
ರಾತ್ರಿ ಮಲಗುವಾಗ ದೇಹದ ಮೇಲೆ ಸ್ವಲ್ಪ ಭಾರವಿರುವ ಹೊದಿಕೆ ಹಾಕಿಕೊಂಡರೆ ಆರಾಮವಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ‘Weighted Blanket’ ಅಂದರೆ ಸಾಮಾನ್ಯ ಹೊದಿಕೆಗಿಂತ ಹೆಚ್ಚು ತೂಕ ಹೊಂದಿರುವ ವಿಶೇಷ ಹೊದಿಕೆಗಳು ಜನಪ್ರಿಯವಾಗಿವೆ. ಗಾಜಿನ ಮಣಿಗಳು ಅಥವಾ ಇತರ ಭಾರವಾದ ವಸ್ತುಗಳನ್ನು ತುಂಬಿ ತಯಾರಿಸುವ ಈ ಹೊದಿಕೆಗಳು ದೇಹವನ್ನು ಸುತ್ತುವರಿದಿರುವಂತಹ ಅನುಭವ ನೀಡುತ್ತವೆ. ಕೆಲವರಿಗೆ ಇದು ಮೃದುವಾಗಿ ಅಪ್ಪಿಕೊಂಡಿರುವಂತೆ ಅಥವಾ ಲಘು ಮಸಾಜ್ ಮಾಡಿದಂತೆ ಅನಿಸಬಹುದು. ಆದರೆ ಇವು ನಿಜಕ್ಕೂ ನಿದ್ದೆಯ (Sleep) ಗುಣಮಟ್ಟವನ್ನು ಸುಧಾರಿಸುತ್ತವೆಯೇ ಎಂಬ ಪ್ರಶ್ನೆ ಇದೆ.
2023ರಲ್ಲಿ ಸ್ವೀಡನ್‌ನ ನಿದ್ರಾ ಪ್ರಯೋಗಾಲಯದಲ್ಲಿ ನಡೆದ ಸಣ್ಣ ಅಧ್ಯಯನದಲ್ಲಿ 26 ಆರೋಗ್ಯವಂತ ಯುವಕರನ್ನು ಒಳಪಡಿಸಲಾಗಿತ್ತು. ಅವರು ಒಂದು ರಾತ್ರಿ ಸಾಮಾನ್ಯ ಹೊದಿಕೆ ಮತ್ತು ಮತ್ತೊಂದು ರಾತ್ರಿ ತಮ್ಮ ದೇಹದ ತೂಕದ ಸುಮಾರು ಶೇ.12ರಷ್ಟು ತೂಕವಿರುವ ಹೊದಿಕೆ ಬಳಸಿದರು. ಭಾರವಾದ ಹೊದಿಕೆ ಬಳಸಿದಾಗ ನಿದ್ದೆಗೆ ಸಹಾಯ ಮಾಡುವ ಹಾರ್ಮೋನ್ ಮೆಲಟೋನಿನ್ ಪ್ರಮಾಣದಲ್ಲಿ ಸರಾಸರಿ ಶೇ.32ರಷ್ಟು ಹೆಚ್ಚಿನ ಏರಿಕೆ ಕಂಡುಬಂದಿತ್ತು.
ಆದರೆ ಇದರರ್ಥ ಅವರು ಹೆಚ್ಚು ಹೊತ್ತು ನಿದ್ದೆ ಮಾಡಿದರು ಎಂದಲ್ಲ. ಇದು ಕೇವಲ ಒಂದು ರಾತ್ರಿಯ ಅಧ್ಯಯನವಾಗಿದ್ದರಿಂದ, ದೀರ್ಘಕಾಲ ಬಳಸಿದಾಗ ಇದೇ ಪರಿಣಾಮ ಮುಂದುವರಿಯುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.
2024ರಲ್ಲಿ ಪ್ರಕಟವಾದ ಮತ್ತೊಂದು ಅಧ್ಯಯನದಲ್ಲಿ ನಿದ್ರಾಹೀನತೆ ಸಮಸ್ಯೆ ಹೊಂದಿದ್ದ 95 ವಯಸ್ಕರನ್ನು ಒಂದು ತಿಂಗಳ ಕಾಲ ಗಮನಿಸಲಾಯಿತು. ಕೆಲವರಿಗೆ 5.5 ಕೆ.ಜಿ. ತೂಕದ ಹೊದಿಕೆ ಮತ್ತು ಉಳಿದವರಿಗೆ 3.5 ಕೆ.ಜಿ. ತೂಕದ ಹೊದಿಕೆ ನೀಡಲಾಯಿತು. ಭಾರವಾದ ಹೊದಿಕೆ ಬಳಸಿದವರಲ್ಲಿ ರಾತ್ರಿ ಎಚ್ಚರಗೊಳ್ಳುವ ಪ್ರಮಾಣ ಸ್ವಲ್ಪ ಕಡಿಮೆಯಾಗಿತ್ತು.
