 8 ಗಂಟೆಗಳ ಕಾಲ ನಿದ್ರೆಯು ಅಗತ್ಯವಾಗಿ ಬೇಕಾಗುತ್ತದೆ. ಸಾಕಷ್ಟು ವಿಶ್ರಾಂತಿ ಪಡೆಯುವುದರಿಂದ ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಸಬಹುದು. ಇದರಿಂದ ನೀವು ದಿನದ ಕಾರ್ಯವನ್ನು ಉತ್ಸಾಹಭರಿತವಾಗಿ ಮಾಡಲು ಸಾಧ್ಯವಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