World Photography Day 2026: ಫೋಟೋಗ್ರಫಿ ನೆನಪುಗಳನ್ನು ಸೆರೆಹಿಡಿದಿಟ್ಟುಕೊಳ್ಳುವ ಅಧ್ಬುತ ಮಾಧ್ಯಮ

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಕೆಲವು ಅಮೂಲ್ಯ ಕ್ಷಣಗಳಿರುತ್ತವೆ. ಆ ಅಮೂಲ್ಯ ಕ್ಷಣದ ಸಮಯವನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ, ಆದರೆ ಆ ಕ್ಷಣದ ನೆನಪುಗಳನ್ನು ಕ್ಯಾಮೆರಾದ ಮೂಲಕ ಸೆರೆಹಿಡಿದಿಟ್ಟುಕೊಳ್ಳಬಹುದು. ನೆನಪುಗಳನ್ನು ಶಾಶ್ವತವಾಗಿ ಸೆರೆ ಹಿಡಿಯುವ ಛಾಯಾಗ್ರಹಣವು ಇಂದು ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗವಾಗಿದೆ. ಫೋಟೋಗ್ರಫಿಯ ಈ ಮಹತ್ವವನ್ನು ಸಾರಲು ಹಾಗೂ ಛಾಯಾಗ್ರಹಕರನ್ನು ಗೌರವಿಸಲು ಪ್ರತಿವರ್ಷ ಆಗಸ್ಟ್‌ 19 ರಂದು ವಿಶ್ವ ಫೋಟೋಗ್ರಫಿ ದಿನವನ್ನು ಆಚರಿಸಲಾಗುತ್ತದೆ.

World Photography Day 2026: ಫೋಟೋಗ್ರಫಿ ನೆನಪುಗಳನ್ನು ಸೆರೆಹಿಡಿದಿಟ್ಟುಕೊಳ್ಳುವ  ಅಧ್ಬುತ ಮಾಧ್ಯಮ
ವಿಶ್ವ ಛಾಯಾಗ್ರಹಣ ದಿನ
Image Credit source: Unsplash

Updated on: Aug 19, 2026 | 9:43 AM

ಫೋಟೋಗ್ರಫಿ (photography) ಕಲೆಯ ಒಂದು ರೂಪವಾಗಿದ್ದು, ಸಮಯ, ಬೆಳಕು, ನೆನಪುಗಳು, ಭಾವನೆಗಳು, ಸಂಸ್ಕೃತಿ, ಇತಿಹಾಸ ಮತ್ತು ಹೆಚ್ಚಿನವುಗಳ ಸತ್ಯಾಸತ್ಯತೆಯನ್ನು ಸುಂದರವಾಗಿ ಸೆರೆಹಿಡಿಯುವ ಮೂಲಕ ನೆನಪುಗಳ ಕಥೆ ಹೇಳುವ ಅತ್ಯುತ್ತಮ ಮಾಧ್ಯಮವಾಗಿದೆ. ಅಲ್ಲದೆ ಇದು  ಸುಂದರ ಕ್ಷಣಗಳು ಮತ್ತು ಭಾವನೆಗಳನ್ನು ದೃಶ್ಯ ರೂಪದಲ್ಲಿ ಸೆರೆಹಿಡಿಯುವ ಮಾಧ್ಯಮವೂ ಹೌದು. ಹಬ್ಬ, ಪಾರ್ಟಿ, ಫಂಕ್ಷನ್‌, ಟ್ರಿಪ್ ಈ ಎಲ್ಲಾ ಸುಂದರ ಕ್ಷಣಗಳನ್ನು ನಾವು ಕ್ಯಾಮೆರಾದ ಮೂಲಕ ಸೆರೆಹಿಡಿದು, ದೃಶ್ಯ ರೂಪದಲ್ಲಿ ನೆನಪುಗಳನ್ನು ಶಾಶ್ವತವಾಗಿ ಬುತ್ತಿಕಟ್ಟಿ ಇಡುತ್ತೇವೆ. ಫೋಟೋಗ್ರಫಿಯ ಈ ಮಹತ್ವವನ್ನು ಸಾರಲು ಹಾಗೂ ಛಾಯಾಗ್ರಹಣ ಕ್ಷೇತ್ರವನ್ನೇ ವೃತ್ತಿಯನ್ನಾಗಿಸಿಕೊಂಡಿರುವ ಫೋಟೋಗ್ರಾಫರ್‌ಗಳನ್ನು ಗೌರವಿಸಲು ಪ್ರತಿವರ್ಷ ಆಗಸ್ಟ್‌ 19 ರಂದು ವಿಶ್ವ ಫೋಟೋಗ್ರಫಿ ದಿನವನ್ನು ಆಚರಿಸಲಾಗುತ್ತದೆ.

