ಇವುಗಳ ಸಹಾಯದಿಂದ ತುಕ್ಕು ಹಿಡಿದ ಕಬ್ಬಿಣ, ಸ್ಟೀಲ್‌ ವಸ್ತುಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು

ಮನೆಯಲ್ಲಿರುವ ಅನೇಕ ವಸ್ತುಗಳು ಕಬ್ಬಿಣ ಮತ್ತು ಸ್ಟೀಲ್‌ನದ್ದಾಗಿರುತ್ತವೆ. ಹೌದು ಬಾಗಿಲಿನ ಹಿಡಿಕೆ, ಕಿಟಕಿ ರಾಡ್‌, ಗೇಟ್‌, ಬಾಲ್ಕಿನಿ ರೇಲಿಂಗ್‌ ಇವೆಲ್ಲವೂ ಬಹುತೇಕ ಸ್ಟೀಲ್‌ ಅಥವಾ ಕಬ್ಬಿಣದ್ದಾಗಿರುತ್ತವೆ. ಧೂಳು, ಮಳೆ ನೀರಿನ ಕಾರಣದಿಂದಾಗಿ ಸಮಯ ಕಳೆದಂತೆ ಈ ವಸ್ತುಗಳು ತುಕ್ಕು ಹಿಡಿಯಲು ಪ್ರಾರಂಭಿಸುತ್ತವೆ. ಇದು ಮನೆಯ ಒಟ್ಟಾರೆ ನೋಟವನ್ನೇ ಹಾಳು ಮಾಡಿಬಿಡುತ್ತದೆ. ಹೀಗಿರುವಾಗ ಇವುಗಳನ್ನು ಸ್ವಚ್ಛಗೊಳಿಸಲು ದುಬಾರಿ ಕ್ಲೀನರ್‌ಗಳನ್ನು ಬಳಸುವ ಬದಲುಮನೆಯಲ್ಲಿಯೇ ಲಭ್ಯವಿರುವ ಈ ಕೆಲವೊಂದು ವಸ್ತುಗಳ ಸಹಾಯದಿಂದ ತುಕ್ಕು ತೆಗೆದುಹಾಕಬಹುದು.

ಇವುಗಳ ಸಹಾಯದಿಂದ ತುಕ್ಕು ಹಿಡಿದ ಕಬ್ಬಿಣ, ಸ್ಟೀಲ್‌ ವಸ್ತುಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು
ಸಾಂದರ್ಭಿಕ ಚಿತ್ರ
Image Credit source: Getty Images

Updated on: Aug 17, 2026 | 7:29 PM

ಸಾಮಾನ್ಯವಾಗಿ ಕಬ್ಬಿಣ ಮತ್ತು ಸ್ಟೀಲ್‌ ವಸ್ತುಗಳು ಕಾಲ ಕಳೆದಂತೆ ತುಕ್ಕು (rust) ಹಿಡಿಯಲು ಪ್ರಾರಂಭಿಸುತ್ತವೆ. ಅದರಲ್ಲೂ ಈ ಮನೆ ಗೇಟ್‌, ಬಾಲ್ಕನಿ ರೇಲಿಂಗ್‌, ಕಿಟಕಿ ರಾಡ್‌ಗಳು ಧೂಳು ಮತ್ತು ಮಳೆ ನೀರಿನಿಂದಾಗಿ ತುಕ್ಕು ಹಿಡಿಯಲು ಪ್ರಾರಂಭಿಸುತ್ತವೆ ಮತ್ತು ಅವುಗಳ ಹೊಳಪು ಕೂಡ ಮಸುಕಾಗುತ್ತದೆ. ಇದಲ್ಲದೆ ಬಾಗಿಲಿನ ಹಿಡಿಕೆ, ಕತ್ತರಿ, ಕಬ್ಬಿಣದ ಪಾತ್ರೆಗಳು ಸಹ ತುಕ್ಕು ಹಿಡಿಯುತ್ತವೆ. ತುಕ್ಕು ಹಿಡಿದಂತಹ ಈ ವಸ್ತುಗಳನ್ನು ಸ್ವಚ್ಛಗೊಳಿಸಲು ಅನೇಕರು ದುಬಾರಿ ಕ್ಲೀನರ್‌ಗಳ ಮೊರೆ ಹೋಗ್ತಾರೆ. ಆದರೆ ಅನೇಕ ಸಂದರ್ಭಗಳಲ್ಲಿ ಈ ರಾಸಾಯನಿಕಯುಕ್ತ ಉತ್ಪನ್ನಗಳು ಸರಿಯಾದ ಫಲಿತಾಂಶಗಳನ್ನು ನೀಡುವುದಿಲ್ಲ. ಹೀಗಿರುವಾಗ ಮನೆಯಲ್ಲಿಯೇ ಲಭ್ಯವಿರುವ ಈ ಕೆಲವೊಂದು ವಸ್ತುಗಳ ಸಹಾಯದಿಂದ ತುಕ್ಕು ಹಿಡಿದ ಸ್ಟೀಲ್‌ ಮತ್ತು ಕಬ್ಬಿಣದ ವಸ್ತುಗಳನ್ನು ಸುಲಭವಾಗಿ ಕ್ಲೀನ್‌ ಮಾಡಬಹುದು.

