World Bamboo Day 2023: ವಿಶ್ವ ಬಿದಿರು ದಿನವನ್ನು ಏಕೆ ಆರಿಸಲಾಗುತ್ತದೆ? ಅದರ ಹಿನ್ನೆಲೆ ಇಲ್ಲಿದೆ
ಬಿದಿರು ಬೆಚ್ಚಗಿನ ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಹುಲ್ಲು ಜಾತಿಯ ಸಸ್ಯವಾಗಿದ್ದು, ಅದರ ವಿವಿಧ ಉಪಯೋಗಗಳು, ಬಿದಿರು ಕೃಷಿ ಹಾಗೂ ಬಿದಿರು ಮರದ ರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಸೆಪ್ಟೆಂಬರ್ 18 ರಂದು ವಿಶ್ವ ಬಿದಿರು ದಿನವನ್ನು ಆಚರಿಸಲಾಗುತ್ತದೆ.
ಬಿದಿರು ವಿಶ್ವದ ಅದ್ಭುತ ಮರಗಳಲ್ಲಿ ಒಂದಾಗಿದೆ. ಇದು ವೇಗವಾಗಿ ಬೆಳೆಯುವ ಹುಲ್ಲು ಜಾತಿಯ ಸಸ್ಯವಾಗಿದ್ದು, ಇತರ ಮರಗಳಂತೆ, ಇದು ಕೂಡಾ ಭೂಮಿಯ ರಕ್ಷಣೆಗೆ ಬಹಳ ಮುಖ್ಯವಾಗಿದೆ. ಮಣ್ಣಿನ ಸವೆತವನ್ನು ತಡೆಗಟ್ಟುವಲ್ಲಿ, ಆಮ್ಲಜನಕ ಮಟ್ಟವನ್ನು ಹೆಚ್ಚಿಸುವಲ್ಲಿ ಇದು ಸಹಕಾರಿಯಾಗಿದೆ. ಬಿದಿರಿನ ಮರವು ಇತರ ಮರಗಳಿಗಿಂತ ಶೇಕಡಾ 35 % ಹೆಚ್ಚು ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಹೀಗೆ ಬಿದಿರಿನ ಮರವು ಪರಿಸರದಲ್ಲಿ ಆಮ್ಲಜನಕ ಮತ್ತು ಇಂಗಾಲದ ಡೈ ಆಕ್ಸೈಡ್ ನ್ನು ಸಮತೋಲನಗೊಳಿಸುತ್ತದೆ. ಈ ರೀತಿಯಾಗಿ ಬಿದಿರಿನ ಮರವು ಪರಿಸರಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇಷ್ಟು ಮಾತ್ರವಲ್ಲದೆ ಅದರ ಔಷದೀಯ ಗುಣಗಳು ಹಾಗೂ ಅದರ ವಿವಿಧ ಉಪಯೋಗಗಳ ಕಾರಣದಿಂದಾಗಿ ಬಿದಿರು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದೆ. ಅಲ್ಲದೆ ಬಿದಿರು ಕೃಷಿಯು ರೈತರಿಗೆ ಆರ್ಥಿಕವಾಗಿ ಲಾಭದಾಯಕವಾಗಿದೆ. ಹಾಗಾಗಿ ಬಿದಿರು ಕೃಷಿಯನ್ನು ಉತ್ತೇಜಿಸಲು ಮತ್ತು ಅದರ ವಿವಿಧ ಉಪಯೋಗಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿವರ್ಷ ಸೆಪ್ಟೆಂಬರ್ 18 ರಂದು ವಿಶ್ವ ಬಿದಿರು ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಬಿದಿರು ದಿನದ ಇತಿಹಾಸ:
ಸೆಪ್ಟೆಂಬರ್ 18, 2009 ರಲ್ಲಿ ಬ್ಯಾಂಕಾಕ್ ನ ಥೈಲ್ಯಾಂಡ್ ನಲ್ಲಿ ನಡೆದ 8 ನೇ ವಿಶ್ವ ಬಿದಿರು ಕಾಂಗ್ರೇಸ್ ಸಮ್ಮೇಳನದಲ್ಲಿ, ವಿಶ್ವ ಬಿದಿರು ಸಂಸ್ಥೆಯು (WBO) ಪ್ರತಿವರ್ಷ ಸೆಪ್ಟೆಂಬರ್ 18 ರಂದು ವಿಶ್ವ ಬಿದಿರು ದಿನವನ್ನು ಆಚರಿಸಲಾಗುವುದು ಎಂದು ಅಧೀಕೃತವಾಗಿ ಘೋಷಿಸಿತು. ಅಂದಿನಿಂದ ಪ್ರತಿವರ್ಷ ಸೆಪ್ಟೆಂಬರ್ 18 ರಂದು ಬಿದಿರು ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ. ಈ ದಿನವನ್ನು ಆಚರಿಸುವ ಹಿಂದಿನ ಉದ್ದೇಶವೇನೆಂದರೆ, ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವುದು, ಬಿದಿರನ ಕೃಷಿಯನ್ನು ಉತ್ತೇಜಿಸುವುದು ಹಾಗೂ ಬಿದಿರಿನ ಸುಸ್ಥಿರ ಬಳಕೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.
