ನೀವು ದಿನವೂ ಬಳಸುವ ಈ ವಸ್ತುಗಳು ಟಾಯ್ಲೆಟ್ಗಿಂತಲೂ ಕೊಳಕಾಗಿರಬಹುದು, ಎಚ್ಚರ!
ನಾವು ನಮ್ಮ ಸುತ್ತಮುತ್ತಲಿನ ಪರಸರವನ್ನು ಎಷ್ಟು ಸ್ವಚ್ಛವಾಗಿಟ್ಟುಕೊಳ್ಳುತ್ತೇವೋ ಅಷ್ಟೇ ಆರೋಗ್ಯಯುತವಾಗಿರುತ್ತೇವೆ. ಕೆಲವೊಮ್ಮೆ ನಾವು ಕೆಲವು ವಿಷಯಗಳ ಬಗ್ಗೆ ಗಮನ ಕೊಡುವುದೇ ಇಲ್ಲ. ಆದರೆ, ನಾವು ಬಳಸುವ ಕೆಲವು ದಿನನಿತ್ಯದ ವಸ್ತುಗಳು ಟಾಯ್ಲೆಟ್ಗಿಂತಲೂ ಗಲೀಜಾಗಿರುತ್ತವೆ ಎಂಬುದು ನಿಮಗೆ ಗೊತ್ತಾ? ನಮಗೆ ತಿಳಿಯದೆ ಆ ಕೊಳಕಾದ ವಸ್ತುಗಳನ್ನೇ ನಾವು ಬಳಸುತ್ತಿರುತ್ತೇವೆ.
ಕೆಲವು ಜನರು ತಾವು ಬಳಸುವ ವಸ್ತುಗಳು ಎಷ್ಟೇ ಕೊಳಕಾಗಿದ್ದರೂ ಅದನ್ನೇ ಬಳಸುತ್ತಾರೆ. ಇನ್ನು ಕೆಲವರಿಗೆ ತಮ್ಮ ಸುತ್ತಮುತ್ತ ಎಷ್ಟೇ ಸ್ವಚ್ಛವಾಗಿಟ್ಟುಕೊಂಡರೂ ತೃಪ್ತಿಯಾಗುವುದಿಲ್ಲ. ಅತಿಯಾದ ನೈರ್ಮಲ್ಯದ ಬಗ್ಗೆ ಹುಚ್ಚು ಹತ್ತಿಸಿಕೊಂಡಿರುತ್ತಾರೆ. ಆದರೆ, ನಮಗೇ ತಿಳಿಯದಂತೆ ನಾವು ದಿನವೂ ಬಳಸುವ ಕೆಲವು ವಸ್ತುಗಳು ಟಾಯ್ಲೆಟ್ಗಿಂತಲೂ ಕೊಳಕಾಗಿರುತ್ತದೆ. ಈ ವಸ್ತುಗಳು ಅನೇಕ ಬ್ಯಾಕ್ಟೀರಿಯಾ, ಫಂಗಸ್, ವೈರಾಣುಗಳನ್ನು ಒಳಗೊಂಡಿರುತ್ತದೆ. ಅಂತಹ ಕೆಲವು ಸಾಮಾನ್ಯ ವಸ್ತುಗಳ ಬಗ್ಗೆ ನೀವು ತಿಳಿಯಲೇಬೇಕು.
ಪ್ರತಿದಿನವೂ ನಾವು ನಮ್ಮ ಕೆಲಸಗಳನ್ನು ಮಾಡಲು ಹಲವಾರು ವಸ್ತುಗಳನ್ನು ಬಳಸುತ್ತೇವೆ. ಆದರೆ ಅದರ ನೈರ್ಮಲ್ಯದ ಬಗ್ಗೆ ನಾವು ಎಂದಿಗೂ ಯೋಚಿಸುವುದೇ ಇಲ್ಲ. ಅಂತಹ ಕೆಲವು ವಸ್ತುಗಳ ಮಾಹಿತಿ ಇಲ್ಲಿದೆ.
