Parenting Tips : ನಿಮ್ಮ ಮಕ್ಕಳು ಸುಳ್ಳು ಹೇಳುವುದನ್ನು ಕಲಿತಿದ್ರೆ ಹೀಗೆ ಮಾಡಿ
ಮಕ್ಕಳನ್ನು ಬೆಳೆಸುವ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಬೇಡದ ವಿಷಯಗಳು ಹಾಗೂ ಸುಳ್ಳು ಹೇಳುವುದನ್ನೇ ಅಭ್ಯಾಸ ಮಾಡಿಕೊಂಡು ಬಿಡುತ್ತಾರೆ. ಕೆಲವು ಮಕ್ಕಳು ಒಂದು ಸುಳ್ಳನ್ನು ಮುಚ್ಚಿಡಲು ಮತ್ತೊಂದು ಸುಳ್ಳು ಹೇಳಿ ಹೆತ್ತವರನ್ನು ಯಾಮಾರಿಸಿ ಬಿಡುವುದಿದೆ. ಹೀಗಾಗಿ ಪೋಷಕರು ಈ ಬಗ್ಗೆ ಗಮನ ಹರಿಸಿ ಕೆಲ ಬದಲಾವಣೆ ಮಾಡಿಕೊಳ್ಳುವ ಮೂಲಕ ಸುಳ್ಳು ಹೇಳುವ ಅಭ್ಯಾಸಕ್ಕೆ ಬ್ರೇಕ್ ಹಾಕಬಹುದು.
ಬೆಳೆಯುವ ಮಕ್ಕಳಿಗೆ ಒಳ್ಳೆಯ ಮಾತು, ಸಂಸ್ಕಾರಗಳನ್ನು ಕಲಿಸಿ ಕೊಡ ಬೇಕಾದದ್ದು ಪೋಷಕರ ಕೆಲಸ. ಈ ಮಕ್ಕಳ ಮುಂದೆ ಪೋಷಕರು ಎಷ್ಟು ನಾಜೂಕಾಗಿ ವರ್ತಿಸಿದರೂ ಸಾಲದು. ಸಣ್ಣ ವಯಸ್ಸಿನಲ್ಲಿ ಮಕ್ಕಳು ಹೆತ್ತವರನ್ನೇ ನೋಡಿ ಕಲಿಯುವುದೇ ಹೆಚ್ಚು. ಕೆಲವೊಮ್ಮೆ ಬೆಳೆಯುತ್ತಿರುವ ಮಕ್ಕಳು ಮಾತನಾಡುವುದನ್ನು ಕೇಳಿ ಅಚ್ಚರಿಯಾಗುವುದಿದೆ. ಮಗುವಿಗೆ ಇದನ್ನೆಲ್ಲಾ ಯಾರು ಹೇಳಿ ಕೊಟ್ಟರೂ ಎಂಬ ಪ್ರಶ್ನೆ ಹೆತ್ತವರಲ್ಲಿ ಮೂಡುತ್ತದೆ. ಅದಲ್ಲದೇ, ಮಕ್ಕಳಿಗೆ ಹೆಚ್ಚು ಪ್ರಶ್ನೆ ಮಾಡಿದಷ್ಟೂ ಸುಳ್ಳು ಹೇಳುವುದನ್ನು ಜಾಸ್ತಿ ಮಾಡುತ್ತವೆ. ಆದರೆ ಸಣ್ಣ ವಯಸ್ಸಿನಲ್ಲಿ ಈ ಪ್ರವೃತ್ತಿಯನ್ನು ನಿಲ್ಲಿಸದೆ ಹೋದರೆ ಮುಂದೆ ಅದನ್ನೇ ಅಭ್ಯಾಸ ಮಾಡಿಕೊಂಡು ಬಿಡುತ್ತಾರೆ.
* ಸುಳ್ಳು ಹೇಳುವ ಹಿಂದಿನ ಕಾರಣ ತಿಳಿದುಕೊಳ್ಳಿ : ಮಕ್ಕಳಿಗೆ ಪೋಷಕರ ಮೇಲೆ ಭಯವಿರುವ ಕಾರಣವು ಕೆಲವೊಮ್ಮೆ ತಪ್ಪನ್ನು ಮುಚ್ಚಿಡಲು ಸುಳ್ಳನ್ನು ಹೇಳಬಹುದು. ಹೀಗಾಗಿ ಮಕ್ಕಳು ತಪ್ಪು ಮಾಡಿದರೂ ಕೂಡ ಪ್ರೀತಿಯಿಂದಲೇ ಬುದ್ಧಿ ಹೇಳಿ. ಇಲ್ಲದಿದ್ದರೆ ತನ್ನ ತಪ್ಪನ್ನು ಮುಚ್ಚಿಡಲು ಸುಳ್ಳು ಹೇಳಿ ಅದನ್ನೇ ಅಭ್ಯಾಸವನ್ನಾಗಿಕೊಳ್ಳಬಹುದು. ಮಗುವಿನ ಈ ಅಭ್ಯಾಸವನ್ನು ತೊಡೆದು ಹಾಕಲು ಹಿಂದಿನ ಕಾರಣ ತಿಳಿದುಕೊಳ್ಳುವುದು ಅಗತ್ಯ.
