ನಿಮ್ಮ ಗಂಡ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡ್ರೆ, ಅವ್ರನ್ನ ಈ ರೀತಿ ಶಾಂತಗೊಳಿಸಿ
ಗಂಡ ಹೆಂಡ್ತಿಯ ನಡುವೆ ಎಷ್ಟೇ ಪ್ರೀತಿ ಇದ್ದರೂ ಕೆಲವೊಂದು ಬಾರಿ ಸಣ್ಣಪುಟ್ಟ ಜಗಳಗಳು, ಮನಸ್ತಾಪಗಳು ತಲೆದೋರುತ್ತಿರುತ್ತವೆ. ಅದರಲ್ಲೂ ಕೆಲವು ಬಾರಿ ಕೆಲಸ, ಮನೆ ಅಂತೆಲ್ಲಾ ಒತ್ತಡದ ಕಾರಣದಿಂದಾಗಿ ಹೆಂಡತಿಯರಿಗಿಂತ ಗಂಡಂದಿರೇ ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಹೆಂಡತಿಯಾದವಳು ಬಹಳ ಜಾಣ್ಮೆಯಿಂದ ಗಂಡನ ಕೋಪವನ್ನು ಕಂಟ್ರೋಲ್‌ಗೆ ತರಬೇಕು. ಅದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಂಬಂಧದಲ್ಲಿ (Relationship) ಪ್ರೀತಿ ಇರುವಂತೆ, ಕೋಪ, ಮನಸ್ತಾಪ, ಜಗಳಗಳು ಕೂಡ ಇದ್ದೇ ಇರುತ್ತವೆ. ಹೌದು ಸಣ್ಣ ಪುಟ್ಟ ಕಾರಣಗಳಿಗೆ ಪತಿ ಪತ್ನಿಯರ ನಡುವೆ ಜಗಳಗಳು ನಡೆಯುತ್ತಿರುತ್ತವೆ. ಆದರೆ ಈ ಕೋಪ ಅತಿಯಾದರೆ ಸಂಬಂಧವೇ ಹಾಳಾಗುವ ಸಾಧ್ಯತೆ ಇರುತ್ತದೆ. ಕೆಲವೊಂದು ಬಾರಿ ಕೆಲಸದ ಒತ್ತಡ ಸೇರಿದಂತೆ ಇನ್ನಿತರ ಕಾರಣಗಳಿಂದ ಗಂಡನೇ (Husband’s anger issue) ಹೆಂಡತಿಯ ಮೇಲೆ ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ಳುತ್ತಾನೆ. ಇಂತಹ ಸಂದರ್ಭದಲ್ಲಿ ಹೆಂಡತಿಯಾದವಳು, ಗಂಡನ ಮೇಲೆ ರೇಗಾಡದೆ ಸಮಾಧಾನದಿಂದ ವರ್ತಿಸಿ, ಜಾಣ್ಮೆಯಿಂದ ಆತನ ಕೋಪವನ್ನು ಕಂಟ್ರೋಲ್‌ಗೆ ತರುವುದು ಬಹಳ ಮುಖ್ಯ. ಇದರಿಂದ ಸಂಬಂಧವೂ ಕೂಡ ಬಲಗೊಳ್ಳುತ್ತದೆ. ಹಾಗಿದ್ದರೆ, ಗಂಡನ ಕೋಪವನ್ನು ಹೇಗೆ ಕಂಟ್ರೋಲ್‌ಗೆ ತರಬೇಕು ಎಂಬುದನ್ನು ನೋಡೋಣ.
ಗಂಡನ ಕೋಪವನ್ನು ಈ ರೀತಿ ಕಮ್ಮಿ ಮಾಡಿ:
ತಾಳ್ಮೆಯಿಂದ ಮಾತನಾಡಿ: ನಿಮ್ಮ ಪತಿ ಕೋಪಗೊಂಡಾಗ ಅವರೊಂದಿಗೆ ಶಾಂತವಾಗಿ ಮಾತನಾಡಲು ಪ್ರಯತ್ನಿಸಿ. ಅವರು ರೇಗಾಡಿದರೆಂದು ನೀವು ಸಹ ಕೋಪದಲ್ಲಿ ಮಾತನಾಡಿದರೆ, ನಿಮ್ಮ ಪತಿಯ ಕೋಪ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಅಂತಹ ಪರಿಸ್ಥಿತಿಯಲ್ಲಿ, ತಾಳ್ಮೆಯಿಂದ ಮಾತನಾಡಿ, ಕೋಪವನ್ನು ಕಮ್ಮಿ ಮಾಡುವಂತೆ ಹೇಳಿ, ಮತ್ತು ಗಂಡನನ್ನು ಸಮಾಧಾನಪಡಿಸಿ.
ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ: ಏಕೆ ಈ ಕೋಪ ಎಂದು ಸಮಸ್ಯೆಗಳನ್ನು ಪರಿಹರಿಸುವತ್ತ ಗಮನಹರಿಸಿ ಮತ್ತು ನೀವಿಬ್ಬರೂ ಅವುಗಳನ್ನು ಒಟ್ಟಿಗೆ ಪರಿಹರಿಸಲು ಪ್ರಯತ್ನಿಸಬೇಕು. ನಿಮ್ಮ ಸಂಗಾತಿ ಮುಂಗೋಪಿಯಾಗಿದ್ದರೆ, ನೀವು ಅವರನ್ನು ಮನವೊಲಿಸುವಲ್ಲಿ ತುಂಬಾ ತಾಳ್ಮೆ ವಹಿಸಬೇಕು. ಮತ್ತು ಕೋಪಕ್ಕೆ ಕಾರಣವೇನು ಎಂದು ನೋಡಿ ಅದನ್ನು ಪರಿಹರಿಸಲು ಪ್ರಯತ್ನಿಸಿ.