ತುಕ್ಕು ಹಿಡಿದ ಕಬ್ಬಿಣ, ಸ್ಟೀಲ್‌ ವಸ್ತುಗಳನ್ನು ಕ್ಲೀನ್‌ ಮಾಡೋದೇಗೆ?

ವಿನೆಗರ್ ಬಳಸಿ:

ತುಕ್ಕು ಹಿಡಿದ ವಸ್ತುಗಳನ್ನು ಕ್ಲೀನ್‌ ಮಾಡಲು ನೀವು ವಿನೆಗರ್‌ ಕೂಡ ಬಳಸಬಹುದು.  ಸ್ಪ್ರೇ ಬಾಟಲಿಯಲ್ಲಿ ನೀರು ಮತ್ತು ಬಿಳಿ ವಿನೆಗರ್ ಅನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ. ಅದನ್ನು ತುಕ್ಕು ಹಿಡಿದ ವಸ್ತುಗಳ ಮೇಲೆ ಸಿಂಪಡಿಸಿ ಮತ್ತು 5-10 ನಿಮಿಷಗಳ ಕಾಲ ಬಿಡಿ. ನಂತರ ಅದನ್ನು ಮೃದುವಾದ ಬಟ್ಟೆಯಿಂದ ಒರೆಸಿ. ವಿನೆಗರ್‌ನಲ್ಲಿರುವ ಆಮ್ಲವು ಮೊಂಡುತನದ ಕಲೆಗಳನ್ನು ಸುಲಭವಾಗಿ ತೆಗೆದುಹಾಕುತ್ತದೆ.

ಅಡಿಗೆ ಸೋಡಾ ಮತ್ತು ನಿಂಬೆ ಮಿಶ್ರಣ:

ಬಾಗಿಲಿನ ಹಿಡಿಕೆ, ಬಾಲ್ಕನಿ ರೇಲಿಂಗ್‌ ಅಥವಾ ಇನ್ಯಾವುದೇ ಕಬ್ಬಿಣ ಮತ್ತು ಸ್ಟೀಲ್‌ ವಸ್ತುಗಳು ತುಕ್ಕು ಹಿಡಿದಿದ್ದರೆ ಅದನ್ನು ಸ್ವಚ್ಛಗೊಳಿಸಲು ಅಡುಗೆ ಸೋಡಾ ಮತ್ತು ನಿಂಬೆಯನ್ನು ಬಳಕೆ ಮಾಡಬಹುದು. ಸ್ವಲ್ಪ ನಿಂಬೆ ರಸವನ್ನು ಅಡಿಗೆ ಸೋಡಾದೊಂದಿಗೆ ಬೆರೆಸಿ ದಪ್ಪ ಪೇಸ್ಟ್ ಮಾಡಿ. ಇದನ್ನು ತುಕ್ಕು ಹಿಡಿದ ವಸ್ತುಗಳಿಗೆ ಲೇಪಿಸಿ 15-20 ನಿಮಿಷಗಳ ಕಾಲ ಬಿಡಿ. ನಂತರ, ಹಳೆಯ ಹಲ್ಲುಜ್ಜುವ ಬ್ರಷ್‌ನಿಂದ ನಿಧಾನವಾಗಿ ಸ್ಕ್ರಬ್ ಮಾಡಿ ಮತ್ತು ನೀರಿನಿಂದ ತೊಳೆಯಿರಿ.

