ಪ್ರೆಶರ್ ಕುಕ್ಕರ್ ಸ್ಫೋಟಗೊಳ್ಳುವ ಮೊದಲು ಈ ಸಂಕೇತಗಳು ಕಾಣಿಸಿಕೊಳ್ಳುತ್ತವೆ; ಈ ಬಗ್ಗೆ ಇರಲಿ ಎಚ್ಚರ
ಈಗಂತೂ ಹೆಚ್ಚಿನವರು ಪ್ರೆಶರ್ ಕುಕ್ಕರ್‌ನಲ್ಲಿಯೇ ಪ್ರತಿಯೊಂದು ಅಡುಗೆಯನ್ನು ಮಾಡುತ್ತಾರೆ. ಹೀಗೆ ಅಡುಗೆ ಮಾಡುವಾಗ ಕುಕ್ಕರ್ ಸ್ಫೋಟಗೊಂಡಂತಹ ಒಂದಷ್ಟು ಘಟನೆಗಳ ಸುದ್ದಿಗಳು ಆಗೊಮ್ಮೆ ಈಗೊಮ್ಮೆ ಕೇಳಿ ಬರುತ್ತಲೇ ಇರುತ್ತವೆ. ಹೀಗಿರುವಾಗ ಕುಕ್ಕರ್ ಸ್ಫೋಟಗೊಳ್ಳದಂತೆ ಯಾವ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ಮುಖ್ಯವಾಗಿ ಕುಕ್ಕರ್ ಸ್ಫೋಟಗೊಳ್ಳುವ ಮೊದಲು ಯಾವೆಲ್ಲಾ ಸೂಚನೆಗಳು ಕಾಣಿಸಿಕೊಳ್ಳುತ್ತವೆ ಎಂಬುದರ ಮಾಹಿತಿಯನ್ನು ತಪ್ಪದೆ ತಿಳಿದುಕೊಳ್ಳಿ.

ಅನ್ನ ಬೇಯಿಸುವುದರಿಂದ ಹಿಡಿದು ಸಾಂಬಾರ್ ಮಾಡುವವರೆಗೆ ಹೆಚ್ಚಿನ ಅಡುಗೆಗಳನ್ನು ಪ್ರೆಶರ್ ಕುಕ್ಕರ್‌ನಲ್ಲಿಯೇ (pressure cooker) ಮಾಡಲಾಗುತ್ತದೆ. ಹೀಗೆ ಅಡುಗೆಗೆ ಕುಕ್ಕರ್ ಬಳಸುವುದರಿಂದ ಅಡುಗೆ ಬೇಗ ತಯಾರಾಗುವುದು ಮಾತ್ರವಲ್ಲದೆ ನಮ್ಮ ಸಮಯ ಮತ್ತು ಗ್ಯಾಸ್ ಕೂಡ ಉಳಿತಾಯವಾಗುತ್ತದೆ. ಈ ಕುಕ್ಕರ್‌ನಿಂದ ಎಷ್ಟು ಉಪಯೋಗವಿದೆಯೋ ಅದೇ ರೀತಿ ಅದನ್ನು ಸರಿಯಾದ ರೀತಿ ಬಳಸದಿದ್ದರೇ, ಅಪಾಯವೂ ಕೂಡ ಎದುರಾಗುತ್ತದೆ. ಹೌದು ಕೆಲವೊಂದು ಬಾರಿ ಅಡುಗೆ ಮಾಡುವ ವೇಳೆ ಇದ್ದಕ್ಕಿದ್ದಂತೆ ಕುಕ್ಕರ್ ಸ್ಫೋಟಗೊಳ್ಳುತ್ತದೆ. ಜೊತೆಗೆ ಕುಕ್ಕರ್ ಸ್ಫೋಟಗೊಳ್ಳುವ ಮೊದಲು ಕೆಲವು ಸೂಚನೆಗಳನ್ನು ನೀಡುತ್ತದೆ. ಈ ಸೂಚನೆಗಳನ್ನು ಅರಿತು ಸಮಯಕ್ಕೆ ಸರಿಯಾಗಿ ಅಗತ್ಯ ಕ್ರಮಗಳನ್ನು ಕೈಗೊಂಡಾಗ ಪ್ರೆಶರ್ ಕುಕ್ಕರ್ ಸ್ಫೋಟಗೊಳ್ಳುವುದನ್ನು ತಡೆಯಬಹುದು. ಹಾಗಾದ್ರೆ ಆ ಸೂಚನೆಗಳು ಯಾವುವು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.