ನಿಮ್ಮ ಗಂಡನ ಒಳ್ಳೆಯ ನಡವಳಿಕೆಯನ್ನು ಹೊಗಳಿ: ಯಾವುದೇ ನಕಾರಾತ್ಮಕ ನಡವಳಿಕೆಯನ್ನು ಬದಲಾಯಿಸಲು ಸಣ್ಣ ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯ. ನಿಮ್ಮ ಪತಿಯಲ್ಲಿ ಬದಲಾವಣೆ ಅಥವಾ ಸುಧಾರಣೆಯನ್ನು ತರಲು, ನೀವು ಅವರ ಉತ್ತಮ ನಡವಳಿಕೆಯನ್ನು ಪ್ರಶಂಸಿಸಬೇಕು. ಅಲ್ಲದೆ, ಅವರ ಕೋಪದ ನಡವಳಿಕೆ ನಿಮ್ಮ ಭಾವನೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅವರಿಗೆ ತಿಳಿಸಿ, ಇದರಿಂದ ಅವರ ಕೋಪ ಶಮನಗೊಳ್ಳಬಹುದು.
ಸಮಾಧಾನವಾಗಿರಿ: ನಿಮ್ಮ ಪತಿ ಕೋಪಗೊಂಡಾಗ, ನೀವು ಸಹ ಕೋಪ ಮಾಡಿಕೊಂಡರೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಶಾಂತವಾಗಿರುವುದು ತುಂಬಾನೇ ಮುಖ್ಯ. ಶಾಂತವಾಗಿರುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಬಹುದು ಹಾಗೂ ಸಂಬಂಧ ಹದಗೆಡದಂತೆ ನೋಡಿಕೊಳ್ಳಬಹುದು.
ನಿಮ್ಮ ಗಂಡನ ಕೋಪದ ಬಗ್ಗೆ ಮಾತನಾಡಿ: ನಿಮ್ಮ ಗಂಡನ ಕೋಪದ ಸಮಸ್ಯೆಯ ಬಗ್ಗೆ ಮುಕ್ತವಾಗಿ ಮಾತನಾಡಿ. ನಿಮ್ಮ ಗಂಡನೊಂದಿಗೆ ಮಾತನಾಡುವಾಗ, ನಿಮ್ಮ ಭಾವನೆಗಳ ಬಗ್ಗೆ ಅವರಿಗೆ ತಿಳಿಸಿ. ಅವರ ಕೋಪವು ನಿಮ್ಮ ಸಂಬಂಧವನ್ನು ಹೇಗೆ ಹಾಳು ಮಾಡುತ್ತಿದೆ ಎಂಬುದನ್ನು ವಿವರಿಸಿ, ಇದು ಖಂಡಿತವಾಗಿಯೂ ನಿಮ್ಮ ಗಂಡನ ಕೋಪವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಗಂಡ-ಹೆಂಡ್ತಿ ನಡುವೆ ಏಜ್ ಗ್ಯಾಪ್ ಎಷ್ಟಿರಬೇಕು? ದಾಂಪತ್ಯ ಜೀವನದಲ್ಲಿ ನಿಜಕ್ಕೂ ವಯಸ್ಸಿನ ಅಂತರ ಮುಖ್ಯವೇ?
ಸೂಕ್ತ ಸಮಯವನ್ನು ಆರಿಸಿ: ಗಂಡನ ಕೋಪದ ಬಗ್ಗೆ ಚರ್ಚಿಸುವ ಮೊದಲು, ಅವರು ಒಳ್ಳೆಯ ಮನಸ್ಥಿತಿಯಲ್ಲಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಿ. ಒಂದು ವೇಳೆ ಅವರು ದಣಿದಿದ್ದರೆ ಅಥವಾ ಕಿರಿಕಿರಿಗೊಂಡಿದ್ದರೆ, ಆ ಸಂದರ್ಭದಲ್ಲಿ ನೀವು ಮಾತನಾಡಲು ಹೋದರೆ ಗಂಡ ಕೋಪಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಗಂಡ ಶಾಂತ ಮನಸ್ಥಿತಿಯಲ್ಲಿ ಇರುವ ಸಮಯದಲ್ಲಿ ವಿಷಯಗಳನ್ನು ಪ್ರಸ್ತಾಪಿಸಿ.
ಕೋಪದ ಕಾರಣವನ್ನು ಹುಡುಕಿ: ನಿಮ್ಮ ಗಂಡನಿಗೆ ಕೋಪ ತರಿಸುವ ವಿಷಯಗಳು ಯಾವುವು? ಮನೆ ಅಥವಾ ಕೆಲಸದ ವಿಚಾರವಾಗಿ ಕೋಪ ಮಾಡಿದ್ದಾರೆಯೇ ಎಂಬುದನ್ನು ತಿಳಿಯಲು ಪ್ರಯತ್ನಿಸಿ, ಮತ್ತು ಕೋಪಗೊಂಡಿದ್ದರೆ, ಇಂತಹ ಪರಿಸ್ಥಿತಿಯಲ್ಲಿ ಕೋಪವನ್ನು ಹೇಗೆ ಕಂಟ್ರೋಲ್‌ಗೆ ತರಬೇಕು ಎಂಬುದನ್ನು ಕೂಡಾ ನೋಡಿ, ಗಂಡನ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








