Eid e Milad un Nabi 2024: ಶಾಂತಿ ಸೌಹಾರ್ದತೆಯ ಸಂಕೇತ ಈದ್ ಮಿಲಾದ್, ಹಬ್ಬದ ಮಹತ್ವ ಹಾಗೂ ಆಚರಣೆ ಹೇಗೆ?
ಮೌಲಿದ್ ಮತ್ತು ನಬಿದ್ ಎಂದೂ ಕರೆಯಲ್ಪಡುವ ಈದ್ ಮಿಲಾದ್- ಉನ್- ನಬಿ ಮುಸ್ಲಿಮರಿಗೆ ಮಹತ್ವದ ಹಬ್ಬಗಳಲ್ಲಿ ಒಂದಾಗಿದೆ. ಈ ದಿನ ಪ್ರವಾದಿ ಮೊಹಮ್ಮದ್ ಅವರ ಜನ್ಮ ವಾರ್ಷಿಕೋತ್ಸವವನ್ನು ನೆನಪಿಸುತ್ತದೆ. ರಬಿ ಉಲ್ ಅವ್ವಾಲ್ ನ 12ನೇ ದಿನದಂದು ಆಚರಿಸಲಾಗುವ ಈ ಹಬ್ಬವನ್ನು ಮುಸ್ಲಿಂ ಬಾಂಧವರು ಬಹಳ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಈ ಬಾರಿ ಈದ್-ಇ-ಮಿಲಾದ್ ಅನ್ನು ಈ ವರ್ಷ ಸೆಪ್ಟೆಂಬರ್ 16 ರಂದು ಆಚರಿಸಲಾಗುತ್ತಿದೆ. ಹಾಗಾದ್ರೆ ಈ ಹಬ್ಬದ ಮಹತ್ವ ಹಾಗೂ ಆಚರಣೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಇಂದು ಮುಸ್ಲಿಂ ಬಾಂಧವರು ಈದ್-ಈ-ಮಿಲಾದ್-ಉನ್-ನಬಿ ಎಂದು ಕರೆಯುವ ಈದ್ ಮಿಲಾದ್ ಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಇಸ್ಲಾಂ ಧರ್ಮದ ಪ್ರವಾದಿ ಮುಹಮ್ಮದ್ ಅವರ ಜನ್ಮದಿನವಾಗಿದೆ. ಇಸ್ಲಾಂನ ಕೊನೆಯ ಪ್ರವಾದಿ ಹಜರತ್ ಮುಹಮ್ಮದ್ ಅವರು ಈ ದಿನದಂದೇ ಜನಿಸಿದ್ದು, ಅದಲ್ಲದೇ ಜನಿಸಿದ ಅದೇ ದಿನದಂದು ಅವರು ಮರಣವನ್ನು ಹೊಂದಿದ್ದರು ಎನ್ನಲಾಗಿದೆ. ಈ ಈದ್-ಈ-ಮಿಲಾದ್-ಉನ್-ನಬಿ ಹಬ್ಬವನ್ನು ಈದ್-ಈ-ಮಿಲಾದ್ ಅಥವಾ ಮೌಲಿದ್ ಎಂದು ಕೂಡ ಕರೆಯುತ್ತಾರೆ. ಈ ಬಾರಿ ಸೆಪ್ಟೆಂಬರ್ 16 ರಂದು ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಮುಸ್ಲಿಂ ಸಮುದಾಯದ ಜನರು ಬಹಳ ವಿಜೃಂಭಣೆಯಿಂದ ಈ ಹಬ್ಬ ಆಚರಿಸುತ್ತಿದ್ದಾರೆ.
ಈದ್- ಇ – ಮಿಲಾದ್ ಹಬ್ಬದ ಮಹತ್ವ
ಈದ್- ಇ- ಮಿಲಾದ್ ಹಬ್ಬವನ್ನು ಪ್ರಪಂಚದಾದ್ಯಂತದ ಎಲ್ಲಾ ಮುಸ್ಲಿಮರು ಬಹಳ ಉತ್ಸಾಹ ಮತ್ತು ಸಂತೋಷದಿಂದ ಆಚರಿಸುತ್ತಾರೆ. ಈದ್ ಮಿಲಾದ್ ಉನ್ ನಬಿಯನ್ನು ಇಸ್ಲಾಮಿಕ್ ಕ್ಯಾಲೆಂಡರ್ ನ ಮೂರನೇ ತಿಂಗಳಾದ ರಬಿ ಉಲ್ ಅವ್ವಾಲ್ ನ 12 ನೇ ದಿನದಂದು ಆಚರಿಸಲಾಗುತ್ತದೆ. ಈ ದಿನವು ಪ್ರವಾದಿ ಮೊಹಮ್ಮದ್ ಅವರ ಜನ್ಮದಿನವಾಗಿದೆ. ಈ ಹಬ್ಬವನ್ನು ಸುನ್ನಿ ಮುಸ್ಲಿಮರು ಇಸ್ಲಾಮಿಕ್ ಧರ್ಮದ 12 ನೇ ದಿನದಂದು ಈ ದಿನವನ್ನು ಆಚರಿಸಿದರೆ, ಶಿಯಾ ಮುಸ್ಲಿಮರು ರಬಿ ಉಲ್ ಅವ್ವಾಲ್ ನ 17 ನೇ ದಿನದಂದು ಈ ದಿನವನ್ನು ಆಚರಿಸುತ್ತಾರೆ. ಈ ದಿನದಂದು ಸಮಾಜದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದತೆ, ಸಾಮರಸ್ಯ ಮೂಡಿಸಲು ಪ್ರವಾದಿಯವರು ನೀಡಿದ ಸಂದೇಶವನ್ನು ಬದುಕಿನಲ್ಲಿ ಪಾಲಿಸುವುದಕ್ಕಾಗಿ ಈ ಹಬ್ಬವು ಮಹತ್ವದ್ದಾಗಿದೆ.
