World Students Day 2023: ವಿಶ್ವ ವಿದ್ಯಾರ್ಥಿಗಳ ದಿನವನ್ನು ಏಕೆ ಆಚರಿಸಲಾಗುತ್ತದೆ? ಈ ದಿನದ ಇತಿಹಾಸ ಪ್ರಾಮುಖ್ಯತೆ ಏನು?
ಶಿಕ್ಷಣ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಭಾರತ ರತ್ನ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಮಹತ್ವದ ಕೊಡುಗೆಯನ್ನು ಗೌರವಿಸಲು ಅಕ್ಟೋಬರ್ 15 ರಂದು ಡಾ.ಕಲಾಂ ಅವರ ಜನ್ಮದಿನದ ಸ್ಮರಣಾರ್ಥವಾಗಿ ವಿಶ್ವ ವಿದ್ಯಾರ್ಥಿಗಳ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಪ್ರಾಮುಖ್ಯತೆಯ ಬಗ್ಗೆ ತಿಳಿಯಿರಿ
ಶಿಕ್ಷಣವು ಸಮಾಜವನ್ನು ಬದಲಾಯಿಸುವ ಪ್ರಮುಖ ಅಸ್ತ್ರವಾಗಿದೆ. ಪ್ರಸ್ತುತ ಯುಗದಲ್ಲಿ ಶಿಕ್ಷಣದ ಪ್ರಾಮುಖ್ಯತೆ ಬಹಳಷ್ಟು ಹೆಚ್ಚಾಗಿದೆ. ನಾವು ನಮ್ಮ ಭವಿಷ್ಯವನ್ನು ಉತ್ತಮ ಮತ್ತು ಉಜ್ವಲವಾಗಿ ರೂಪಿಸಲು ಬಯಸಿದರೆ, ಶಿಕ್ಷಣವನ್ನು ಪಡೆಯುವುದು ಬಹಳ ಮುಖ್ಯ. ಏಕೆಂದರೆ ಶಿಕ್ಷಣವು ವ್ಯಕ್ತಿಯ ಜೀವನದ ಗುಣಮಟ್ಟವನ್ನು ಸುಧಾರಿಸುವುದು ಮಾತ್ರವಲ್ಲದೆ, ಆತನ ಜ್ಞಾನ, ಕೌಶಲ್ಯ, ವ್ಯಕ್ತಿತ್ವ ಹಾಗೂ ಮನೋಭಾವವನ್ನು ಅಭಿವೃಧಿಪಡಿಸುತ್ತದೆ. ಅಷ್ಟೇ ಅಲ್ಲ ಶಿಕ್ಷಣವು ಯಾವುದೇ ಒಂದು ದೇಶ ಅಥವಾ ಸಮಾಜವನ್ನು ಉತ್ತಮವಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದೇ ರೀತಿ ಉತ್ತಮ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ದೇಶದ ಭವಿಷ್ಯ ಎಂದು ನಂಬಿದ್ದವರು, ಶ್ರೇಷ್ಠ ವಿಜ್ಞಾನಿ ಹಾಗೂ ಭಾರತದ ಮಿಸೈಲ್ ಮ್ಯಾನ್ ಡಾ. ಎ.ಪಿ.ಜೆ ಅಬ್ದುಲ್ ಕಲಾಂ. ಕಲಾಂ ಅವರು ಕೇವಲ ವಿಜ್ಞಾನಿ ಮಾತ್ರವಲ್ಲ ಶ್ರೇಷ್ಠ ಚಿಂತಕ, ಶಿಕ್ಷಕ ಮತ್ತು ತತ್ವಜ್ಞಾನಿಯಾಗಿದ್ದವರು. ಹಾಗೂ ಅವರು ಎಲ್ಲಕ್ಕಿಂತ ಹೆಚ್ಚಾಗಿ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದರು. ವಿದ್ಯಾರ್ಥಿಗಳು ದೇಶದ ಭವಿಷ್ಯ ಎಂದು ನಂಬಿದ್ದ ಅವರು ಶಿಕ್ಷಣವನ್ನು ಉತ್ತೇಜಿಸುವಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಹಲವು ಸುಧಾರಣೆಗಳನ್ನು ಮಾಡುವಲ್ಲಿ ಹಾಗೂ ತಮ್ಮ ಸ್ಪೂರಿದಾಯಕ ಮಾತಿನ ಮೂಲಕ ಅದೆಷ್ಟೋ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ. ಹೀಗೆ ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಮೇಲಿನ ಡಾ. ಕಲಾಂ ಅವರ ಅತೀವ ಪ್ರೀತಿಗಾಗಿ ಅವರ ಜನ್ಮದಿನದ ಸ್ಮರಣಾರ್ಥವಾಗಿ ಅಕ್ಟೋಬರ್ 15 ರಂದು ವಿಶ್ವ ವಿದ್ಯಾರ್ಥಿಗಳ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ವಿದ್ಯಾರ್ಥಿ ದಿನದ ಆಚರಣೆಯ ಇತಿಹಾಸ:
