
ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಕೆಲವರು ಫಾರಿನ್ ಟ್ರಿಪ್, ಇಂಟರ್ ಸ್ಟೇಟ್ಸ್ ಟ್ರಿಪ್ ಹೋಗಲು ಬಯಸಿದರೆ, ಇನ್ನೂ ಕೆಲವರು ತಮ್ಮ ನಾಡಿನಲ್ಲೇ ಇರುವಂತಹ ಹಿಡನ್ ಜೆಮ್ ತಾಣಗಳನ್ನು ಎಕ್ಸ್‌ಪ್ಲೋರ್ ಮಾಡಲು ಇಷ್ಟಪಡುತ್ತಾರೆ. ನಮ್ಮ ಕರ್ನಾಟಕದಲ್ಲೂ ಇಂತಹ ಸಾಕಷ್ಟು ಗುಪ್ತ ರತ್ನ ತಾಣಗಳಿವೆ. ಅವುಗಳಲ್ಲಿ ʼಮತ್ತೂರುʼ (Mattur) ಕೂಡಾ ಒಂದು. ಈ ಹಳ್ಳಿ ಸಂಸ್ಕೃತ ಗ್ರಾಮವೆಂದೇ (Sanskrit Village) ಪ್ರಖ್ಯಾತಿಯನ್ನು ಪಡೆದಿದೆ. ವೈದಿಕ ಜೀವನಶೈಲಿಗೆ ಹೆಸರುವಾಸಿಯಾಗಿರುವ ಈ ಹಳ್ಳಿಯಲ್ಲಿ ಇಂದಿಗೂ ಜನ ಸಂಸ್ಕೃತದಲ್ಲಿಯೇ ವ್ಯವಹರಿಸುತ್ತಾರೆ. ನೀವೇನಾದರೂ ಪ್ರಾಚೀನ ಮತ್ತು ಆಧುನಿಕ ಸಂಸ್ಕೃತಿಯ ವಿಶಿಷ್ಟ ಮಿಶ್ರಣವನ್ನು ಅನುಭವಿಸಬೇಕೆಂದರೆ ಈ ಹಳ್ಳಿಗೆ ಭೇಟಿ ನೀಡಲೇಬೇಕು. ಸಂಸ್ಕೃತದ್ದೇ ಕಾರುಬಾರು ಇರುವ ಈ ಸುಂದರ ಹಳ್ಳಿಯ ಬಗ್ಗೆ ಇನ್ನಷ್ಟು ತಿಳಿಯೋಣ ಬನ್ನಿ.
ಶಿವಮೊಗ್ಗ ಜಿಲ್ಲೆಯಲ್ಲಿರುವ ಮತ್ತೂರು ಗ್ರಾಮ ಸಂಸ್ಕೃತ ಹಳ್ಳಿ ಎಂದೇ ಪ್ರಸಿದ್ಧಿ ಪಡೆದಿದೆ. ಸುಮಾರು 600 ಜನರಿರುವ ಈ ಹಳ್ಳಿಯಲ್ಲಿ ಇಂದಿಗೂ ಜನ ಸಂಸ್ಕೃತದಲ್ಲೇ ವ್ಯವಹರಿಸುತ್ತಾರೆ. ಅಷ್ಟೇ ಅಲ್ಲದೆ ಈ ಹಳ್ಳಿಯಲ್ಲಿ ವೇದಗಳಿಗೆ ಸಂಬಂಧಪಟ್ಟ ಮಹತ್ವಪೂರ್ಣ ಅಧ್ಯಯನಗಳನ್ನು ಸಹ ಕಲಿಸಿಕೊಡಲಾಗುತ್ತದೆ. ಇಂದಿಗೂ ಇಲ್ಲಿನ ಜನ ವೈದಿಕ ಜೀವನಶೈಲಿಯನ್ನು ನಡೆಸುತ್ತಾರೆ. ಇಂದಿನ ಆಧುನಿಕತೆ ಭರದಲ್ಲಿ ಪ್ರಾಚೀನ ವೈಭವ, ಹಿಂದಿನ ಕಾಲದ ಸಂಸ್ಕೃತಿ, ಸಂಪ್ರದಾಯವನ್ನು ಕಣ್ತುಂಬಿಕೊಳ್ಳುವ ಆಸೆಯಿದ್ದರೆ ನೀವು ಖಂಡಿತವಾಗಿಯೂ ತುಂಗಾ ನದಿ ದಡದಲ್ಲಿರುವ ಈ ಹಳ್ಳಿಗೆ ಭೇಟಿ ನೀಡಲೇಬೇಕು.