* ಸ್ಫೂರ್ತಿದಾಯಕ ಕಥೆ ಹೇಳಿ ಈ ಕೆಟ್ಟ ಅಭ್ಯಾಸವನ್ನು ತಪ್ಪಿಸಿ : ಸಣ್ಣ ಮಕ್ಕಳು ಕಥೆಯಲ್ಲಿ ಬರುವ ಪಾತ್ರಗಳನ್ನು ಹೆಚ್ಚು ಇಷ್ಟ ಪಡುತ್ತಾರೆ. ಹೀಗಾಗಿ ಮಗುವಿನಲ್ಲಿ ಸುಳ್ಳು ಹೇಳುವ ಅಭ್ಯಾಸವೇನಾದರೂ ಕಂಡು ಬಂದರೆ ಮಗುವಿನ ಸ್ಫೂರ್ತಿದಾಯಕ ಕಥೆ ಹೇಳಿ ಮಗುವಿನ ಗುಣಸ್ವಭಾವವನ್ನು ಬದಲಾಯಿಸಿ. ಸುಳ್ಳು ಹೇಳಿ ಶಿಕ್ಷೆ ಅನುಭವಿಸಿರುವ, ವ್ಯಕ್ತಿಗೆ ತೊಂದರೆಯಾಗಿರುವ ಕಥೆಗಳನ್ನು ಹೇಳಿದರೆ ಮಕ್ಕಳ ಈ ಅಭ್ಯಾಸವು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.
* ಮಕ್ಕಳಿಗೆ ಸಾಧ್ಯವಾದಷ್ಟು ಸತ್ಯ ಹೇಳಲು ಪ್ರೋತ್ಸಾಹಿಸಿ : ಮಕ್ಕಳು ಸುಳ್ಳು ಹೇಳುತ್ತಿರುವುದು ನಿಮ್ಮ ಗಮನಕ್ಕೆ ಬಂದರೆ ತಿದ್ದಿ ಬುದ್ಧಿ ಹೇಳಿ. ಸತ್ಯ ಹೇಳುವುದರಿಂದ ಏನೆಲ್ಲಾ ತೊಂದರೆಯಿಂದ ಪಾರಾಗಬಹುದು ಎಂದು ತಿಳಿಸುವ ಮೂಲಕ ಸಾಧ್ಯವಾದಷ್ಟು ನಿಜವನ್ನೇ ಹೇಳಲು ಪ್ರೋತ್ಸಾಹಿಸುವುದು ಒಳ್ಳೆಯದು.
ಇದನ್ನೂ ಓದಿ: ಇದು ಗೋಲಿ ಇಡ್ಲಿ, ಇಲ್ಲಿದೆ ರೆಸಿಪಿ
* ಪ್ರಾಮಾಣಿಕ ಎಂದು ಹೊಗಳಿಕೆಯ ಮಾತನಾಡಿ : ಮಕ್ಕಳು ತಪ್ಪು ಮಾಡಿ ಸತ್ಯ ಹೇಳಿದರೆ, ಅವರನ್ನು ಪ್ರಾಮಾಣಿಕರು ಎಂದು ಹೊಗಳಿದರೆ ನಿಜಕ್ಕೂ ಖುಷಿಯಾಗುತ್ತದೆ. ಯಾವಾಗಲೂ ನಿಜವನ್ನೇ ಹೇಳಬೇಕು ಎಂದೆನಿಸುತ್ತದೆ. ಮಗುವಿನ ತಪ್ಪು ಮಾಡಿದ್ದಲ್ಲಿ ಅದನ್ನು ತಿದ್ದಿಕೊಳ್ಳಲು ಏನು ಮಾಡಬೇಕು, ಆ ತಪ್ಪು ಆಗದಂತೆ ಹೇಗೆ ಜಾಗ್ರತೆ ವಹಿಸಬೇಕು ಎನ್ನುವುದು ಹೇಳಿಕೊಡುವುದು ಮುಖ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