World Pasta Day 2024: ಅಕ್ಟೋಬರ್ 25 ರಂದು ವಿಶ್ವ ಪಾಸ್ತಾ ದಿನವನ್ನು ಏಕೆ ಆಚರಿಸಲಾಗುತ್ತದೆ? ಇಲ್ಲಿದೆ ಮಾಹಿತಿ
ಪಾಸ್ತಾ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಮಕ್ಕಳಿಂದ ಹಿಡಿದು ದೊಡ್ಡವರ ನೆಚ್ಚಿನ ಖಾದ್ಯಗಳಲ್ಲಿ ಇದು ಕೂಡ ಒಂದು. ಇಟಲಿಯನ್ ಫುಡ್ ಆಗಿದ್ದರೂ ಭಾರತೀಯರಿಗೂ ಇದು ಅಚ್ಚುಮೆಚ್ಚು. ಆದರೆ ಈ ಪಾಸ್ತಾಕ್ಕಾಗಿ ಒಂದು ದಿನವನ್ನು ಮೀಸಲಾಗಿ ಇಡಲಾಗಿದ್ದು, ಪ್ರತಿ ವರ್ಷ ಅಕ್ಟೋಬರ್ 25 ರಂದು ವಿಶ್ವ ಪಾಸ್ತಾ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಹಾಗಾದ್ರೆ ಈ ದಿನದ ಆಚರಣೆಯು ಹುಟ್ಟಿಕೊಂಡಿದ್ದು ಹೇಗೆ? ಏನಿದರ ಮಹತ್ವ ಸೇರಿದಂತೆ ಇನ್ನಿತ್ತರ ಮಾಹಿತಿ ಇಲ್ಲಿದೆ.
ಮಕ್ಕಳಿಂದ ಹಿಡಿದು ದೊಡ್ಡವರೆಗೂ ಇಷ್ಟ ಪಟ್ಟು ಸೇವಿಸುವ ಖಾದ್ಯಗಳಲ್ಲಿ ಪಾಸ್ತಾ ಕೂಡ ಒಂದು. ಇನ್ಸ್ಟಂಟ್ ಆಗಿ ತಯಾರಿಸಬಹುದಾದ ರೆಸಿಪಿಯಾಗಿದ್ದು, ಕಾರ್ನ್, ಆಲಿವ್ ಮತ್ತು, ಕೆಂಪು ಕ್ಯಾಪ್ಸಿಕಂ ಬಳಸಿ ತಯಾರಿಸಿದ ಪಾಸ್ತಾ ಬಹಳ ರುಚಿಕರ. ಆದರೆ ಸಂಶೋಧನೆಯೊಂದರ ಪ್ರಕಾರ ವಿಶ್ವದಲ್ಲೇ ಗರಿಷ್ಠ ಪ್ರಮಾಣದ ಪಾಸ್ತಾವನ್ನು ಇಟಲಿಯಲ್ಲಿ ಸೇವಿಸಲಾಗುತ್ತದೆ. ಇಲ್ಲಿನ ಜನರು ವಾರ್ಷಿಕವಾಗಿ ಸುಮಾರು 34,08,499 ಟನ್ ಪಾಸ್ತಾವನ್ನು ತಿನ್ನುತ್ತಾರೆ. ಇದಾದ ಬಳಿಕ ಅಮೆರಿಕ, ಬ್ರೆಜಿಲ್, ಟರ್ಕಿ, ರಷ್ಯಾ ದೇಶಗಳ ಹೆಸರುಗಳೂ ಈ ಪಟ್ಟಿಯಲ್ಲಿ ಸೇರಿವೆ. ಪ್ರತಿ ವರ್ಷ ಅಕ್ಟೋಬರ್ 25 ರಂದು ವಿಶ್ವ ಪಾಸ್ತಾ ದಿನವನ್ನು ಆಚರಿಸಲಾಗುತ್ತಿದೆ.
ವಿಶ್ವ ಪಾಸ್ತಾ ದಿನದ ಇತಿಹಾಸ, ಮಹತ್ವ ಹಾಗೂ ಆಚರಣೆ
ವಿಶ್ವ ಪಾಸ್ತಾ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 25 ರಂದು ಆಚರಿಸಲಾಗುತ್ತದೆ. ಇಟಲಿಯ ರೋಮ್‌ನಲ್ಲಿ ನಡೆದ ವಿಶ್ವ ಪಾಸ್ತಾ ಕಾಂಗ್ರೆಸ್ ನ ಭಾಗವಾಗಿ 25 ಅಕ್ಟೋಬರ್ 1995 ರಂದು ವಿಶ್ವ ಪಾಸ್ತಾ ದಿನವನ್ನು ಜಾರಿಗೆ ತರಲಾಯಿತು. ಇಟಲಿಯ ಜನಪ್ರಿಯ ಆಹಾರವಾಗಿರುವ ಈ ಪಾಸ್ತಾದ ಪ್ರಾಮುಖ್ಯತೆಯನ್ನು ಒತ್ತಿ ಹೇಳುವ ಸಲುವಾಗಿ, ಇದನ್ನು ತಿನ್ನಲು ಜನರನ್ನು ಉತ್ತೇಜಿಸುವುದು. ಅದಲ್ಲದೇ, ಈ ಆಹಾರ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ. ಪ್ರಪಂಚದಾದಂತ್ಯ ಈ ದಿನದಂದು ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಪಾಸ್ಟಾ ಉತ್ಪಾದಕರನ್ನು ಸಹ ಗೌರವಿಸಲಾಗುತ್ತದೆ. ಜನರು ಈ ದಿನದ ವಿವಿಧ ರುಚಿಯನ್ನು ಒಳಗೊಂಡಿರುವ ಪಾಸ್ತಾವನ್ನು ಸವಿಯುವ ಮೂಲಕ ಆಚರಿಸುತ್ತಾರೆ.