ಇಲ್ಲಿನ ಸುಗಮ ರಸ್ತೆಗಳು, ಹಚ್ಚ ಹಸಿರಿನಿಂದ ಕೂಡಿದ ಸುಂದರವಾದ ಪ್ರಕೃತಿ, ಭತ್ತದ ಬೆಳೆಗಳು, ಮುಗಿಲೆತ್ತರಕ್ಕೆ ಬೆಳೆದು ನಿಂತಿರುವ ಅಡಿಕೆ, ತೆಂಗಿನ ಮರಗಳು, ಹಿಂದಿನ ಭವ್ಯ ಪರಂಪರೆಯನ್ನು ಮರುಕಳಿಸುವಂತಿರುವ ಹಳೆಯ ಕಟ್ಟಡ, ಮನೆಗಳು ಇವೆಲ್ಲೆದರ ಸುಂದರ ದೃಶ್ಯವನ್ನು ಸವಿಯುವುದೇ ಕಣ್ಣಿಗೊಂದು ಹಬ್ಬ.
ಹಳ್ಳಿ ನಡಿಗೆ: ನಗರ ಜೀವನದ ಟ್ರಾಫಿಕ್, ಕೆಲಸದ ಜಂಜಾಟದಿಂದ ಬೇಸತ್ತು ಹೋಗಿದ್ದರೆ, ಮನಸ್ಸನ್ನು ಶಾಂತಗೊಳಿಸಲು ನೀವು ಮತ್ತೂರು ಹಳ್ಳಿಗೆ ಬರಲೇಬೇಕು. ಇಲ್ಲಿ ನೀವು ಅಗ್ರಹಾರದ ಮನೆಗಳು, ಹೊಲ ಗದ್ದೆ, ಅಡಿಕೆ ತೆಂಗು ತೋಟಗಳನ್ನು ಸುತ್ತುತ್ತಾ, ಪ್ರಕೃತಿಯ ಜೊತೆ ಅದ್ಭುತ ಕ್ಷಣವನ್ನು ಕಳೆಯಬಹುದು.
ದೇವಾಲಯಗಳು: ಈ ಸಣ್ಣ ಹಳ್ಳಿಯಲ್ಲಿ ಏಳು ದೇವಾಲಯಗಳಿವೆ. ಈ ಊರಿಗೆ ಬಂದಾಗ ಇಲ್ಲಿರುವ ಲಕ್ಷ್ಮಿ ನಾರಾಯಣ, ಆಂಜನೇಯ, ಸೋಮೇಶ್ವರ ದೇವಾಲಯಗಳಿಗೆ ಭೇಟಿ ನೀಡಲು ಮರೆಯದಿರಿ.
ವೇದಶಾಲೆ ಮತ್ತು ಗುರುಕುಲ: ಈ ಊರಿಗೆ ಬಂದರೆ ನೀವು ಇಲ್ಲಿನ ಗುರುಕುಲಕ್ಕೆ ಭೇಟಿ ನೀಡಲೇಬೇಕು. ಇಲ್ಲಿ ನೀವು ಪ್ರಾಚೀನ ಕಾಲದ ಶಿಕ್ಷಣ ವ್ಯವಸ್ಥೆ ಹೇಗಿತ್ತು ಎಂಬುದನ್ನು ನೋಡಬಹುದು. ಇಲ್ಲಿ ಶಾಸ್ತ್ರಗಳು, ಸಂಸ್ಕೃತ ಗ್ರಂಥಗಳನ್ನು ಕಲಿಸಲಾಗುತ್ತದೆ. ಸಂಸ್ಕೃತ ಸಂಶೋಧನಾ ಕೇಂದ್ರ ಸಹ ಈ ಹಳ್ಳಿಯಲ್ಲಿದ್ದು, ಇಲ್ಲಿ ಸಂಸ್ಕೃತ ಅಧ್ಯಯನ ನಡೆಸಲು ಸಾಕಷ್ಟು ವಿದ್ಯಾರ್ಥಿಗಳು ಬರುತ್ತಾರೆ. ಇತಿಹಾಸ ಪ್ರಿಯರು ಇಲ್ಲಿಗೆ ಬರಲೇಬೇಕು ನೋಡಿ.