ಪ್ರತಿವರ್ಷ ಅಕ್ಟೋಬರ್ 15ರಂದು ಅಂದರೆ ಭಾರತ ರತ್ನ ಪ್ರಶಸ್ತಿ ಪುರಸ್ಕೃತ ದಿವಂಗತ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜನ್ಮದಿನದ ನೆನಪಿನ ಶುಭ ಸಂದರ್ಭದಲ್ಲಿ ವಿಶ್ವ ವಿದ್ಯಾರ್ಥಿಗಳ ದಿನವನ್ನು ಆಚರಿಸಲಾಗುತ್ತದೆ. ಮೊದಲ ಬಾರಿಗೆ 2010 ರಲ್ಲಿ, ಕಲಾಂ ಅವರ 79ನೇ ಜನ್ಮದಿನದಂದು ವಿಶ್ವ ವಿದ್ಯಾರ್ಥಿಗಳ ದಿನವನ್ನು ಆಚರಿಸಲಾಯಿತು. ಶಿಕ್ಷಣ, ಪ್ರಪಂಚದಾದ್ಯಂತ ವಿದ್ಯಾರ್ಥಿಗಳ ಪ್ರಗತಿಗಾಗಿ ಅವರು ಮಾಡಿದ ಕಾರ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಕಲಾಂ ಅವರ ಮಹತ್ವದ ಕೊಡುಗೆಯನ್ನು ಗೌರವಿಸಲು ವಿಶ್ವ ಸಂಸ್ಥೆಯು ಡಾ. ಎ.ಪಿ.ಜೆ ಅಬ್ದಲ್ ಕಲಾಂ ಅವರ ಜನ್ಮ ದಿನವನ್ನು ವಿಶ್ವ ವಿದ್ಯಾರ್ಥಿಗಳ ದಿನವನ್ನಾಗಿ ಆಚರಿಸಲು ಘೋಷಿಸಿತು. ಅಂದಿನಿಂದ ಪ್ರತಿವರ್ಷ ಅಕ್ಟೋಬರ್ 15 ರಂದು ವಿಶ್ವ ವಿದ್ಯಾರ್ಥಿಗಳ ದಿನವನ್ನು ಆಚರಿಸಲಾಗುತ್ತಿದೆ.
ಇದನ್ನೂ ಓದಿ: ಆರೋಗ್ಯ, ಸೌಂದರ್ಯಕ್ಕೆರಡೂ ಮೊಟ್ಟೆಯಿಂದ ಆಗುವ ಪ್ರಯೋಜನ ಒಂದೆರಡಲ್ಲ!
ವಿಶ್ವ ವಿದ್ಯಾರ್ಥಿ ದಿನದ ಮಹತ್ವ:
ಜೀವನದಲ್ಲಿ ಎಷ್ಟೇ ಕಷ್ಟಗಳು ಇದ್ದರೂ ಶಿಕ್ಷಣದ ಮೂಲಕ ನಾವು ಈ ಎಲ್ಲಾ ಅಡೆತಡೆಗಳನ್ನು ನಿವಾರಿಸಬಹುದು ಮತ್ತು ನಮ್ಮ ಗುರಿಯನ್ನು ಸಾಧಿಸಬಹುದು ಎಂದು ತೋರಿಸಿಕೊಟ್ಟವರು ಡಾ. ಎ.ಪಿ.ಜಿ ಅಬ್ದಲ್ ಕಲಾಂ. ಇಂತಹ ಮಹಾನ್ ವ್ಯಕ್ತಿಯ ಜೀವನ ಪಾಠವು ನಮಗೆಲ್ಲರಿಗೂ ಸ್ಪೂರ್ತಿ. ಅವರ ಜೀವನ ಪಾಠವನ್ನು ಸ್ಪೂರ್ತಿಯಾಗಿಟ್ಟುಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಬೇಕು ಹಾಗೂ ಶ್ರೇಷ್ಠ ಸಾಧನೆ ಮಾಡಬೇಕು ಎನ್ನುವುದು ಈ ಆಚರಣೆಯ ಹಿಂದಿನ ಉದ್ದೇಶವಾಗಿದೆ.
ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜನ್ಮದಿನದಂದು ಶಾಲಾ ಕಾಲೇಜುಗಳಲ್ಲಿ ವಿವಿಧ ಚಟುವಟಿಕೆಗಳು ಮತ್ತು ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.ಈ ದಿನ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಶಿಕ್ಷಣದ ಮಹತ್ವವನ್ನು ಸಾರಲಾಗುತ್ತದೆ. ಅಲ್ಲದೆ ಮಕ್ಕಳಿಗೆ ಡಾ. ಕಲಾಂ ಅವರ ಜೀವನ ಮತ್ತು ಸಾಧನೆಯ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 5:43 pm, Sat, 14 October 23