ಶ್ವಾನಗಳು ಮಧ್ಯರಾತ್ರಿ ವಿಚಿತ್ರವಾಗಿ ಬೊಗಳೋದೇಕೆ? ಇದರ ಹಿಂದಿನ ಕಾರಣವನ್ನು ತಿಳಿಯಿರಿ
ಸಾಮಾನ್ಯವಾಗಿ ಮಧ್ಯರಾತ್ರಿ ಹೊತ್ತಲ್ಲಿ ನಾಯಿಗಳು ವಿಚಿತ್ರವಾಗಿ ಬೊಗಳುತ್ತಿರುತ್ತವೆ. ನೀವು ಕೂಡ ಇದನ್ನು ಗಮನಿಸಿರುತ್ತೀರಿ ಅಲ್ವಾ. ರಾತ್ರಿ ದೆವ್ವ, ಭೂತಗಳು ಓಡಾಡುತ್ತಿರುತ್ತವೆ, ಅವುಗಳು ಕಣ್ಣಿಗೆ ಕಾಣಿಸುವುದರಿಂದ ನಾಯಿಗಳು ವಿಚಿತ್ರವಾಗಿ ಬೊಗಳಲು ಆರಂಭಿಸುತ್ತವೆ ಎಂದು ಅನೇಕರು ಹೇಳುತ್ತಿರುತ್ತಾರೆ. ನಿಜಕ್ಕೂ ದೆವ್ವಗಳನ್ನು ಕಂಡೇ ನಾಯಿಗಳು ಮಧ್ಯರಾತ್ರಿ ಬೊಗಳುವುದೇ, ಅಷ್ಟಕ್ಕೂ ಇದರ ಹಿಂದಿನ ನಿಜವಾದ ಕಾರಣವಾದರೂ ಏನು ಎಂಬುದನ್ನು ತಿಳಿದುಕೊಳ್ಳಿ.

ಮನೆಯಲ್ಲಿ ಸಾಯಿದ ನಾಯಿಯೇ (dog) ಆಗಿರಲಿ ಅಥವಾ ಬೀದಿ ನಾಯಿಗಳೇ ಆಗಿರಲಿ ಅವುಗಳು ತಮ್ಮ ಪರಿಚಯಸ್ಥರನ್ನು ಕಂಡಾಗ ಬಾಲ ಅಲ್ಲಾಡಿಸುವಂತೆ, ಅಪರಿಚಿತರನ್ನು ಕಂಡಾಗ ಬೊಗಳುತ್ತವೆ. ಇದರ ಹೊರತಾಗಿ ಮಧ್ಯರಾತ್ರಿ ವೇಳೆ ನಾಯಿಗಳು ವಿಚಿತ್ರವಾಗಿ ಅಥವಅ ಕರ್ಕಶ ಧ್ವನಿಯಲ್ಲಿ ಜೋರಾಗಿ ಬೊಗಳುತ್ತವೆ. ಹೆಚ್ಚಿನವರು ಈ ರೀತಿ ವಿಚಿತ್ರವಾಗಿ ನಾಯಿ ಬೊಗಳುವುದು ಅಶುಭ ಸಂಕೇತವೆಂದು ಭಾವಿಸುತ್ತಾರೆ. ಅಲ್ಲದೆ ರಾತ್ರಿ ದೆವ್ವಗಳು ಕಣ್ಣಿಗೆ ಕಾಣಿಸುವುದರಿಂದ ನಾಯಿಗಳು ಅವುಗಳನ್ನು ಕಂಡು ಬೊಗಳುವುದು ಎಂಬ ನಂಬಿಕೆಯೂ ಇದೆ. ಆದರೆ ಶ್ವಾನಗಳ ನಡವಳಿಕೆಯ ಹಿಂದಿನ ನಿಜವಾದ ಕಾರಣವೇನು? ನಿಜಕ್ಕೂ ಅವುಗಳು ದೆವ್ವಗಳನ್ನು ಕಂಡೇ ಬೊಗಳುವುದಾ, ಈ ಎಲ್ಲದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.
ನಾಯಿಗಳು ರಾತ್ರಿ ಹೊತ್ತಲ್ಲಿ ವಿಚಿತ್ರವಾಗಿ ಬೊಗಳುವುದೇಕೆ?
