ಚಹಾ ತಯಾರಿಸುವಾಗ, ಸೇವಿಸುವಾಗ ಮಾಡುವ ಈ ತಪ್ಪುಗಳು ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು

ಚಹಾ ಜನಪ್ರಿಯ ಪಾನೀಯವಾಗಿದ್ದು, ಬಹುತೇಕ ಎಲ್ಲರೂ ಟೀ ಕುಡಿಯಲು ಇಷ್ಟಪಡುತ್ತಾರೆ. ಅದರಲ್ಲೂ ಭಾರತೀಯರಿಗೆ ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್‌ ಟೀ ಬೇಕೇಬೇಕು. ಟೀ ನಮಗೆ ಎನರ್ಜಿ ನೀಡುವುದೇನೋ ನಿಜ. ಆದರೆ ಟೀ ಕುಡಿಯುವ ಮತ್ತು ತಯಾರಿಸುವ ಸಂದರ್ಭದಲ್ಲಿ ಮಾಡುವ ಈ ಕೆಲವೊಂದಿಷ್ಟು ತಪ್ಪುಗಳನ್ನು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ. ಚಹಾಗೆ ಸಂಬಂಧಿಸಿದ ಯಾವ ತಪ್ಪುಗಳು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತವೆ ಎಂಬುದನ್ನು ನೋಡೋಣ ಬನ್ನಿ.

ಚಹಾ ತಯಾರಿಸುವಾಗ, ಸೇವಿಸುವಾಗ ಮಾಡುವ ಈ ತಪ್ಪುಗಳು ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು
ಸಾಂದರ್ಭಿಕ ಚಿತ್ರ
Image Credit source: Getty Images

Updated on: Jul 08, 2026 | 6:12 PM

ಮುಖ್ಯಾಂಶಗಳು

  • ಚಹಾ ತಯಾರಿಸುವಾಗ ಮತ್ತು ಸೇವಿಸುವಾಗ ತಿಳಿಯದೆ ಈ ಕೆಲವೊಂದು ತಪ್ಪುಗಳನ್ನು ಮಾಡುತ್ತೇವೆ
  • ಚಹಾಗೆ ಸಂಬಂಧಿಸಿದ ಈ ತಪ್ಪುಗಳು ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರುತ್ತವೆ
  • ವಿಶೇಷವಾಗಿ ಗ್ಯಾಸ್‌ ಆಮ್ಲೀಯಂತೆಯಂತಹ ಸಮಸ್ಯೆಗಳು ಉಂಟಾಗುತ್ತವೆ

ಚಹಾ (tea) ಬಹುತೇಕ ಎಲ್ಲರ ಅಚ್ಚುಮೆಚ್ಚಿನ ಪಾನೀಯವಾಗಿದೆ. ಹೆಚ್ಚಿನವರ ಮನೆಯಲ್ಲಿ ಚಹಾ ಇಲ್ಲದೆ ದಿನ ಪ್ರಾರಂಭವಾಗೋದೇ ಇಲ್ಲ. ಈ ಒಂದು ಪಾನೀಯ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಒಂದು ಕಪ್‌ ಟೀ ಕುಡಿಯೋದರಿಂದ ದೇಹ ಮತ್ತು ಮನಸ್ಸಿಗೆ ಅದೇನೋ ಎನರ್ಜಿ ಬಂದಂತಾಗುತ್ತದೆ. ಹೀಗೆ ಚಹಾಗೆ ಮನಸ್ಸನ್ನು ರಿಫ್ರೆಶ್‌ ಮಾಡುವ ಶಕ್ತಿಯಿದೆ. ಅದೇ ಚಹಾ ತಯಾರಿಸುವಾಗ ಮತ್ತು ಚಹಾ ಸೇವನೆ ಮಾಡುವಾಗ ಮಾಡುವ ಒಂದಷ್ಟು ತಪ್ಪುಗಳು ಆರೋಗ್ಯ ಸಮಸ್ಯೆಗಳನ್ನು ಸಹ ತಂದೊಡ್ಡುತ್ತವೆ. ಹೌದು ಚಹಾಗೆ ಸಂಬಂಧಿಸಿದ ಈ ಕೆಲವೊಂದಿಷ್ಟು ತಪ್ಪುಗಳು ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರುತ್ತವೆ. ಹಾಗಾಗಿ ಇನ್ನು ಮುಂದೆ ಆ ತಪ್ಪುಗಳಾಗದಂತೆ ನೋಡಿಕೊಳ್ಳಿ.

ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರುವ ಚಹಾಗೆ ಸಂಬಂಧಿಸಿದ ತಪ್ಪುಗಳು:

ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದು: ಅನೇಕ ಜನರು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬಿಸಿ ಚಹಾ ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಈ ಅಭ್ಯಾಸ ಒಳ್ಳೆಯದಲ್ಲ ಏಕೆಂದರೆ ನೀವು ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿದಾಗ, ಅದರಲ್ಲಿರುವ ಆಮ್ಲೀಯತೆಯು ಹೊಟ್ಟೆಯ ಒಳಪದರದ ಮೇಲೆ ಪರಿಣಾಮ ಬೀರುತ್ತದೆ. ಇದು ಎದೆಯುರಿ, ಅಜೀರ್ಣ ಮತ್ತು ಹಸಿವಿನ ಕೊರತೆಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ಬೆಳಿಗ್ಗೆ ಎದ್ದ ತಕ್ಷಣ ಒಂದು ಲೋಟ ನೀರು ಅಥವಾ ಜೀರಿಗೆ ಬೆರೆಸಿದ ಬಿಸಿನೀರನ್ನು ಕುಡಿಯುವುದು ಉತ್ತಮ. ಮತ್ತು ಉಪಹಾರ ಸೇವಿಸಿದ ಬಳಿಕವೇ ಚಹಾ ಸೇವನೆ ಮಾಡಬೇಕು.

ಚಹಾ ಪುಡಿಯನ್ನು ಹೆಚ್ಚು ಹೊತ್ತು ಕುದಿಸುವುದು: ಅನೇಕ ಜನರು ಚಹಾ ಪುಡಿಯನ್ನು ರುಚಿ ಹೆಚ್ಚಿಸಲು ನೀರಿನಲ್ಲಿ ದೀರ್ಘಕಾಲ ಕುದಿಸುತ್ತಾರೆ. ಆದರೆ ಚಹಾ ಪುಡಿಯನ್ನು ಹೆಚ್ಚು ಹೊತ್ತು ಕುದಿಸಿದಾಗ, ಅದರಲ್ಲಿರುವ ‘ಟ್ಯಾನಿನ್’ ಎಂಬ ರಾಸಾಯನಿಕವು ಅಧಿಕವಾಗಿ ಬಿಡುಗಡೆಯಾಗುತ್ತದೆ ಮತ್ತು ಇದರಿಂದ  ಚಹಾ ಕಹಿಯಾಗುತ್ತದೆ. ಇದು ಹೊಟ್ಟೆ ಉಬ್ಬರ ಮತ್ತು ಅಜೀರ್ಣಕ್ಕೆ ಕಾರಣವಾಗಬಹುದು.

ಪ್ಲಾಸ್ಟಿಕ್ ಸ್ಟ್ರೈನರ್‌ಗಳನ್ನು ಬಳಸುವುದು: ಜನರು ಹೆಚ್ಚಾಗಿ ಚಹಾವನ್ನು ಸೋಸಲು ಪ್ಲಾಸ್ಟಿಕ್ ಸ್ಟ್ರೈನರ್‌ಗಳನ್ನು ಬಳಸುತ್ತಾರೆ, ಈ ರೀತಿ ಪ್ಲಾಸ್ಟಿಕ್ ಸ್ಟ್ರೈನರ್ ಮೂಲಕ ಚಹಾವನ್ನು ಸೋಸುವುದರಿಂದ ಪ್ಲಾಸ್ಟಿಕ್ ಸಂಯುಕ್ತಗಳು ಚಹಾದೊಂದಿಗೆ ಸೇರಿ ದೇಹವನ್ನು ಪ್ರವೇಶಿಸಬಹುದು, ಇದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಪ್ಲಾಸ್ಟಿಕ್ ಸ್ಟ್ರೈನರ್‌ಗಳ ಬದಲಿಗೆ ಸ್ಟೀಲ್ ಸ್ಟ್ರೈನರ್‌ಗಳನ್ನು ಬಳಸಬೇಕು.