ಪ್ರೆಶರ್ ಕುಕ್ಕರ್ ಸ್ಫೋಟಗೊಳ್ಳುವ ಮೊದಲು ಕಾಣಿಸಿಕೊಳ್ಳುವ ಸಂಕೇತಗಳಿವು:
ವಿಚಿತ್ರ ಶಬ್ದ ಅಥವಾ ಸುಡುವ ವಾಸನೆ: ಕುಕ್ಕರ್ ಸ್ಫೋಟಗೊಳ್ಳುವ ಮೊದಲು ವಿಚಿತ್ರ ಶಬ್ದ ಅಥವಾ ಸುಡುವ, ತಳ ಹಿಡಿದ ವಾಸನೆ ಬರಬಹುದು. ಇದು ಎಚ್ಚರಿಕೆಯ ಸಂಕೇತವಾಗಿದೆ. ಈ ಲಕ್ಷಣಗಳು ಕಾಣಿಸಿದರೆ ತಕ್ಷಣ ಗ್ಯಾಸ್ ಆಫ್ ಮಾಡಿ.
ಅತಿಯಾದ ಶಿಳ್ಳೆ : ನೀವು ಕುಕ್ಕರ್‌ನಲ್ಲಿ ಅಡುಗೆ ಮಾಡಲು ಪ್ರಾರಂಭಿಸಿದಾಗ ಅದು ತುಂಬಾ ಜೋರಾಗಿ ಮತ್ತು ನಿರಂತರವಾಗಿ ವಿಶಿಲ್ ಹೊಡೆಯುವಾಗಲೆಲ್ಲಾ, ಗ್ಯಾಸ್ ಅನ್ನು ಆಫ್ ಮಾಡಿ. ಕುಕ್ಕರ್‌ನೊಳಗಿನ ಒತ್ತಡವು ತುಂಬಾ ಹೆಚ್ಚಾದಾಗ ಈ ರೀತಿ ವಿಶಿಲ್ ಕೇಳಿಸುತ್ತದೆ ಮತ್ತು ಈ ಒತ್ತಡದ ಕಾರಣದಿಂದ ಗ್ಯಾಸ್ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ.
ಕುಕ್ಕರ್ ಮುಚ್ಚಳ ಅಲುಗಾಡುವುದು: ಪ್ರೆಶರ್ ಕುಕ್ಕರ್‌ನ ಮುಚ್ಚಳವು ಪದೇ ಪದೇ ಅಥವಾ ನಿರಂತರವಾಗಿ ಅಲುಗಾಡುತ್ತಿದ್ದರೆ, ಅದು ಅಪಾಯದ ಸೂಚನೆಯೂ ಆಗಿರಬಹುದು. ಈ ರೀತಿಯ ಸೂಚನೆ ಕಾಣಿಸಿಕೊಂಡರೆ ತಕ್ಷಣ ಗ್ಯಾಸ್ ಆಫ್ ಮಾಡಿ, ಒತ್ತಡವನ್ನು ಬಿಡುಗಡೆ ಮಾಡಿ, ತದನಂತರ ಕುಕ್ಕರ್ ತೆರೆದು ಪರಿಶೀಲಿಸಿ.
ರಬ್ಬರ್ ಗ್ಯಾಸ್ಕೆಟ್ ಹೊರಬರುವುದು: ಪ್ರೆಶರ್ ಕುಕ್ಕರ್ ಮೇಲಿನ ರಬ್ಬರ್ ರಿಂಗ್ ಮೇಲೇರಲು ಪ್ರಾರಂಭಿಸಿದರೆ ಅಥವಾ ಕರಗಿದಂತೆ ಕಂಡುಬಂದರೆ, ತಕ್ಷಣ ಗ್ಯಾಸ್ ಆಫ್ ಮಾಡಿ. ಈ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ, ಕುಕ್ಕರ್ ಸ್ಫೋಟಗೊಳ್ಳುವುದರಿಂದ ಅಡುಗೆಮನೆಯಲ್ಲಿ ಸಂಭವಿಸುವ ಅಪಘಾತಗಳನ್ನು ನೀವು ತಡೆಯಬಹುದು.
ಪ್ರೆಶರ್ ಕುಕ್ಕರ್ ಸ್ಫೋಟಗೊಳ್ಳದಂತೆ ತಡೆಯುವುದು ಹೇಗೆ?
