
ಇಂದಿನ ಈ ಬ್ಯುಸಿ ಮತ್ತು ಒತ್ತಡದ ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಹುಡುಕುತ್ತಾ ಹಲವು ಜನ ಎತ್ತರದ ಪರ್ವತಗಳಿಗೆ ಟ್ರೆಕ್ಕಿಂಗ್ (trekking) ಹೋಗುತ್ತಾರೆ. ಯುವ ಜನರಂತೂ ಕೆಲಸದ ಒತ್ತಡದಿಂದ ಕೊಂಚ ಬ್ರೇಕ್ ತೆಗೆದುಕೊಂಡು ವೀಕೆಂಡ್‌ನಲ್ಲಿ ಮುಳ್ಳಯ್ಯನಗಿರಿ, ಕೊಡಚಾದ್ರಿ, ಲೋನಾವಾಲ ಅಂತೆಲ್ಲಾ ಬೇರೆ ಬೇರೆ ಕಡೆ ಟ್ರೆಕ್ಕಿಂಗ್ ಹೋಗ್ತಾರೆ. ಚಿಂತೆ, ಒತ್ತಡವನ್ನು ಮರೆಯಲು, ಪ್ರಕೃತಿಗೆ ಹತ್ತಿರವಾಗಲು, ಸ್ನೇಹಿತರೊಂದಿಗೆ ಒಂದೊಳ್ಳೆ ಸಮಯ ಕಳೆಯಲು ಟ್ರೆಕ್ಕಿಂಗ್ ಬೆಸ್ಟ್ ಆಯ್ಕೆ ಆಗಿದೆ. ಇಷ್ಟು ಮಾತ್ರವಲ್ಲ ಚಾರಣ ಹೋಗುವುದರಿಂದ ಸಾಕಷ್ಟು ಪ್ರಯೋಜನಗಳು ಸಹ ಲಭಿಸುತ್ತವೆಂತೆ. ಟ್ರೆಕ್ಕಿಂಗ್ ಮಾಡುವುದರಿಂದ ಏನೆಲ್ಲಾ ಲಾಭಗಳನ್ನು ಪಡೆಯಬಹುದು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಒತ್ತಡದಿಂದ ಪರಿಹಾರ ನೀಡುತ್ತದೆ: ಇಂದಿನ ಈ ಬ್ಯುಸಿ ಜೀವನದಲ್ಲಿ ಒತ್ತಡ ಸಾಮಾನ್ಯವಾಗಿದೆ. ಹೀಗಿರುವಾಗ ವಾರಾಂತ್ಯದಲ್ಲಿ ಟ್ರೆಕ್ಕಿಂಗ್ ಹೋಗಿ, ಪ್ರಕೃತಿಯೊಂದಿಗೆ ಸಂಪರ್ಕ ಸಾಧಿಸಿದಾಗ, ಅದು ಮರಗಳ ಶಬ್ದವಾಗಿರಬಹುದು, ಪಕ್ಷಿಗಳ ಚಿಲಿಪಿಲಿಯಾಗಿರಬಹುದು ಅಥವಾ ತಾಜಾ ಗಾಳಿಯಾಗಿರಬಹುದು, ಈ ಎಲ್ಲಾ ಸಕಾರಾತ್ಮಕ ಅಂಶಗಳು ಮೆದುಳು ‘ಎಂಡಾರ್ಫಿನ್‌ಗಳು’ ಮತ್ತು ‘ಡೋಪಮೈನ್’ ನಂತಹ ಸಂತೋಷದ ಹಾರ್ಮೋನುಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಟ್ರೆಕ್ಕಿಂಗ್ ಮಾಡುವಾಗ ದೇಹವು ನೋವಿನಲ್ಲಿದ್ದರೂ, ಮನಸ್ಸು ಉಲ್ಲಾಸದಿಂದ ಕೂಡಿರುತ್ತದೆ. ಆ ತಾಜಾತನವೇ ಅವರಿಗೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ.