ಚಹಾವನ್ನು ಪದೇ ಪದೇ ಬಿಸಿ ಮಾಡುವುದು: ಚಹಾವನ್ನು ಪದೇ ಪದೇ ಬಿಸಿ ಮಾಡುವುದು ಒಂದು ದೊಡ್ಡ ತಪ್ಪು. ಪದೇ ಪದೇ ಬಿಸಿ ಮಾಡುವುದರಿಂದ ಚಹಾದ ಆಮ್ಲದ ಅಂಶ ಹೆಚ್ಚಾಗಬಹುದು, ಇದು ಹೊಟ್ಟೆಯ ಸಮಸ್ಯೆಗಳಿಗೆ, ವಿಶೇಷವಾಗಿ ಆಮ್ಲೀಯತೆಗೆ ಕಾರಣವಾಗಬಹುದು. ಆದ್ದರಿಂದ, ಚಹಾವನ್ನು ಪದೇ ಪದೇ ಬಿಸಿ ಮಾಡಿ ಕುಡಿಯಬೇಡಿ.

ಇದನ್ನೂ ಓದಿ: ಬೆಳಿಗ್ಗೆ 30 ನಿಮಿಷಗಳ ಕಾಲ ವಾಕಿಂಗ್‌ ಮಾಡುವುದರಿಂದ ಎಷ್ಟೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಗೊತ್ತಾ?

ಮಧ್ಯಾಹ್ನ, ರಾತ್ರಿ ಚಹಾ ಸೇವಿಸುವುದು: ಅನೇಕ ಜನರು ಮಧ್ಯಾಹ್ನ ಅಥವಾ ರಾತ್ರಿ ಊಟ ಮಾಡಿದ ತಕ್ಷಣ ಒಂದು ಕಪ್ ಚಹಾ ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಚಹಾದಲ್ಲಿರುವ ಕೆಫೀನ್ ಮತ್ತು ಟ್ಯಾನಿನ್‌ಗಳು ನಾವು ಸೇವಿಸುವ ಆಹಾರದಲ್ಲಿರುವ ಕಬ್ಬಿಣವನ್ನು ನಮ್ಮ ದೇಹವು ಹೀರಿಕೊಳ್ಳುವುದನ್ನು ತಡೆಯುತ್ತದೆ. ಇದು ದೇಹದಲ್ಲಿ ರಕ್ತಹೀನತೆಗೆ ಕಾರಣವಾಗಬಹುದು. ಅಲ್ಲದೆ ರಾತ್ರಿ ಚಹಾ ಸೇವನೆ ಮಾಡುವುದರಿಂದ ನಿದ್ರೆಗೆ ಅಡ್ಡಿಯಾಗುತ್ತದೆ.

ಮೊದಲು ಹಾಲು ಸೇರಿಸುವುದು: ಅನೇಕ ಜನರು ಚಹಾ ತಯಾರಿಸುವಾಗ  ಮೊದಲು ಪಾತ್ರೆಗೆ ಹಾಲನ್ನು ಹಾಕುತ್ತಾರೆ. ಇದು ಸರಿಯಾದ ವಿಧಾನವಲ್ಲ. ಏಕೆಂದರೆ ಹಾಲಿನಲ್ಲಿ ಉತ್ಕರ್ಷಣ ನಿರೋಧಕಗಳನ್ನು ಬಂಧಿಸುವ ಪ್ರೋಟೀನ್‌ಗಳಿವೆ. ಆದ್ದರಿಂದ ಮೊದಲು ಚಹಾ ಪುಡಿಯನ್ನು ನೀರಿನಲ್ಲಿ ಕುದಿಸಿ, ನಂತರ ಇತರ ಎಲ್ಲಾ ಪದಾರ್ಥಗಳನ್ನು ಸೇರಿಸಿ, ಕೊನೆಯಲ್ಲಿ ಹಾಲನ್ನು ಹಾಕಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us