ವಿಶ್ವ ಬಿದಿರು ದಿನದ ಮಹತ್ವ:
ಬಿದಿರಿನ ಕುರಿತು ಜಾಗೃತಿ ಮೂಡಿಸಲಾಗುವುದರಿಂದ ಈ ದಿನ ಮಹತ್ವದ್ದಾಗಿದೆ. ಈ ದಿನದಂದು ಪ್ರಪಂಚದಾದ್ಯಂತ ಬಿದಿರು ಕೃಷಿ ಮತ್ತು ಬಿದಿರು ಉದ್ಯಮದ ಪ್ರಗತಿಯ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಲಾಗುತ್ತದೆ. ಬಿದಿರು ಕೃಷಿಯು ಸ್ಥಳೀಯ ಸಮುದಾಯಗಳಿಗೆ ಆದಾಯದ ಮೂಲವನ್ನು ಪಡೆಯಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಬಿದಿರು ಉದ್ಯಮದ ಜಾಗೃತಿ ಮೂಡಿಸುವುದೇ ಈ ದಿನ ವಿಶೇಷ
ಬಿದಿರು ಇದು ವೇಗವಾಗಿ ಬೆಳೆಯುವ ಹುಲ್ಲು ಜಾತಿಯ ಸಸ್ಯವಾಗಿದ್ದು, ಇದಕ್ಕೆ ಯಾವುದೇ ರೀತಿಯ ಹೆಚ್ಚಿನ ಗೊಬ್ಬರ ಅಥವಾ ಪೋಷಣೆಯ ಅಗತ್ಯವಿಲ್ಲ. ಆದರೆ ಈ ಕೃಷಿಯು ಹೆಚ್ಚಿನ ಮಟ್ಟದ ಆದಾಯವನ್ನು ತಂದುಕೊಡುತ್ತದೆ. ಬಿದಿರನ್ನು ಮುಖ್ಯವಾಗಿ ಇದು ಪೀಠೋಪಕರಣ ತಯಾರಿಕೆ, ಆಹಾರ, ಜೈವಿಕ ಇಂಧನ, ಬಟ್ಟೆ ಹಾಗೂ ಇನ್ನೂ ಹೆಚ್ಚಿನ ವಸ್ತುಗಳನ್ನು ತಯಾರಿಸಲು ಬಳಸಲಾಗುತ್ತದೆ. ಬಿದಿರಿನ ವಸ್ತುಗಳು ಜಾಗತಿಕ ಮಟ್ಟದಲ್ಲಿ ಪ್ರಖ್ಯಾತಿಯನ್ನು ಪಡೆದಿದೆ. ಹಾಗಾಗಿ ಬಿದಿರು ಕೃಷಿ ಮತ್ತು ಬಿದಿರಿನ ಅನೇಕ ಉಪಯೋಗಗಳ ಕುರಿತು ಜಾಗೃತಿ ಮೂಡಿಸುವ ಮೂಲಕ ಸ್ಥಳೀಯ ಸಮುದಾಯಗಳನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ಹಾಗೂ ವಿಶೇಷವಾಗಿ ಬಿದಿರು ಮರರ ರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಈ ವಿಶೇಷ ದಿನವನ್ನು ಆಚರಿಸಲಾಗುತ್ತದೆ.
ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.