ಛಾಯಾಗ್ರಹಣ ದಿನದ ಇತಿಹಾಸವೇನು?

ಛಾಯಾಗ್ರಹಣ ದಿನದ ಆಚರಣೆಯು ಜನವರಿ 9, 1839 ರಂದು ಫ್ರಾನ್ಸ್​​​ನಲ್ಲಿ ಪ್ರಾರಂಭವಾಯಿತು. ಇದರ ಹಿಂದಿನ ಕಥೆಯೆಂದರೆ, 1839 ರ ಸಮಯದಲ್ಲಿ ಛಾಯಾಗ್ರಹಣ ಪ್ರಕ್ರಿಯೆಯನ್ನು ಆರಂಭಿಸಲಾಯಿತು. ಇದನ್ನು ಡಾಗ್ರೋಟೈಪ್ ಪ್ರಕ್ರಿಯೆ ಎಂದು ಕರೆಯಲಾಯಿತು. ಮತ್ತು ಈ ಪ್ರಕ್ರಿಯೆಯನ್ನು ವಿಶ್ವದ ಮೊದಲ ಛಾಯಾಗ್ರಹಣ ಪ್ರಕ್ರಿಯೆ ಎಂದು ಪರಿಗಣಿಸಲಾಗಿದೆ. ಇದನ್ನು ಫ್ರಾನ್ಸ್ ನ ಜೋಸೆಫ್ ನೈಸ್ ಫೋರ್ ಮತ್ತು ಲೂಯಿಸ್ ಡಾಗೆರೆ ಕಂಡುಹಿಡಿದರು. ಇದರ ನಂತರ ಆಗಸ್ಟ್ 19, 1839 ರಂದು ಫ್ರೆಂಚ್ ಸರ್ಕಾರವು ಈ ಛಾಯಾಗ್ರಹಣ ಆವಿಷ್ಕಾರವನ್ನು ಘೋಷಿಸಿ ಅದರ ಪೇಟೆಂಟ್ ನ್ನು ಪಡೆದುಕೊಂಡಿತು. ಇದರ ನೆನಪಿಗಾಗಿ ಪ್ರತಿವರ್ಷ ಆಗಸ್ಟ್ 19 ರಂದು ವಿಶ್ವ ಛಾಯಾಗ್ರಹಣ ದಿನವನ್ನು ಆಚರಿಸಲಾಗುತ್ತಿದೆ.

ಅನೇಕ ಜನರಿಗೆ ಛಾಯಾಗ್ರಹಣವು ಅವರ ಹವ್ಯಾಸವಾಗಿದೆ. 19 ನೇ ಶತಮಾನದ ಆರಂಭದಿಂದಲೂ ಛಾಯಾಗ್ರಹಣದ ಉದ್ಯಮವು ಪ್ರಗತಿಯಲ್ಲಿದೆ ಮತ್ತು ಈ ಉದ್ಯಮವು ಮೈಲಿಗಲ್ಲನ್ನು ಸಾಧಿಸುತ್ತಿದೆ. ಕ್ಯಾಮೆರಾ ತಂತ್ರಜ್ಞಾನದಲ್ಲಿನ ಪ್ರಗತಿಗಳು ಇಂದು ಡಿಜಿಟಲ್ ಫೋಟೋಗ್ರಫಿಗೆ ಕಾರಣಾಗಿದೆ. ಅಲ್ಲದೆ ಇಂದು ಫೋಟೋಗ್ರಫಿ ಒಂದು ಫ್ಯಾಷನ್ ಆಗಿ ಬದಲಾಗಿದೆ. ಇಂದು ಅದೆಷ್ಟೋ ಛಾಯಾಗ್ರಾಹರು ಈ ಕ್ಷೇತ್ರವನ್ನು ತಮ್ಮ ಉದ್ಯಮವನ್ನಾಗಿ ಮಾಡಿಕೊಂಡು ಹೆಸರುಗಳಿಸಿದ್ದಾರೆ. ಅಂತಹ ಛಾಯಾಗ್ರಹಕರನ್ನು ಗೌರವಿಸಲು ಮತ್ತು ಛಾಯಾಗ್ರಹಣದಲ್ಲಿ ಆಸಕ್ತಿ ಹೊಂದಿದವರನ್ನು ಪ್ರೋತ್ಸಾಹಿಸಲು ಪ್ರತಿವರ್ಷ ಆಗಸ್ಟ್ 19 ರಂದು ವಿಶ್ವ ಛಾಯಾಗ್ರಹಣ ದಿನವನ್ನು ಆಚರಿಸಲಾಗುತ್ತದೆ.

ಛಾಯಾಗ್ರಹಣದ ಇತಿಹಾಸವೇನು?

  • ಛಾಯಾಗ್ರಹಣದ ಇತಿಹಾಸವು ಮಾನವ ನಾಗರಿಕತೆಯಷ್ಟೇ ಹಳೆಯದು. ಆರಂಭಿಕ ದಿನಗಳಲ್ಲಿ ಜನರು ಗುಹೆಯ ಗೋಡೆಗಳ ಮೇಲೆ ಚಿತ್ರ ಬಿಡಿಸಿ ಕಥೆಗಳನ್ನು ಹೇಳುತ್ತಿದ್ದರು. ಕ್ರಮೇಣ ಕಲೆ ಮತ್ತು ತಂತ್ರಜ್ಞಾನದ ಬೆಳವಣಿಗೆಯೊಂದಿಗೆ, ಛಾಯಾಗ್ರಹಣವು ಹೊಸ ರೂಪಗಳನ್ನು ಪಡೆದುಕೊಂಡಿತು.
  • 19 ನೇ ಶತಮಾನದಲ್ಲಿ, ಫ್ರೆಂಚ್ ಸಂಶೋಧಕ ಲೂಯಿಸ್ ಡಾಗೆರೆ ಡಾಗೆರೋಟೈಪ್ ಪ್ರಕ್ರಿಯೆಯನ್ನು ಕಂಡುಹಿಡಿದರು, ಇದನ್ನು ಛಾಯಾಗ್ರಹಣದ ಇತಿಹಾಸದಲ್ಲಿ ಒಂದು ಮಹತ್ವದ ತಿರುವು ಎಂದು ಪರಿಗಣಿಸಲಾಗಿದೆ. ಈ ಪ್ರಕ್ರಿಯೆಯು ಮೊದಲ ಬಾರಿಗೆ ಶಾಶ್ವತ ಚಿತ್ರಗಳನ್ನು ಸೆರೆಹಿಡಿಯಲು ಸಾಧ್ಯವಾಗಿಸಿತು.
  • 19 ನೇ ಶತಮಾನದ ಅಂತ್ಯದಲ್ಲಿ ಚಲನಚಿತ್ರದ ಆವಿಷ್ಕಾರವಾಯಿತು, ಇದು ಚಲಿಸುವ ಚಿತ್ರಗಳನ್ನು ಸೆರೆಹಿಡಿಯಲು ಸಾಧ್ಯವಾಗಿಸಿತು ಮತ್ತು ಸಿನೆಮಾದ ಹುಟ್ಟಿಗೆ ದಾರಿ ಮಾಡಿಕೊಟ್ಟಿತು.
  • 20 ನೇ ಶತಮಾನವು ಬಣ್ಣದ ಛಾಯಾಗ್ರಹಣದ ಬೆಳವಣಿಗೆಯನ್ನು ಕಂಡಿತು. 20 ನೇ ಶತಮಾನದ ಅಂತ್ಯದಲ್ಲಿ ಡಿಜಿಟಲ್ ಕ್ಯಾಮೆರಾಗಳ ಆವಿಷ್ಕಾರವು ಛಾಯಾಗ್ರಹಣವನ್ನು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಿತು ಮತ್ತು ಛಾಯಾಗ್ರಹಣ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ತಂದಿತು. ಇಂದು ಪ್ರತಿಯೊಬ್ಬರೂ ಸಹ ಪ್ರತಿಯೊಂದು ಕ್ಷಣವನ್ನು ತಮ್ಮ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಹಿಡಿದು ಸುಂದರ ನೆನಪುಗಳನ್ನು ಸಂಗ್ರಹಿಸಿಡುತ್ತಿದ್ದಾರೆ.

