World Ocean Day 2023 : ವಿಶ್ವ ಸಾಗರ ದಿನದ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

ಅತ್ಯಂತ ಅಮೂಲ್ಯವಾಗಿರುವ ಸಾಗರ ಸಂಪತ್ತನ್ನು ಸಂರಕ್ಷಿಸುವುದು ನಮ್ಮ ಮುಖ್ಯ ಕರ್ತವ್ಯ. ಈ ನಿಟ್ಟಿನಲ್ಲಿಯೇ ಪ್ರತಿಯೊಬ್ಬರಿಗೂ ಈ ಬಗ್ಗೆ ಜಾಗೃತಿ ಮೂಡಿಸುವ ಸದುದ್ದೇಶದಿಂದ ಜೂನ್ 8 ಅನ್ನು ವಿಶ್ವ ಸಾಗರ ದಿನವನ್ನಾಗಿ ಆಚರಿಸಲಾಗುತ್ತಿದೆ.

World Ocean Day 2023 : ವಿಶ್ವ ಸಾಗರ ದಿನದ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 08, 2023 | 7:03 AM

ದೇವರು ಸಾಗರವನ್ನು ಸೃಷ್ಟಿಸಿ ಅದನ್ನು ಆನಂದಿಸಲು ನಮಗೆ ಉಡುಗೊರೆಯಾಗಿ ನೀಡಿದ್ದಾನೆ ಎಂಬ ಮಾತು ನಿಜಕ್ಕೂ ಸತ್ಯ. ಆದರೆ ನಾವು ಅದನ್ನು ಹೇಗೆ ಬಳಸಿಕೊಳ್ಳುತ್ತಿದ್ದೇವೆ ಎಂಬುದು ಮಾತ್ರ ವಿಷಾದ. ಅಮೂಲ್ಯವಾಗಿರುವ ಈ ಸಾಗರಗಳನ್ನು ಸಂರಕ್ಷಿಸುವುದು ನಮ್ಮ ಮುಖ್ಯ ಕರ್ತವ್ಯ. ಈ ನಿಟ್ಟಿನಲ್ಲಿಯೇ ಪ್ರತಿಯೊಬ್ಬರಿಗೂ ಈ ಬಗ್ಗೆ ಜಾಗೃತಿ ಮೂಡಿಸುವ ಸದುದ್ದೇಶದಿಂದ ಜೂನ್ 8 ಅನ್ನು ವಿಶ್ವ ಸಾಗರ ದಿನವನ್ನಾಗಿ ಆಚರಿಸಲಾಗುತ್ತಿದೆ. ಜೊತೆಗೆ ಸಾಗರ ಕಲ್ಮಶವಾಗುವುದನ್ನು ತಡೆಯುವ ಮೂಲಕ ಮತ್ತೆ ಪುನರುಜ್ಜೀವನಗೊಳಿಸಲು ವಿಶ್ವ ಸಾಗರ ದಿನದಂದು ಸಕಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಂಘ ಸಂಸ್ಥೆಗಳು ವಿವಿಧ ಕಾರ್ಯಕ್ರಮ ಮತ್ತು ಅಭಿಯಾನಗಳನ್ನು ಮಾಡುವ ಮೂಲಕ ಜನರಿಗೆ ಕರೆ ನೀಡುತ್ತಿದೆ.

ಅದಲ್ಲದೆ ಪ್ರಪಂಚದಾದ್ಯಂತದ ಜನರು ನೀರಿನ ಮಹತ್ವವನ್ನು ಉಳಿಸುವ ಮತ್ತು ಅದನ್ನು ಸರಿಯಾಗಿ ಉಪಯೋಗಿಸುವ ಪ್ರಾಥಮಿಕ ಗುರಿಯೊಂದಿಗೆ ವಿಶ್ವ ಸಾಗರ ದಿನವನ್ನು ಆಚರಿಸುತ್ತಾರೆ. ಮಾನವ ಚಟುವಟಿಕೆಯು ಸಮುದ್ರಗಳ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಗಮನ ಸೆಳೆಯಲು ಮತ್ತು ರಕ್ಷಿಸಲು ಜನರನ್ನು ಒಟ್ಟುಗೂಡಿಸಲು ಈ ದಿನ ಹೆಚ್ಚು ಪೂರಕವಾಗಿದೆ. ನಮ್ಮ ಗ್ರಹದ ಮೇಲ್ಮೈ ವಾಸ್ತವವಾಗಿ ಮೂರನೇ ಎರಡರಷ್ಟು ನೀರಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ, ಈ ದಿನದ ಪ್ರಭಾವವನ್ನು ಹೆಚ್ಚಿಸಲು ಮತ್ತು ನೀರು ಮತ್ತು ಸಮುದ್ರಗಳ ಮೌಲ್ಯದ ಬಗ್ಗೆ ಜಾಗೃತಿ ಮೂಡಿಸಲು, ಈ ದಿನದಂದು ನೀವು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಈ ವಿಷಯವನ್ನು ನಿಮ್ಮ ಮನೆಯಲ್ಲಿಯೇ ಹಂಚಿಕೊಳ್ಳಬಹುದು. ಜೊತೆಗೆ ಅವರಿಗೂ ಅರಿವು ಮೂಡಿಸಬಹುದು.

ವಿಶ್ವ ಸಾಗರ ದಿನದ ಉದ್ದೇಶ

ಪರಿಸರ ಸಮತೋಲನ, ಜೀವವೈವಿದ್ಯತೆ, ಆಹಾರ ಭದ್ರತೆ, ಹವಾಮಾನ ಬದಲಾವಣೆ, ಸಮುದ್ರ ಸಂಪನ್ಮೂಲಗಳ ವಿವೇಚನಾರಹಿತ ಬಳಕೆ ಇತ್ಯಾದಿಗಳ ವಿಷಯಗಳನ್ನು ಎತ್ತಿ ತೋರಿಸುವುದು ಮತ್ತು ಸಾಗರಗಳು ಒಡ್ಡುವ ಸವಾಲುಗಳ ಬಗ್ಗೆ ಜಗತ್ತಿನಲ್ಲಿ ಜಾಗೃತಿ ಮೂಡಿಸುವುದು ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: World Brain Tumor Day 2023: ಬ್ರೈನ್‌ ಟ್ಯೂಮರ್​ಗೆ ಕಾರಣವೇನು? ಇದರ ಲಕ್ಷಣಗಳು? ಇಲ್ಲಿದೆ ಮಾಹಿತಿ

ವಿಶ್ವ ಸಾಗರ ದಿನದ ಇತಿಹಾಸ

ವಿಶ್ವ ಸಾಗರ ದಿನವನ್ನು ಆಚರಿಸುವ ಪರಿಕಲ್ಪನೆಯನ್ನು ಮೊದಲು 1992 ರಲ್ಲಿ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದ ವಿಶ್ವಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿ ಸಮ್ಮೇಳನದಲ್ಲಿ ಪ್ರಸ್ತಾಪಿಸಲಾಯಿತು. ಇದು ಪ್ರಪಂಚದಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಸಾಗರವನ್ನು ನೋಡಲು ಸಂಭ್ರಮಿಸುವ ಮತ್ತು ನಮ್ಮ ಜೀವನದಲ್ಲಿ ಅದು ವಹಿಸುವ ನಿರ್ಣಾಯಕ ಪಾತ್ರವನ್ನು ಒತ್ತಿಹೇಳುವ ಗುರಿಯನ್ನು ಹೊಂದಿದೆ.

ಏಕೆ ಮುಖ್ಯ?

ಶತಕೋಟಿ ಜನರಿಗೆ ಆಹಾರ ಮೂಲವಾಗಿರುವ ಸಾಗರಗಳು ಹವಾಮಾನವನ್ನೂ ನಿಯಂತ್ರಿಸುತ್ತದೆ. ಸಾಗರವು ತನ್ನಲ್ಲಿರುವ ಅಭಿವೃದ್ಧಿ ಹೊಂದುತ್ತಿರುವ ಜೀವಿಗಳ ಮೂಲಕ ಗ್ರಹದ ಅರ್ಧಕ್ಕಿಂತ ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುತ್ತದೆ. ಆದರೆ ಮಿತಿಮೀರಿದ ಮೀನುಗಾರಿಕೆ, ತೈಲ ಸೋರಿಕೆಗಳು ಮತ್ತು ಪ್ಲಾಸ್ಟಿಕ್ ಮಾಲಿನ್ಯದಂತಹ ಮಾನವ ಚಟುವಟಿಕೆಗಳು ಸಮುದ್ರ ಹಾಗೂ ಅದರಲ್ಲಿರುವ ಸಮುದ್ರ ಜೀವಿಗಳ ಮೇಲೆ ಅಪಾರವಾದ ಕೆಟ್ಟ ಪರಿಣಾಮಗಳನ್ನು ಬೀರಿದೆ. ಹಾಗಾಗಿ ಈ ದಿನವನ್ನು ಆಚರಿಸುವ ಜೊತೆಗೆ ಸ್ವಲ್ಪ ಜಾಗೃತಿ ವಹಿಸಿ ನಮ್ಮ ಮುಂದಿನ ಪೀಳಿಗೆಗೆ ನೈಸರ್ಗಿಕ ಮೂಲವನ್ನು ಜೋಪಾನವಾಗಿ ಕಾಯ್ದಿಟ್ಟುಕೊಳ್ಳಬೇಕಾಗಿದೆ.