ಈದ್- ಇ – ಮಿಲಾದ್ ಹಬ್ಬದ ಆಚರಣೆ ಹೇಗೆ?
ಈದ್- ಇ – ಮಿಲಾದ್ ಹಬ್ಬಕ್ಕೆ ಒಂದು ದಿನಾಲ್ಕೇ ಮುಂಚಿತವಾಗಿ ತಯಾರಿಯನ್ನು ಪ್ರಾರಂಭಿಸುತ್ತಾರೆ. ಮನೆ ಹಾಗೂ ಸುತ್ತಲಿನ ಪರಿಸರವನ್ನು ಬಣ್ಣ ಬಣ್ಣದ ದೀಪಗಳಿಂದ ಅಲಂಕರಿಸುವುದಲ್ಲದೆ, ಹಬ್ಬದ ದಿನ ಹೊಸ ಬಟ್ಟೆಗಳನ್ನು ಧರಿಸುವುದು, ಸಿಹಿ ತಿಂಡಿಗಳನ್ನು ವಿತರಿಸಲಾಗುತ್ತದೆ. ಮಸೀದಿಗೆ ಭೇಟಿ ನೀಡಿ ಈ ದಿನ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಮಹಿಳೆಯರು ಶೀರ್ ಖುರ್ಮಾ ಮತ್ತು ಸೇವಾಯನ್ ನಂತಹ ವಿವಿಧ ರೀತಿಯ ಭಕ್ಷ್ಯಗಳನ್ನು ತಯಾರಿಸಿ ಮನೆ ಮಂದಿಯೆಲ್ಲಾ ಜೊತೆ ಸೇರಿ ಹಬ್ಬವನ್ನು ಆಚರಿಸುತ್ತಾರೆ.
ಇದನ್ನೂ ಓದಿ:
ಈದ್ ಮಿಲಾದ್ ಹಬ್ಬಕ್ಕೆ ಕೋರಲು ಶುಭಾಶಯಗಳು
- ಅಲ್ಲಾಹ್ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ತನ್ನ ಆಶೀರ್ವಾದ ಮಳೆಯನ್ನು ಸುರಿಸಲಿ. ಶಾಶ್ವತ ಖುಷಿ, ನೆಮ್ಮದಿ ನಿಮ್ಮದಾಗಲಿ. ನಿಮಗೆ ಈದ್ ಮಿಲಾದ್ ಹಬ್ಬದ ಹಾರ್ಥಿಕ ಶುಭಾಶಯಗಳು.
- ಅಲ್ಲಾಹ್ ನಿಮಗೆ ಯಶಸ್ಸು, ಸಮೃದ್ಧಿ, ಸಂತೋಷವನ್ನು ನೀಡಲಿ. ಆರೋಗ್ಯಕರ ಜೀವನವನ್ನು ಕರುಣಿಸಲಿ. ಈದ್ ಮಿಲಾದ್ ಹಬ್ಬದ ಶುಭಾಶಯಗಳು.
- ಅಲ್ಲಾಹನು ನಿಮ್ಮ ಕಷ್ಟಗಳನ್ನು ನಿವಾರಿಸಲಿ ಮತ್ತು ನಿಮ್ಮ ಜೀವನದಲ್ಲಿ ಸಂತೋಷ ಸಮೃದ್ಧಿ ನೆಲೆಸಲಿ. ಈದ್ ಮಿಲಾದ್ ಹಬ್ಬದ ಶುಭಾಶಯಗಳು.
- ಪ್ರವಾದಿ ಮುಹಮ್ಮದ್ ಅವರ ಜನ್ಮದಿನವನ್ನು ಆಚರಿಸಲು ಒಂದು ಪವಿತ್ರ ದಿನವಾಗಿದ್ದು, ಅವರು ಹಾಕಿಕೊಟ್ಟ ಮೌಲ್ಯಗಳ ಕಡೆ ಸಾಗೋಣ, ಈದ್ ಮಿಲಾದ್ ಹಬ್ಬದ ಶುಭಾಶಯಗಳು.
- ನಾವೆಲ್ಲರೂ ಒಳ್ಳೆಯದನ್ನು ಮಾಡೋಣ ಮತ್ತು ಪ್ರತಿಯಾಗಿ ಒಳ್ಳೆಯದನ್ನು ಸ್ವೀಕರಿಸೋಣ. ಈದ್-ಮಿಲಾದ್ ಹಬ್ಬದ ಶುಭಾಶಯಗಳು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