ಅಡುಗೆ ಸೋಡಾ:

ಅಡುಗೆ ಸೋಡಾ ಮತ್ತು ನೀರನ್ನು ಸೇರಿಸಿ ದಪ್ಪ ಪೇಸ್ಟ್ ಮಾಡಿ ತುಕ್ಕು ಹಿಡಿದ ಜಾಗಕ್ಕೆ ಹಚ್ಚಿ. ಸ್ವಲ್ಪ ಹೊತ್ತು ಹಾಗೆಯೇ ಬಿಟ್ಟು ನಂತರ ಬ್ರಷ್ ಅಥವಾ ಬಟ್ಟೆಯಿಂದ ಸ್ಕ್ರಬ್ ಮಾಡಿ. ಈ ಪೇಸ್ಟ್ ತುಕ್ಕು ಸಡಿಲಗೊಳಿಸುತ್ತದೆ, ಸುಲಭವಾಗಿ ತೆಗೆಯಬಹುದು.

ತೆಂಗಿನ ಎಣ್ಣೆ: 

ಕಿಟಕಿ, ಬಾಗಿಲಿನ ಹಿಡಿಕೆಗಳಲ್ಲಿ ಸ್ವಲ್ಪ ತುಕ್ಕು ಇದ್ದರೆ, ಹಳೆಯ ಹಲ್ಲುಜ್ಜುವ ಬ್ರಷ್‌ಗೆ ತೆಂಗಿನ ಎಣ್ಣೆಯನ್ನು ಹಚ್ಚಿ ತುಕ್ಕು ಹಿಡಿದ ಜಾಗವನ್ನು ಉಜ್ಜಿಕೊಳ್ಳಿ. ಇದು ತುಕ್ಕು ತೆಗೆದುಹಾಕುತ್ತದೆ ಮತ್ತು ಎಣ್ಣೆ ಅಂಶ ತುಕ್ಕು ರೂಪುಗೊಳ್ಳುವ ಅಪಾಯವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಡಬ್ಬಗಳಲ್ಲಿ ಶೇಖರಿಸಿಡುವ ಅಕ್ಕಿಯಲ್ಲಿ ಹುಳಗಳಾಗಂತೆ ತಡೆಯಲು ಈ ಸಿಂಪಲ್‌ ಟಿಪ್ಸ್‌ ಪಾಲಿಸಿ

ನಿಂಬೆ ಮತ್ತು ಉಪ್ಪು: 

ಆಮ್ಲೀಯ ಗುಣವನ್ನು ಹೊಂದಿರುವ ನಿಂಬೆ ತುಕ್ಕು ತೆಗೆಯುವಲ್ಲಿ ಬಹಳ ಪರಿಣಾಮಕಾರಿ. ತುಕ್ಕು ಹಿಡಿದ ಸ್ಟೀಲ್‌, ಕಬ್ಬಿಣದ ವಸ್ತುಗಳ ಮೇಲೆ ಸ್ವಲ್ಪ ಉಪ್ಪು ಸಿಂಪಡಿಸಿ ಮತ್ತು ಅದರ ಮೇಲೆ ನಿಂಬೆ ರಸವನ್ನು ಹಿಂಡಿ. ಅರ್ಧ ಗಂಟೆಯ ನಂತರ, ಬ್ರಷ್‌ನಿಂದ ಸ್ಕ್ರಬ್ ಮಾಡಿ. ಇದರಿಂದ ಸುಲಭವಾಗಿ ತುಕ್ಕು ತೆಗೆದುಹಾಕಬಹುದು.

ಬೋರಾಕ್ಸ್ ಪೌಡರ್:

ಕಬ್ಬಿಣದ ವಸ್ತುಗಳಿಂದ ತುಕ್ಕು ತೆಗೆಯಲು ಬೋರಾಕ್ಸ್ ಪೌಡರ್ ಅನ್ನು ಸಹ ಬಳಸಬಹುದು. ಇದನ್ನು ಮಾಡಲು, ಮೂರರಿಂದ ನಾಲ್ಕು ಟೀ ಚಮಚ ಬೋರಾಕ್ಸ್ ಪೌಡರ್ ತೆಗೆದುಕೊಂಡು ಅದನ್ನು ಒಂದು ಟೀ ಚಮಚ ನೀರಿನೊಂದಿಗೆ ಬೆರೆಸಿ ದಪ್ಪ ಪೇಸ್ಟ್ ಮಾಡಿ. ಈ ಮಿಶ್ರಣವನ್ನು ತುಕ್ಕು ಹಿಡಿದ ಜಾಗಕ್ಕೆ ಹಚ್ಚಿ ಹತ್ತು ನಿಮಿಷಗಳ ಕಾಲ ಬಿಡಿ. ನಂತರ, ಸ್ಯಾಂಡ್‌ ಪೇಪರ್‌ನಿಂದ ಉಜ್ಜಿ, ಇದರಿಂದ ತುಕ್ಕು ಹೋಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us