ನಿಮ್ಮ ವಯಸ್ಸಿಗೆ ಎಷ್ಟು ಗಂಟೆ ನಿದ್ರೆ ಅಗತ್ಯ! ಕಡಿಮೆ ನಿದ್ರೆ ಮಾಡಿದರೆ ಏನಾಗುತ್ತೆ ತಿಳಿದುಕೊಳ್ಳಿ
ಅಧ್ಯಯನದ ಕೊನೆಯಲ್ಲಿ ಎರಡೂ ಗುಂಪಿನ ನಿದ್ದೆಯ ಸಮಸ್ಯೆಯಲ್ಲಿ ಸುಧಾರಣೆ ಕಂಡುಬಂದರೂ, ಭಾರವಾದ ಹೊದಿಕೆ ಬಳಸಿದವರು ನಿದ್ದೆಯಲ್ಲಿ ಹೆಚ್ಚಿನ ಸುಧಾರಣೆಯನ್ನು ವರದಿ ಮಾಡಿದ್ದರು. ಅವರ ದಣಿವು, ಆತಂಕ, ಒತ್ತಡ ಮತ್ತು ನೋವಿನ ಅನುಭವವೂ ಕಡಿಮೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಮತ್ತೊಂದು ಅಧ್ಯಯನದಲ್ಲಿ ಆಟಿಸಂ ಹೊಂದಿದ್ದ ಮಕ್ಕಳಿಗೆ Weighted Blanket ಬಳಸಿದರೂ ಅವರು ಬೇಗ ನಿದ್ದೆ ಮಾಡುವಲ್ಲಿ, ಕಡಿಮೆ ಬಾರಿ ಎಚ್ಚರಗೊಳ್ಳುವಲ್ಲಿ ಅಥವಾ ಹೆಚ್ಚು ಹೊತ್ತು ನಿದ್ದೆ ಮಾಡುವಲ್ಲಿ ಸ್ಪಷ್ಟ ಸುಧಾರಣೆ ಕಂಡುಬರಲಿಲ್ಲ. ಆದರೂ ಮಕ್ಕಳು ಮತ್ತು ಅವರ ಪೋಷಕರು ಭಾರವಾದ ಹೊದಿಕೆಯನ್ನು ಇಷ್ಟಪಟ್ಟಿದ್ದರು. ದೀರ್ಘಕಾಲದ ನೋವಿನಿಂದ ಬಳಲುತ್ತಿದ್ದ ವಯಸ್ಕರ ಮೇಲಿನ ಮತ್ತೊಂದು ಅಧ್ಯಯನದಲ್ಲಿಯೂ ನೋವಿನ ತೀವ್ರತೆ ಕಡಿಮೆಯಾಗಲಿಲ್ಲ.
ಈ ಅಧ್ಯಯನಗಳನ್ನು ನೋಡಿದರೆ Weighted Blanket ಕೆಲವರಿಗೆ ಆರಾಮ ಮತ್ತು ನಿದ್ದೆಯ ಗುಣಮಟ್ಟದಲ್ಲಿ ಪ್ರಯೋಜನ ನೀಡಬಹುದು. ಆದರೆ ಇದು ನಿದ್ರಾಹೀನತೆಗೆ ಖಚಿತ ಪರಿಹಾರ ಎಂದು ಹೇಳಲು ಸಾಕಷ್ಟು ಪುರಾವೆಗಳಿಲ್ಲ. ಇದರ ಪರಿಣಾಮ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಆದ್ದರಿಂದ ಖರೀದಿಸುವ ಮೊದಲು ಅದರ ತೂಕ, ದೇಹಕ್ಕೆ ಹೊಂದಿಕೊಳ್ಳುವಿಕೆ ಮತ್ತು ಬಳಸುವಾಗ ಉಂಟಾಗುವ ಆರಾಮವನ್ನು ಗಮನಿಸುವುದು ಮುಖ್ಯ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