ಸಾಮಾಜಿಕ ಬಾಂಧವ್ಯ ಉತ್ತಮವಾಗುತ್ತದೆ: ಚಾರಣವು ಕೇವಲ ವೈಯಕ್ತಿಕ ಪ್ರಯಾಣವಲ್ಲ, ಅದು ಗುಂಪಿನಲ್ಲಿ ಕೆಲಸ ಮಾಡುವ ಅದ್ಭುತ ಅನುಭವ. ಚಾರಣಕ್ಕೆ ಹೋಗುವಾಗ ಸಾಕಷ್ಟು ಜನರನ್ನು ಭೇಟಿಯಾಗುತ್ತೀರಿ, ಇದು ಸಾಮಾಜಿಕ ಬಾಂಧವ್ಯವನ್ನು ಉತ್ತಮವಾಗಿಸುತ್ತದೆ. ಈ ಸ್ನೇಹಿತರ ವಲಯ ಮತ್ತು ಮಾನವ ಸಂಪರ್ಕವು ಜೀವನದಲ್ಲಿ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ಜೀವನ ಪಾಠಗಳನ್ನು ಕಲಿಸುತ್ತದೆ: ಪ್ರತಿಯೊಂದು ಚಾರಣ ಪ್ರವಾಸವು ಜೀವನ ಪಾಠವನ್ನು ಕಲಿಸುತ್ತದೆ. ಪರ್ವತವನ್ನು ಹತ್ತುವಾಗ ನಿಮ್ಮ ಬ್ಯಾಗ್‌ಪ್ಯಾಕ್‌ನಲ್ಲಿ ಅನಗತ್ಯ ಭಾರವನ್ನು ಹೊತ್ತುಕೊಂಡರೆ, ನೀವು ಹೆಚ್ಚು ದೂರ ನಡೆಯಲು ಸಾಧ್ಯವಾಗುವುದಿಲ್ಲ. ಜೀವನದಲ್ಲೂ ಇದೇ ರೀತಿ ಅನಗತ್ಯ ಚಿಂತೆಗಳನ್ನು ಮತ್ತು ಕಹಿಯನ್ನು ಹೊತ್ತುಕೊಂಡರೆ ಶಾಂತಿಯುತವಾಗಿ ಬದುಕಲು ಸಾಧ್ಯವಿಲ್ಲ ಎಂಬ ಅದ್ಭುತ ಪಾಠ ಕಲಿಸುತ್ತದೆ. ಇದಲ್ಲದೆ ಟ್ರೆಕ್ಕಿಂಗ್ ಮಾಡುವುದರಿಂದ ತಾಳ್ಮೆ, ಪರಿಶ್ರಮ, ಯೋಜನೆ ಮುಂತಾದ ಕೌಶಲ್ಯಗಳು ಸ್ವಾಭಾವಿಕವಾಗಿಯೇ ಬೆಳೆಯುತ್ತವೆ. ಮುಖ್ಯವಾಗಿ ಎಷ್ಟೇ ದೊಡ್ಡ ಸವಾಲನ್ನು ಎದುರಿಸಿದರೂ, ಶಾಂತವಾಗಿ ವರ್ತಿಸಿದರೆ ಅದನ್ನು ಜಯಿಸಬಹುದು ಎಂಬ ಮನಸ್ಥಿತಿ ಬೆಳೆಯುತ್ತದೆ.
ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಲೇಬೇಡಿ
ದೈಹಿಕ ಆರೋಗ್ಯವನ್ನು ಸುಧಾರಿಸುತ್ತದೆ: ಚಾರಣವು ದೈಹಿಕ ಆರೋಗ್ಯವನ್ನೂ ವೃದ್ಧಿಸುತ್ತದೆ. ಇದು ಹೃದಯ ಬಡಿತವನ್ನು ನಿಯಂತ್ರಿಸುತ್ತದೆ ಮತ್ತು ಮೂಳೆಗಳನ್ನು ಬಲಪಡಿಸುತ್ತದೆ. ವಿಶೇಷವಾಗಿ, ಬೆನ್ನು ನೋವು ಮತ್ತು ಬೊಜ್ಜಿನಂತಹ ಇಂದಿನ ಪೀಳಿಗೆ ಎದುರಿಸುತ್ತಿರುವ ಸಮಸ್ಯೆಗಳಿಗೆ ಚಾರಣವು ಉತ್ತಮ ಪರಿಹಾರವಾಗಿದೆ. ಟ್ರೆಕ್ಕಿಂಗ್‌ಗೆ ಹೋದಾಗ ಶುದ್ಧ ಗಾಳಿಯನ್ನು ಉಸಿರಾಡುತ್ತೇವೆ, ಇದು ಶ್ವಾಸಕೋಶದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ. ಈ ಆರೋಗ್ಯ ಪ್ರಯೋಜನ ಹಾಗೂ ಅದ್ಭುತ ಅನುಭವವನ್ನು ಪಡೆಯಲೆಂದೇ ಟ್ರೆಕ್ಕಿಂಗ್ ಪ್ರಿಯರು ಆಗಾಗ್ಗೆ ಚಾರಣ ಹೋಗುವುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