
ಕಾನೂನಿಗಿಂತ ಯಾರು ದೊಡ್ಡವರಲ್ಲ. ಕಾನೂನಿನ ಮುಂದೆ ಎಲ್ಲರೂ ಸಮಾನರು. ಎಲ್ಲರಿಗೂ ಸಮಾನವಾಗಿ ಹಾಗೂ ನಿಷ್ಪಕ್ಷಪಾತವಾಗಿ ನ್ಯಾಯವನ್ನು ಒದಗಿಸಬೇಕೆನ್ನುವುದು ಕಾನೂನಿನ ಆಶಯ. ಆದ್ರೆ ಇಂದಿಗೂ ಕೂಡಾ ಅದೆಷ್ಟೋ ಮಂದಿ ಅನ್ಯಾಯಕ್ಕೊಳಗಾಗಿ ನ್ಯಾಯ ಸಿಗದೆ, ಸರಿಯಾದ ನ್ಯಾಯಕ್ಕಾಗಿ ಪರದಾಡುತ್ತಿದ್ದಾರೆ. ಹೀಗಾಗಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸಲು, ಅನ್ಯಾಯಕ್ಕೊಳಗಾದವರ ಹಕ್ಕುಗಳನ್ನು ರಕ್ಷಿಸಲು ಹಾಗೂ ಮುಖ್ಯವಾಗಿ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ನ್ಯಾಯದ ಮಹತ್ವವನ್ನು ಉತ್ತೇಜಿಸಲು, ನ್ಯಾಯಯುತ, ಶಾಂತಿಯುತ ಮತ್ತು ಸುರಕ್ಷಿತ ಜಗತ್ತನ್ನು ನಿರ್ಮಿಸುವಲ್ಲಿ ಅಂತಾರಾಷ್ಟ್ರೀಯ ಕಾನೂನಿನ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರತಿ ವರ್ಷ ಜುಲೈ 17 ರಂದು ಅಂತಾರಾಷ್ಟ್ರೀಯ ನ್ಯಾಯ ದಿನವನ್ನು (World Day for International Justice) ಆಚರಿಸಲಾಗುತ್ತದೆ. ಈ ವಿಶೇಷ ಆಚರಣೆಯ ಹಿನ್ನೆಲೆ ಏನೆಂಬುದನ್ನು ನೋಡೋಣ ಬನ್ನಿ.
ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ರಚನೆಗೆ ಕಾರಣವಾದ ರೋಮ್ ಶಾಸನ ಒಪ್ಪಂದದ ಸವಿ ನೆನಪಿಗಾಗಿ ಅಂತಾರಾಷ್ಟ್ರೀಯ ನ್ಯಾಯ ದಿನವನ್ನು ಆಚರಿಸಲಾಗುತ್ತದೆ. ಜುಲೈ 17, 1998 ರಂದು, ರೋಮ್ ಶಾಸನವನ್ನು ಅಂಗೀಕರಿಸಲಾಯಿತು, ಇದು ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ICC) ಸ್ಥಾಪನೆಗೆ ನಿರ್ಣಾಯಕ ದಾಖಲೆಯಾಗಿದೆ. ರೋಮ್ ಶಾಸನವನ್ನು 1998 ರಲ್ಲಿ ಅಂಗೀಕರಿಸಲಾಗಿದ್ದರೂ, ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ತನ್ನ ಔಪಚಾರಿಕ ಕಾರ್ಯಾಚರಣೆಗಳನ್ನು ಜುಲೈ 1, 2002 ರಂದು ಪ್ರಾರಂಭಿಸಿತು. ಹೀಗೆ ಜುಲೈ 17, 1998 ರಲ್ಲಿ ರೋಮ್ ಶಾಸನವನ್ನು ಅಳವಡಿಸಿಕೊಂಡ ನೆನಪಿಗಾಗಿ ಈ ದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು.
ಇದನ್ನೂ ಓದಿ: ಯುವಕರು ದೇಶದ ಭವಿಷ್ಯ; ವಿಶ್ವ ಯುವ ಕೌಶಲ್ಯ ದಿನವನ್ನು ಆಚರಿಸುವ ಉದ್ದೇಶವನ್ನು ತಿಳಿಯಿರಿ
ಈ ದಿನ ವಿಶೇಷವಾಗಿ ಶಿಕ್ಷೆಯ ವಿನಾಯಿತಿಯನ್ನು ನಿಭಾಯಿಸುವಲ್ಲಿ, ಜಾಗತಿಕ ಶಾಂತಿ, ಭದ್ರತೆಗೆ ಕೊಡುಗೆ ನೀಡುವಲ್ಲಿ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಸೇರಿದಂತೆ ಅಂತಾರಾಷ್ಟ್ರೀಯ ನ್ಯಾಯ ಕಾರ್ಯ ವಿಧಾನಗಳ ಪಾತ್ರಗಳ ಬಗ್ಗೆ ಒತ್ತಿ ಹೇಳುತ್ತದೆ. ಅಲ್ಲದೆ ನ್ಯಾಯದ ಬಗ್ಗೆ ಹಾಗೂ ಮಾನವೀಯತೆಗೆ ವಿರುದ್ಧವೆನಿಸುವ ಅಪರಾಧ ಕೃತ್ಯಗಳು, ದೌರ್ಜನ್ಯ, ಚಿತ್ರಹಿಂಸೆ, ಯುದ್ಧ ಅಪರಾಧಗಳು, ಮಿಲಿಟರಿ ಆಕ್ರಮಣ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ಜೊತೆಗೆ ಈ ದಿನ ನ್ಯಾಯಯುತ, ಶಾಂತಿಯು ಮತ್ತು ಸುರಕ್ಷಿತ ಜಗತ್ತನ್ನು ನಿರ್ಮಿಸಲು ನಮಗೆ ಸ್ಫೂರ್ತಿ ನೀಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:53 am, Thu, 17 July 25