
ಪ್ರವಾಸಕ್ಕೆ (Tour) ಹೋಗಬೇಕು ಎಂದು ನಿರ್ಧರಿಸಿದ ನಂತರ ಟಿಕೆಟ್ ಬುಕ್ ಮಾಡುವುದಕ್ಕಿಂತ ಮೊದಲು ಸಾಕಷ್ಟು ಕೆಲಸಗಳಿರುತ್ತವೆ. ಎಲ್ಲಿಗೆ ಹೋಗಬೇಕು, ಎಲ್ಲಿ ಉಳಿದುಕೊಳ್ಳಬೇಕು, ಯಾವ ಸ್ಥಳಗಳನ್ನು ನೋಡಬೇಕು, ಎಲ್ಲಿ ಊಟ ಮಾಡಬೇಕು, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೇಗೆ ಹೋಗಬೇಕು ಎಂಬುದನ್ನು ಪ್ಲಾನ್ ಮಾಡಬೇಕಾಗುತ್ತದೆ. ಈ ಎಲ್ಲ ಕೆಲಸಗಳಿಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಆದರೆ ಈಗ ಕೃತಕ ಬುದ್ಧಿಮತ್ತೆ ಅಥವಾ AI ಸಹಾಯದಿಂದ ಪ್ರವಾಸದ ಯೋಜನೆಯನ್ನು ಸುಲಭವಾಗಿ ರೂಪಿಸಿಕೊಳ್ಳಬಹುದು. ಸೆಪ್ಟೆಂಬರ್ 27ರಂದು ಆಚರಿಸಲಾಗುವ ವಿಶ್ವ ಪ್ರವಾಸೋದ್ಯಮ ದಿನ 2026ರ ಥೀಮ್ ಕೂಡ ಪ್ರವಾಸೋದ್ಯಮದಲ್ಲಿ ಡಿಜಿಟಲ್ ತಂತ್ರಜ್ಞಾನ ಮತ್ತು AI ಬಳಕೆಗೆ ಒತ್ತು ನೀಡಿದೆ.
AIಗೆ ಕೇವಲ ಜೈಪುರ ಪ್ರವಾಸ ಪ್ಲಾನ್ ಮಾಡಿ ಎಂದು ಕೇಳಿದರೆ ಸಾಮಾನ್ಯ ಉತ್ತರ ಸಿಗಬಹುದು. ಅದರ ಬದಲು ನಿಮ್ಮ ಪ್ರವಾಸದ ದಿನಾಂಕ, ಬಜೆಟ್, ಎಷ್ಟು ದಿನ ಉಳಿಯುತ್ತೀರಿ ಮತ್ತು ಒಬ್ಬರೇ ಹೋಗುತ್ತಿದ್ದೀರಾ ಅಥವಾ ಕುಟುಂಬದೊಂದಿಗೆ ಹೋಗುತ್ತಿದ್ದೀರಾ ಎಂಬ ಮಾಹಿತಿಯನ್ನು ನೀಡಿ. ನಿಮಗೆ ಐತಿಹಾಸಿಕ ಸ್ಥಳಗಳು ಇಷ್ಟವೇ, ಸ್ಥಳೀಯ ಆಹಾರ ಇಷ್ಟವೇ, ಶಾಪಿಂಗ್ ಮಾಡಬೇಕೇ ಅಥವಾ ಕಡಿಮೆ ಜನಸಂದಣಿ ಇರುವ ಸ್ಥಳಗಳನ್ನು ನೋಡಬೇಕೇ ಎಂಬುದನ್ನೂ ತಿಳಿಸಬಹುದು.
ಹೀಗೆ ಹೆಚ್ಚು ಸ್ಪಷ್ಟವಾದ ಮಾಹಿತಿ ನೀಡಿದಷ್ಟೂ ನಿಮ್ಮ ಅಗತ್ಯಕ್ಕೆ ತಕ್ಕಂತೆ ಪ್ರವಾಸದ ಯೋಜನೆಯನ್ನು ರೂಪಿಸಲು AIಗೆ ಸಾಧ್ಯವಾಗುತ್ತದೆ. ಉದಾಹರಣೆಗೆ, ಕುಟುಂಬದೊಂದಿಗೆ ಮೂರು ದಿನಗಳ ಪ್ರವಾಸವಾಗಿದ್ದರೆ ಹೆಚ್ಚು ಓಡಾಟವಿಲ್ಲದಂತೆ, ಪ್ರತಿಯೊಂದು ಸ್ಥಳದಲ್ಲೂ ಸಾಕಷ್ಟು ಸಮಯ ಕಳೆಯುವ ರೀತಿಯಲ್ಲಿ ಯೋಜನೆ ಕೇಳಬಹುದು.