ಬಹುತೇಕ ಹೆಚ್ಚಿನ ಜನರು ರಾತ್ರಿ ಹೊತ್ತಿನಲ್ಲಿ ದೆವ್ವಗಳು ಸುಳಿದಾಡುತ್ತಿರುತ್ತವೆ, ಇದನ್ನು ಕಂಡೇ ನಾಯಿಗಳು ಬೊಗಳುತ್ತವೆ ಎಂದು ಹೇಳುತ್ತಾರೆ. ಆದರೆ ವಿಜ್ಞಾನವು ಈ ಅಂಶವನ್ನು ಒಪ್ಪಿಕೊಳ್ಳುವುದಿಲ್ಲ. ಮಧ್ಯರಾತ್ರಿ ಶ್ವಾನಗಳು ವಿಚಿತ್ರವಾಗಿ ಬೊಗಳುವುದರ ಹಿಂದಿನ ವೈಜ್ಞಾನಿಕ ಕಾರಣ ಬೇರೆಯೇ ಇದೆ. ಅದೇನೆಂದರೆ,
ಒಂಟಿತನ:
ಶ್ವಾನಗಳು ರಾತ್ರಿ ಹೊತ್ತಿನಲ್ಲಿ ಒಂಟಿತನವನ್ನು ಅನುಭವಿಸುತ್ತವೆ. ನಾಯಿಗಳು ಮನೆಯನ್ನು ಬಿಟ್ಟು ಬೇರೆಡೆ ಹೋದಾಗ ಅಥವಾ ದಾರಿ ತಪ್ಪಿದಾಗ ದುಃಖವನ್ನು ಅನುಭವಿಸುತ್ತವೆ ಎಂದು ಅಧ್ಯಯನಗಳು ತೋರಿಸುತ್ತವೆ. ಈ ದುಃಖವು ರಾತ್ರಿಯಲ್ಲಿ ಅಳುವುದಕ್ಕೆ ಕಾರಣವಾಗಬಹುದು. ಆಗಾಗ್ಗೆ, ಅವು ತಮ್ಮ ಕುಟುಂಬದಿಂದ ಬೇರ್ಪಟ್ಟ ಕಾರಣ ಮಧ್ಯರಾತ್ರಿಯಲ್ಲಿ ಅಳುತ್ತವೆ. ಇದಲ್ಲದೆ ಶ್ವಾನಗಳು ವಯಸ್ಸಾದಂತೆ ಹೆಚ್ಚು ಭಯಪಡಲು ಆರಂಭಿಸುತ್ತವೆ. ಅಂತಹ ಸಂದರ್ಭದಲ್ಲಿ ಅವುಗಳು ನಿರಂತರವಾಗಿ ಬೊಗಳುತ್ತವೆ ಮತ್ತು ಕೆಲವೊಮ್ಮೆ ವಿಚಿತ್ರ ಧ್ವನಿಯಲ್ಲಿ ಅಳುತ್ತವೆ.
ಇತರ ಸಹ ನಾಯಿಗಳಿಗೆ ಸಂಕೇತ ನೀಡಲು:
ಇದಲ್ಲದೆ ನಾಯಿಗಳು ತಮ್ಮ ಗುಂಪಿನಿಂದ ಬೇರ್ಪಟ್ಟಾಗ ತನ್ನವರಿಗೆ ಸಂಕೇತಗಳನ್ನು ರವಾನಿಸಲು ಈ ರೀತಿ ಅಳಲು ಪ್ರಾರಂಭಿಸುತ್ತವೆ. ನಾಯಿಯು ತನ್ನ ಗುಂಪಿನಿಂದ ಬೇರ್ಪಟ್ಟು ಬೇರೆ ಸ್ಥಳಕ್ಕೆ ಹೋದಾಗ, ಅದು ರಾತ್ರಿಯಲ್ಲಿ ತನ್ನ ಸಹಚರರಿಗೆ ತನ್ನ ಸ್ಥಳವನ್ನು ಸೂಚಿಸಲು ಜೋರಾಗಿ ಅಳುತ್ತದೆ. ಅಮೇರಿಕನ್ ಕೆನಲ್ ಕ್ಲಬ್ (AKC) ಪ್ರಕಾರ, ಈ ರೀತಿಯ ಶಬ್ದಗಳು ನಾಯಿಗಳು ಪರಸ್ಪರ ಸಂವಹನ ನಡೆಸಲು ಒಂದು ಮಾರ್ಗವೂ ಆಗಿರಬಹುದು. ಅವು ಇತರ ನಾಯಿಗಳಿಗೆ ಸಂಕೇತ ನೀಡಲು ಅಥವಾ ಅವುಗಳ ಇರುವಿಕೆ ಮತ್ತು ಸ್ಥಳವನ್ನು ತಿಳಿಸಲು ಅಂತಹ ಶಬ್ದಗಳಲ್ಲಿ ಬೊಗಳುತ್ತವೆ.