ಕಿಚನ್ನಲ್ಲಿ ಬಳಸಲಾಗುವ ಸ್ಪಾಂಜ್:
ಅಡುಗೆ ಮನೆಯಲ್ಲಿ ಬಳಸಲಾಗುವ ಸ್ಪಂಜುಗಳು ಕ್ಲೀನ್ ಆಗಿವೆ ಎಂದು ನಾವು ಭಾವಿಸುತ್ತೇವೆ. ಆದರೆ, ಅವು ನೀರನ್ನು ಮತ್ತು ಸೋಪನ್ನು ಹೀರಿಕೊಳ್ಳುವ ಗುಣವನ್ನು ಹೊಂದಿರುವುದರಿಂದ ಅವುಗಳಲ್ಲಿ ಬ್ಯಾಕ್ಟೀರಿಯಾ ಬಹಳ ಬೇಗ ಸೇರಿಕೊಳ್ಳುತ್ತವೆ. ಹೀಗಾಗಿ, ಅವುಗಳನ್ನು ನಿಯಮಿತವಾಗಿ ಬದಲಿಸದಿದ್ದರೆ ಅಥವಾ ಶುಚಿಗೊಳಿಸದಿದ್ದರೆ ಅದರಿಂದ ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಸೂಕ್ಷ್ಮಜೀವಿಯ ಬೆಳವಣಿಗೆಯು ತೇವವಾದ ವಾತಾವರಣದಲ್ಲಿ ವೇಗವಾಗಿ ಹೆಚ್ಚುತ್ತದೆ. ಇದು ನಿಮ್ಮ ಶೌಚಾಲಯಕ್ಕಿಂತ ಕೊಳಕಾಗಿರುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: Skin Care: ತ್ವಚೆಯನ್ನು ಸ್ವಚ್ಛಗೊಳಿಸುವುದು ಹೇಗೆ?; ಈ 7 ತಪ್ಪುಗಳನ್ನೆಂದೂ ಮಾಡಬೇಡಿ
ಮೊಬೈಲ್ ಫೋನ್:
ಮೊಬೈಲ್ ಫೋನ್ ಅನ್ನು ಬಳಸದವರೇ ಇಲ್ಲ. ಇಡೀ ದಿನ ನಿರಂತರವಾಗಿ ಮೊಬೈಲನ್ನು ಬಳಸಲಾಗುತ್ತದೆ. ಅದನ್ನು ನಾವು ಸ್ವಚ್ಛಗೊಳಿಸುವುದು ಬಹಳ ಕಡಿಮೆ. ಮೊಬೈಲ್ ಫೋನ್‌ಗಳಲ್ಲಿ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ಒಳಗೊಂಡಂತೆ ಸೂಕ್ಷ್ಮಜೀವಿಗಳು ಸಂಗ್ರಹವಾಗಬಹುದು. ನಾವು ಕೈಗಳಿಂದ ಮೊಬೈಲನ್ನು ಮುಟ್ಟಿ ಅದೇ ಕೈಯಿಂದ ಏನನ್ನಾದರೂ ತಿನ್ನುವುದರಿಂದ ಆ ಬ್ಯಾಕ್ಟೀರಿಯಾಗಳು ನಮ್ಮ ದೇಹ ಸೇರಿಕೊಳ್ಳಬಹುದು. ಹೀಗಾಗಿ, ಮೊಬೈಲನ್ನು ಕೂಡ ಆಗಾಗ ಸ್ವಚ್ಛಗೊಳಿಸಬೇಕು. ಮೊಬೈಲ್ ಮುಟ್ಟಿದ ನಂತರ ಕೈ ತೊಳೆದೇ ನಾವು ಆಹಾರ ಸೇವಿಸಬೇಕು.
ಕಂಪ್ಯೂಟರ್ ಕೀಬೋರ್ಡ್:
ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ನ ಕೀಬೋರ್ಡ್‌ಗಳು ನೋಡಲು ಸ್ವಚ್ಛವಾಗಿದ್ದಂತೆ ಕಾಣುತ್ತದೆ. ಆದರೆ, ಅವುಗಳ ಹಲವಾರು ಮೂಲೆಗಳು, ಬಟನ್ನ ಕೆಳಗೆ ಸಾಕಷ್ಟು ಧೂಳು ಸಂಗ್ರಹವಾಗಿರುತ್ತದೆ. ಇದು ಬ್ಯಾಕ್ಟೀರಿಯಾದ ಸಂತಾನೋತ್ಪತ್ತಿಯ ಸ್ಥಳವಾಗಿರುತ್ತದೆ. ಕೊಳಕು ಮತ್ತು ಸೂಕ್ಷ್ಮಾಣುಗಳ ಶೇಖರಣೆಯನ್ನು ತಡೆಗಟ್ಟಲು ಕೀ ಬೋರ್ಡ್ ಅನ್ನು ನಿಯಮಿತ ಶುಚಿಗೊಳಿಸುವುದು ಅತ್ಯಗತ್ಯ.
ಹ್ಯಾಂಡ್ಬ್ಯಾಗ್:
ಹ್ಯಾಂಡ್ ಬ್ಯಾಗ್ಗಳನ್ನು ನಾವು ಹಿಡಿದುಕೊಂಡೇ ಇರುತ್ತೇವೆ. ಇದರಿಂದ ನಮ್ಮ ಬೆವರು ಅದಕ್ಕೆ ಅಂಟಬಹುದು. ಹಾಗೇ, ಅದರ ಮೇಲೆ ಧೂಳು ಕೂಡ ಸಂಗ್ರಹವಾಗಬಹುದು. ಇದು ಕೊಳಕು ಮತ್ತು ಸೂಕ್ಷ್ಮಜೀವಿಗಳನ್ನು ಸಂಗ್ರಹಿಸುತ್ತವೆ. ಬ್ಯಾಕ್ಟೀರಿಯಾದ ವರ್ಗಾವಣೆಯನ್ನು ತಡೆಗಟ್ಟಲು ಹ್ಯಾಂಡ್ ಬ್ಯಾಗ್ಗಳನ್ನು ನಿಯಮಿತವಾಗಿ ಶುಚಿಗೊಳಿಸುವುದು ಮುಖ್ಯ. ಇಲ್ಲವಾದರೆ ಇದು ಇದು ನಿಮ್ಮ ಟಾಯ್ಲೆಟ್ ಸೀಟಿಗಿಂತ ಕೊಳಕಾಗಿರುತ್ತದೆ.
