World Literacy Day 2023: ಸಾಕ್ಷರತಾ ದಿನವನ್ನು ಏಕೆ ಆಚರಿಸಲಾಗುತ್ತದೆ? ಈ ಆಚರಣೆಯ ಹಿನ್ನೆಲೆಯ ಬಗ್ಗೆ ತಿಳಿಯಿರಿ
ಶಿಕ್ಷಣವು ಸುಸಂಸ್ಕೃತ, ಸಮರ್ಥ ಮತ್ತು ಬಲಿಷ್ಠ ಸಮಾಜದ ಅಡಿಪಾಯವಾಗಿದೆ. ದೇಶದ ಅಭಿವೃದ್ಧಿಯು ಶಿಕ್ಷಣದ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದು ಹೇಳಬಹುದು. ಆದ್ದರಿಂದ ಸಾಕ್ಷರತೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಶಿಕ್ಷಣದ ಮೌಲ್ಯದ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರತಿ ವರ್ಷ ಸೆಪ್ಟೆಂಬರ್ 8 ರಂದು ವಿಶ್ವ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತದೆ.
ಯಾವುದೇ ದೇಶದ ಅಭಿವೃದ್ಧಿಗೆ ಸಾಕ್ಷರತೆ ಬಹಳ ಮುಖ್ಯ. ದೇಶದ ನಾಗರಿಕರು ಹೆಚ್ಚು ಸಾಕ್ಷರರಾಗಿದ್ದರೆ, ದೇಶವು ಹೆಚ್ಚು ಪ್ರಗತಿ ಹೊಂದಲು ಸಾಧ್ಯ. ʼವಿದ್ಯಾಂ ದದಾತಿ ವಿನಯಂ, ವಿನಯಾದ್ ಯಾತಿ ಪಾತ್ರತಾಮ್ʼ ಎಂದರೆ ನಿಜವಾದ ಜ್ಞಾನವು ಶಿಸ್ತನ್ನು ನೀಡುತ್ತದೆ, ಶಿಸ್ತಿನಿಂದ ಯೋಗ್ಯತೆ ಬರುತ್ತದೆ. ಶಿಕ್ಷಣದ ಈ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ಸಾಕ್ಷರತೆಯ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರತಿ ವರ್ಷ ಸೆಪ್ಟೆಂಬರ್ 8 ರಂದು ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತದೆ. ಸಮಾಜದಲ್ಲಿ ಶಿಕ್ಷಣ ಮತ್ತು ಅದರ ಮಹತ್ವವನ್ನು ಸಾರುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ. ಭಾರತದಲ್ಲಿಯೂ ವಿಶ್ವ ಸಾಕ್ಷರತಾ ದಿನವನ್ನು ಪ್ರಮುಖ ದಿನವನ್ನಾಗಿ ಆಚರಿಸಲಾಗುತ್ತದೆ. ಸರ್ವ ಶಿಕ್ಷಾ ಅಭಿಯಾನದ ಮೂಲಕ ಸಾಕ್ಷರತೆಯ ದೆಶೆಯಲ್ಲಿ ಭಾರತ ಶ್ಲಾಘನೀಯ ಕೆಲಸ ಮಾಡುತ್ತಿದೆ. ವಿಶ್ವ ಸಾಕ್ಷರತಾ ದಿನವನ್ನು ಏಕೆ ಪ್ರಾರಂಭಿಸಲಾಯಿತು ಅದರ ಹಿನ್ನೆಲೆ ಮತ್ತು ಮಹತ್ವ ಏನೆಂಬುವುದನ್ನು ತಿಳಿಯೋಣ.