ಏನೋ ಎಚ್ಚರಿಕೆಯ ಸಂಕೇತ:
ನಾಯಿಗಳು ಮನುಷ್ಯರಿಗಿಂತ ಉತ್ತಮ ಶ್ರವಣ ಸಾಮರ್ಥ್ಯವನ್ನು ಹೊಂದಿವೆ. ನಾವು ಕೇಳಲು ಸಾಧ್ಯವಾಗದ ಶಬ್ದಗಳನ್ನು ಅವು ಕೇಳಬಲ್ಲವು. ಅವುಗಳಿಗೆ ಅಸಾಮಾನ್ಯ ಶಬ್ದ ಅಥವಾ ಅಪರಿಚಿತ ವ್ಯಕ್ತಿಯ ಉಪಸ್ಥಿತಿಯನ್ನು ಗ್ರಹಿಸಿದಾಗ, ಅವು ಕೂಗುವ ಮೂಲಕ ನಮ್ಮನ್ನು ಎಚ್ಚರಿಸಲು ಪ್ರಯತ್ನಿಸುತ್ತವೆ. ಇದಲ್ಲದೆ ತಮ್ಮ ಸುತ್ತಮುತ್ತಲಿನ ಪ್ರದೇಶಗಳ ಬಗ್ಗೆ ಬಹಳ ಜಾಗರೂಕರಾಗಿರುವ ನಾಯಿಗಳು ಅವುಗಳಿಗೆ ಅಪರಿಚಿತರು, ಇನ್ನೊಂದು ಪ್ರಾಣಿ ಅಥವಾ ಯಾವುದೇ ಅಸಾಮಾನ್ಯ ಚಲನೆ ಕಂಡುಬಂದರೆ, ಅವು ಕೂಗುವ ಮೂಲಕ ಪ್ರತಿಕ್ರಿಯಿಸುತ್ತವೆ.
ಇದನ್ನೂ ಓದಿ: ಸೊಳ್ಳೆ ಕಚ್ಚಿದ ತಕ್ಷಣ ಮೈಯಲ್ಲಿ ತುರಿಕೆ ಕಾಣಿಸಿಕೊಳ್ಳೋದೇಕೆ? ಇದರ ಹಿಂದಿನ ವೈಜ್ಞಾನಿಕ ಕಾರಣವೇನು ತಿಳಿಯಿರಿ
ಹಸಿವು:
ಅನೇಕ ಬಾರಿ ಬೀದಿ ನಾಯಿಗಳು ಹಸಿವಿನಿಂದ ಕೂಡಾ ಅಳುತ್ತವೆ. ನನಗೆ ಹಸಿವಾಗುತ್ತಿದೆ ಎಂಬ ಭಾವನೆಯನ್ನು ವ್ಯಕ್ತಪಡಿಸಲು ಅವುಗಳು ಜೋರಾಗಿ ಕೂಗಲು ಪ್ರಾರಂಭಿಸುತ್ತವೆ. ಸಾಮಾನ್ಯವಾಗಿ ಬೀದಿನಾಯಿಗಳು ಹಸಿವಾದಾಗ ಈ ರೀತಿ ಅಳುತ್ತವೆ.
ಆರೋಗ್ಯ ಸಮಸ್ಯೆ:
ಇನ್ನೊಂದು ಕಾರಣವೆಂದರೆ ಶ್ವಾನಗಳಿಗೆ ಏನಾದರೂ ನೋವುಂಟಾದರೆ ಅಥವಾ ಅವುಗಳಿಗೆ ಹುಷಾರಿಲ್ಲದಿದ್ದರೆ ಅವುಗಳು ಜೋರಾಗಿ ಕೂಗುತ್ತವೆ. ಅಲ್ಲದೆ ತನ್ನ ಸ್ನೇಹಿತರನ್ನು ಕಳೆದುಕೊಂಡರೆ ಅವುಗಳು ಹೀಗೆ ವಿಚಿತ್ರವಾಗಿ ಕೂಗುವ ಮೂಲಕ ತಮ್ಮ ದುಃಖವನ್ನು ಹೊರಹಾಕುತ್ತವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




