Raksha Bandhan 2023: ರಕ್ಷಾ ಬಂಧನದ ಹಳೆಯ ನೆನಪುಗಳ ಮತ್ತೆ ಕಾಡುತ್ತಿದೆ
ಸಂಬಂಧಿಕರಿಗೆ ಮಾತ್ರ ರಕ್ಷೆ ಕಟ್ಟಬೇಕೆಂದಿಲ್ಲ ನಮ್ಮ ಮನಸ್ಸಿಗೆ ಯಾರು ಅಣ್ಣನ ಸ್ಥಾನದಲ್ಲಿ ಹತ್ತಿರವಾಗುತ್ತಾರೆ ಅವರಿಗೂ ಕೂಡ ರಕ್ಷೆಯನ್ನು ಕಟ್ಟಬಹುದು. ಹೀಗೆ ಎಂದೋ ನನ್ನ ಜೀವನದಲ್ಲಿ ನನಗೆ ಪರಿಚಯವಾದ ಅಗ್ರಜನಿಗೆ ಪ್ರತೀವರ್ಷ ನಾನು ರಕ್ಷೆಯನ್ನು ಕಟ್ಟುತ್ತೇನೆ ಆ ರಕ್ಷೆಯ ಮಹತ್ವದ ರೀತಿಯಲ್ಲೇ ಇವತ್ತಿನ ದಿನದವರೆಗೂ ನನ್ನನು ಸದಾ ತನ್ನ ಸಹೋದರಿಯಂತೆ ವಾತ್ಸಲ್ಯದಿಂದ ಕಾಣುತ್ತಿದ್ದಾರೆ. ನನ್ನ ನೋವು ನಲಿವುಗಳಲ್ಲಿ ಭಾಗಿಯಾಗುತ್ತಾರೆ. ಆದ್ದರಿಂದ ಸಹೋದರಿ ಸಹೋದರ ಭಾವನೆ ಕೇವಲ ರಕ್ತ ಸಂಭಂದ ದಿಂದ ಮಾತ್ರ ಅಲ್ಲ ಒಳ್ಳೆಯ ಮನಸ್ಸುಳ್ಳವರುವವರಿಂದ ಕೂಡ ಈ ಭಾವನೆಯನ್ನು ಬೆಸೆಯಬಹುದು.
ನಮಗೆ ತಿಳಿದಿರುವ ಹಾಗೆ ಹಿಂದೆ ಯಾವ ರೀತಿಯಲ್ಲಿ ಶ್ರೀ ಕೃಷ್ಣ ಪರಮಾತ್ಮ ಮತ್ತು ದ್ರೌಪದಿಯ ನಡುವಿನ ಸಹೋದರ ಸಹೋದರಿಯ ಬಾಂಧವ್ಯವನ್ನು ಬೆಸೆಯು ವ ಆ ಒಂದು ಘಟನೆಯನ್ನು ಇಂದು ರಕ್ಷಾಬಂಧನದ (Raksha Bandhan) ದಿನದಂದು ನೆನಪಿಸಿಕೊಳ್ಳುತ್ತಾರೋ ಅಂತಹದ್ದೇ ಕೆಲವೊಂದಿಷ್ಟು ಘಟನೆಗಳನ್ನು ಪ್ರತಿಯೊಬ್ಬ ಸಹೋದರ ಸಹೋದರಿಯರು ಅನುಭವಿಸಿರುತ್ತಾರೆ. ನನಗೆ ಒಡಹುಟ್ಟಿದವಳು ಅಕ್ಕ. ಆದರೆ ಚಿಕ್ಕಮ್ಮನ ಇಬ್ಬರು ಅವಳಿ ಮಕ್ಕಳು ನನಗೆ ಅಣ್ಣಂದಿರು. ಚಿಕ್ಕಂದಿನಿಂದ ಒಟ್ಟಿಗೆ ಆಡಿ ಬೆಳೆದವರು. ರಕ್ಷಾಬಂಧನ ಬಂತೆಂದರೆ ಸಾಕು ಅದೇನೋ ಸಂತೋಷದ ವಾತಾವರಣ. ಆ ದಿನ ಅಣ್ಣಂದಿರ ಕೈಗೆ ರಕ್ಷೆ ಕಟ್ಟುವುದಕ್ಕೆ ಕಾತುರದಿಂದ ಕಾಯುತ್ತಿದ್ದೆ. ಇತ್ತ ಇನ್ನೊಂದು ಕಡೆ ನಾವು ಶಾಲೆಗೆ ಹೋಗುವ ಸಂದರ್ಭದಲ್ಲಿ ಲಂಗದಾವಣಿಯ ಜೇಬು ತುಂಬಾ ರಕ್ಷೆ. ಆ ರಕ್ಷೆಯನ್ನು ನಮ್ಮ ಮನೆಯಲ್ಲೇ ತಯಾರಿಸುತ್ತಿದ್ದಿದ್ದು ವಾಡಿಕೆ. ಹಾಗಾಗಿ ಒಂದಿಷ್ಟು ಜನರು ಒಂದೆಡೆ ಸೇರಿ ರಕ್ಷೆಯ ತಯಾರಿಸುತ್ತಿದ್ದೆವು. ಆ ತಯಾರಿಯಲ್ಲೂ ಯಾರಿಗೆ ಹೆಚ್ಚು ಎಂಬುವುದು ಕೂಡ ಒಂದು ಕುತೂಹಲದ ಸಂಗತಿ. ಮುಂಚಿನ ದಿನ ಎಷ್ಟು ಜನರಿಗೆ ರಕ್ಷೆ ಕಟ್ಟುತ್ತೇವೆ, ಯಾರು ಮೊದಲು ಕಟ್ಟುತ್ತಾರೆ ಅನ್ನುವ ಲೆಕ್ಕಾಚಾರ ತಲೆಯಲ್ಲಿ ಓಡುತ್ತಿರುತ್ತದೆ. ಮರುದಿನ ದಾರಿಯುದ್ದಕ್ಕೂ ಸಿಕ್ಕ ಸಿಕ್ಕವರಿಗೆಲ್ಲಾ ರಕ್ಷೆ ಕಟ್ಟುವುದೇ ಕೆಲಸ.
ಒಂದೊಮ್ಮೆ ತರಗತಿ ಶಿಕ್ಷಕಿಗೆ ನಾನು ರಾಖಿ ಕಟ್ಟಲು ಹೋಗಿದ್ದೆ. ಆಗ ಅವರು ನನಗೆ ಒಂದು ಮಾತು ಹೇಳಿರುವುದು ಈಗಲೂ ನೆನಪಿದೆ,” ಅಮ್ಮ ನೀನು ರಕ್ಷೆ ಕಟ್ಟುವುದಕ್ಕೆ ಬಂದಿರುವುದರಿಂದ ನಾನು ಕಟ್ಟಿಸಿಕೊಳ್ಳುತ್ತಿದೇನೆ. ಯಾಕೆಂದರೆ ನಿನಗೆ ಮನಸ್ಸಿಗೆ ಘಸಿಯಾಗಬಾರದು ಎಂಬ ದೃಷ್ಟಿಯಿಂದ. ಆದರೆ ರಕ್ಷೆ ಕಟ್ಟುವುದು ಸಹೋದರ ಸಹೋದರಿಯರು, ಹೀಗೆ ವಿದ್ಯಾರ್ಥಿಗಳು ಶಿಕ್ಷಕರಿಗೆ ರಾಖಿ ಕಟ್ಟುವ ವಾಡಿಕೆ ಇಲ್ಲ ಯಾಕೆಂದರೆ ಶಿಕ್ಷಕರು ಯಾವತ್ತಿಗೂ ಮಕ್ಕಳನ್ನು ತಮ್ಮ ಮಕ್ಕಳಂತೆ ಸದಾ ಕಾವಲು ಕಾಯುತ್ತಾರೆ ಎಂದರು. ಆ ದಿನ ನನಗೇನು ಅನ್ನಿಸಲಿಲ್ಲ ಆದರೆ ಇಂದಿನ ದಿನ ಅದನ್ನು ನೆನಪಿಸಿಕೊಂಡಾಗ ಅಂದು ನಾನು ಏನು ತಿಳಿಯದೆ ಎಷ್ಟು ಬಾಲಿಶವಾಗಿ ನಡೆದುಕೊಂಡಿದ್ದೆ ಎಂದು ನಗು ಬರುತ್ತದೆ.