ವೈಟ್ ಪಾಸ್ತಾ ಮಾಡಲು ಬೇಕಾಗುವ ಸಾಮಗ್ರಿಗಳು
* 2 ಕಪ್ ಪಾಸ್ತಾ
* 2 ಚಮಚ ಮೈದಾ ಹಿಟ್ಟು
* 2 ಕಪ್ ಹಾಲು
* 2 ಚಮಚ ಬೆಣ್ಣೆ
* 1 ಚಮಚ ಡ್ರೈ ಹರ್ಬ್ಸ್
* 1/2 ಕಪ್ ತುರಿದ ಚೀಸ್
* 2 ಚಮಚ ಕತ್ತರಿಸಿದ ಬೆಳ್ಳುಳ್ಳಿ
* 1/2 ಕಪ್ ಹಸಿರು ಕ್ಯಾಪ್ಸಿಕಂ
* 1/2 ಕಪ್ ಕೆಂಪು ಕ್ಯಾಪ್ಸಿಕಂ
* 1/2 ಕಪ್ ಬ್ರೊಕೊಲಿ
* 1 ಚಮಚ ಚಿಲ್ಲಿ ಫ್ಲೇಕ್ಸ್
* 1/2 ಚಮಚ ಕರಿಮೆಣಸು ಪುಡಿ
* ರುಚಿಗೆ ತಕ್ಕಷ್ಟು ಉಪ್ಪು
ಇದನ್ನೂ ಓದಿ: ಬಾಯಲ್ಲಿ ನೀರೂರಿಸುವ ಸೇಬು ಜಿಲೇಬಿ, ಇಲ್ಲಿದೆ ಸುಲಭ ಪಾಕವಿಧಾನ
ವೈಟ್ ಪಾಸ್ತಾ ಮಾಡುವ ವಿಧಾನ
* ಮೊದಲಿಗೆ ಒಂದು ಪಾತ್ರೆಯಲ್ಲಿ ಹಾಲು, ಮೈದಾ ಮತ್ತು ಉಪ್ಪು ಸೇರಿಸಿ ಗಂಟುಗಳು ಇಲ್ಲದಂತೆ ಮಿಶ್ರಣ ಮಾಡಿಕೊಳ್ಳಿ.
* ಆ ಬಳಿಕ ಬಾಣಲೆಗೆ ಬೆಣ್ಣೆಯನ್ನು ಹಾಕಿ ಬಿಸಿಯಾಗುತ್ತಿದ್ದಂತೆ ಕತ್ತರಿಸಿಟ್ಟ ಬೆಳ್ಳುಳ್ಳಿ, ಎರಡು ಬಗೆಯ ಕ್ಯಾಪ್ಸಿಕಂ ಸೇರಿಸಿ ಒಂದೆರಡು ನಿಮಿಷಗಳ ಕಾಲ ಫ್ರೈ ಮಾಡಿ.
* ನಂತರದಲ್ಲಿ ಬ್ರೊಕೊಲಿ ಸೇರಿಸಿ ಸ್ವಲ್ಪ ಸಮಯ ಚೆನ್ನಾಗಿ ಬೇಯಿಸಿಕೊಳ್ಳಿ.
* ಬಳಿಕ ಇದಕ್ಕೆ ಡ್ರೈ ಹರ್ಬ್ಸ್, ಚೀಸ್ ಹಾಗೂ ಉಪ್ಪು ಸೇರಿಸಿ ಐದು ನಿಮಿಷ ಮಧ್ಯಮ ಉರಿಯಲ್ಲಿ ಫ್ರೈ ಮಾಡಿ.
* ತದನಂತರದಲ್ಲಿ ಮೊದಲೇ ತಯಾರಿಸಿಟ್ಟ ಮೈದಾ ಮಿಶ್ರಣ ಹಾಗೂ ಬೇಯಿಸಿದ ಪಾಸ್ತಾವನ್ನು ಸೇರಿಸಿಕೊಳ್ಳಿ.
* ಮಧ್ಯಮ ಉರಿಯಲ್ಲಿ ಐದರಿಂದ ಆರು ನಿಮಿಷಗಳ ಬೇಯಿಸಿಕೊಂಡು ಇದಕ್ಕೆ ಕರಿಮೆಣಸು ಪುಡಿ ಸೇರಿಸಿದರೆ ಟೇಸ್ಟಿ ವೈಟ್ ಪಾಸ್ತಾ ಸವಿಯಲು ಸಿದ್ಧ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