ಗುಬ್ಬಚ್ಚಿಗಳು ನೋಡುವುದಕ್ಕೆ ಸಣ್ಣಗೆ ಇದ್ದರೂ ಚುರುಕಾಗಿರುವ ಪಕ್ಷಿಗಳು. ಹದಿನೈದು ವರ್ಷಗಳ ಹಿಂದೆ ಈ ಗುಬ್ಬಚ್ಚಿಗಳ ಪ್ರಬೇಧವು ಹೇರಳವಾಗಿತ್ತು. ಬಹುತೇಕರ ಮನೆಯ ಹಂಚಿನಲ್ಲಿ ಗುಬ್ಬಚ್ಚಿಗಳು ಗೂಡು ಕಟ್ಟಿಕೊಂಡು ಆ ಮನೆಯ ಸದಸ್ಯರಂತೆಯೇ ಇರುತ್ತಿದ್ದವು. ಅಷ್ಟೇ ಅಲ್ಲದೇ, ನಿಸರ್ಗದ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಗುಬ್ಬಿಗಳ ಕೊಡುಗೆಯು ಬಹುದೊಡ್ಡದಿತ್ತು. ಆದರೆ ಇಂದಿನ ಮಕ್ಕಳು ಈ ಗುಬ್ಬಚ್ಚಿಗಳನ್ನು ಫೋಟೋದಲ್ಲಿ ನೋಡಬೇಕಾದ ಸನ್ನಿವೇಶವು ಬಂದೋದಗಿದೆ. ಭಾರತ ಸೇರಿದಂತೆ ಪ್ರಪಂಚದಾದಂತ್ಯ ಈ ಗುಬ್ಬಚ್ಚಿಗಳ ಸಂಖ್ಯೆಯು ಕಡಿಮೆಯಾಗುತ್ತಿದೆ. ಅತ್ತ ಇತ್ತ ಹಾರುತ್ತ, ಚಿಲಿಪಿಲಿ ಗುಟ್ಟುತ್ತಿದ್ದ ಈ ಪುಟ್ಟ ಹಕ್ಕಿಗಳು ಕಣ್ಮರೆಯಾಗುತ್ತಿದೆ. ಇವುಗಳ ಸಂತತಿಯನ್ನು ಉಳಿಸುವ ಜವಾಬ್ದಾರಿಯು ನಮ್ಮೆಲ್ಲರ ಮೇಲಿದೆ. ಹೀಗಾಗಿ ಪ್ರತಿ ವರ್ಷ ಮಾರ್ಚ್ 20 ರಂದು ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ನೇಚರ್ ಫಾರೆವರ್ ಸೊಸೈಟಿ ಮತ್ತು ಇಕೋಸಿಸ್ ಆಕ್ಷನ್ ಫೌಂಡೇಶನ್ ಸಹಯೋಗದೊಂದಿಗೆ ಮಾರ್ಚ್ 20 ರಂದು ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಕಣ್ಮರೆಯಾಗುತ್ತಿರುವ ಈ ಗುಬ್ಬಚ್ಚಿಗಳ ಸಂತತಿಗಳನ್ನು ಉಳಿಸುವ ನಿಟ್ಟಿನಲ್ಲಿ ನಾಸಿಕ್ ನಿವಾಸಿ ಮೊಹಮ್ಮದ್ ದಿಲಾವರ್ ಅವರು ಫಾರೆವರ್ ಸೊಸೈಟಿ ಸ್ಥಾಪಿಸಿದರು. 2010ರಂದು ಮೊದಲ ಬಾರಿಗೆ ವಿಶ್ವ ಗುಬ್ಬಚ್ಚಿಗಳ ದಿನವನ್ನು ಆಚರಿಸಲಾಯಿತು.
ಇದನ್ನೂ ಓದಿ: ಮೊಣಕೈ, ಮೊಣಕಾಲಿನ ಕಪ್ಪಾದ ಭಾಗಗಳು ನಿಮ್ಮ ಅಂದಕ್ಕೆ ಕಪ್ಪುಚುಕ್ಕೆ, ಇಲ್ಲಿದೆ ಸರಳ ಮನೆ ಮದ್ದು
ಜನರ ಜೊತೆಗೆ ಒಂದೊಳ್ಳೆ ಸಂಬಂಧವನ್ನು ಹೊಂದಿದ್ದ ಈ ಗುಬ್ಬಚ್ಚಿಗಳು ಕ್ರಮೇಣವಾಗಿ ಅಳಿವಿನಂಚಿಗೆ ಸಾಗುತ್ತಿವೆ. ತನ್ನ ಸ್ವಾರ್ಥಕ್ಕಾಗಿ ಮಾನವನು ಕಾಡನ್ನು ನಾಶ ಪಡಿಸುತ್ತಿದ್ದಾನೆ. ನಗರೀಕರಣ, ಮೊಬೈಲ್ ಟವರ್ ಗಳ ಹೆಚ್ಚಳ ಹಾಗೂ ಪರಿಸರ ಮಾಲಿನ್ಯದಿಂದಾಗಿ ಈ ಗುಬ್ಬಚ್ಚಿಗಳ ಕಣ್ಮರೆಯತ್ತ ಸಾಗುತ್ತಿವೆ. ಈ ಅಳಿವಿನಂಚಿನಲ್ಲಿರುವ ಗುಬ್ಬಚ್ಚಿ ಪ್ರಬೇಧಗಳ ಸಂರಕ್ಷಣೆಗಾಗಿ ಪ್ರತಿ ವರ್ಷ ಮಾರ್ಚ್ 20 ರಂದು ವಿಶ್ವ ಗುಬ್ಬಚ್ಚಿಗಳ ದಿನವನ್ನು ಆಚರಿಸಲಾಗುತ್ತಿದೆ. ಈ ದಿನದಂದು ಗುಬ್ಬಚ್ಚಿಗಳ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ದೇಶೀಯ ಗುಬ್ಬಚ್ಚಿಗಳನ್ನು ಸಂರಕ್ಷಿಸುವ ಕ್ರಮಗಳ ಬಗ್ಗೆ ಜನರಿಗೆ ತಿಳಿಸುವ ಉದ್ದೇಶವನ್ನು ಹೊಂದಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:15 pm, Mon, 18 March 24