ವೆಂಟ್ ಪೈಪ್ ಮುಚ್ಚಿಹೋಗಲು ಬಿಡಬೇಡಿ: ಕೆಲವೊಮ್ಮೆ, ಕುಕ್ಕರ್‌ನಲ್ಲಿ ಅಡುಗೆ ಮಾಡಿದ ನಂತರ ಸರಿಯಾಗಿ ಸ್ವಚ್ಛಗೊಳಿಸದ ಕಾರಣ, ವೆಂಟ್ ಪೈಪ್ ಮುಚ್ಚಿಹೋಗುತ್ತದೆ. ಇದರಿಂದಾಗಿ, ಕುಕ್ಕರ್ ಒಳಗಿನ ಉಗಿ ಹೊರಬರಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ, ಕುಕ್ಕರ್ ಮೇಲಿನ ಒತ್ತಡ ಹೆಚ್ಚಾಗುತ್ತದೆ ಮತ್ತು ಅದು ಸ್ಫೋಟಗೊಳ್ಳಬಹುದು. ಆದ್ದರಿಂದ ಯಾವಾಗಲೂ ಇದರ ಬಗ್ಗೆ ಗಮನ ಕೊಡಿ.
ರಬ್ಬರ್ ಬದಲಾಯಿಸುತ್ತಿರಿ: ಕುಕ್ಕರ್‌ನ ಮುಚ್ಚಳವು ರಬ್ಬರ್ ಸೀಲ್ ಅನ್ನು ಹೊಂದಿದ್ದು, ಇದು ಉಗಿ ಮತ್ತು ನೀರು ಹೊರಹೋಗುವುದನ್ನು ತಡೆಯುತ್ತದೆ. ಜೊತೆಗೆ ಇದು ಶಿಳ್ಳೆ ಸಂಪೂರ್ಣ ಮತ್ತು ಸಮಯಕ್ಕೆ ಸರಿಯಾಗಿ ಬರುವಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ. ಅಡುಗೆ ಮಾಡುವಾಗ ರಬ್ಬರ್ ಸವೆದು ಹೋಗುವ, ಹರಿದು ಹೋಗುವ ಕಾರಣ ಇದನ್ನು ನೀವು ಮೂರು ತಿಂಗಳಿಗೊಮ್ಮೆ ಬದಲಾಯಿಸುತ್ತಿರಬೇಕು.
ಇದನ್ನೂ ಓದಿ: ಈ ಆಹಾರ ಪದಾರ್ಥಗಳನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸುವ ತಪ್ಪನ್ನು ಎಂದಿಗೂ ಮಾಡಬೇಡಿ
ಕುಕ್ಕರ್ ಹೆಚ್ಚಿನ ಪ್ರಯಾಣದ ಆಹಾರ ತುಂಬಿಸಿ ಬೇಯಿಸಬೇಡಿ: ಕುಕ್ಕರ್ ಸಂಪೂರ್ಣ ತುಂಬುವವರೆಗೆ ಅದರಲ್ಲಿ ತರಕಾರಿ, ಆಹಾರ ಹಾಕಿ ಬೇಯಿಸಬಾರದು. ಹೀಗೆ ಸಂಪೂರ್ಣವಾಗಿ ತುಂಬಿಸುವುದರಿಂದ ಒಳಗೆ ಉತ್ಪತ್ತಿಯಾಗುವ ಉಗಿ ಹೋಗಲು ಯಾವುದೇ ಮಾರ್ಗವಿರುವುದಿಲ್ಲ. ಇದು ಒತ್ತಡದ ಮಟ್ಟವು ವೇಗವಾಗಿ ಏರಲು ಕಾರಣವಾಗುತ್ತದೆ ಮತ್ತು ಇದರಿಂದ ಕುಕ್ಕರ್ ಸ್ಫೋಟಗೊಳ್ಳಬಹುದು. ಆದ್ದರಿಂದ, ಯಾವಾಗಲೂ ಕುಕ್ಕರನ್ನು ಅದರ ಸಾಮರ್ಥ್ಯದ 2/3 ರಷ್ಟು ಮಾತ್ರ ತುಂಬಿಸಿ. ಜೊತೆಗೆ ಸರಿಯಾದ ಪ್ರಮಾಣದಲ್ಲಿ ನೀರು ಸೇರಿಸುವುದು ಸಹ ಮುಖ್ಯವಾಗಿರುತ್ತದೆ.
ಉತ್ತಮ ಗುಣಮಟ್ಟದ ಕುಕ್ಕರ್‌ಗಳ ಬಳಕೆ: ಯಾವಾಗಲೂ ಐಎಸ್‌ಐ ಗುರುತು ಹೊಂದಿರುವ ಉತ್ತಮ ಗುಣಮಟ್ಟದ ಕುಕ್ಕರ್‌ಗಳನ್ನೇ ಬಳಸಿ. ಏಕೆಂದರೆ ಇವುಗಳಲ್ಲಿ ಬಳಸಲಾಗುವ ವಸ್ತುಗಳು ಮತ್ತು ಸುರಕ್ಷತಾ ಕವಾಟಗಳು ಬಲಿಷ್ಟವಾಗಿರುತ್ತವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