ಇದನ್ನೂ ಓದಿ: ಅರಣ್ಯ ಪರಿಸರ ವ್ಯವಸ್ಥೆಯನ್ನು ರಕ್ಷಿಸುವಲ್ಲಿ ಆನೆಗಳ ಪಾತ್ರ ಅಪಾರ

ಛಾಯಾಗ್ರಹಣದ ಮಹತ್ವವೇನು?

  • ಛಾಯಾಗ್ರಹಣವು ನಮ್ಮ ಸುಂದರ ನೆನಪುಗಳನ್ನು ಸೆರೆ ಹಿಡಿಯುವ ಮಾಧ್ಯಮ ಮಾತ್ರವಲ್ಲ, ಛಾಯಾಗ್ರಹಣವು ಸಮಾಜದಲ್ಲಿ ಅನೇಕ ಬದಲಾವಣೆಗಳನ್ನು ತಂದಿದೆ. ಯುದ್ಧ, ಬಡತನ ಮತ್ತು ಸಾಮಾಜಿಕ ಅನ್ಯಾಯದಂತಹ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.
  • ಛಾಯಾಗ್ರಹಣ ನಮ್ಮ ಸಂಸ್ಕೃತಿ ಮತ್ತು ಇತಿಹಾಸವನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ. ಹಳೆಯ ಛಾಯಾಚಿತ್ರಗಳು ನಮ್ಮನ್ನು ನಮ್ಮ ಭೂತಕಾಲಕ್ಕೆ ಸಂಪರ್ಕಿಸುತ್ತವೆ. ಇತಿಹಾಸದ ಬಗೆಗಿನ ಸಂಗತಿಗಳನ್ನು ತಿಳಿಸುತ್ತದೆ.
  • ಛಾಯಾಗ್ರಹಣವು ಒಂದು ಪ್ರಬಲ ಸಂವಹನ ಮಾಧ್ಯಮವಾಗಿದೆ. ಇದು ಒಂದೇ ಒಂದು ಪದವನ್ನು ಉಚ್ಚರಿಸದೆ ನಮ್ಮ ಭಾವನೆಗಳು ಮತ್ತು ಆಲೋಚನೆಗಳನ್ನು ವ್ಯಕ್ತಪಡಿಸಲು ಸಹಾಯ ಮಾಡುತ್ತದೆ.
  • ಛಾಯಾಗ್ರಹಣವು ಒಂದು ಸೃಜನಶೀಲ ಮಾಧ್ಯಮವಾಗಿದ್ದು, ಅದು ನಮ್ಮ ಕಲ್ಪನೆಯನ್ನು ಚುರುಕುಗೊಳಿಸಲು ಮತ್ತು ಜಗತ್ತನ್ನು ಹೊಸ ದೃಷ್ಟಿಕೋನದಿಂದ ನೋಡಲು ಅನುವು ಮಾಡಿಕೊಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us