ಅತ್ಯುತ್ತಮ ಹೋಟೆಲ್ ಹುಡುಕಿ ಎಂದು ಕೇಳುವ ಬದಲು ನಿಮ್ಮ ಬಜೆಟ್, ಯಾವ ಪ್ರದೇಶದಲ್ಲಿ ಉಳಿಯಲು ಬಯಸುತ್ತೀರಿ, ಸಾರ್ವಜನಿಕ ಸಾರಿಗೆ ಎಷ್ಟು ಹತ್ತಿರದಲ್ಲಿರಬೇಕು, ಪಾರ್ಕಿಂಗ್ ಬೇಕೇ, ಉಪಾಹಾರ ಬೇಕೇ ಎಂಬ ವಿವರಗಳನ್ನು ನೀಡಿ. AI ಈ ಮಾಹಿತಿಯ ಆಧಾರದ ಮೇಲೆ ಕೆಲವು ಆಯ್ಕೆಗಳನ್ನು ಪಟ್ಟಿ ಮಾಡಿ ಅವುಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಬಹುದು.
ಆದರೆ ಹೋಟೆಲ್ ಬುಕ್ ಮಾಡುವ ಮುನ್ನ ಅಂತಿಮ ಬೆಲೆ, ಲಭ್ಯತೆ, ರದ್ದುಪಡಿಸುವ ನಿಯಮಗಳು ಮತ್ತು ಇತ್ತೀಚಿನ ಗ್ರಾಹಕರ ವಿಮರ್ಶೆಗಳನ್ನು ನೇರವಾಗಿ ಸಂಬಂಧಪಟ್ಟ ಬುಕ್ಕಿಂಗ್ ವೆಬ್‌ಸೈಟ್‌ನಲ್ಲಿ ಪರಿಶೀಲಿಸುವುದು ಮುಖ್ಯ.
AI ಸಹಾಯದಿಂದ ನೀವು ಪ್ರವಾಸದ ಮಾರ್ಗದಲ್ಲಿರುವ ಸ್ಥಳೀಯ ಆಹಾರ ಸಿಗುವ ಜಾಗಗಳು, ವಿಶೇಷ ಅನುಭವಗಳು ಮತ್ತು ಹೆಚ್ಚು ಜನಸಂದಣಿ ಇಲ್ಲದ ಸ್ಥಳಗಳ ಬಗ್ಗೆಯೂ ಮಾಹಿತಿ ಪಡೆಯಬಹುದು. ಜನಪ್ರಿಯ ಪ್ರವಾಸಿ ತಾಣದಲ್ಲಿ ಹೆಚ್ಚು ಜನರಿದ್ದರೆ ಅದರ ಸುತ್ತಮುತ್ತಲಿರುವ ಪರ್ಯಾಯ ಸ್ಥಳಗಳನ್ನು ಸೂಚಿಸುವಂತೆ AIಗೆ ಕೇಳಬಹುದು. ಇದರಿಂದ ಸಾಮಾನ್ಯ ಪ್ರವಾಸಿ ಪಟ್ಟಿಯಲ್ಲಿ ಕಾಣಿಸದ ಕೆಲವು ಸ್ಥಳಗಳನ್ನೂ ತಿಳಿದುಕೊಳ್ಳುವ ಅವಕಾಶ ಸಿಗಬಹುದು.
AI ಪ್ರವಾಸದ ಯೋಜನೆಯನ್ನು ಸುಲಭಗೊಳಿಸಬಹುದು. ಆದರೆ ಅದು ನೀಡುವ ಪ್ರತಿಯೊಂದು ಮಾಹಿತಿಯೂ ಸರಿಯಾಗಿರುತ್ತದೆ ಎಂದು ಭಾವಿಸಬಾರದು. ರೆಸ್ಟೋರೆಂಟ್‌ಗಳ ಸಮಯ ಬದಲಾಗಬಹುದು, ಪ್ರವಾಸಿ ತಾಣಗಳು ನಿರ್ವಹಣಾ ಕೆಲಸಕ್ಕಾಗಿ ಮುಚ್ಚಿರಬಹುದು ಅಥವಾ ಸಾರಿಗೆ ಸಮಯದಲ್ಲಿ ಬದಲಾವಣೆಯಾಗಿರಬಹುದು. AI ನೀಡುವ ಕೆಲವು ಮಾಹಿತಿಗಳು ಹಳೆಯದಾಗಿರುವ ಅಥವಾ ತಪ್ಪಾಗಿರುವ ಸಾಧ್ಯತೆಯೂ ಇದೆ.
ಹೀಗಾಗಿ ಪ್ರಯಾಣ ಆರಂಭಿಸುವ ಮೊದಲು ಅಧಿಕೃತ ಪ್ರವಾಸೋದ್ಯಮ ವೆಬ್‌ಸೈಟ್, ಹೋಟೆಲ್‌ನ ಅಧಿಕೃತ ಪುಟ ಮತ್ತು ಸಾರಿಗೆ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಪ್ರಮುಖ ಮಾಹಿತಿಯನ್ನು ಪರಿಶೀಲಿಸಿ. AI ಅನ್ನು ಪ್ರವಾಸದ ಯೋಜನೆ ರೂಪಿಸಲು ಸಹಾಯ ಮಾಡುವ ಸಾಧನವಾಗಿ ಬಳಸಿ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