ಸಾಕ್ಷರತಾ ದಿನದ ಇತಿಹಾಸ:
ಯುನೆಸ್ಕೋ ಮೊದಲ ಬಾರಿಗೆ ನವೆಂಬರ್ 7, 1965 ರಲ್ಲಿ ವಿಶ್ವ ಸಾಕ್ಷರತಾ ದಿನವನ್ನು ಆಚರಿಸಬೇಕೆಂದು ನಿರ್ಧರಿಸಿತು. ಪ್ರಪಂಚದಿಂದ ಅನಕ್ಷರತೆಯ ಪ್ರತಿಯೊಂದು ಕುರುಹುಗಳನ್ನು ತೆಗೆದುಹಾಕುವ ನಿಟ್ಟಿನಲ್ಲಿ ಹಾಗೂ ಪ್ರತಿಯೊಂದು ದೇಶದ ಅಭಿವೃದ್ಧಿಗೆ ಶಿಕ್ಷಣದ ಮಹತ್ವ ಎಷ್ಟು ಮುಖ್ಯ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅಕ್ಟೋಬರ್ 26, 1966 ರಂದು ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (UNESCO) ತನ್ನ 14 ನೇ ಸಾಮಾನ್ಯ ಸಮ್ಮೇಳನದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 8 ರಂದು ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸಲಾಗುವುದು ಎಂದು ಘೋಷಿಸಿತು. ಇದರ ನಂತರ ಸೆಪ್ಟೆಂಬರ್ 8, 1966 ರಂದು ವಿಶ್ವವು ಮೊದಲ ಬಾರಿಗೆ ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸಲಾಯಿತು. ಜಗತ್ತಿನ ಹಲವು ದೇಶಗಳು ಇದರಲ್ಲಿ ಪಾಲ್ಗೊಂಡು ಜನಸಾಮಾನ್ಯರಿಗೆ ಶಿಕ್ಷಣ ನೀಡುವ ಪ್ರತಿಜ್ಞೆ ಸ್ವೀಕರಿಸದರು.
ಇದನ್ನೂ ಓದಿ: ಇಂದು ವಿಶ್ವ ಸಮೋಸಾ ದಿನ, ಈ ಖಾದ್ಯ ಭಾರತಕ್ಕೆ ಬಂದಿದ್ದು ಹೇಗೆ?
ವಿಶ್ವ ಸಾಕ್ಷರತಾ ದಿನದ ಪ್ರಾಮುಖ್ಯತೆ:
ಜನರನ್ನು ಸಾಕ್ಷರರನ್ನಾಗಿಸಲು ಮತ್ತು ಸಾಮಾಜಿಕ ಮತ್ತು ಮಾನವ ಅಭಿವೃದ್ಧಿಗಾಗಿ ಅವರ ಹಕ್ಕುಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಸಾಕ್ಷರತೆಯು ಜನರು ಉತ್ತಮ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ ಅದರೊಂದಿಗೆ ಬಡತನ ನಿರ್ಮೂಲನೆ ಮಾಡಲು, ಜನಸಂಖ್ಯೆಯನ್ನು ನಿಯಂತ್ರಿಸಲು ಮತ್ತು ಮಕ್ಕಳ ಮರಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉತ್ತಮ ಶಿಕ್ಷಣಕ್ಕಾಗಿ ಜನರನ್ನು ಪ್ರೋತ್ಸಾಹಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಜನರಿಗೆ ಶಿಕ್ಷಣದ ಬಗ್ಗೆ ಅರಿವು ಮೂಡಿಸಲು ಯುನೆಸ್ಕೋ ಹಾಗೂ ಅನೇಕ ದೇಶಗಳ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಶಾಲೆಗಳು ಕಾಲೇಜುಗಳು ಮತ್ತು ಊರುಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಮಾನವ ಅಭಿವೃದ್ಧಿ ಮತ್ತು ಸಮಾಜಕ್ಕಾಗಿ ಅವರ ಹಕ್ಕುಗಳನ್ನು ತಿಳಿಯಲು ಮತ್ತು ಸಾಕ್ಷರತೆಯ ಕಡೆಗೆ ಮಾನವ ಪ್ರಜ್ಞೆಯನ್ನು ಉತ್ತೇಜಿಸಲು ವಿಶ್ವ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತದೆ.
ಅಂತರಾಷ್ಟ್ರೀಯ ಸಾಕ್ಷರತಾ ದಿನದ ಥೀಮ್ ಏನು?
ಪ್ರತಿವರ್ಷ ವಿಭಿನ್ನ ಥೀಮ್ನೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಸಾಕ್ಷರತಾ ದಿನವನ್ನು “ಪರಿವರ್ತನೆಯಲ್ಲಿರುವ ಜಗತ್ತಿಗೆ ಸಾಕ್ಷರತೆಯನ್ನು ಉತ್ತೇಜಿಸುವುದು: ಸುಸ್ಥಿರ ಮತ್ತು ಶಾಂತಿಯುತ ಸಮಾಜಕ್ಕೆ ಅಡಿಪಾಯವನ್ನು ನಿರ್ಮಿಸುವುದು” ಎಂಬ ವಿಷಯದ ಅಡಿಯಲ್ಲಿ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತಿದೆ. ಯುನೆಸ್ಕೋ ಈ ದಿನವನ್ನು ಆಚರಿಸಲು ಪ್ರಪಂಚದಾದ್ಯಂತ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: