World Meteorological Day 2026: ಹವಾಮಾನ ದಿನವನ್ನು ಆಚರಿಸುವುದೇಕೆ? ಏನಿದರ ಉದ್ದೇಶ ತಿಳಿಯಿರಿ

ಕ್ಷಣ ಕ್ಷಣಕ್ಕೂ ಬದಲಾಗುವಂತಹ ಹವಾಮಾನ ಪರಿಸ್ಥಿತಿಗಳು ಮಾನವ ಜೀವನ, ಕೃಷಿ, ಆರೋಗ್ಯ ಮತ್ತು ಪರಿಸರದ ಮೇಲೆ ನೇರ ಪರಿಣಾಮವನ್ನು ಬೀರುತ್ತವೆ. ಈ ಬದಲಾಗುವ ಹವಾಮಾನದ ಮಾಹಿತಿ ಮತ್ತು ಪರಿಸ್ಥಿತಿಯನ್ನು ನಿಭಾಯಿಸಲು ಬೇಕಾದ ಅಗತ್ಯ ಮುನ್ನೆಚ್ಚರಿಕೆಗಳನ್ನು ಹವಾಮಾನ ಸಂಸ್ಥೆ, ಹವಾಮಾನಶಾಸ್ತ್ರ ಒದಗಿಸುತ್ತದೆ. ಹಾಗಾಗಿ ಸಾರ್ವಜನಿಕರ ಸುರಕ್ಷತೆ ಮತ್ತು ಯೋಗಕ್ಷೇಮದ ವಿಚಾರದಲ್ಲಿ ಹವಾಮಾನಶಾಸ್ತ್ರ ವಹಿಸುವ ನಿರ್ಣಾಯಕ ಪಾತ್ರವನ್ನು ಶ್ಲಾಘಿಸಲು ಮಾರ್ಚ್‌ 23 ವಿಶ್ವ ಹವಾಮಾನ ದಿನವನ್ನು ಆಚರಿಸಲಾಗುತ್ತದೆ.

World Meteorological Day 2026: ಹವಾಮಾನ ದಿನವನ್ನು ಆಚರಿಸುವುದೇಕೆ? ಏನಿದರ ಉದ್ದೇಶ ತಿಳಿಯಿರಿ
ವಿಶ್ವ ಹವಾಮಾನ ದಿನ
Image Credit source: png magic

Updated on: Mar 23, 2026 | 9:49 AM

ಹವಾಮಾನ ವೈಪರಿತ್ಯಗಳು ನಿಸರ್ಗ ಸಹಜ ಪ್ರಕ್ರಿಯೆಯಾಗಿದ್ದು, ಹವಾಮಾನ (climate) ಬದಲಾವಣೆಯ ಕಾರಣದಿಂದಾಗಿ ಪ್ರಕೃತಿಯಲ್ಲಿ ಏನೆಲ್ಲಾ ನೈಸರ್ಗಿಕ ವಿಕೋಪಗಳು ಸಂಭವಿಸುತ್ತದೆ ಎಂಬುದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಬದಲಾಗುವಂತಹ ಹವಾಮಾನ ಪರಿಸ್ಥಿತಿಗಳು ಮಾನವ ಜೀವನ, ಕೃಷಿ, ಆರೋಗ್ಯ ಮತ್ತು ಪರಿಸರದ ಮೇಲೆ ನೇರ ಪರಿಣಾಮವನ್ನು ಬೀರುತ್ತವೆ. ಹವಾಮಾನ ಬದಲಾವಣೆಯಿಂದ ಏನೆಲ್ಲಾ ಅಪಾಯಗಳು ಸಂಭವಿಸಬಹುದು ಎಂಬುದನ್ನು ಮುನ್ಸುಚಿಸಲು ಮತ್ತು ಸಾರ್ವಜನಿಕರು ಅಗತ್ಯವಾದ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಕ್ತ ಮಾಹಿತಿಯನ್ನು ಹವಾಮಾನ ಶಾಸ್ತ್ರ, ಹವಾಮಾನ ಇಲಾಖೆ ಒದಗಿಸುತ್ತವೆ. ಪ್ರಪಂಚದಾದ್ಯಂತ ಇರುವ ಈ ಹವಾಮಾನ ಸಂಸ್ಥೆಗಳ ಸೇವೆಗಳನ್ನು ಶ್ಲಾಘಿಸಲು ಹಾಗೂ ಪರಿಸರ ಪರಿಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಮಾರ್ಚ್‌ 23 ರಂದು ವಿಶ್ವ ಹವಾಮಾನ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.

ವಿಶ್ವ ಹವಾಮಾನ ದಿನದ ಇತಿಹಾಸವೇನು?

ವಿಶ್ವ ಹವಾಮಾನ ಸಂಸ್ಥೆ (WMO) ಸ್ಥಾಪನೆಯ ಸ್ಮರಣಾರ್ಥವಾಗಿ ವಿಶ್ವ ಹವಾಮಾನ ದಿನವನ್ನು ಆಚರಿಸಲಾಗುತ್ತದೆ. ಈ ಸಂಸ್ಥೆಯನ್ನು ಮಾರ್ಚ್ 23, 1950 ರಂದು ಸ್ಥಾಪಿಸಲಾಯಿತು ಮತ್ತು 1961 ರಿಂದ ಈ ಸಂಸ್ಥೆಯ ಸ್ಥಾಪನೆಯ ಸ್ಮರಣಾರ್ಥವಾಗಿ ಪ್ರತಿವರ್ಷ ವಿಶ್ವ ಹವಾಮಾನ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ. ಜನರ ಯೋಗಕ್ಷೇಮ, ಸುರಕ್ಷತೆಗೆ ಹವಾಮಾನ ಸಂಸ್ಥೆಗಳು ನೀಡುತ್ತಿರುವ ಕೊಡುಗೆಯನ್ನು ಸ್ಮರಿಸಲು ಈ ದಿನವನ್ನು ಆಚರಿಸಲಾಗುತ್ತಿದೆ.

ವಿಶ್ವ ಹವಾಮಾನ ಸಂಸ್ಥೆ (WMO):

WMO ಹವಾಮಾನ, ಮತ್ತು ಜಲ ಸಂಪನ್ಮೂಲಗಳಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ವಿಶೇಷ ಸಂಸ್ಥೆಯಾಗಿದೆ. ಇದರ ಪ್ರಧಾನ ಕಚೇರಿ ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿದೆ.  WMO 1951 ರಲ್ಲಿ ವಿಶ್ವಸಂಸ್ಥೆಯ (UN) ವಿಶೇಷ ಸಂಸ್ಥೆಯಾಯಿತು.  ಇದು ಹವಾಮಾನ, ಮತ್ತು ನೀರಿಗೆ ಸಂಬಂಧಿಸಿದ ಜಾಗತಿಕ ದತ್ತಾಂಶ, ಸಂಶೋಧನೆ ಮತ್ತು ಸಹಕಾರವನ್ನು ಉತ್ತೇಜಿಸುತ್ತದೆ. ಅಲ್ಲದೆ ದೇಶಗಳು ಹವಾಮಾನ ಮಾಹಿತಿಯನ್ನು ಹಂಚಿಕೊಳ್ಳಲು ಮತ್ತು ನೈಸರ್ಗಿಕ ವಿಕೋಪಗಳಿಗೆ ಪ್ರತಿಕ್ರಿಯಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ನೀರನ್ನು ಮಿತವಾಗಿ ಬಳಸುವ ಮೂಲಕ ಜೀವಜಲವನ್ನು ಸಂರಕ್ಷಿಸೋಣ

ವಿಶ್ವ ಹವಾಮಾನ ದಿನದ ಮಹತ್ವವೇನು?

  • ಈ ದಿನವು ಹವಾಮಾನ ಮುನ್ಸೂಚನೆಯ ಮಹತ್ವವನ್ನು ಎತ್ತಿ ತೋರಿಸುವುದಲ್ಲದೆ, ಹವಾಮಾನ ಬದಲಾವಣೆ, ವಿಪತ್ತು ನಿರ್ವಹಣೆ ಮತ್ತು ವೈಜ್ಞಾನಿಕ ಸಂಶೋಧನೆಯ ಬಗ್ಗೆ ಜಾಗೃತಿ ಮೂಡಿಸುತ್ತದೆ.
  • ವಿಶ್ವ ಹವಾಮಾನ ದಿನವನ್ನು ಆಚರಿಸುವ ಮುಖ್ಯ ಉದ್ದೇಶವೆಂದರೆ ಹವಾಮಾನಶಾಸ್ತ್ರ ಮತ್ತು ಹವಾಮಾನ ಸೇವೆಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು.
  • ಪರಿಸರ ಪರಿಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವು ಮುಖ್ಯವಾಗಿದೆ. ಸರಿಯಾದ ಸಮಯದಲ್ಲಿ ಮುನ್ನೆಚ್ಚರಿಕೆಗಳು ಮತ್ತು ಕ್ರಮಗಳನ್ನು ತೆಗೆದುಕೊಂಡರೆ, ಭೂಮಿಯ ಮೇಲಿನ ಅನೇಕ ಜೀವಗಳನ್ನು ಉಳಿಸಬಹುದು ಎಂಬುದನ್ನು ಈ ದಿನ ನೆನಪಿಸುತ್ತದೆ.

ಹವಾಮಾನ ಸಂಸ್ಥೆಗಳ ಮಹತ್ವವೇನು?

ವಿಪತ್ತು ನಿರ್ವಹಣೆಯಲ್ಲಿ ಸಹಾಯ: ಹವಾಮಾನ ಸಂಸ್ಥೆಗಳು ನೀಡುವ ಮುನ್ಸೂಚನೆಯು ಸರ್ಕಾರಗಳು ಮತ್ತು ಸಂಸ್ಥೆಗಳು ಸಮಯಕ್ಕೆ ಸರಿಯಾಗಿ ಸಿದ್ಧರಾಗಲು ಅನುವು ಮಾಡಿಕೊಡುತ್ತದೆ.

ಸಾರ್ವಜನಿಕ ಸುರಕ್ಷತೆ: ಚಂಡಮಾರುತ, ಪ್ರವಾಹ ಅಥವಾ ಶಾಖದ ಅಲೆಯಂತಹ ಸಂದರ್ಭಗಳಲ್ಲಿ ಜನರಿಗೆ ಮುಂಚಿತವಾಗಿ ಎಚ್ಚರಿಕೆ ನೀಡುತ್ತದೆ.

ಆರ್ಥಿಕ ಸ್ಥಿರತೆ: ಕೃಷಿ, ವಾಯುಯಾನ ಮತ್ತು ಕಡಲ ಉದ್ಯಮದಂತಹ ವಲಯಗಳು ಹವಾಮಾನವನ್ನು ಅವಲಂಬಿಸಿವೆ. ನಿಖರವಾದ ಮಾಹಿತಿಯು ನಷ್ಟವನ್ನು ಕಡಿಮೆ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us