Eid-ul-Adha 2023: ಬಕ್ರೀದ್ ಹಬ್ಬದ ಪ್ರಯುಕ್ತ ಇಂದು ಷೇರು ಮಾರುಕಟ್ಟೆಗೆ ರಜೆ, ಇನ್ನು ಯಾವೆಲ್ಲ ಹಬ್ಬಕ್ಕೆ ರಜೆ ಇದೆ? ಇಲ್ಲಿದೆ ಮಾಹಿತಿ
ಬಕ್ರೀದ್ ಹಬ್ಬದ ಪ್ರಯುಕ್ತ ಭಾರತೀಯ ಷೇರು ಮಾರುಕಟ್ಟೆಗಳಾದ ಬಾಂಬೆ ಸ್ಟಾಕ್ ಎಕ್ಸೆಂಜ್ ಹಾಗೂ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರಗಳಿಗೆ ಜೂನ್ 29 ರಂದು ರಜೆ ಘೋಷಿಸಲಾಗಿದೆ.
ಸಾವಿರಾರು ಕೋಟಿ ವ್ಯವಹಾರ ನಡೆಯುವ ಭಾರತದ ಷೇರು ಮಾರುಕಟ್ಟೆಗಳಲ್ಲಿ ಶನಿವಾರ ಮತ್ತು ಭಾನುವಾರದ ರಜೆಗಳ ಹೊರತಾಗಿಯೂ ಕೆಲವೊಂದು ಧಾರ್ಮಿಕ ಹಬ್ಬ ಮತ್ತು ರಾಷ್ಟ್ರೀಯ ಹಬ್ಬಗಳ ದಿನದಂದು ಕೂಡಾ ರಜೆ ಇರುತ್ತದೆ. ಹಾಗಾಗಿ ಬಕ್ರೀದ್ ಹಬ್ಬದ ಪ್ರಯುಕ್ತ ಜೂನ್ 29 ರಂದು ಭಾರತೀಯ ಷೇರು ಮಾರುಕಟ್ಟೆಗಳಾದ ಬಾಂಬೆ ಸ್ಟಾಕ್ ಎಕ್ಸೆಂಜ್ ಹಾಗೂ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರಗಳಿಗೆ ರಜೆ ಘೋಷಿಸಲಾಗಿದೆ. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರವು ತನ್ನ ಅಧಿಕೃತ ವೈಬ್ಸೈಟ್ನಲ್ಲಿ ಜೂನ್ 28ರ ಬದಲಿಗೆ ಜೂನ್ 29, 2023 ರಂದು ರಜೆ ಎಂದು ತಿಳಿಸಿದೆ.
ಬಕ್ರೀದ್ ಹಬ್ಬದ ನಿಮಿತ್ತ ಭಾರತೀಯ ಷೇರು ಮಾರುಕಟ್ಟೆ ಬುಧವಾರದ ಬದಲು ಗುರುವಾರ ಮುಚ್ಚಲಿದೆ. ಗುರುವಾರ ಷೇರು ಮಾರುಕಟ್ಟೆಯಲ್ಲಿ ಯಾವುದೇ ವಹಿವಾಟು ನಡೆಯುವುದಿಲ್ಲ” ಎಂದು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್.ಎಸ್.ಇ) ಮಂಗಳವಾರ ತನ್ನ ಸುತ್ತೋಲೆಯಲ್ಲಿ ಈ ಮಾಹಿತಿಯನ್ನು ನೀಡಿದೆ.
2023ರ ಆರಂಭದಲ್ಲಿ ವ್ಯಾಪಾರ ರಜಾದಿನಗಳನ್ನು ಘೋಷಿಸುವಾಗ, ಒಟ್ಟು 15 ವ್ಯಾಪಾರ ರಜಾದಿನಗಳನ್ನು ಘೋಷಿಸಲಾಗಿದೆ. ಅದರಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಜೂನ್ 28ರಂದು ರಜೆ ನೀಡಲಾಗಿತ್ತು. ಇದೀಗ ಮಹಾರಾಷ್ಟ್ರ ಸರ್ಕಾರವು ಜೂನ್ 29ರಂದು ಬಕ್ರೀದ್ ಹಬ್ಬಕ್ಕೆ ಸಾರ್ವಜನಿಕ ರಜೆ ಘೋಷಿಸಿದ ನಂತರ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಈ ಹಿಂದೆ ಜೂನ್ 28, 2023ರಂದು ಘೋಷಿಸಲಾದ ರಜೆಯನ್ನು ಹಿಂಪಡೆದು, ಜೂನ್ 29 ರಂದು ರಜೆ ಘೋಷಿಸಿದೆ.
ಇದನ್ನೂ ಓದಿ: Stock Market Holiday: 2023ರಲ್ಲಿ ಷೇರು ಮಾರುಕಟ್ಟೆ ರಜಾದಿನಗಳ ವಿವರ ಇಲ್ಲಿದೆ ನೋಡಿ
ನಿಫ್ಟಿ ಮತ್ತು ನಿಫ್ಟಿ ಬ್ಯಾಂಕ್ ಒಪ್ಪಂದಗಳ ಅಸ್ತಿತ್ವದಲ್ಲಿರುವ ಎಲ್ಲಾ ಒಪ್ಪಂದಗಳ ಮುಕ್ತಾಯವು ಗುರುವಾರದ ಬದಲಿಗೆ ಬುಧವಾರ ನಡೆದಿದೆ. ಆದರೆ ನಿಫ್ಟಿ ಮಿಡ್ ಕ್ಯಾಪ್ ಉತ್ಪನ್ನಗಳ ಒಪ್ಪಂದಗಳು ಎಂದಿನಂತೆ ಬುಧವಾರದಂದು ಮುಕ್ತಾಯಗೊಳ್ಳುತ್ತದೆ. ಹಾಗೂ ಹೊಸ ಸರಣಿಯ ಒಪ್ಪಂದಗಳು ಶುಕ್ರವಾರದಿಂದ ಪ್ರಾರಂಭವಾಗಲಿದೆ.
ಷೇರು ಮಾರುಕಟ್ಟೆಯ 2023ರ ಮುಂಬರುವ ರಜಾದಿನಗಳು:
ಆಗಸ್ಟ್ 15 ರಂದು ಸ್ವಾತಂತ್ರ್ಯ ರಜಾದಿನದ ಪ್ರಯುಕ್ತ
ಸಪ್ಟೆಂಬರ್ 19 ರಂದು ಗಣೇಶ ಚತುರ್ಥಿಯ ಪ್ರಯುಕ್ತ
ಅಕ್ಟೋಬರ್ 2 ರಂದು ಗಾಂಧಿ ಜಯಂತಿಯ ಪ್ರಯುಕ್ತ
ಅಕ್ಟೋಬರ್ 24 ದಸರಾ ಪ್ರಯುಕ್ತ
ದೀಪಾವಳಿಯ ಪ್ರಯುಕ್ತ ನವೆಂಬರ್ 14
ಗುರು ನಾನಕ್ ಜಯಂತಿಯ ಪ್ರಯುಕ್ತ ನವೆಂಬರ್ 27
ಕ್ರಿಸ್ಮಸ್ ಪ್ರಯುಕ್ತ ಡಿಸೆಂಬರ್ 25
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:22 am, Thu, 29 June 23