ಟೂತ್ ಬ್ರಷ್ ಹೋಲ್ಡರ್:
ಟೂತ್ ಬ್ರಷ್ ಬಳಸುವವರು ಟೂತ್ ಬ್ರಷ್ ಅನ್ನು ಹಾಕಿಡಲು ಬಾತ್ರೂಂನಲ್ಲಿ ಹೋಲ್ಡರ್ಗಳನ್ನು ಇಟ್ಟಿರುತ್ತಾರೆ. ತೇವಾಂಶದ ವಾತಾವರಣದ ಕಾರಣದಿಂದಾಗಿ ಅದರಲ್ಲಿ ಬ್ಯಾಕ್ಟೀರಿಯಾ ಬೇಗ ಬೆಳೆಯುತ್ತದೆ. ಉತ್ತಮ ಮೌಖಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಮತ್ತು ಮಾಲಿನ್ಯವನ್ನು ತಡೆಗಟ್ಟಲು ಅದರ ನಿಯಮಿತ ಶುಚಿಗೊಳಿಸುವಿಕೆ ಅತ್ಯಗತ್ಯ.
ಟಿವಿ ರಿಮೋಟ್:
ನಾವು ಟಿವಿ ರಿಮೋಟ್ ಬಳಸುವಾಗ ಅದು ಸ್ವಚ್ಛವಾಗಿದೆಯೇ ಎಂಬುದನ್ನು ನೋಡುವುದಿಲ್ಲ. ರಿಮೋಟ್ ಕಂಟ್ರೋಲ್‌ಗಳು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ಹೊಂದಿರಬಹುದು. ಅವುಗಳ ಬಟನ್ ಮತ್ತು ಅದರ ಸುತ್ತಲಿನ ಜಾಗವನ್ನು ಕ್ಲೀನ್ ಮಾಡುವುದು ಸುಲಭವಲ್ಲ. ಇದು ಶೌಚಾಲಯಕ್ಕಿಂತ ಕೊಳಕಾಗಿರುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: ಟಾಯ್ಲೆಟ್ನಲ್ಲಿ ತುಂಬ ಹೊತ್ತು ಕುಳಿತುಕೊಳ್ಳುತ್ತೀರಾ?
ಕಿಚನ್ ಸಿಂಕ್:
ಅಡುಗೆಮನೆಯನ್ನು ನಾವು ಎಷ್ಟೇ ಕ್ಲೀನ್ ಆಗಿಟ್ಟುಕೊಂಡಿದ್ದೇವೆ ಎಂದು ನಾವಂದುಕೊಂಡಿದ್ದರೂ ಅದರಲ್ಲಿ ಬ್ಯಾಕ್ಟೀರಿಯಾಗಳು, ಫಂಗಸ್ಗಳು ನಮಗೆ ಅರಿವಿಲ್ಲದಂತೆ ಸ್ಥಾನ ಪಡೆದಿರುತ್ತವೆ. ಅಡುಗೆ ಮನೆಯ ಸಿಂಕ್ನಲ್ಲಿ ಆಹಾರದ ಕಣಗಳು ಮತ್ತು ನೀರಿನಂಶ ಇರುವುದರಿಂದ ಅದರಲ್ಲಿ ಬ್ಯಾಕ್ಟೀರಿಯಾಗಳು ಇರಬಹುದು. ಹೀಗಾಗಿ, ಅದನ್ನು ನಿಯಮಿತವಾಗಿ ಕ್ಲೀನ್ ಮಾಡುತ್ತಿರಿ.
ಕತ್ತರಿಸುವ ಬೋರ್ಡ್‌ಗಳು:
ತರಕಾರಿಗಳನ್ನು ಕಟ್ ಮಾಡುವ ಕಟಿಂಗ್ ಬೋರ್ಡ್‌ಗಳು ಅದರಲ್ಲೂ ವಿಶೇಷವಾಗಿ ನೀವು ಮಾಂಸಾಹಾರಿಗಳಾಗಿದ್ದರೆ ಹಸಿ ಮಾಂಸ ಕಟ್ ಮಾಡುವ ಬೋರ್ಡ್ಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಹಾನಿಕಾರಕ ಬ್ಯಾಕ್ಟೀರಿಯಾಗಳು ಆವರಿಸಬಹುದು. ಇದನ್ನು ಹಾಗೆಯೇ ಬಳಸುವುದರಿಂದ ಆರೋಗ್ಯಕ್ಕೆ ಹಲವು ರೀತಿಯ ತೊಂದರೆಗಳು ಉಂಟಾಗುತ್ತವೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