ತುಂಗಾ ನದಿ ದಂಡೆ: ಇಲ್ಲಿಗೆ ಬಂದಾಗ ತುಂಗಾ ನದಿ ದಂಡೆಯಲ್ಲಿ ಕಾಲ ಕಳೆಯಲು ಮರೆಯದಿರಿ. ಇಲ್ಲಿ ನೀವು ಅಗ್ನಿಹೋತ್ರಗಳು, ಹವನಗಳಂತಹ ಧಾರ್ಮಿಕ ಚಟುವಟಿಕೆಗಳು ನಡೆಯುತ್ತವೆ. ಅವುಗಳನ್ನು ವೀಕ್ಷಿಸಬಹುದು. ಅಷ್ಟೇ ಅಲ್ಲದೆ ತುಂಗಾನದಿಯಲ್ಲಿ ದೋಣಿ ವಿಹಾರ ಮಾಡುತ್ತಾಪ್ರಕೃತಿ ಸೌಂದರ್ಯವನ್ನು ಸವಿಯಬಹುದು.
ಮತ್ತೂರು ಶಿವಮೊಗ್ಗ ಪಟ್ಟಣದಿಂದ ಸುಮಾರು 7 ಕಿ.ಮೀ ದೂರದಲ್ಲಿದೆ. ಶಿವಮೊಗ್ಗಕ್ಕೆ ಬಂದರೆ ಮತ್ತೂರಿಗೆ ಸುಲಭವಾಗಿ ತಲುಪಬಹುದು. ಮತ್ತೂರಿನಲ್ಲಿ ಸಮಯವನ್ನು ಕಳೆಯವು ಮೂಲಕ ಸಾಂಪ್ರದಾಯಿಕ ಭಾರತೀಯ ಸಂಸ್ಕೃತಿಯ ಅಪರೂಪದ ನೋಟ, ಸಂಸ್ಕೃತ ಕಲಿಯುವ ಅವಕಾಶ ಹಾಗೂ ವೈದಿಕ ಜೀವನ ಶೈಲಿಯ ಸುಂದರ ಅನುಭವವನ್ನು ಪಡೆಯಬಹುದು.
ಇದನ್ನೂ ಓದಿ: ಪ್ರಕೃತಿ ಪ್ರೇಮಿಗಳನ್ನು ಕೈ ಬೀಸಿ ಕರೆಯುತ್ತಿದೆ ಸ್ವರ್ಗದಂತಿರುವ “ರಾಣಿ ಝರಿ”
ಮತ್ತೂರು ಮಾತ್ರವಲ್ಲದೆ ಶಿವಮೊಗ್ಗದಲ್ಲಿ ಇನ್ನೂ ಬಹಳಷ್ಟು ನೀವು ನೋಡಬೇಕಾಗಿರುವ ತಾಣಗಳಿವೆ. ಜೋಗ ಜಲಪಾತ, ಸಕ್ರೆಬೈಲು ಆನೆ ಶಿಬಿರ, ಕೊಡಚಾದ್ರಿ, ಕುಂದಾದ್ರಿ, ಹೊನ್ನೆಮರಡು, ಕೆಳದಿ, ದಬ್ಬೆ ಜಲಪಾತ, ಆಗುಂಬೆ, ಗುಡವಿ ಪಕ್ಷಿಧಾಮ, ಇಕ್ಕೇರಿ, ಮಂಡಗದ್ದೆ ಪಕ್ಷಿಧಾಮ, ಭದ್ರಾ ಅಣೆಕಟ್ಟು, ಬರ್ಕಾನ ಜಲಪಾತ ಸೇರಿದಂತೆ ಒಂದಷ್ಟು ಅದ್ಭುತ ತಾಣಗಳನ್ನು ಇಲ್ಲಿ ನೀವು ಎಕ್ಸ್‌ಪ್ಲೋರ್ ಮಾಡಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