ಇದನ್ನೂ ಓದಿ: ರಾಖಿ ಕಟ್ಟಲು ಬಂದ ಹುಡುಗಿಯರಿಂದ ತಪ್ಪಿಸಿಕೊಂಡು ಓಡಿ ಹೋದ ಹುಡುಗರು, ಕಾಲೇಜಿನ ಈ ದಿನಗಳೇ ಸುಂದರ
ಹೀಗೆ ಪ್ರತಿಯೊಂದು ಸಂದರ್ಭದಲ್ಲಿ ಒಂದಲ್ಲ ಒಂದು ಪಾಠಗಳು ನಮ್ಮ ಜೀವನದಲ್ಲಿ ಬಂದಿರುತ್ತದೆ. ಬಹಳ ಕಾಲದ ನಂತರ ನೆನಪಿಸಿಕೊಂಡಾಗ ಆ ಪಾಠ ಎದೇನೆಂಬುದು ಅರಿವಾಗುತ್ತದೆ. ಸಂಬಂಧಿಕರಿಗೆ ಮಾತ್ರ ರಕ್ಷೆ ಕಟ್ಟಬೇಕೆಂದಿಲ್ಲ ನಮ್ಮ ಮನಸ್ಸಿಗೆ ಯಾರು ಅಣ್ಣನ ಸ್ಥಾನದಲ್ಲಿ ಹತ್ತಿರವಾಗುತ್ತಾರೆ ಅವರಿಗೂ ಕೂಡ ರಕ್ಷೆಯನ್ನು ಕಟ್ಟಬಹುದು. ಹೀಗೆ ಎಂದೋ ನನ್ನ ಜೀವನದಲ್ಲಿ ನನಗೆ ಪರಿಚಯವಾದ ಅಗ್ರಜನಿಗೆ ಪ್ರತೀವರ್ಷ ನಾನು ರಕ್ಷೆಯನ್ನು ಕಟ್ಟುತ್ತೇನೆ ಆ ರಕ್ಷೆಯ ಮಹತ್ವದ ರೀತಿಯಲ್ಲೇ ಇವತ್ತಿನ ದಿನದವರೆಗೂ ನನ್ನನು ಸದಾ ತನ್ನ ಸಹೋದರಿಯಂತೆ ವಾತ್ಸಲ್ಯದಿಂದ ಕಾಣುತ್ತಿದ್ದಾರೆ. ನನ್ನ ನೋವು ನಲಿವುಗಳಲ್ಲಿ ಭಾಗಿಯಾಗುತ್ತಾರೆ. ಆದ್ದರಿಂದ ಸಹೋದರಿ ಸಹೋದರ ಭಾವನೆ ಕೇವಲ ರಕ್ತ ಸಂಭಂದ ದಿಂದ ಮಾತ್ರ ಅಲ್ಲ ಒಳ್ಳೆಯ ಮನಸ್ಸುಳ್ಳವರುವವರಿಂದ ಕೂಡ ಈ ಭಾವನೆಯನ್ನು ಬೆಸೆಯಬಹುದು. ಆದ್ದರಿಂದ ರಕ್ಷೆ ಕಟ್ಟಿ ಮಹತ್ವ ಉಳಿಸಿ.
ದೀಪ್ತಿ ಅಡ್ಡಂತ್ತಡ್ಕ
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: