World Food Safety Day 2023: ವಿಶ್ವ ಆಹಾರ ಸುರಕ್ಷತಾ ದಿನದ ಇತಿಹಾಸ, ಮಹತ್ವ ಬಗ್ಗೆ ಇಲ್ಲಿದೆ ಮಾಹಿತಿ

ಆರೋಗ್ಯಕರವಾದ ಆಹಾರ ಸೇವನೆ ಬಲು ಮುಖ್ಯ ಜೊತೆಗೆ ಆಹಾರ ಸುರಕ್ಷತೆಯೂ ಕೂಡ. ಇದನ್ನು ಜಗತ್ತಿನ ಪ್ರತಿಯೊಬ್ಬರಿಗೂ ತಿಳಿಸಲು ವಿಶ್ವ ಆರೋಗ್ಯ ಸಂಸ್ಥೆಯು ಜೂನ್ 7 ಅನ್ನು ವಿಶ್ವ ಆಹಾರ ಸುರಕ್ಷತಾ ದಿನವನ್ನಾಗಿ ಆಚರಿಸುತ್ತ ಬಂದಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

World Food Safety Day 2023: ವಿಶ್ವ ಆಹಾರ ಸುರಕ್ಷತಾ ದಿನದ ಇತಿಹಾಸ, ಮಹತ್ವ ಬಗ್ಗೆ ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 06, 2023 | 2:30 PM

ಆಹಾರ ಎನ್ನುವುದು ಮನುಷ್ಯನ ಜೀವಿತಾವಧಿಯಲ್ಲಿ ಅತೀ ಮುಖ್ಯ. ಜೊತೆಗೆ ಆರೋಗ್ಯಕರವಾದ ಆಹಾರ ಸೇವನೆಯೂ ಅಷ್ಟೇ ಅಗತ್ಯವಾಗಿದೆ. ಹಾಗಾಗಿ ಪ್ರತಿ ವರ್ಷ ವಿಶ್ವ ಆರೋಗ್ಯ ಸಂಸ್ಥೆಯು ಜೂನ್ 7ರಂದು ವಿಶ್ವ ಆಹಾರ ಸುರಕ್ಷತಾ ದಿನವನ್ನು ಆಚರಿಸುತ್ತದೆ. ಏಕೆಂದರೆ ಕಲುಷಿತಗೊಂಡ ಆಹಾರ ಸೇವನೆ ಮನುಷ್ಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಜೀವನ ಪೂರ್ತಿ ಪರಿತಪಿಸ ಬೇಕಾಗುವುದು ನಿಶ್ಚಿತ. ಹಾಗಾಗಿ ನಾವು ಸೇವಿಸುವ ಆಹಾರ ವಿಷ, ಕಲ್ಮಶ, ರಾಸಾಯನಿಕ ಪದಾರ್ಥಗಳಿಂದ ಮುಕ್ತವಾಗಿರುವುದು ಅವಶ್ಯಕ. ಜೊತೆಗೆ ಆಹಾರ ಸುರಕ್ಷತೆಯ ಬಗ್ಗೆ ಆದಷ್ಟು ಗಮನ ಕೊಡುವುದು ಕೂಡ ನಮ್ಮೆಲ್ಲರ ಕರ್ತವ್ಯವಾಗಿದೆ.

ವಿಶ್ವಾದ್ಯಂತ 10 ಜನರಲ್ಲಿ ಒಬ್ಬರು ಪ್ರತಿವರ್ಷ ಕಲುಷಿತ ಆಹಾರವನ್ನು ಸೇವಿಸುವುದರಿಂದ ಅನಾರೋಗ್ಯಕ್ಕೆ ಒಳಗಾಗುತ್ತಾರೇ ಎಂದು ಸಂಶೋಧನೆ ತಿಳಿಸುತ್ತದೆ. ಇದರಲ್ಲಿ ವಯಸ್ಸಾದವರು, ಐದು ವರ್ಷದೊಳಗಿನ ಮಕ್ಕಳು ಮತ್ತು ಬಡ ಕುಟುಂಬ ಹೆಚ್ಚು ಒಡ್ಡಿಕೊಳ್ಳುತ್ತವೆ ಹಾಗೂ ಆಹಾರದಿಂದ ಹರಡುವ ರೋಗಗಳು ಕೂಡ ಹೆಚ್ಚಾಗಿ ಇವರಲ್ಲಿ ಕಂಡುಬರುತ್ತವೆ ಇದರಿಂದ ಅವರು ಅಪಾಯದಲ್ಲಿದ್ದಾರೆ. ಹೀಗಾಗಿ ಅಸುರಕ್ಷಿತ ಆಹಾರವು ಜನರ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದೆಲ್ಲವನ್ನು ತಡೆಯುವುದು ಈ ದಿಂದ ಮುಖ್ಯ ಉದ್ದೇಶ.

ಆಹಾರ ಸುರಕ್ಷತೆಯನ್ನು ಉತ್ತೇಜಿಸುವುದರಿಂದ ಸಾರ್ವಜನಿಕರಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟವನ್ನು ಉತ್ತೇಜಿಸುವ ಕಾರ್ಯ ವಾಗುತ್ತದೆ. ಆಹಾರ ಸುರಕ್ಷತಾ ಅಭ್ಯಾಸಗಳನ್ನು ಅನುಸರಿಸುವುದರಿಂದ ಸುರಕ್ಷಿತವಾಗಿ ಸೇವಿಸಬಹುದಾದ ಆಹಾರ, ಮಾಲಿನ್ಯಕಾರಕಗಳ ಕೀಟನಾಶಕಗಳನ್ನೂ ಬಳಸಿ ಮಾಡಿರುವ ಆಹಾರವನ್ನು ತೆಗೆದುಕೊಳ್ಳದಿರುವ ಬಗ್ಗೆ ಅರಿವು ಮೂಡುತ್ತದೆ. ಜೊತೆಗೆ ಪೌಷ್ಠಿಕಾಂಶ ಮತ್ತು ಅಲರ್ಜಿನ್ ಲೇಬಲಿಂಗ್ ನಂತಹ ವಿಷಯಗಳ ಮಾನದಂಡಗಳ ಅನ್ವಯದಿಂದ, ಗ್ರಾಹಕರು ಆಹಾರದ ಗುಣಮಟ್ಟವನ್ನು ತಿಳಿದುಕೊಳ್ಳಬಹುದು. ಹೆಚ್ಚಿನ ಸರ್ಕಾರಗಳು ಮತ್ತು ಸಂಸ್ಥೆಗಳು ಜೈವಿಕ, ರಾಸಾಯನಿಕ ಮತ್ತು ಭೌತಿಕ ಸ್ವಭಾವದ ಅಪಾಯಗಳನ್ನು ಒಳಗೊಂಡ ವೈಜ್ಞಾನಿಕ ಅಪಾಯದ ಮೌಲ್ಯಮಾಪನಗಳನ್ನು ಆಧರಿಸಿದ ಆಹಾರ ಮಾನದಂಡಗಳನ್ನು ಅಳವಡಿಸಿಕೊಳ್ಳುತ್ತವೆ ಮತ್ತು ಜಾರಿಗೊಳಿಸುತ್ತವೆ. ಇವೆಲ್ಲದರಿಂದ ಜಾಗೃತರಾಗಿರಬೇಕು.

ಇದನ್ನೂ ಓದಿ: ಜೀವನಶೈಲಿ ಬದಲಾಯಿಸಿ ಹಾಗೂ ಮುಟ್ಟಿನ ಸಮಯದ ನೋವಿನಿಂದ ಮುಕ್ತಿ ಪಡೆಯಿರಿ

ಇತಿಹಾಸ

ವಿಶ್ವ ಸಂಸ್ಥೆಯ ಜನರಲ್ ಅಸ್ಸೆಂಬ್ಲಿಯಲ್ಲಿ ಮೊದಲ ಬಾರಿಗೆ 2018 ಜೂನ್ 7 ರಂದು ಗುರುತಿಸಿ ಪ್ರಥಮ ಬಾರಿಗೆ ಈ ದಿನವನ್ನು ಆಚರಿಸಲಾಯಿತು. ತದನಂತರ ಜನರಲ್ಲಿ ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಜಾಗೃತಿ ಮತ್ತು ಅರಿವು ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷ ಈ ದಿನವನ್ನು ಜಾಗತಿಕ ಮಟ್ಟದಲ್ಲಿ ಆಚರಿಸುತ್ತ ಬಂದಿದೆ.

ಥೀಮ್

ಈ ವರ್ಷ ಆಹಾರ ಸುರಕ್ಷತಾ ದಿನ 2023 ಥೀಮ್ ಅನ್ನು ಅನಾವರಣಗೊಳಿಸಲಾಗಿದೆ. ಆಹಾರ ಮಾನದಂಡಗಳು ಜೀವ ಉಳಿಸುತ್ತವೆ ಎಂಬ ವಿಷಯವು ಗ್ರಾಹಕರನ್ನು ಸುರಕ್ಷಿತ ವಾಗಿರಿಸುವುದರಲ್ಲಿ ಮತ್ತು ಆಹಾರದಲ್ಲಿ ಸಮನಾದ ವ್ಯಾಪಾರವನ್ನು ಆಧಾರವಾಗಿಟ್ಟುಕೊಳ್ಳುವಲ್ಲಿ ವಿಶ್ವದಾದ್ಯಂತ ಆಹಾರ ಮಾನ ದಂಡಗಳ ಮಹತ್ವವನ್ನು ಸಾರುವ ಗುರಿಯನ್ನು ಹೊಂದಿದೆ.

ಇಂದು ಜಗತ್ತು ವೇಗವಾಗಿ ಬೆಳೆಯುತ್ತಿದೆ. ತಂತ್ರಜ್ಞಾನ ಆಧಾರಿತ ವ್ಯವಸ್ಥೆಯಲ್ಲಿ ಮಾನವ ಹಿಂದೆಂದಿಗಿಂತಲೂ ಶರವೇಗದ ಸಾಧನೆ ಮಾಡುತ್ತಿದ್ದಾನೆ. ಇವೆಲ್ಲ ಹೆಮ್ಮೆ ವಿಷಯವೇ ಆದರೆ ಮಾಲಿನ್ಯ, ಕಲುಷಿತ ವಾಗುತ್ತಿರುವ ನೀರು ಹಾಗೂ ಆಹಾರಗಳು ನಮ್ಮ ಎಲ್ಲ ಸಾಧನೆಗಳನ್ನು ಶೂನ್ಯಕ್ಕೆ ತಂದಿಳಿಸುತ್ತದೆ. ಏಕೆಂದರೆ ನಮಗೆ ಎಲ್ಲವೂ ಇದೆ ಆದರೆ ಉಸಿರಾಡಲು ಶುದ್ಧ ಗಾಳಿ ಇಲ್ಲ. ನಗರ ಪ್ರದೇಶಗಳಲ್ಲಿ ಶುಚಿಯಾಗಿ ಸಿಗುವ ನೀರು ತುಂಬಾ ವಿರಳ. ಅದೆಲ್ಲದಕ್ಕಿಂತ ಆಹಾರ ದಿನದಿಂದ ದಿನಕ್ಕೆ ಕಲಬೆರಕೆಯಾಗುತ್ತಿದೆ. ಯಾವುದೇ ಶಕ್ತಿ ನಿಮ್ಮ ತಿಂಡಿ ಊಟಗಳಿಂದ ಸಿಗುವುದಿಲ್ಲ ಎಂದಾದ ಮೇಲೆ ನೀವು ಯಾವ ರೀತಿಯಲ್ಲಿ ಆರೋಗ್ಯವಾಗಿರಬಹುದು ಎಂಬುದನ್ನು ಯೋಚಿಸಿ. ಹಿಂದಿನ ಕಾಲದಲ್ಲಿ ಜನರಿಗೆ ಕಾಯಿಲೆ ಬುತ್ತಿರಲಿಲ್ಲ ಎಂದಲ್ಲ. ಆದರೆ ನಮ್ಮಷ್ಟು ಅಲ್ಲ. ಅವರ ವಯಸ್ಸಿನಷ್ಟು ಧೀರ್ಘಾಯುಷ್ಯವು ಇಲ್ಲ. ಇದೆಲ್ಲದಕ್ಕೂ ಕಾರಣ ನಾವು ಸೇವಿಸುವ ಆಹಾರ. ತಿಯೊಬ್ಬರ ಆರೋಗ್ಯ ಚೆನ್ನಾಗಿರಬೇಕೆಂದರೆ ಆರೋಗ್ಯಕರವಾದ ಆಹಾರ ಸೇವನೆ ಬಲು ಮುಖ್ಯ. ಹಾಗಾಗಿ ಇನ್ನಾದರೂ ಆದಷ್ಟು ಜಾಗೃತಿ ಮಾಡುವುದು ಒಳ್ಳೆಯದು. ಈ ದಿನದ ಮೂಲಕ ನಾವೆಲ್ಲರೂ ಈ ಬಗ್ಗೆ ಅರಿತುಕೊಂಡು ಇನ್ನೊಬ್ಬರಲ್ಲೂ ಜಾಗೃತಿ ಮೂಡಿಸಲು ಪ್ರಯತ್ನಿಸೋಣ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: